ಮಧುಮೇಹವೆಂಬ ಗುಪ್ತಗಾಮಿನಿ.......೧೦
ಮಧುಮೇಹವೆಂಬ ಗುಪ್ತಗಾಮಿನಿ.......೧೦
ಆರೋಗ್ಯ ಸಂಪದದಲ್ಲಿ
೨. ವ್ಯಾಯಾಮ: ವ್ಯಾಯಾಮವೆಂದರೆ ದೈಹಿಕ ಚಟುವಟಿಕೆ (physical activity). ಮಧುಮೇಹದ ಚಿಕಿತ್ಸೆಯಲ್ಲಿ ವ್ಯಾಯಾಮಕ್ಕೆ ಮಹತ್ವ ಕೊಟ್ಟಿರುವುದೇಕೆಂದರೆ,
a. ವ್ಯಾಯಾಮದಿಂದ ರಕ್ತದಲ್ಲಿನ ಸಕ್ಕರೆಯ ಅಂಶ ಕಡಿಮೆಯಾಗಿ, ಮಧುಮೇಹದ ಹತೋಟಿಯಲ್ಲಿ ಸಹಾಯವಾಗುತ್ತದೆ.
b. ವ್ಯಾಯಾಮದಿಂದ ಸಕ್ಕರೆಯ ಅಂಶ ಮಾತ್ರವಲ್ಲದೆ, ಲಿಪಿಡ್ಸ್ ಎಂಬ ಕೊಬ್ಬಿನ ಅಂಶಗಳೂ ಕಡಿಮೆಯಾಗುತ್ತವೆ.
c. ಮಧುಮೇಹಿಗಳಲ್ಲಿರಬಹುದಾದ ಖಿನ್ನ ಮನೋಭಾವವನ್ನು ದೂರಮಾಡಿ, ಉಲ್ಲಾಸವನ್ನುಂಟು ಮಾಡುತ್ತದೆ.
ನನ್ನ ಅಭಿಪ್ರಾಯದಲ್ಲಿ, ವ್ಯಾಯಾಮವನ್ನು ಪ್ರತ್ಯೇಕವಾಗಿ ಮಾಡುವ ಬದಲು, ನಮ್ಮ ದೈನಂದಿನ ನಡಾವಳಿಯಲ್ಲಿಯೇ ಬದಲಾವಣೆ ಮಾಡಿಕೊಳ್ಳುವುದು ಒಳ್ಳೆಯದು.
ವೈದ್ಯರು ವಿಧಿಸಿದ್ದಾರೆಂದು ಮನಸ್ಸಿಲ್ಲದ ಮನಸ್ಸಿನಿಂದ ವ್ಯಾಯಾಮ ಮಾಡುವ ಒಬ್ಬ ವ್ಯಕ್ತಿ, ವ್ಯಾಯಾಮ ಮುಗಿದಕೂಡಲೇ, ತನ್ನ ಪತ್ನಿಗೆ ಒಂದು ಲೋಟ ನೀರನ್ನು ತಂದು
ಕೊಡಲು ಹೇಳುವುದು, ಇಲ್ಲವೇ ಟೂತ್ ಬ್ರಷ್ ಗೆ ಪೇಸ್ಟನ್ನು ಹಾಕಿಕೊಡಲು ಪತ್ನಿಯ ಸಹಾಯ ಪಡೆಯುವುದು ಇತ್ಯಾದಿ, ವಿಪರ್ಯಾಸವೆನಿಸುತ್ತದೆ. ಅದರ ಬದಲು, ಪ್ರತಿಯೊಂದು ಕೆಲಸವನ್ನೂ ತಾನೇ ಮಾಡಿಕೊಳ್ಳುವುದು, ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ಲಿಫ್ಟನ್ನು ಬಳಸದೇ ಮೆಟ್ಟಿಲುಗಳನ್ನು ಉಪಯೋಗಿಸುವುದು, ಮನೆಯ ಹತ್ತಿರವೇ ಇರುವ ಸ್ಥಳಗಳಿಗೆ
ನಡೆದುಕೊಂಡೇ ಹೋಗುವುದು, ಇಂತಹ ಚಿಕ್ಕಪುಟ್ಟ ಮಾರ್ಪಾಡುಗಳನ್ನು ಮಾಡಿಕೊಳ್ಳುವುದು ಮೇಲೆನ್ನಿಸುತ್ತದೆ. ಇಂತಹ ನಡವಳಿಕೆಯನ್ನು ಚಿಕ್ಕಂದಿನಿಂದಲೂ ಅಭ್ಯಾಸಮಾಡಿಕೊಂಡಿರುವ ವ್ಯಕ್ತಿಗಳಲ್ಲಿ ಸ್ಥೂಲ ಕಾಯವನ್ನು ಕಾಣುವುದು ಬಹಳ ಕಡಿಮೆ. ಅಷ್ಟಲ್ಲದೇ, ಇಂತಹವರಲ್ಲಿ, ಮಧುಮೇಹ, ಅತಿರಕ್ತದೊತ್ತಡ, ಹೃದಯಾಘಾತ ದಂತಹ
ವ್ಯಾಧಿಗಳು ಕಂಡುಬರುವುದೂ ಕಡಿಮೆ.
ಆದರೆ, ಮಧುಮೇಹ ಕಾಣಿಸಿಕೊಂಡ ಮೇಲೆ, ನಮ್ಮ ನಡಾವಳಿಕೆಯನ್ನು ಮೇಲಿನಂತೆ ಬದಲಾವಣೆ ಮಾಡಿಕೊಂಡರೆ, ಅದು ಮಧುಮೇಹದ ಹತೋಟಿಯಲ್ಲಿ ಸಹಾಯವಾಗಬಹುದಾದರೂ, ಅದೊಂದೇ ಸಾಲದು. ವ್ಯಾಯಾಮವೆಂದ ಕೂಡಲೇ, ಶಾಲೆಯಲ್ಲಿ ಮಕ್ಕಳಿಗೆ ಮಾಡಿಸುವ ಡ್ರಿಲ್ ತರಹಸ ವ್ಯಾಯಾಮವೇ ಆಗಬೇಕೆಂದಿಲ್ಲ.
ನಮಗಿಷ್ಟವಾದ ಚಟುವಟಿಕೆಯನ್ನು ಆರಿಸಿಕೊಳ್ಳುವುದು ಒಳಿತು.ಆಟ ಪಾಟಗಳಲ್ಲಿ ಆಸಕ್ತಿ ಇದ್ದರೆ, ಟೆನ್ನಿಸ್, ಷಟಲ್ ಬ್ಯಾಡ್ ಮಿಂಟನ್ ನಂತಹ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದು,,
ಇಲ್ಲವೇ ಈಜುವುದು, ನೃತ್ಯದಲ್ಲಿ ಆಸಕ್ತಿ ಇದ್ದರೆ, ನೃತ್ಯದಲ್ಲಿ ತೊಡಗಿಸಿಕೊಳ್ಳುವುದು, ಆರಾಮವಾಗಿ ವಾಯುವಿಹಾರಕ್ಕಾಗಿ ಹೊರಡುವುದು, ಇತ್ಯಾದಿ.
ವಾರದಲ್ಲಿ ಐದು ದಿನಗಳಷ್ಟಾದರೂ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳಬೇಕು. ಪ್ರತಿದಿನ ಸುಮಾರು ಅರ್ಧ ಗಂಟೆಯ ಕಾಲ ಇದಕ್ಕೆ ಮೀಸಲಿಡುವುದು ಒಳ್ಳೆಯದು.
ಆದಷ್ಟು ಬೇಗ ಗುರಿ ಸಾಧಿಸುವ ಹುಮ್ಮಸ್ಸಿನಲ್ಲಿ ಮೊದಲ ದಿನದಿಂದಲೇ ಕಠಿಣ ವ್ಯಾಯಾಮಕ್ಕೆ ತೊಡಗುವುವು ಸರಿಯಲ್ಲ. ದಿನಗಳೆದಂತೆ ಕ್ರಮೇಣ ವ್ಯಾಯಾಮದ ಅವಧಿ ಮತ್ತು
ತೀವ್ರತೆಯನ್ನು ಹೆಚ್ಚಿಸಿಕೊಳ್ಳಬೇಕು. ಮೈಯೆಲ್ಲಾ ಬೆವರಲಾರಂಭಿಸುವುದು, ಒಂದು ಹಿತವಾದ ಸುಸ್ತಿನಂತಹ ಅನುಭವವಾಗುವವರೆಗೂ ವ್ಯಾಯಾಮ ಮಾಡುವುದು ಒಳಿತು.
೦೩. ಔಷಧೋಪಚಾರ: ಮಧಿಮೇಹದ ಚಿಕಿತ್ಸೆಯಲ್ಲಿ ಮೊದಲು ಬಳಸಿದ್ದು ಇನ್ಸುಲಿನ್ ನನ್ನು. ಆದರೆ, ಇನ್ಸುಲಿನ್ ಚುಚ್ಚುಮದ್ದು ಎಲ್ಲ ಮಧುಮೇಹಿಗಳಿಗೆ ಸಾಕಾಗುವಷ್ಟು ದೊರೆಯದೇ ಇದ್ದದ್ದು, ಮತ್ತು ಪ್ರತಿದಿನ ಚುಚ್ಚುಮದ್ದನ್ನು ತೆಗೆದುಕೊಳ್ಳ ಬೇಕಾದ ಕಿರಿಕಿರಿ, ಬೇರೆ ಬಗೆಯ ಔಷಧಿಗಳ ಆವಿಷ್ಕಾರಕ್ಕೆ ಪ್ರೇರಕವಾದುವು. ಹೀಗೆ ಮಾರುಕಟ್ಟೆಗೆ ಬಂದ ಮೊಟ್ಟಮೊದಲ
ಮಾತ್ರೆ ಟಾಲ್ಬುಟಮೈಡ್. ಇದರ ನಂತರ, ಬಹಳಷ್ಟು ಔಷಧಿಗಳು ಮಾರುಕಟ್ಟೆಗೆ ಬಂದಿವೆ. ಸದ್ಯದ ಪರಿಸ್ಥಿತಿಯಲ್ಲಿ ಮಧುಮೇಹದ ಉಪಚಾರದಲ್ಲಿ ಲಭ್ಯವಿರುವ ಔಷಧಿಗಳೆಂದರೆ,
a. ಇನ್ಸುಲಿನ್ ಮತ್ತು ಇದರ ಅನೇಕ ಪ್ರಬೇಧಗಳು.(insulin and its analogues)
b. ಸಲ್ಫೋಲಿನೂರಿಯಾ (sulfonyluria) ವರ್ಗದ ಮಾತ್ರೆಯ ರೂಪದಲ್ಲಿ ತೆಗೆದುಕೊಳ್ಳ ಬಹುದಾದ ಔಷಧಿ (oral hypoglycemic agents: OHA)
c. ಬೈಗುವಾನೈಡ್ ವರ್ಗದ (biguanide) OHA
d. ಥಯಾಜೋಲಿಡಿನೆಡಿಯೋನ್ಸ್ (thiazolidinediones) OHA
e. ಆಲ್ಫಾ ಗ್ಲುಕೋಸಿಡೇಸ್ (alpha glucosidase ) OHA
f. ಗ್ಲಿಪ್ಟಿನ್ಸ್ (gliptins) OHA
ಈ ಎಲ್ಲಾ ಔಷದಿಗಳು ಯಾವ ಬಗೆಯಲ್ಲಿ ಕೆಲಸ ಮಾಡುತ್ತವೆ ಎಂಬುದನ್ನನುಸರಿಸಿ ಇವುಗಳನ್ನು ವರ್ಗೀಕರಿಸಲಾಗಿದೆ.
a. ಇನ್ಸುಲಿನ್ : ಇದು ಮಧುಮೇಹಿಗಳಲ್ಲಿರುವ ಇನ್ಸುಲಿನ್ ಕೊರತೆಯನ್ನು ನೇರವಾಗಿ ನೀಗಿಸುವ ಮೂಲಕ ಕೆಲಸ ಮಾಡುತ್ತದೆ. ಇನ್ಸುಲಿನ್ ಚಿಕಿತ್ಸೆಯ ಆರಂಭದ ದಿನಗಳಲ್ಲಿ
(ಆಗ ಲಭ್ಯವಿದ್ದ ಇನ್ಸುಲಿನ್ ನ ಪ್ರಭಾವ ಕೇವಲ ನಾಲ್ಕಾರು ಗಂಟಗಳ ಕಾಲ) ಈ ಚುಚ್ಚುಮದ್ದನ್ನು ದಿನಕ್ಕೆ ಮೂರು ಅಥವಾ ನಾಲ್ಕು ಬಾರಿ ಕೊಡಬೇಕಾಗುತ್ತಿತ್ತು. ಈ ತೊಂದರೆಯನ್ನು ನಿವಾರಿಸಲು, ಇನ್ಸುಲಿನ್ ಕಣಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ, ಇನ್ಸುಲಿನ್ ಹೆಚ್ಚು ಕಾಲ ತನ್ನ ಪ್ರಭಾವವನ್ನು ಬೀರುವಂತೆ ಮಾಡಲಾಯಿತು.
ಈ ರೀತಿ ಬದಲಾವಣೆಗಳನ್ನು ಮಾಡಲಾದ ಇನ್ಸುಲಿನ್ ನನ್ನು ಇನ್ಸುಲಿನ್ ಪ್ರಬೇಧಗಳೆಂದು ಕರೆಯಬಹುದು. ಮೊದಲಲ್ಲಿ, ಇನ್ಸುಲಿನ್ ನನ್ನು ಹಸು ಮತ್ತು ಹಂದಿಗಳ
ಮೇದೋಜೀರಕಾಂಗಗಳಿಂದ (ಕಸಾಯಿಖಾನೆಯಲ್ಲಿ ಸಂಗ್ರಹಿಸಿದ್ದ) ತಯಾರಿಸುತ್ತಿದ್ದರು. ಆದರೆ ಈಗ ಜೆನೆಟಿಕ್ ಎಂಜಿನಿಯರಿಂಗ್ ಎಂಬ ತಂತ್ರಜ್ಞಾನದಿಂದ, ಯೀಸ್ಟ್ ಎಂಬ
ಏಕಾಣುಜೀವಿಗಳ ಮೂಲಕ ಪ್ರಯೋಗಶಾಲೆಯಲ್ಲಿ ತಯಾರಿಸುತ್ತಾರೆ. ಇದಕ್ಕೆ ಹ್ಯೂಮನ್ ರಿಕಾಂಬಿನೆಂಟ್ ಇನ್ಸುಲಿನ್ ಎನ್ನುತ್ತಾರೆ. (human recombinant insulin)
b. ಸಲ್ಫೋನಿಲೂರಿಯಾ ವರ್ಗದ ಡಾಯೋನಿಲ್ (daonil ) ಯೂಗ್ಲೂಕಾನ್ (euglucon ) ಗ್ಲೈನೇಸ್ (glynase ) ಡಯಾಮೈಕ್ರಾನ್ (diamicron ),
ಡಯಾಪ್ರೈಡ್ (diapride ) ಇತ್ಯಾದಿ ಔಷಧಿಗಳು, ಮೇದೋಜೀರಕ ಗ್ರಂಥಿಯಲ್ಲಿರುವ ಬೀಟಾ ಜೀವಕೋಶಗಳನ್ನು ಪ್ರಚೋದಿಸಿ, ಇನ್ನೂ ಹೆಚ್ಚು ಇನ್ಸುಲಿನ್ ಉತ್ಪಾದನೆ ಮಾಡುವಂತೆ ಮಾಡುತ್ತವೆ.
c. ಬೈಗುವಾನೈಡ್ : ಫೆನ್ ಫಾರ್ಮಿನ್ ಮತ್ತು ಮೆಟ್ ಫಾರ್ಮಿನ್ ಎಂಬುವು ಈ ವರ್ಗಕ್ಕೆ ಸೇರಿದ ಔಷಧಿಗಳು. ಇದರಲ್ಲಿ, ಫೆನ್ ಫಾರ್ಮಿನ್ ಈಗ ಬಳಕೆಯಲ್ಲಿಲ್ಲ.
ಗ್ಲೈಸಿಫೇಜ್, ಗ್ಲೈಕೋಮೆಟ್ ಇತ್ಯಾದಿ ಹೆಸರಿನಲ್ಲಿ ಮೆಟ್ ಫಾರ್ಮಿನ್ ಬಹಳ ಬಳಕೆಯಲ್ಲಿದೆ. ಇದು ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸುವುದಿಲ್ಲ. ದೇಹದಲ್ಲಿರುವಷ್ಟು ಇನ್ಸುಲಿನ್ ಹೆಚ್ಚು ಸಮರ್ಥವಾಗಿ ಕೆಲಸ ಮಾಡುವಂತೆ ಮಾಡುತ್ತದೆ. ಯಕೃತ್ತಿನಿಂದ ಬಿಡುಗಡೆಯಾಗುವ ಗ್ಲುಕೋಸ್ ಪ್ರಮಾಣವನ್ನೂ ಇದು ತಗ್ಗಿಸುತ್ತದೆ.
d. ಥಯಾಜೋಲಿಡಿನೆಡಿಯೋನ್ಸ್: ಪಯೋಗ್ಲಿಟಜೋನ್ ಮತ್ತು ರೋಸಿಗ್ಲಿಟಾಜೋನ್ ಈ ವರ್ಗಕ್ಕೆ ಸೇರಿದ ಔಷಧಿಗಳು. ರೋಸಿಗ್ಲಿಟಾಜೋನ್ ನನ್ನು ಈಗ ಬಳಸುತ್ತಿಲ್ಲೆ.
ಪಯೋಜ್ ( pioz ) ಪಯೋರೆಸ್ಟ್ (piorest ) ಇತ್ಯಾದಿ ಹೆಸರುಗಳಲ್ಲಿ ಲಬ್ಯವಿರುವ ಪಯೋಗ್ಲಿಟಜೋನ್, ಇನ್ಸುಲಿನ್ ನ ಕಾರ್ಯಕ್ಕೆ ಜೀವಕೋಶಗಳ ವಿರೋಧವನ್ನು ತಗ್ಗಿಸಿ,
(insulin resistance) ಇನ್ಸುಲಿನ್ ಹೆಚ್ಚು ಸಮರ್ಥವಾಗಿ ಕೆಲಸ ಮಾಡುವಂತೆ ಮಾಡುತ್ತದೆ.
e. ಆಲ್ಫಾ ಗ್ಲುಕೋಸಿಡೇಸ್ : ಈ ವರ್ಗಕ್ಕೆ ಸೇರಿದ ಅಕಾರ್ಬೋಸ್ (acarbose) , ಮಿಗ್ಲಿಟಾಲ್ (miglitol) , ವೋಗ್ಲಿಬೋಸ್(voglibose), ಬೇರೆಲ್ಲಾ ಔಷಧಿಗಳಿಗಿಂತ ಬಹಳ ಭಿನ್ನವಾಗಿ ಕೆಲಸ ಮಾಡುತ್ತವೆ. ಕರುಳಿನಲ್ಲಿ ಪಚನವಾಗುತ್ತಿರುವ ಆಹಾರದಲ್ಲಿರುವ ಗ್ಲುಕೋಸ ಕರುಳಿನ ರಕ್ತನಾಳಗಳಲ್ಲಿ ಹೀರಿಹೋಗದಂತೆ ತಡೆಯುತ್ತವೆ. ಅರ್ಥಾತ್, ಆಹಾರದಲ್ಲಿರುವ ಗ್ಲುಕೋಸ್, ರಕ್ತಕ್ಕೆ ಸೇರದಂತೆ ತಡೆಯುತ್ತವೆ.
f. ಗ್ಲಿಪ್ಟಿನ್ಸ್: ಇವು ಇತ್ತೀಚೆಗೆ ಮಾರುಕಟ್ಟೆಗೆ ಬಂದಿವೆ. ಈ ವರ್ಗಕ್ಕೆ ಸೇರಿದ ಸೀತಾಗ್ಲಿಪ್ಟಿನ್ (sitagliptin) , ವಿಲ್ಡಾಗ್ಲಿಪ್ಟಿನ್ (vildagliptin) ಇತ್ಯಾದಿ ಔಷಧಿಗಳ ಕಾರ್ಯವೂ ಬಹು ಭಿನ್ನವಾಗಿದೆ. ಇನ್ಸುಲಿನ್ ಉತ್ಪಾದನೆಯಲ್ಲಿ ಇವು ಅನುಕೂಲಕರ ಪರಿಣಾಮವನ್ನುಂಟುಮಾಡುತ್ತವೆ.
g. ಈ ಎಲ್ಲಾ ಔಷಧಿಗಳಲ್ಲದೇ, ಮಧುಮೇಹಿಗಳಲ್ಲಿ ಮಧುಮೇಹದ ಜೊತೆಗೇ ಇರಬಹುದಾದ ಅತಿರಕ್ತದೊತ್ತಡ, ಹೈಪರ್ ಲಿಪಿಡೀಮಿಯಾ (hyperlipidemia) ಅಂದರೆ
ರಕ್ತದಲ್ಲಿ ಹೆಚ್ಚಿರುವ ಕೊಬ್ಬಿನ ಅಂಶ ಇವಕ್ಕೂ ಸೂಕ್ತ ಔಷಧಿಗಳೂ ಬೇಕಾಗಬಹುದು.
ಇವೆಲ್ಲಾ ಔಷಧಿಗಳನ್ನು ಇಲ್ಲಿ ಪಟ್ಟಿಮಾಡಿರುವ ಉದ್ದೇಶವೇನೆಂದರೆ, ಯಾವುದೇ ಮಧುಮೇಹಿಯ ರಕ್ತದಲ್ಲಿನ ಸಕ್ಕರೆಯ ಪ್ರಮಾಣ ಹತೋಟಿಗೆ ಬಾರದಿದ್ದಾಗ.ಅವನು ಬಳಸುತ್ತಿರುವ ಔಷಧಿಯು ಸೂಕ್ತ ಪರಿಣಾಮವನ್ನು ನೀಡದೇ ಇದ್ದಾಗ, ಅವನು ನಿರಾಶೆ ಪಡಬೇಕಾಗಿಲ್ಲ ಮತ್ತು ಅವನು ಬಳಕೆ ಮಾಡಬಹುದಾದ ಇನ್ನೂ ಅನೇಕ ಔಷಧಿಗಳಿವೆ ಎಂಬುದನ್ನು ತಿಳಿಸಲು.
ಇವೆಲ್ಲಾ ಬಗೆಯ ಔಷಧಿಗಳು ಮಧುಮೇಹದ ಉಪಚಾರದಲ್ಲಿ ಲಬ್ಯವಿದ್ದರೂ, ಯಾವ ಒಬ್ಬ ವ್ಯಕ್ತಿಗೆ ಇವುಗಳಲ್ಲಿ ಯಾವುದು ಸೂಕ್ತವಾದುದು ಎಂಬುದನ್ನು ವೈದ್ಯರೇ ನಿರ್ಧರಿಸಬೇಕು.
ಯಾವ ಬಗೆಯ ಔಷಧಿ, ಅಥವಾ ಔಷಧಿಗಳು (ಕೆಲವೊಮ್ಮೆ ಒಂದಕ್ಕಿಂತಲೂ ಹೆಚ್ಚು ಬಗೆಯ ಔಷಧಿಗಳನ್ನು ಬಳಸಬೇಕಾಗುವುದು) , ಯಾವ ಪ್ರಮಾಣದಲ್ಲಿ ನೀಡಬೇಕು ಮತ್ತು
ಅವುಗಳನ್ನು ಹೇಗೆ ಸೇವಿಸಬೇಕು ಎಂಬುದನ್ನು ವೈದ್ಯರೇ ನಿರ್ಧರಿಸಬೇಕು. ಒಬ್ಬ ಮಧುಮೇಹಿಗೆ ಸರಿಹೊಂದುವ ಯಾವುದೇ ಔಷಧಿ ಇನ್ನೊಬ್ಬ ಮಧುಮೇಹಿಗೆ ಸರಿಹೊಂದದೇ ಇರಬಹುದು.
ಕೆಲವು ವಿಶೇಷ ಸಂದರ್ಭಗಳಲ್ಲಿ ಉಪಚಾರದಲ್ಲಿ ಸೂಕ್ತ ಬದಲಾವಣೆ ಮಾಡಬೇಕಾಗಬಹುದು.
೦೧. ಗರ್ಭಿಣಿಯರಲ್ಲಿ.
೦೨. ಶಸ್ತ್ರ ಚಿಕಿತ್ಸೆಯ ಸಮಯದಲ್ಲಿ
೦೩. ತೀವ್ರವಾದ ಸೋಂಕು ರೋಗವುಂಟಾದಾಗ,
೦೪.ಮೂತ್ರಪಿಂಡಗಳ ಕಾರ್ಯದಲ್ಲಿ ಕ್ಷೀಣತೆ ಯುಂಟಾದಾಗ.
ಮಧುಮೇಹಿಗಳು ತಾವು ಸೇವಿಸುವ ಔಷಧಿಗಳನ್ನು ಮತ್ತು ಆಹಾರವನ್ನು ಪ್ರತಿದಿನವೂ ನಿಗದಿತ ಸಮಯದಲ್ಲಿಯೇ ತೆಗೆದುಕೊಳ್ಳುವುದು ಬಹಳ ಒಳ್ಳೆಯದು.
ಇನ್ಸುಲಿನ್ ಚುಚ್ಚುಮದ್ದನ್ನು ಬಳಸುತ್ತಿರುವ ರೋಗಿಗಳಿಗೆ, ಇನ್ಸುಲಿನ್ ನನ್ನು ಸುಲಭವಾಗಿ ಚುಚ್ಚಿಕೊಳ್ಳಬಹುದಾದಂತಹ ಹೊಸ ಉಪಕರಣಗಳು (pen devices) ಲಭ್ಯವಿವೆ.
ಮಧುಮೇಹದ ಉಪಚಾರದ ಬಗ್ಗೆ ಬೇಕೆಂದೇ ಹೆಚ್ಚು ವಿಸ್ತಾರವಾಗಿ ಬರೆದಿಲ್ಲ. ಯಾರಿಗಾದರೂ ಹೆಚ್ಚಿನ ಮಾಹಿತಿ ಬೇಕಿದ್ದರೆ, ನನ್ನನ್ನು ಸಂಪರ್ಕಿಸಬಹುದು.
ಮಧುಮೇಹದ ಬಗ್ಗೆ ಬರೆದಿರುವ ಈ ಸರಣಿ ಲೇಖನ ಇಲ್ಲಿಗೆ ಮುಕ್ತಾಯವಾಯಿತು
- Add new comment
- 386 reads
