ಮಧುಮೇಹವೆಂಬ ಗುಪ್ತಗಾಮಿನಿ................೨
ಮಧುಮೇಹವೆಂಬ ಗುಪ್ತಗಾಮಿನಿ................೨
ಆರೋಗ್ಯ ಸಂಪದದಲ್ಲಿ
ಹಾರ್ಮೋನ್ (hormone) ಎಂದರೇನು ? : ನಮ್ಮ ದೇಹದಲ್ಲಿ ಬಿಲಿಯಗಟ್ಟಲೆ ಗ್ರಂಥಿಗಳಿವೆ. ಬೆವರನ್ನು ಉತ್ಪಾದಿಸುವ ಚರ್ಮದಲ್ಲಿನ ಬೆವರಿನ ಗ್ರಂಥಿಗಳು, ಕರುಳುಗಳಲ್ಲಿರುವ ಜೀರ್ಣರಸವನ್ನು ಉತ್ಪಾದಿಸುವ ಜೀರ್ಣ ಗ್ರಂಥಿಗಳು, ಬಾಯಂಗಳದಲ್ಲಿ ಜೊಲ್ಲನ್ನು ಸುರಿಸುವ ಜೊಲ್ಲಿನ ಗ್ರಂಥಿಗಳು, ಹೀಗೆ ಹಲವಾರು ಬಗೆಯ ಗ್ರಂಥಿಗಳಿವೆ. ಈ ಗ್ರಂಥಿಗಳು ಉತ್ಪಾದಿಸುವ "ರಸ" ಅಥವಾ "ದ್ರವ" ಗಳು ಪುಟ್ಟ ಪುಟ್ಟ ನಳಿಕೆಗಳ ಮೂಲಕ ಸಾಗಿ ತಮ್ಮ ಗಮ್ಯ ಸ್ಥಾನವನ್ನು ಸೇರುತ್ತವೆ. ಕೆಲವು ವಿಶಿಷ್ಠ ಗ್ರಂಥಿಗಳು ಮಾತ್ರ ತಾವು ಉತ್ಪಾದಿಸುವ "ರಸ" ವನ್ನು ನಳಿಕೆಗಳ ಮೂಲಕ ಸಾಗಿಸದೆ ನೇರವಾಗಿ ರಕ್ತದಲ್ಲಿಯೇ ಸೇರಿಸುತ್ತವೆ. ಇಂತಹ ಗ್ರಂಥಿಗಳಿಗೆ ನಿರ್ನಾಳ ಗ್ರಂಥಿಗಳೆಂದು ಹೆಸರು.
ಪೀನಿಯಲ್ (pineal) ಪಿಚ್ಯುಟರಿ, (pituitary) ಥೈರಾಯ್ಡ್ (thyroid) , ಪ್ಯಾರಾ ಥೈರಾಯ್ಡ್, (parathyroid) ಅಡ್ರೆನಲ್,(adrenal) ಮೇದೋಜೀರಕ ಗ್ರಂಥಿಗಳ ಲ್ಯಾಂಗರ್ ಹಾನ್ಸ್ ಜೀವಕೋಶ ಸಮೂಹ, ವೃಷಣಗಳು (testes) , ಅಂಡಾಶಯ (ovary) ಇತ್ಯಾದಿ ಈ ಬಗೆಯ ನಿರ್ನಾಳ (endocrine) ಗ್ರಂಥಿಗಳಾಗಿವೆ. ಇವು ಸಾಮಾನ್ಯವಾಗಿ, ಪ್ರೋಟೀನ್, (protein) ಪಾಲಿಪೆಪ್ಟೈಡ್ (polypeptide)ಮತ್ತು ಸ್ಟೀರಾಯ್ಡ್ (steroid) ಗಳೆಂಬ ರಸಾಯನಿಕ ವರ್ಗಗಳಿಗೆ ಸೇರಿರುವ ಕೆಲವು ರಸಾಯನಿಕ ವಸ್ತುಗಳನ್ನು ಸ್ರವಿಸುತ್ತವೆ. ಇವುಗಳಿಗೆ "ಹಾರ್ಮೋನ್" ಗಳೆಂದು ಹೆಸರು. ಈ ಹಾರ್ಮೋನ್ ಗಳ ಕಾರ್ಯ ವೈಖರಿ ದಂಗು ಬಡಿಸುವಂತಹುದು. ಉದಾಹರಣೆಗೆ, ವೃಷಣಗಳು ಸ್ರವಿಸುವ ಟೆಸ್ಟೋಸ್ಟಿರೋನ್ ಎಂಬ ಹಾರ್ಮೋನನ್ನು ನಿಯಮಿತ ಪ್ರಮಾಣದಲ್ಲಿ ಚುಚ್ಚುಮದ್ದಿನ ರೂಪದಲ್ಲಿ ಹೆಣ್ಣೊಬ್ಬಳಿಗೆ ನೀಡಿದರೆ, ಅವಳ ದೇಹದಲ್ಲಿ ಪುರುಷ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಮೇದೋಜೀರಕ ಗ್ರಂಥಿಗಳಲ್ಲಿರುವ ಲ್ಯಾಂಗರ್ ಹಾನ್ಸ್ ಗ್ರಂಥಿಗಳು ಇನ್ಸುಲಿನ್ ಮತ್ತು ಗ್ಲುಕೋಗಾನ್ ಎಂಬ ಎರಡು ಹಾರ್ಮೋನಗಳನ್ನು ಸ್ರವಿಸುತ್ತವೆ.
ನಮ್ಮ ದೇಹದ ಚಟುವಟಿಕೆಗಳಿಗೆ ಬೇಕಾದ ಶಕ್ತಿಯನ್ನು ಸಕ್ಕರೆಯಿಂದ ಪಡೆಯಲು, ಸಕ್ಕರೆಯನ್ನು ಯಕೃತ್ತು ಮತ್ತು ಮಾಂಸಖಂಡಗಳ ಅಂಗಾಂಶಗಳಲ್ಲಿ ಶೇಖರಿಸಿಟ್ಟುಕೊಳ್ಳಲು
ಮತ್ತು ರಕ್ತದಲ್ಲಿ ಸಕ್ಕರೆಯ (glucose level in the blood) ಪ್ರಮಾಣವನ್ನು ನಿಯಂತ್ರಿಸಲು ಈ ಹಾರ್ಮೋನ್ ಗಳು ಬಹಳ ಮುಖ್ಯವಾದುವು.
ಆಹಾರ : ಮಧುಮೇಹವನ್ನು ಅರ್ಥಮಾಡಿಕೊಳ್ಳಲು ನಾವು ಸೇವಿಸುವ ಆಹಾರದ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ. ನಮ್ಮ ದೇಹ ಟ್ರಿಲ್ಲಿಯನ್ ಗಟ್ಟಲೆ ಜೀವಕೋಶಗಳಿಂದ ರಚಿತವಾಗಿದೆ ಎಂದು ನಾನೀಗಾಗಲೇ ಹೇಳೀದ್ದೇನೆ. ಪ್ರತಿಯೊಂದು ಜೀವಕೋಶವೂ ಸ್ವತಂತ್ರವಾಗಿ ಜೀವಂತವಾಗಿದ್ದರೂ, ಅವೆಲ್ಲವೂ ಈ ದೇಹವೆಂಬ ಒಟ್ಟಾರೆ ವ್ಯವಸ್ಥೆಯಲ್ಲಿ ಸೇರಿಹೋಗಿರುವುದರಿಂದ, ದೇಹದಿಂದ ಅವುಗಳನ್ನು ಪ್ರತ್ಯೇಕಿಸಿದಾಗ ಅವು ಜೀವಂತವಾಗಿರಲು ಸಾಧ್ಯವಿಲ್ಲ. ಪ್ರತಿಯೊಂದು ಜೀವಕೋಶಕ್ಕೂ, ಅದರ ಉಳಿವಿಗಾಗಿ ಮತ್ತು ಅದು ತನ್ನ ಕಾರ್ಯವನ್ನು ಸರಿಯಾಗಿ ನಿರ್ವಹಿಸಲು, ಅದಕ್ಕೆ ಅಗತ್ಯವಾದಷ್ಟು ಆಮ್ಲಜನಕ ಮತ್ತು ಆಹಾರ ಪದಾರ್ಥಗಳ ಪೂರೈಕೆಯಾಗುತ್ತಿರಬೇಕು. ಈ ಜೀವಕೋಶಗಳಿಗೆ ಆಹಾರ ಪದಾರ್ಥಗಳಲ್ಲಿರುವ ಸಂಕೀರ್ಣ ರಸಾಯನಿಕ ಪದಾರ್ಥಗಳಿಂದ ತಮಗೆ ಅಗತ್ಯವಾದ ಶಕ್ತಿಯನ್ನು ಪಡೆಯಲು ಆಮ್ಲಜನಕದ ಅವಶ್ಯಕತೆಯಿದೆ. ಹೀಗಾಗಿ, ಆಮ್ಲಜನಕ ಮತ್ತು ಆಹಾರ
ಇವೆರಡೂ ನಿರಂತರವಾಗಿ ಜೀವಕೋಶಗಳಿಗೆ ಸರಬರಾಜಾಗುತ್ತಿರಬೇಕು. ಇಡೀ ದೇಹವನ್ನು ವ್ಯಾಪಿಸಿರುವ ರಕ್ತನಾಳಗಳೆಂಬ ಕೊಳವೆಗಳ ಮೂಲಕ ಸತತವಾಗಿ ಪ್ರವಹಿಸುತ್ತಿರುವ
ರಕ್ತವು ಇವೆರಡನ್ನೂ ಪ್ರತಿ ಜೀವಕೋಶಗಳಿಗೆ ಪ್ರತಿ ಕ್ಷಣವೂ ಪೂರೈಸುತ್ತಿರುತ್ತದೆ.
೧. ಆಮ್ಲಜನಕ (oxygen) ದೊರೆಯದೇ ಹೋದಲ್ಲಿ ದೇಹದ ಬಹಳಷ್ಟು ಜೀವಕೋಶಗಳು ಕೇವಲ ಕೆಲವು ಗಂಟೆಗಳ ಕಾಲ ಜೀವಿಸಬಲ್ಲವು. ಅದಕ್ಕೂ ಮೀರಿದ ಅವಧಿಗೂ ಆಮ್ಲಜನಕ ದೊರೆಯದೇ ಹೋದಲ್ಲಿ, ಆ ಜೀವಕೋಶಗಳು ನಾಶ ಹೊಂದುತ್ತವೆ. ಮಿದುಳಿನಲ್ಲಿರುವ ಜೀವಕೋಶಗಳು ಮಾತ್ರ ಇದಕ್ಕೆ ಅಪವಾದವಾಗಿವೆ. ಅವುಗಳಿಗೆ ಆಮ್ಲಜನಕ ನಿರಂತರವಾಗಿ ಪೂರೈಕೆಯಾಗುತ್ತಿರಬೇಕು. ಕೇವಲ ಐದು ನಿಮಿಷಗಳಷ್ಟು ಕಾಲ ಅವುಗಳಿಗೆ ಆಮ್ಲಜನಕ ದೊರೆಯದೇ ಹೋದರೆ, ಅವುಗಳಿಗೆ ತೀವ್ರ ಹಾನಿಯುಂಟಾಗಿ, ಸಾವು ಸಂಭವಿಸಬಹುದು. ಹೃದಯದ ಬಡಿತ ಇಲ್ಲವೇ ಉಸಿರಾಟ ಯಾವುದೇ ಕಾರಣದಿಂದ ಐದು ನಿಮಿಷಗಳಷ್ಟು ಕಾಲ ಸ್ಥಗಿತವಾದರೆ, ಮಿದುಳಿನ ಜೀವಕೋಶಗಳಿಗೆ ಆಮ್ಲಜನಕ ದೊರೆಯದೆ ಅವುಗಳ ಕಾರ್ಯ ಸ್ಥಗಿತಕೊಳ್ಳುತ್ತದೆ ಮತ್ತು ಸಾವು ಸಂಭವಿಸುತ್ತದೆ.
೨. ಆಹಾರ ಪದಾರ್ಥಗಳು: ಆಹಾರ ಪದಾರ್ಥಗಳ ಕೊರತೆಯನ್ನು ಬಹಳಷ್ಟು ಕಾಲ ಸಹಿಸಬಲ್ಲ ಶಕ್ತಿ ಬಹುತೇಕ ಎಲ್ಲಾ ಜೀವಕೋಶಗಳಿಗೂ ಇದೆ. ಹಾಗಾಗಿಯೇ ಇಲ್ಲಿಯೂ ಕೂಡ ಮಿದುಳಿನ ಜೀವಕೋಶಗಳು ಸ್ವಲ್ಪ ವಿಶೇಷವಾಗಿವೆ. ಅವುಗಳಿಗೆ ಬಹು ಅಗತ್ಯವಾದ ಆಹಾರ ಪದಾರ್ಥಗಳು, ಅದರಲ್ಲಿಯೂ ವಿಶೇಷವಾಗಿ ಗ್ಲುಕೋಸ್ (glucose) -ಸಕ್ಕರೆಯ ಒಂದು ರೂಪ, ಕೊರತೆಯುಂಟಾದರೆ, ಮಿದುಳಿನ ಕಾರ್ಯಕ್ಕೆ ಧಕ್ಕೆಯುಂಟಾಗಿ, ಪ್ರಜ್ಞಾಹೀನ ಸ್ಥಿತಿಯುಂಟಾಗಬಹುದು.
ಅನ್ನ, ರೊಟ್ಟಿ, ರಾಗಿ ಮುದ್ದೆ, ಮಾಂಸ, ಮೀನು, ತರಕಾರಿ, ಹಣ್ಣುಗಳು ಸೇರಿರುವಂತೆ ಹಲವಾರು ಬಗೆ ಬಗೆಯ ಆಹಾರಗಳನ್ನು ನಾವು ಸೇವಿಸಿದರೂ, ಇವುಗಳಲ್ಲಿ ದೇಹಕ್ಕೆ ಬೇಕಾಗಿರುವ ಪೌಷ್ಠಿಕಾಂಶಗಳು ಮಾತ್ರ ಬೆರಳೆಣಿಸುವಷ್ಟು. ಅದರಲ್ಲಿಯೂ ದೇಹಕ್ಕೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಬೇಕಾದಂತಹವುಗಳು ಕೇವಲ ಮೂರು ಬಗೆಯವು.
೧. ಕಾರ್ಬೋಹೈಡ್ರೇಟ್ ( ಪಿಷ್ಠ ಪದಾರ್ಥಗಳು ಮತ್ತು ಸಕ್ಕರೆ) (carbohydrates)
೨. ಪ್ರೋಟೀನ್,(ಸಸಾರಜನಕ ವಸ್ತುಗಳು) (proteins)
೩. ಫ್ಯಾಟ್ಸ್ (ಕೊಬ್ಬು ಅಥವಾ ಮೇದಸ್ಸು) (fats)
ಇನ್ನು ಕೆಲವು ಪೌಷ್ಠಿಕಾಂಶಗಳು ಬಹಳ ಅಲ್ಪಪ್ರಮಾಣದಲ್ಲಿ ಅಗತ್ಯವಾದರೂ, ದೇಹದ ಆರೋಗ್ಯಕ್ಕೆ ಬಹು ಮುಖ್ಯವಾದುವು.
೧. ವಿಟಮಿನ್ಸ್ (vitamins)
೨. ಮಿನರಲ್ಸ್ ( ಖನಿಜಗಳು ) (minerals)
ಮಧುಮೇಹಕ್ಕೆ ಸಂಬಂಧಿಸಿದಂತೆ , ಮೊದಲು ಹೇಳಿದ ಮೂರು ಪದಾರ್ಥಗಳ ಬಗ್ಗೆ ತಿಳಿದುಕೊಳ್ಳುವುದು ಬಹಳ ಅಗತ್ಯ.
೧. ಕಾರ್ಬೋಹೈಡ್ರೇಟ್ಸ್: ನಮ್ಮ ಆಹಾರದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿರುವುದು ಕಾರ್ಬೋಹೈಡ್ರೇಟ್ಸ್. - ಅಕ್ಕಿ, ಗೋಧಿ, ಜೋಳ, ರಾಗಿ, ನವಣೆ ಯಂತಹ ಧಾನ್ಯಗಳಲ್ಲಿ ಇದು ಪಿಷ್ಠ (starch) ರೂಪದಲ್ಲಿ ಅಧಿಕವಾಗಿರುತ್ತದೆ. ಕಾರ್ಬೋಹೈಡ್ರೇಟ್ಸ್ ನ ಇನ್ನೊಂದು ರೂಪ ಸಕ್ಕರೆ. ಕಬ್ಬಿನಿಂದ ತಯಾರಾದ ಸಕ್ಕರೆಯನ್ನು ಸಾಮಾನ್ಯವಾಗಿ ಸಕ್ಕರೆಯೆಂದು ಕರೆದರೂ, ಸಕ್ಕರೆಯಲ್ಲಿ ಹಲವು ವಿಧಗಳಿವೆ. ಕಬ್ಬಿನಿಂದ ತಯಾರಾದ ಸಕ್ಕರೆಗೆ ಸುಕ್ರೋಸ್ ಎನ್ನುತ್ತಾರೆ. ಪ್ರತಿಯೊಂದು ಸುಕ್ರೋಸ್ ಕಣದಲ್ಲಿ ಒಂದು ಕಣ ಗ್ಲುಕೋಸ್ ಮತ್ತು ಒಂದು ಕಣ ಫ್ರಕ್ಟೋಸ್ ಇರುತ್ತವೆ. ಹಣ್ಣುಗಳ ಸಿಹಿ ರುಚಿಗೆ ಕಾರಣವಾದ ಸಕ್ಕರೆಯ ಅಂಶ ಫ್ರಕ್ಟೋಸ್ ಆಗಿರುತ್ತದೆ. ಹೀಗೆ ಗ್ಲುಕೋಸ್, ಫ್ರಕ್ಟೋಸ್, ಲ್ಯಾಕ್ಟೋಸ್ ಮತ್ತು ಸುಕ್ರೋಸ್ ಗಳು ಎಂಬ ಮುಖ್ಯ ಪ್ರಬೇಧಗಳಿವೆ. ಅಕ್ಕಿ, ಗೋಧಿ ಮುಂತಾದ ಧಾನ್ಯಗಳಿಂದ ತಯಾರಾದ ಯಾವುದೇ ಬಗೆಯ ಆಹಾರದ (ಅನ್ನ, ರೊಟ್ಟಿ, ಚಪಾತಿ, ಮುದ್ದೆ ಇತ್ಯಾದಿ) ತಿನಿಸುಗಳಲ್ಲಿ ಪಿಷ್ಠವಿರುತ್ತದೆ. ನಾವು ಸೇವಿಸುವ ಆಹಾರ, ಬಾಯಿ, ಜಠರ ಮತ್ತು ಕರುಳುಗಳನ್ನು ಹಾದು ಹೋಗುವಾಗ, ಜೊಲ್ಲು ರಸ, ಜಠರ ರಸ ಮತ್ತು ಕರುಳು ರಸಗಳ ಜೊತೆ ಬೆರೆಯುತ್ತದೆ. ಈ ರಸಗಳಲ್ಲಿರುವ ಕೆಲವು ಕಿಣ್ವಗಳು ಪಿಷ್ಠವನ್ನು ಗ್ಲುಕೋಸ್ ಕಣಗಳನ್ನಾಗಿ ಮಾರ್ಪಡಿಸುತ್ತವೆ. ಹೀಗೆ ಉಂಟಾದ ಗ್ಲುಕೋಸ್ ಕಣಗಳು ಕರುಳಿನಲ್ಲಿರುವ ಸೂಕ್ಷ್ಮ ರಕ್ತನಾಳಗಳಲ್ಲಿ ಸೇರಿಕೊಂಡು ರಕ್ತದಲ್ಲಿ ಬೆರೆಯುತ್ತವೆ. ರಕ್ತ ಪರಿಚಲನೆಯ ಮೂಲಕ ಯಕೃತ್ತನ್ನು ತಲುಪುತ್ತವೆ, ಮತ್ತು ಅದೇ ರಕ್ತ ಪರಿಚಲನೆಯ ಮೂಲಕ ದೇಹದ ವಿವಿಧ ಭಾಗಗಳಿಗೆ ಹೋಗಿ ಎಲ್ಲಾ ಜೀವಕೋಶಗಳಲ್ಲಿ ಪ್ರವೇಶಿಸುತ್ತವೆ.
ಇಲ್ಲಿ ನಾವು ಗಮನಿಸಬೇಕಾದ ಅಂಶವೇನೆಂದರೆ, ನಾವು ಅನ್ನ,ರೊಟ್ಟಿ, ಚಪಾತಿ ಯಂತೆ ವಿವಿಧ ಬಗೆಯ ಆಹಾರಪದಾರ್ಥಗಳನ್ನು ಸೇವಿಸಿದರೂ, ಅವೆಲ್ಲವೂ ನಮ್ಮ ರಕ್ತಕ್ಕೆ ಸೇರಿಕೊಳ್ಳುವುದು ಗ್ಲುಕೋಸ್ ರೂಪದಲ್ಲಿಯೇ. ಬಹಳಷ್ಟು ಮಧುಮೇಹಿಗಳು ತಮ್ಮ ವೈದ್ಯರನ್ನು ಕೇಳುವ ಪ್ರಶ್ನೆ,
"ಡಾಕ್ಟರೇ. ನಾನು ಪ್ರಮಾಣ ಮಾಡಿ ಹೇಳ್ತೇನೆ.....ಒಂದೇ ಒಂದು ಸಕ್ಕರೆಯ ಕಣವನ್ನಾಗಲೀ, ಯಾವುದೇ ಸಿಹಿ ತಿನಿಸನ್ನೂ ನಾನು ತಿಂದಿಲ್ಲ, ಆದರೂ ಅದು ಹೇಗೆ ನನ್ನ ರಕ್ತದಲ್ಲಿ
ಸಕ್ಕರೆಯ ಅಂಶ ಹೆಚ್ಚಲು ಸಾಧ್ಯ ?"
ಆ ಪ್ರಶ್ನೆಗೆ ಉತ್ತರ ಮೇಲಿನ ಸಾಲುಗಳಲ್ಲಿದೆ. ಅರ್ಥಾತ್, ನಮ್ಮ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾಗಲು ಸಕ್ಕರೆಯನ್ನೇ ತಿನ್ನಬೇಕೆಂದಿಲ್ಲ. ನಾವು ತಿನ್ನುವ ಪಿಷ್ಠ ಪೂರಿತ ಆಹಾರವೂ
ಸಕ್ಕರೆ ಹೆಚ್ಚಾಗಲು ಕಾರಣವಾಗಬಹುದು.
ನಮ್ಮ ದೇಹಕ್ಕೆ ತಕ್ಷಣವೇ ಬೇಕಾದ ಶಕ್ತಿಯನ್ನೊದಗಿಸುವುದು ಗ್ಲುಕೋಸ್. ಜೀವಕೋಶಗಳಿಗೆ ಅಗತ್ಯವಾದ ಶಕ್ತಿಯನ್ನೊದಗಿಸುವುದೂ ಗ್ಲುಕೋಸ್.
೭೦ ಕೆ.ಜಿ. ತೂಗುವ ಒಬ್ಬ ಆರೋಗ್ಯವಂತ ವ್ಯಕ್ತಿಗೆ ಪ್ರತಿದಿನ ಸುಮಾರು ೨೫೦ ರಿಂದ ೩೦೦ ಗ್ರಾಮ್ ಕಾರ್ಬೋಹೈಡ್ರೇಟ್ ನ ಅವಶ್ಯಕತೆ ಇದೆ. ಪ್ರತಿದಿನವೂ ನಮಗೆ ಅಗತ್ಯವಿದ್ದಷ್ಟು ಪ್ರಮಾಣದ ಆಹಾರವನ್ನು ಮಾತ್ರ ಸೇವಿಸುವಂತೆ ಮಾಡುವ ನಮ್ಮ ದೇಹದಲ್ಲಿ ಒಂದು ವ್ಯವಸ್ಥೆ ಇದೆ. ಆದರೂ ಕೂಡ, ನಮ್ಮ ಮಾನಸಿಕ ಸ್ಥಿತಿಯಲ್ಲಿ ಮತ್ತು ಬದಲಾಗುತ್ತಿರುವ ಜೀವನ ಶೈಲಿಗಳಿಂದಾಗಿ, ನಮಗೆ ಅಗತ್ಯವಾದದ್ದಕ್ಕಿಂತ ಹೆಚ್ಚಾಗಿ ಇಲ್ಲವೇ ಕಡಿಮೆ ಆಹಾರ ಸೇವಿಸುವ ಸಾಧ್ಯತೆ ಇದೆ. ಒಂದು ವೇಳೆ ನಮಗೆ ಅಗತ್ಯವಾದದ್ದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಆಹಾರವನ್ನು ಸೇವಿಸಿದ್ದರೆ, ಆ ಅಧಿಕ ಆಹಾರಾಂಶವನ್ನು ಆಪತ್ಕಾಲಕ್ಕೆ ಒದಗುವಂತೆ ಗ್ಲೈಕೊಜೆನ್ ಎಂಬ ಕಾರ್ಬೋಹೈಡ್ರೇಟ್ ನ ರೂಪದಲ್ಲಿ ಶೇಖರಿಸಿಟ್ಟುಕೊಳ್ಳುವ ಮತ್ತು ಕಡಿಮೆ ಪ್ರಮಾಣದಲ್ಲಿ ಸೇವಿಸಿದ್ದರೆ, ಈ ಗ್ಲೈಕೊಜೆನ್ ನಿಂದ ಕಡಿಮೆ ಬಿದ್ದ ಆಹಾರವನ್ನು ಪಡೆದುಕೊಳ್ಳುವ ವ್ಯವಸ್ಥೆಯಿದೆ. ಹೀಗೆ ಗ್ಲೈಕೊಜೆನ್ ರೂಪದಲ್ಲಿ ಶೇಖರಿಸಿಟ್ಟುಕೊಳ್ಳುವ ಸಾಮರ್ಥ್ಯಕ್ಕೆ ಒಂದು ಮಿತಿ ಇದೆ. ಒಂದು ವೇಳೆ ಒಬ್ಬ ವ್ಯಕ್ತಿ ಯಾವುದೋ ಕಾರಣಗಳಿಂದಾಗಿ, ತನ್ನ ಅಗತ್ಯಕ್ಕಿಂತಲೂ ಹೆಚ್ಚಾಗಿ ಪ್ರತಿದಿನವೂ ಅಧಿಕ ಆಹಾರವನ್ನು ಸೇವಿಸುತ್ತಾ ಇದ್ದಲ್ಲಿ, ಹೆಚ್ಚಿನ ಆಹಾರಾಂಶವನ್ನು ಕೊಬ್ಬಿಗೆ ಪರಿವರ್ತಿಸಿ, ಆ ಕೊಬ್ಬನ್ನು ಹೊಟ್ಟೆಯ ಭಾಗದಲ್ಲಿ, ತೊಡೆ, ಜಘನಗಳಲ್ಲಿ ಶೇಖರಿಸಿಟ್ಟುಕೊಳ್ಳುವ ವ್ಯವಸ್ಥೆಯೂ ಇದೆ. ಅದೇ ರೀತಿ, ಒಬ್ಬ ವ್ಯಕ್ತಿ ಯಾವುದೋ ಕಾರಣಗಳಿಂದಾಗಿ, ಬಹಳಷ್ಟು ದಿನಗಳ ಕಾಲ ತಕ್ಕಷ್ಟು ಆಹಾರವನ್ನು ಸೇವಿಸದೇ ಇದ್ದಲ್ಲಿ, ಗ್ಲೈಕೊಜೆನ್ ನ ಸಂಗ್ರಹ ಮುಗಿದು ಹೋದ ನಂತರ, ದೇಹದಲ್ಲಿ ಶೇಖರವಾಗಿರುವ ಕೊಬ್ಬನ್ನು ಶಕ್ತಿಗಾಗಿ ಬಳಸಿಕೊಳ್ಳುವ ವ್ಯವಸ್ಥೆಯೂ ಇದೆ.
ಗ್ಲುಕೋಸ್: ನಮ್ಮ ಆಹಾರದಲ್ಲಿರುವ ಪಿಷ್ಠ, ಸಕ್ಕರೆ, ಬೆಲ್ಲ (ಬೆಲ್ಲದಲ್ಲಿರುವುದು ಕೂಡಾ ಸುಕ್ರೋಸ್ ಎಂಬ ಸಕ್ಕರೆ), ಹಣ್ಣುಗಳಲ್ಲಿರುವ ಸಕ್ಕರೆ, ಜೇನುತುಪ್ಪದಲ್ಲಿರುವ ಸಕ್ಕರೆ ಎಲ್ಲವೂ ಕಡೆಯಲ್ಲಿ ಗ್ಲುಕೋಸ್ ಆಗಿ ಪರಿವರ್ತಿತಗೊಂಡೇ ಕರುಳಿನಲ್ಲಿರುವ ರಕ್ತನಾಳಗಳಲ್ಲಿ ಸೇರಿಕೊಳ್ಳುತ್ತವೆ. ಯಾವುದೇ ವ್ಯಕ್ತಿಯ ರಕ್ತದಲ್ಲಿನ ಗ್ಲುಕೋಸ್ ನ ಮಟ್ಟ ದಿನದ ಎಲ್ಲಾ ಸಮಯದಲ್ಲಿಯೂ ಒಂದೇ ಆಗಿರುವುದಿಲ್ಲ. ಮಧುಮೇಹದ ಸಂದರ್ಭದಲ್ಲಿ ಚರ್ಚೆ ಗ್ಲುಕೋಸ್ ಗೆ ಸಂಬಂಧಿಸಿದ್ದಾದರಿಂದ, ಇನ್ನು ಮುಂದೆ ಸಕ್ಕರೆ ಎಂದು ಬರೆದಕಡೆಯೆಲ್ಲಾ ಅದನ್ನು ಗ್ಲುಕೋಸ್ ಎಂದೇ ತಿಳಿಯಬೇಕು.
ರಕ್ತದಲ್ಲಿನ ಸಕ್ಕರೆ ಅಥವಾ ಗ್ಲುಕೋಸ್ ನ ಮಟ್ಟ:
೦೧. ರಾತ್ರಿ ಊಟವಾದ ನಂತರ, ಮತ್ತೇನೂ ಆಹಾರವನ್ನು ಸೇವಿಸದೇ, ಮರುದಿನ ಬೆಳಿಗ್ಗೆ, ಕಾಫಿ ಅಥವಾ ಟೀ ಸೇವಿಸುವ ಮುನ್ನವೇ, ಒಬ್ಬ ವ್ಯಕ್ತಿಯ ರಕ್ತನಾಳದಿಂದ (vein) ರಕ್ತದ ಸ್ಯಾಂಪಲ್ಲನ್ನು ತೆಗೆದು ಅದರಲ್ಲಿನ ಸಕ್ಕರೆಯ ಅಂಶವನ್ನು ಅಳೆದಾಗ, ಅದು ಆ ವ್ಯಕ್ತಿಯ ರಕ್ತದಲ್ಲಿ ಸಕ್ಕರೆಯ ಅಂಶವಿರುವ ಕನಿಷ್ಠ ಪ್ರಮಾಣವನ್ನು ತೋರಿಸುತ್ತದೆ . ಇದಕ್ಕೆ ಫಾಸ್ಟಿಂಗ್ ಬ್ಲಡ್ ಶುಗರ್ ಅಥವಾ ಎಫ್.ಬಿ.ಎಸ್. ಎನ್ನುತ್ತಾರೆ (Fasting bloood sugar or F.B.S) ಒಬ್ಬ ಆರೋಗ್ಯವಂತ ವ್ಯಕ್ತಿಯಲ್ಲಿ ಎಫ್.ಬಿ.ಎಸ್ ೮೦ ರಿಂದ ೧೧೦ ಮಿ.ಗ್ರಾಮ್ ನಷ್ಟಿರಬೇಕು. ಒಂದು ವೇಳೆ ಅದು ೧೧೦ ಮಿ.ಗ್ರಾಮ್ ಗಿಂತಲೂ ಹೆಚ್ಚಾಗಿದ್ದರೆ ಮಧುಮೇಹವನ್ನು ಶಂಕಿಸಬಹುದು.
೦೨. ಒಬ್ಬ ಆರೋಗ್ಯವಂತ ವ್ಯಕ್ತಿ ಮಧ್ಯಾಹ್ನದ ಊಟದ ನಂತರ (ಅಥವಾ ತೃಪ್ತಿಯಾಗಿ ತಿಂಡಿಯನ್ನು ತಿಂದ ನಂತರ) , ಊಟ ಮಾಡಿ ಒಂದೂವರೆ ಗಂಟೆಯ ನಂತರ,
ಎರಡು ಗಂಟೆಗಳ ಒಳಗಾಗಿ ಅವನ ರಕ್ತ ನಾಳದಿಂದ ತೆಗೆದ ರಕ್ತದ ಸ್ಯಾಂಪಲ್ಲನ್ನು ತೆಗೆದಾಗ, ಅದರಲ್ಲಿನ ಸಕ್ಕರೆಯ ಪ್ರಮಾಣ ೧೬೦ ಮಿ.ಗ್ರಾಮ್ ಗಳಿಗಿಂತಲೂ ಹೆಚ್ಚಾಗಿ
ಇರಬಾರದು. ಒಂದು ವೇಳೆ ೧೮೦ ಮಿ.ಗ್ರಾಂ ಗಿಂತಲೂ ಹೆಚ್ಚಾಗಿದ್ದರೆ, ಮಧುಮೇಹವನ್ನು ಶಂಕಿಸಬಹುದು. ಇದಕ್ಕೆ ಪೋಸ್ಟ್ ಪ್ರಾಂಡಿಯಲ್ ಬ್ಲಡ್ ಶುಗರ್ ಅಥವಾ ಪಿ.ಪಿ.ಬಿ.ಎಸ್
ಎನ್ನುತ್ತಾರೆ (Post prandial blood sugar or P.P.B.S). ಒಬ್ಬ ವ್ಯಕ್ತಿಯ ರಕ್ತದಲ್ಲಿನ ಗರಿಷ್ಠ ಮಟ್ಟವನ್ನು ಪಿ.ಪಿ.ಬಿ.ಎಸ್. ಸೂಚಿಸುತ್ತದೆ.
೦೩. ಕೆಲವೊಮ್ಮೆ, ಆ ವ್ಯಕ್ತಿ ಆಹಾರವನ್ನು ತೆಗೆದುಕೊಂಡಿದ್ದಾನೆಯೋ ಇಲ್ಲವೋ, ತೆಗೆದುಕೊಂಡಿದ್ದರೆ ಯಾವಾಗ ತೆಗೆದುಕೊಂಡಿದ್ದಾನೆ ಎನ್ನುವ ಗೋಜಿಗೆ ಹೋಗದೆ, ಯಾವುದೇ ಹೊತ್ತಿನಲ್ಲಿಯಾದರೂ ರಕ್ತದ ಸ್ಯಾಂಪಲ್ಲನ್ನು ಪಡೆದು ಪರೀಕ್ಷಿಸುವುದಕ್ಕೆ ರಾಂಡಮ್ ಬ್ಲಡ್ ಶುಗರ್ ಅಥವಾ ಆರ್.ಬಿ.ಎಸ್. ಎನ್ನುತ್ತಾರೆ. (Random blood sugar or R.B.S.)
ಇದು ೧೪೦ ಮಿ.ಗ್ರಾಂ ಗಳಿಗಿಂತಲೂ ಕಡಿಮೆಯಿದ್ದರೆ ಒಳಿತು. ಒಂದು ವೇಳೆ ೧೬೦ ಕ್ಕೂ ಹೆಚ್ಚಾಗಿದ್ದರೆ, ಆ ವ್ಯಕ್ತಿಯ ಎಫ್.ಬಿ.ಎಸ್. ಮತ್ತು ಪಿ.ಪಿ.ಬಿ.ಎಸ್. ಮಾಡಿಸಿ ಖಚಿತಪಡಿಸಿಕೊಳ್ಳುವುದು ಉಚಿತವಾದುದು.
ರಕ್ತದಲ್ಲಿನ ಸಕ್ಕರೆಯ ಮಟ್ಟದ ಏರಿಳಿತಗಳು:
ಈಗಾಗಲೇ ಹೇಳಿದಂತೆ ಯಾವುದೇ ವ್ಯಕ್ತಿಯಲ್ಲಾಗಲೀ, ರಕ್ತದಲ್ಲಿನ ಸಕ್ಕರೆಯ ಮಟ್ಟ ಯಾವಾಗಲೂ ಸ್ಥಿರವಾಗಿರುವುದಿಲ್ಲ. ಬೆಳಗಿನ ಉಪಾಹಾರ ಸೇವಿಸುವ ಮೊದಲು
ಕನಿಷ್ಠ ಮಟ್ಟದಲ್ಲಿರುವ ಸಕ್ಕರೆಯ ಪ್ರಮಾಣ, ಪ್ರತಿ ಸಲ ಆಹಾರವನ್ನು ಸೇವಿಸಿದ ನಂತರ, ಆಹಾರದಲ್ಲಿನ ಆಹಾರಾಂಶಗಳು ಸಕ್ಕರೆಯಾಗಿ ಮಾರ್ಪಟ್ಟು ರಕ್ತಕ್ಕೆ ಸೇರಿಕೊಳ್ಳಲಾರಂಭಿಸುತ್ತಿದ್ದಂತೆ, ಸಕ್ಕರೆಯ ಪ್ರಮಾಣ ಕ್ರಮೇಣ ಏರುಮುಖವಾಗಿ, ಸುಮಾರು ಒಂದೂವರೆ ಎರಡು ಗಂಟೆಗಳ ನಂತರ ಗರಿಷ್ಠ ಮಟ್ಟವನ್ನು ತಲುಪುತ್ತದೆ. ತದನಂತರ ಕ್ರಮೇಣ ಇಳಿಮುಖವಾಗಿ, ಮತ್ತೆರಡು ಗಂಟೆಗಳ ನಂತರ ಸರಿಸುಮಾರು ಎಫ್.ಬಿ.ಎಸ್. ಮಟ್ಟವನ್ನು ತಲುಪುತ್ತದೆ.
ರಕ್ತದಲ್ಲಿ ಸಕ್ಕರೆಯ ಅಂಶ ಈ ಮಿತಿಗಳಲ್ಲಿದ್ದರೆ, ಜೀವಕೋಶಗಳಿಗೆ ಸಮರ್ಪಕವಾದ ರೀತಿಯಲ್ಲಿ ಸಕ್ಕರೆಯ ಸರಬರಾಜಾಗಿ ಜೀವಕೋಶಗಳು ಸರಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ. ರಕ್ತದಲ್ಲಿ ಸಕ್ಕರೆಯ ಅಂಶ ಒಂದು ಮಿತಿಯಲ್ಲಿಯೇ ಇರುವಂತೆ ನೋಡಿಕೊಳ್ಳಲು ನಮ್ಮ ದೇಹದಲ್ಲಿ ಒಂದು ಅದ್ಭುತ ವ್ಯವಸ್ಥೆ ಇದೆ. ಹಾಗೆ ನೋಡಿದರೆ, ಸಕ್ಕರೆ ಮಾತ್ರವಲ್ಲ, ಸೋಡಿಯಮ್, ಪೊಟ್ಯಾಸಿಯಮ್, ಕ್ಯಾಲ್ಷಿಯಮ್ ಮುಂತಾದ ಅಗತ್ಯ ವಸ್ತುಗಳೂ ಒಂದು ಮಿತಿಯಲ್ಲಿಯೇ ಇರುವಂತೆ ನೋಡಿಕೊಳ್ಳುವ ವ್ಯವಸ್ಥೆಯಿದೆ.
ಈ ವ್ಯವಸ್ಥೆಗೆ ಹೋಮಿಯೋಸ್ಟೇಸಿಸ್ ಎನ್ನುತ್ತಾರೆ. (homeostasis). ಇದರ ಬಗ್ಗೆ ಮುಂದೆ ತಿಳಿದುಕೊಳ್ಳೋಣ.
ರಕ್ತದಲ್ಲಿ ಸಕ್ಕರೆಯ ಅಂಶ ಅಗತ್ಯಕ್ಕಿಂತಲೂ ಬಹಳ ಕಡಿಮೆಯಾದಲ್ಲಿ,(ಉದಾಹರಣೆಗೆ ಸಕ್ಕರೆಯ ಅಂಶ ೬೦ ಮಿ.ಗ್ರಾಂ ) ಜೀವಕೋಶಗಳು ಸಮರ್ಪಕವಾಗಿ ಕೆಲಸ ಮಾಡಲಾಗುವುದಿಲ್ಲ. ಬೇರಾವುದೇ ಜೀವಕೋಶಗಳ ಕಾರ್ಯದಲ್ಲಿ ಕುಂದು ಕಾಣುವ ಮುಂಚೆಯೇ, ಮಿದುಳಿನ ಕಾರ್ಯದಲ್ಲಿ ಗಮನಾರ್ಹ ಬದಲಾವಣೆ ಕಂಡುಬರುವುದರಿಂದ,
ರಕ್ತದಲ್ಲಿನ ಸಕ್ಕರೆಯ ಪ್ರಮಾಣ ಕಡಿಮೆಯಾದಾಗ (ಈ ಸ್ಥಿತಿಗೆ, ಹೈಪೋಗ್ಲೈಸೀಮಿಯಾ, hypoglycemia ಎನ್ನುತ್ತಾರೆ) ದೇಹದಲ್ಲಿ ಕಂಡುಬರುವ ಲಕ್ಷಣಗಳು ಹೆಚ್ಚಾಗಿ ಮಿದುಳಿನ ಕಾರ್ಯಕ್ಕೆ ಸಂಬಂಧಿಸಿಂತಹುಗಳಾಗಿರುತ್ತವೆ. ತೀವ್ರವಾದ ಹಸಿವೆ,(hunger ) ತಲೆ ಸುತ್ತುವುದು,(giddiness ) ಸರಿಯಾಗಿ ಯೋಚಿಸಲಾರದಂತಹ ಗೊಂದಲಮಯ ಸ್ಥಿತಿ,(confusion ) ವಿಪರೀತ ಬೆವರುವುದು,(sweating) ಕೈಕಾಲುಗಳಲ್ಲಿ ಸಣ್ಣನೆ ನಡುಕ,(tremors ) ಜೋರಾಗಿ ಹೃದಯ ಬಡಿದುಕೊಳ್ಳುವಂತಹ ಅನುಭವ, ( palpitation), ಅದುರುವಾಯು, (convulsions ), ಪ್ರಜ್ಞಾಹೀನತೆ (unconsciousness, coma )
ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾದಾಗ: ಅಲ್ಪ ಸ್ವಲ್ಪ ಪ್ರಮಾಣದಲ್ಲಿ ಆಗೊಮ್ಮೆ ಈಗೊಮ್ಮೆ ಸಕ್ಕರೆಯ ಅಂಶ ಹೆಚ್ಚಿದ್ದರೆ, (ಉದಾಹರಣೆಗೆ, ರಕ್ತದಲ್ಲಿ ಸಕ್ಕರೆಯ ಅಂಶ ೧೮೦ ಮಿ.ಗ್ರಾಂ ಗಿಂತ ಹೆಚ್ಚಾಗಿ )ಅಂತಹ ಗಮನಾರ್ಹ ಲಕ್ಷಣಗಳೇನೂ ಕಂಡುಬರುವುದಿಲ್ಲ. ಆದರೆ, ಈ ಹೆಚ್ಚಳಿಕೆ ಬಹುಸಮಯದ ವರೆಗೂ ಮುಂದುವರೆದಲ್ಲಿ, (ಮಧುಮೇಹಿಗಳಲ್ಲಿರುವಂತೆ) ಬಹಳಷ್ಟು ಲಕ್ಷಣಗಳು ತಲೆದೋರಬಹುದು. ಇವೆಲ್ಲವನ್ನೂ ಮಧುಮೇಹದ ಲಕ್ಷಣಗಳನ್ನು ವಿವರಿಸುವಾಗ ಮತ್ತೊಮ್ಮೆ ತಿಳಿಸುತ್ತೇನೆ.
- Add new comment
- 403 reads
