There are currently 0 users and 3 guests online.

ನೀವೂ ಪ್ರಕಟಿಸಬಹುದು!

ಆರೋಗ್ಯ ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ಉರಿಯೂತ ನಿವಾರಕಗಳ ಬಳಕೆಯಿಂದ ಗರ್ಭಪಾತ, ಮೂತ್ರಪಿಂಡಗಳ ಕ್ಯಾನ್ಸರ್

ಉರಿಯೂತ ನಿವಾರಕಗಳ ಬಳಕೆಯಿಂದ ಗರ್ಭಪಾತ, ಮೂತ್ರಪಿಂಡಗಳ ಕ್ಯಾನ್ಸರ್

ಆರೋಗ್ಯ ಸಂಪದದಲ್ಲಿ

ಉರಿಯೂತ ನಿವಾರಕಗಳನ್ನು ಎಗ್ಗಿಲ್ಲದೆ ಬಳಸುತ್ತಿರುವ ಪ್ರವೃತ್ತಿಯು ಹೆಚ್ಚುತ್ತಿರುವಂತೆಯೇ, ಅವುಗಳ ಬಳಕೆಯಿಂದ ಹಲವು ಗಂಭೀರ ಸಮಸ್ಯೆಗಳಾಗುವ ಸಾಧ್ಯತೆಗಳ ಬಗ್ಗೆ ಒಂದರ ಹಿಂದೆ ಒಂದರಂತೆ ವರದಿಗಳಾಗುತ್ತಿವೆ. ಅವುಗಳ ಬಳಕೆಯಿಂದ ಹೃದಯಾಘಾತ, ಪಾರ್ಶ್ವವಾಯು ಇವೇ ಮುಂತಾದ ರಕ್ತನಾಳಗಳ ಸಮಸ್ಯೆಗಳು, ಹೃದಯದ ಗತಿಯಲ್ಲಿ ಏರುಪೇರುಗಳು, ನಿಮಿರುವಿಕೆಯ ಸಮಸ್ಯೆ ಇತ್ಯಾದಿಗಳು ಹೆಚ್ಚುತ್ತವೆ ಎನ್ನುವ ವರದಿಗಳು ಇತ್ತೀಚೆಗೆ ಪ್ರಕಟಗೊಂಡಿದ್ದವು. ಉರಿಯೂತ ನಿವಾರಕಗಳ ಬಳಕೆಯಿಂದ ಗರ್ಭಪಾತವಾಗುವ ಹಾಗೂ ಮೂತ್ರಪಿಂಡಗಳಲ್ಲಿ ಕ್ಯಾನ್ಸರ್ ಬೆಳೆಯುವ ಸಾಧ್ಯತೆಗಳು ಹೆಚ್ಚುತ್ತವೆ ಎನ್ನುವ ವರದಿಗಳು ಇದೀಗ ಪ್ರಕಟಗೊಂಡಿವೆ.

ಗರ್ಭಿಣಿಯರು ಉರಿಯೂತ ನಿರೋಧಕಗಳನ್ನು ಬಳಸುವುದರಿಂದ ಗರ್ಭಪಾತವಾಗುವ ಸಾಧ್ಯತೆಗಳು ಹೆಚ್ಚುತ್ತವೆ ಎನ್ನುವುದು ಕೆನಡಾದ ಕ್ಯೂಬೆಕ್ ನೋಂದಣಿಯನ್ನಾಧರಿಸಿ ನಡೆಸಲಾದ ಅಧ್ಯಯನದಲ್ಲಿ ವ್ಯಕ್ತವಾಗಿದೆ. ಈ ಅಧ್ಯಯನದಲ್ಲಿ, ಡೈಕ್ಲೋಫೆನಾಕ್, ನಾಪ್ರೊಕ್ಸೆನ್, ಇಬುಪ್ರಾಫೆನ್, ಸೆಲಿಕಾಕ್ಸಿಬ್ ಮುಂತಾದ ಉರಿಯೂತ ನಿವಾರಕಗಳನ್ನು ಬಳಸಿದ ಗರ್ಭಿಣಿಯರಲ್ಲಿ ಅಪ್ರೇರಿತ ಗರ್ಭಪಾತಗಳ ಸಂಖ್ಯೆಯು, ಅಂತಹಾ ಔಷಧಗಳನ್ನು ಬಳಸದೇ ಇದ್ದ ಗರ್ಭಿಣಿಯರಲ್ಲುಂಟಾದ ಅಪ್ರೇರಿತ ಗರ್ಭಪಾತಗಳಿಗಿಂತ ಗಣನೀಯವಾಗಿ ಹೆಚ್ಚಿತ್ತು. ಆದ್ದರಿಂದ, ಗರ್ಭಿಣಿಯರು ಆಸ್ಪಿರಿನ್ ಹೊರತಾಗಿ ಇನ್ಯಾವುದೇ ಉರಿಯೂತ ನಿವಾರಕಗಳನ್ನು ಅತಿ ವಿವೇಚನೆಯಿಂದ ಬಳಸುವುದೊಳ್ಳೆಯದು.

ಅಮೆರಿಕಾದ ಹಾವರ್ಡ್ ವೈದ್ಯಕೀಯ ವಿದ್ಯಾಲಯದಲ್ಲಿ ನಡೆಸಲಾದ ಅಧ್ಯಯನದಲ್ಲಿ ಉರಿಯೂತ ನಿವಾರಕಗಳನ್ನು ಹೆಚ್ಚು ಕಾಲ ಬಳಸುವವರಲ್ಲಿ ಮೂತ್ರಪಿಂಡಗಳಲ್ಲಿ ಕ್ಯಾನ್ಸರ್ ಬೆಳೆಯುವ ಸಾಧ್ಯತೆಗಳು ಹೆಚ್ಚುತ್ತವೆ ಎನ್ನುವುದು ಕಂಡುಬಂದಿದೆ. ಈ ಅಧ್ಯಯನದಲ್ಲಿ 77575 ಮಹಿಳೆಯರನ್ನು 16 ವರ್ಷಗಳ ಕಾಲ ಹಾಗೂ 49403 ಪುರುಷರನ್ನು 20 ವರ್ಷಗಳ ಕಾಲ ಅನುಸರಿಸಿ, ಅವರಲ್ಲಿ ಮೂತ್ರಪಿಂಡಗಳ ಕ್ಯಾನ್ಸರ್ ಉಂಟಾಗುವ ಸಾಧ್ಯತೆಯನ್ನು ನಿರೀಕ್ಷೆಗೊಳಪಡಿಸಲಾಗಿತ್ತು. ಆಸ್ಪಿರಿನ್ ಹಾಗೂ ಪಾರಸಿಟಮಾಲ್ ಬಳಸುವವರಲ್ಲಿ ಮೂತ್ರಪಿಂಡಗಳ ಕ್ಯಾನ್ಸರ್ ಸಾಧ್ಯತೆಗಳು ಹೆಚ್ಚಿರಲಿಲ್ಲ, ಆದರೆ ಇನ್ನುಳಿದ ಉರಿಯೂತ ನಿವಾರಕಗಳನ್ನು ನಿರಂತರವಾಗಿ ಬಳಸುತ್ತಿದ್ದವರಲ್ಲಿ ಮೂತ್ರಪಿಂಡಗಳ ಕ್ಯಾನ್ಸರ್ ಸಾಧ್ಯತೆಗಳು ಹೆಚ್ಚಿತ್ತು.

ಉರಿಯೂತ ನಿವಾರಕಗಳ ಪೈಕಿ ರೊಫೆಕಾಕ್ಸಿಬ್ (ಈಗ ನಿಷೇಧಿತ), ಡೈಕ್ಲೊಫೆನಾಕ್ ಹಾಗೂ ಇಂಡೋಮೆಥಾಸಿನ್ ಗಳು ಹೃದಯಾಘಾತ ಹಾಗೂ ಪಾರ್ಶ್ವವಾಯುವನ್ನುಂಟು ಮಾಡುವ ಸಾಧ್ಯತೆಗಳು ಹೆಚ್ಚಿದ್ದು, ಇಬುಪ್ರೊಫೆನ್ ಹಾಗೂ ನಾಪ್ರೊಕ್ಸೆನ್ ಗಳು ಹೆಚ್ಚು ಸುರಕ್ಷಿತವೆಂದು ಹೊಸ ವರದಿಯೊಂದರಲ್ಲಿ ಹೇಳಲಾಗಿದೆ.

ಒಟ್ಟಿನಲ್ಲಿ, ಮನಬಂದಂತೆ ಸಿಕ್ಕ ಸಿಕ್ಕ ಉರಿಯೂತ ನಿವಾರಕಗಳನ್ನು ಬಳಸುವುದರಿಂದ ಹಲತರದ ಅಪಾಯಗಳನ್ನು ಆಹ್ವಾನಿಸಿದಂತಾಗುತ್ತದೆ ಎನ್ನುವುದು ದಿಟ.

ಉರಿಯೂತ ನಿವಾರಕಗಳ ದುಷ್ಪರಿಣಾಮಗಳ ಬಗ್ಗೆ ಇತ್ತೀಚೆಗೆ ಪ್ರಕಟಗೊಂಡಿರುವ ಅಧ್ಯಯನಗಳು:

  1. ಉರಿಯೂತ ನಿವಾರಕಗಳ ಬಳಕೆಯಿಂದ ಹೃದಯಾಘಾತ ಹಾಗೂ ಪಾರ್ಶ್ವವಾಯುಗಳ ಅಪಾಯ [ಪ್ಲಾಸ್ ಮೆಡಿಸಿನ್, ಸೆ. 2011 ]
  2. ಗರ್ಭಿಣಿಯರಲ್ಲಿ ಉರಿಯೂತ ನಿವಾರಕಗಳ ಬಳಕೆಯಿಂದ ಗರ್ಭಪಾತವಾಗುವ ಸಾಧ್ಯತೆಗಳು ಹೆಚ್ಚು [ಕೆನಡಿಯನ್ ಮೆಡಿಕಲ್ ಅಸೋಸಿಯೇಶನ್ ಜರ್ನಲ್, ಸೆ. 2011 ]
  3. ಉರಿಯೂತ ನಿವಾರಕಗಳ ಬಳಕೆಯಿಂದ ಮೂತ್ರಪಿಂಡಗಳ ಕ್ಯಾನ್ಸರ್ ಸಾಧ್ಯತೆಗಳು ಹೆಚ್ಚು [ಆರ್ಕೈವ್ಸ್ ಆಫ್ ಇಂಟರ್ನಲ್ ಮೆಡಿಸಿನ್, ಸೆ. 2011 | ಸಂಪಾದಕೀಯ | ವರದಿ]
  4. ಉರಿಯೂತ ನಿವಾರಕಗಳ ದೀರ್ಘ ಕಾಲದ ಬಳಕೆಯಿಂದ ಹಿರಿವಯಸ್ಕರಲ್ಲಿ ಹೃದಯಾಘಾತ ಹಾಗೂ ಪಾರ್ಶ್ವವಾಯುವಿನ ಸಾಧ್ಯತೆಗಳು ಹೆಚ್ಚು [ಅಮೆರಿಕನ್ ಜರ್ನಲ್ ಆಫ್ ಮೆಡಿಸಿನ್, ಜು. 2011 | ವರದಿ | ಇನ್ನೊಂದು ಲೇಖನ]
  5. ಉರಿಯೂತ ನಿವಾರಕಗಳಿಂದ ಹೆಚ್ಚುವ ಹೃದಯಾಘಾತ [ ಬ್ರಿಟಿಷ್ ಮೆಡಿಕಲ್ ಜರ್ನಲ್, ಜ. 2011 | ವರದಿ]
  6. ಉರಿಯೂತ ನಿವಾರಕಗಳನ್ನು ಒಂದು ವಾರ ಬಳಸಿದರೂ ಪುನರ್ ಹೃದಯಾಘಾತವಾಗುವ ಸಾಧ್ಯತೆಗಳು ಹೆಚ್ಚು [ಸರ್ಕ್ಯುಲೇಶನ್, ಮೇ 2011 | ವರದಿ]
  7. ಉರಿಯೂತ ನಿವಾರಕಗಳಿಂದ ಹೃದಯದ ಗತಿ ಏರುಪೇರು [ಬ್ರಿಟಿಷ್ ಮೆಡಿಕಲ್ ಜರ್ನಲ್, ಜು. 2011 | ಸಂಪಾದಕೀಯ | ವರದಿ]
  8. ಉರಿಯೂತ ನಿವಾರಕಗಳ ನಿರಂತರ ಬಳಕೆಯಿಂದ ನಿಮಿರುವಿಕೆಯ ಸಮಸ್ಯೆಗಳು [ಜರ್ನಲ್ ಆಫ್ ಯೂರಾಲಜಿ, ಏ. 2011 | ವರದಿ]
801 reads