There are currently 0 users and 3 guests online.

ನೀವೂ ಪ್ರಕಟಿಸಬಹುದು!

ಆರೋಗ್ಯ ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ಮಧುಮೇಹವೆಂಬ ಗುಪ್ತಗಾಮಿನಿ..........೩

ಮಧುಮೇಹವೆಂಬ ಗುಪ್ತಗಾಮಿನಿ..........೩

ಆರೋಗ್ಯ ಸಂಪದದಲ್ಲಿ

ರಕ್ತದಲ್ಲಿ ಸಕ್ಕರೆಯ ಸಮತೋಲನ (regulation of sugar level in the blood )
ರಕ್ತದಲ್ಲಿ ಸಕ್ಕರೆಯ ಅಂಶದ ಮಟ್ಟ ಯಾವಾಗಲೂ ಒಂದೇ ಸಮನಾಗಿರುವುದಿಲ್ಲವೆಂದೂ, ಬೆಳಗಿನ ಉಪಹಾರ ಸೇವಿಸುವ ಮೊದಲು, ಅದು ಕನಿಷ್ಠ ಪ್ರಮಾಣದಲ್ಲಿದ್ದು, ಊಟವಾದ
ಒಂದೂವರೆ ಎರಡು ತಾಸುಗಳ ನಂತರ ಗರಿಷ್ಠ ಪ್ರಮಾಣವನ್ನು ತಲುಪತ್ತದೆ ಎಂದೂ ತಿಳಿದೆವು.
ಈಗ ಚಿಕ್ಕದೊಂದು ಪ್ರಯೋಗ ಮಾಡೋಣ. ಈ ಪ್ರಯೋಗಕ್ಕೆ ರಾಜು ಎಂಬ ಆರೋಗ್ಯವಂತ ವ್ಯಕ್ತಿಯನ್ನು ಆಯ್ದುಕೊಳ್ಳೋಣ.
೦೧. ನಾಳೆಯ ದಿನ, ರಾಜುವಿನ ಎಫ್.ಬಿ.ಎಸ್ (FBS) ಮತ್ತು ಪಿ.ಪಿ.ಬಿ.ಎಸ್ (PPBS)ನಿರ್ಧರಿಸೋಣ.
೦೨. ನಾಳಿದ್ದು, ರಾಜುವಿಗೆ ಬೆಳಗಿನ ಉಪಹಾರಕ್ಕೆ ಸಕ್ಕರೆ ಪೊಂಗಲ್, ಮಧ್ಯಾಹ್ನದ ಊಟಕ್ಕೆ ಎರಡು ಹೋಳಿಗೆ ಸೀಕರಣೆ, ಗುಲಾಬ್ ಜಾಮೂನ್, ಎರಡು ಲಾಡು ತೆಗೆದುಕೊಳ್ಳಲು ಹೇಳಿ, ಆ ದಿನವೂ ಕೂಡ ಎಫ್.ಬಿ.ಎಸ್. ಮತ್ತು ಪಿ.ಪಿ.ಬಿ.ಎಸ್ ನಿರ್ಧರಿಸೋಣ.
೦೩. ಆಚೆಯ ನಾಳಿದ್ದು ರಾಜುಗೆ ದಿನ ಪೂರ್ತಿ ಕಟ್ಟುನಿಟ್ಟಾದ ಉಪವಾಸ. ಆ ದಿನವೂ ಎಫ್.ಬಿ.ಎಸ್. ಮತ್ತು ಮಧ್ಯಾಹ್ನ ೨ ಗಂಟೆಯ ವೇಳೆಗೆ ಆರ್.ಬಿ.ಎಸ್ ನಿರ್ಧರಿಸೋಣ.

ಈ ರೀತಿ ಮೂರು ದಿನಗಳ ಎಫ್.ಬಿ.ಎಸ್. ಮತ್ತು ಪಿ.ಪಿ.ಬಿ.ಎಸ್ ಗಳನ್ನು ಈಗ ಗಮನಿಸೋಣ.
ಮೊದಲನೆಯ ದಿನ ಎಫ್. ಬಿ. ಎಸ್. ೮೦ ಮಿ.ಗ್ರಾಂ ಮತ್ತು ಪಿ. ಪಿ. ಬಿ. ಎಸ್. ೧೪೫ ಮಿ.ಗ್ರಾಂ ಇತ್ತೆಂದು ತಿಳಿಯೋಣ.
ಎರಡನೆಯ ದಿನ, ಅಷ್ಟೊಂದು ಸಿಹಿತಿಂಡಿಗಳನ್ನು ತಿಂದ ಬಳಿಕವೂ ರಾಜುವಿನ ಎಫ್. ಬಿ. ಎಸ್. ಮತ್ತು ಪಿ.ಪಿ.ಬಿ.ಎಸ್ ಸರಿಸುಮಾರು ಅಷ್ಟೇ ಇರುವುದನ್ನು ಕಾಣಬಹುದು !
ಮೂರನೆಯ ದಿನ. ಉಪವಾಸವಿದ್ದಾಗ್ಯೂ , ಅವನ ರಕ್ತದ ಸಕ್ಕರೆಯ ಅಂಶ, ೮೦ ಕ್ಕಿಂತ ಕಡಿಮೆಯಾಗಿರದೇ ಇರುವುದನ್ನು ಮತ್ತು ೨ ಗಂಟೆಯ ಹೊತ್ತಿಗೆ ೮೦ ಕ್ಕಿಂತಲೂ ಸ್ವಲ್ಪ ಜಾಸ್ತಿ ಇರುವುದನ್ನು ಕಾಣಬಹುದು.
ಅರ್ಥಾತ್ ಒಬ್ಬ ಆರೋಗ್ಯವಂತ ವ್ಯಕ್ತಿ ಅಧಿಕ ಆಹಾರವನ್ನೂ ಸೇವಿಸಿದರೂ ಅಥವಾ ಕಡಿಮೆ ಆಹಾರ ಸೇವಿಸಿದರೂ ರಕ್ತದಲ್ಲಿನ ಸಕ್ಕರೆಯ ಅಂಶ ಹೆಚ್ಚಿನ ಬದಲಾವಣೆಯನ್ನು
ತೋರಿಸದೇ ಇರುವುದನ್ನು ಕಾಣಬಹುದು. ಈ ರೀತಿ ರಕ್ತದಲ್ಲಿ ಸಕ್ಕರೆಯ ಅಂಶವನ್ನು ಒಂದು ನಿಶ್ಚಿತ ಮಟ್ಟದಲ್ಲಿ ಕಾಪಾಡಿಕೊಂಡು ಬರುವ ವ್ಯವಸ್ಥೆಯೊಂದಿರಬೇಕೆಂದು
ನಾವು ತೀರ್ಮಾನಿಸಬಹುದು.

ಇನ್ಸುಲಿನ್ ಮತ್ತು ಇನ್ನಿತರ ಹಾರ್ಮೋನ್ ಗಳಿಂದ ಇಂತಹ ಒಂದು ಸಮತೋಲನ ಸಾಧ್ಯವಾಗುತ್ತದೆ. ಇನ್ಸುಲಿನ್ ರಕ್ತದಲ್ಲಿರುವ ಸಕ್ಕರೆಯನ್ನು ಯಕೃತ್ತಿಗೆ, ದೇಹದ ಜೀವಕೋಶಗಳ ಒಳಕ್ಕೆ ತಳ್ಳಿ, ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ತಗ್ಗಿಸುತ್ತದೆ. ಸಕ್ಕರೆಯ ಮಟ್ಟವನ್ನು ತಗ್ಗಿಸುವ ಸಾಮರ್ಥ್ಯವಿರುವುದು ಇನ್ಸುಲಿನ್ ಗೆ ಮಾತ್ರ.
ಗ್ಲುಕೋಗಾನ್, ಗ್ಲುಕೋಸ್ಟೀರಾಯ್ಡ್, ಗ್ರೋತ್ ಹಾರ್ಮೋನ್ ಮತ್ತು ಅಡ್ರೆನಲಿನ್ ಎಂಬ ಹಾರ್ಮೋನ್ ಗಳು ವಿರುದ್ಧ ದೆಸೆಯಲ್ಲಿ ಕೆಲಸಮಾಡಿ, ಯಕೃತ್ತಿನಲ್ಲಿರುವ ಗ್ಲೈಕೋಜೆನ್ ನನ್ನು ವಿಭಜಿಸಿ ಸಕ್ಕರೆಯನ್ನು ಉತ್ಪತ್ತಿ ಮಾಡಿ ಅದನ್ನು ರಕ್ತಕ್ಕೆ ಸೇರಿಸಿ, ಸಕ್ಕರೆಯ ಅಂಶವನ್ನು ಹೆಚ್ಚಿಸುತ್ತವೆ.
ಒಂದು ಕಡೆ ಇನ್ಸುಲಿನ್ ಮತ್ತೊಂದು ಕಡೆ ಗ್ಲುಕೋಗಾನ್ ಮತ್ತಿತರ ಹಾರ್ಮೋನ್ ಗಳ ಒಟ್ಟಾರೆ ಪ್ರಭಾವದಿಂದ ಸಕ್ಕರೆಯ ಅಂಶ ಸರಿಸುಮಾರು ಒಂದೇ ಮಟ್ಟದಲ್ಲಿರುವಂತೆ ಮಾಡುತ್ತವೆ. ಒಬ್ಬ ಆರೋಗ್ಯವಂತ ವ್ಯಕ್ತಿಯಲ್ಲಿ ಈ ಎಲ್ಲಾ ಹಾರ್ಮೋನ್ ಗಳು ಒಂದು ನಿಗದಿತ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತಿರುತ್ತವೆ. ಇವುಗಳಲ್ಲಿ ಮುಖ್ಯವಾದ ಇನ್ಸುಲಿನ್ ಬಗ್ಗೆ ಗಮನ ಹರಿಸೋಣ.ಮೇ
ಮೇದೋಜೀರಕ ಗ್ರಂಥಿಯಲ್ಲಿರುವ ಬೀಟಾ ಜೀವಕೋಶಗಳಿಂದ ಇನ್ಸುಲಿನ್ ಉತ್ಪಾದನೆಯಾಗುತ್ತದೆ ಎಂದಾಗಲೇ ಹೇಳಿದೆ. ಒಬ್ಬ ಆರೋಗ್ಯವಂತ ವ್ಯಕ್ತಿಯ ದೇಹದಲ್ಲಿ ಈ ಬೀಟಾ ಜೀವಕೋಶಗಳು ಸದಾ ಪ್ರತಿ ಗಂಟೆಗೆ ಸುಮಾರು ೦.೫ ರಿಂದ ೧.೦ ಯೂನಿಟ್ ನಷ್ಟು ಇನ್ಸುಲಿನ್ ನನ್ನು ತಯಾರಿಸುತ್ತವೆ. ಇದಕ್ಕೆ ಬೇಸಲ್ ಇನ್ಸುಲಿನ್ ಉತ್ಪಾದನೆ (basal insulin secretion) ಎನ್ನುತ್ತಾರೆ. ಆ ವ್ಯಕ್ತಿ ಬೆಳಗಿನ ಉಪಾಹಾರ ಸೇವಿಸಿದ ನಂತರ, ಮತ್ತು ಮಧ್ಯಾಹ್ನ ಊಟದ ನಂತರ ಅವನ ರಕ್ತದಲ್ಲಿ ಸಕ್ಕರೆಯ ಅಂಶ ಕ್ರಮೇಣ ಏರಲು ತೊಡಗುತ್ತದೆ. ಸಕ್ಕರೆಯ ಪ್ರಮಾಣದ ಏರುವಿಕೆಯೇ ಬೀಟಾ ಜೀವಕೋಶಗಳನ್ನು ಪ್ರಚೋದಿಸಿ ಹೆಚ್ಚು ಹೆಚ್ಚು ಇನ್ಸುಲಿನ್ ಉತ್ಪಾದನೆ ಯಾಗುವಂತೆ ಮಾಡುತ್ತದೆ. ಹೆಚ್ಚು ಪ್ರಮಾಣದಲ್ಲಿ ಉತ್ಪತ್ತಿಯಾದ ಇನ್ಸುಲಿನ್, ರಕ್ತದಲ್ಲಿ ಏರುತ್ತಿರುವ ಸಕ್ಕರೆಯ ಮಟ್ಟವನ್ನು ಮತ್ತೆ ಇಳಿ ಮುಖವಾಗುವಂತೆ ಮಾಡುತ್ತದೆ.
೧. ಬೇಸಲ್ ಇನ್ಸುಲಿನ್ ಉತ್ಪಾದನೆಯೇ ಇಲ್ಲದಿದ್ದಲ್ಲಿ (ಟೈಪ್ ೧ ಮಧುಮೇಹಿಗಳಲ್ಲಿರುವಂತೆ), ಅಂತಹ ವ್ಯಕ್ತಿಯ ರಕ್ತದಲ್ಲಿನ ಸಕ್ಕರೆಯ ಮಟ್ಟ ಅವನು ಉಪವಾಸವಿದ್ದ ಸಮಯದಲ್ಲಿಯೂ ಅತಿ ಹೆಚ್ಚಾಗಿರುತ್ತದೆ.
೨. ಬೇಸಲ್ ಇನ್ಸುಲಿನ್ ಉತ್ಪಾದನೆ ಅಗತ್ಯಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿದ್ದರೆ (ಟೈಪ್ ೨ ಮಧುಮೇಹಿಗಳಲ್ಲಿರುವಂತೆ), ಅಂತಹ ವ್ಯಕ್ತಿಯ ರಕ್ತದಲ್ಲಿಯೂ ಸಕ್ಕರೆಯ ಮಟ್ಟ ಅವನು ಉಪವಾಸವಿದ್ದ ಸಮಯದಲ್ಲಿಯೂ ಹೆಚ್ಚಾಗಿರುತ್ತದೆ.
೩. ಬೀಟಾ ಜೀವಕೋಶಗಳು ಯಾವುದೇ ಕಾರಣದಿಂದ ತಮ್ಮ ಚುರುಕುತನ ಕಳೆದುಕೊಂಡು, ರಕ್ತದಲ್ಲಿ ಸಕ್ಕರೆಯ ಅಂಶ ಹೆಚ್ಚಾಗಿದ್ದರೂ ಹೆಚ್ಚು ಇನ್ಸುಲಿನ್ ನನ್ನು ಉತ್ಪಾದಿಸಲು ಅಸಮರ್ಥವಾಗಿದ್ದರೆ, ಅಂತಹ ವ್ಯಕ್ತಿ ಊಟ ಮಾಡಿದ ನಂತರ ಅವನ ರಕ್ತದಲ್ಲಿನ ಸಕ್ಕರೆಯ ಮಟ್ಟಾ ಏಕಾ ಏಕಿಯಾಗಿ ಏರುಮುಖವಾಗಿ, ಮೂರು ತಾಸುಗಳ ನಂತರವೂ ಇನ್ನೂ
ಹೆಚ್ಚಿನ ಮಟ್ಟದಲ್ಲಿಯೇ ಇರುತ್ತದೆ. (ಟೈಪ್ ೨ ಮಧುಮೇಹಿಗಳಲ್ಲಿರುವಂತೆ)

ಅದೇ ರೀತಿ, ಯಾವುದೇ ಆರೋಗ್ಯವಂತ ವ್ಯಕ್ತಿ ಆಹಾರವನ್ನು ಸೇವಿಸದೇ ಉಪವಾಸವಿದ್ದಲ್ಲಿ, ಅವನ ರಕ್ತದಲ್ಲಿಯ ಸಕ್ಕರೆಯ ಅಂಶ ಕುಸಿಯಲಾರಂಭಿಸುತ್ತದೆ. ಆದರೆ, ಅದು
ಒಂದು ನಿರ್ದಿಷ್ಟ ಕೆಳಮಟ್ಟವನ್ನು ತಲುಪಿದಾಗ, ಆ ಸ್ಥಿತಿ ಅಡ್ರೆನಲಿನ್, ಗ್ಲುಕೋಗಾನ್, ಮತ್ತು ಇನ್ನಿತರ ಹಾರ್ಮೋನ್ ಗಳ ಉತ್ಪಾದನೆಯನ್ನು ಪ್ರಚೋದಿಸುತ್ತದೆ. ಈ ಹಾರ್ಮೋನ್ ಗಳ ಪ್ರಭಾವದಿಂದ, ಕುಸಿಯುತ್ತಿರುವ ಸಕ್ಕರೆಯ ಅಂಶ ಸ್ಥಿರತೆಯನ್ನು ಪಡೆಯುತ್ತದೆ.

ಇನ್ಸುಲಿನ್ : ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸಲು ಹಲವಾರು ಹಾರ್ಮೋನ್ ಗಳಿದ್ದರೂ, ಅದರ ಮಟ್ಟವನ್ನು ತಗ್ಗಿಸಲು ಮಾನವ ದೇಹದಲ್ಲಿರುವ ಅಸ್ತ್ರ ಇನ್ಸುಲಿನ್ ಒಂದೇ.
ಇನ್ಸುಲಿನ್ ಯಕೃತ್ತಿನ ಜೀವಕೋಶಗಳ ಮೇಲೆ, ಮಾಂಸಖಂಡಗಳ ಜೀವಕೋಶಗಳ ಮೇಲೆ ಮತ್ತು ದೇಹದ ಇತರ ಎಲ್ಲಾ ಜೀವಕೋಶಗಳ ಮೇಲೆ ಪ್ರಭಾವ ಬೀರುತ್ತದೆ.
ಯಕೃತ್ತು ಮತ್ತು ಮಾಂಸಖಂಡಗಳಲ್ಲಿ ಸಕ್ಕರೆಯನ್ನು ಗ್ಲೈಕೊಜಿನ್ ರೂಪಕ್ಕೆ ಪರಿವರ್ತಿಸಲು ಸಹಾಯ ಮಾಡಿದರೆ, ಇನ್ನುಳಿದ ಎಲ್ಲಾ ಜೀವಕೋಶಗಳಿಗೆ ಸಕ್ಕರೆಯನ್ನು ಸರಬರಾಜು ಮಾಡುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ರಕ್ತದಲ್ಲಿ ಸಕ್ಕರೆ ಅದೆಷ್ಟೇ ಇರಲಿ, ಅದೆಷ್ಟೇ ಮಟ್ಟದಲ್ಲಿರಲಿ, ಸಕ್ಕರೆಯು ಜೀವಕೋಶಗಳ ಒಳಕ್ಕೆ ಪ್ರವೇಶಿಸಲು ಇನ್ಸುಲಿನ್ ಬಹಳ ಅಗತ್ಯವಾಗಿದೆ. ಮೇದೋಜೀರಕ ಗ್ರಂಥಿಯ ಬೀಟಾ ಜೀವಕೋಶಗಳಿಂದ ಸ್ರವಿಸಲ್ಪಟ್ಟ ಇನ್ಸುಲಿನ್ ರಕ್ತ ಪರಿಚಲನೆಯ ಮೂಲಕ ದೇಹದ ಎಲ್ಲಾ ಜೀವಕೋಶಗಳ ಬಳಿಗೆ ಬರುತ್ತದೆ.
ಇಲ್ಲಿ ಒಂದು ವಿಶೇಷ ವ್ಯವಸ್ಥೆಯಿದೆ. ಎಲ್ಲಾ ಜೀವಕೋಶಗಳ ಒಳಗೆ ಸಕ್ಕರೆ ಪ್ರವೇಶಿಸಲು ಪುಟ್ಟ ಪುಟ್ಟ ರಂಧ್ರಗಳಿರುತ್ತವೆ. ಆದರೆ ಈ ರಂಧ್ರಗಳು ಸಾಮಾನ್ಯವಾಗಿ ಮುಚ್ಚಿಕೊಂಡಿದ್ದು,
ಆ ರಂಧ್ರಗಳ ಮೇಲೆ ಇನ್ಸುಲಿನ್ ರಿಸೆಪ್ಟರ್ (receptors) ಗಳೆಂಬ ಪುಟ್ಟ ಪುಟ್ಟ ಬೀಗಗಳಿರುತ್ತವೆ. ಇನ್ಸುಲಿನ್ ಕಣಗಳು ಈ ಬೀಗವನ್ನು ತೆರೆಯುವಂತಹ ಬೀಗದ ಕೈನಂತೆ ಕೆಲಸ ಮಾಡುತ್ತವೆ.ಅರ್ಥಾತ್, ರಕ್ತದಲ್ಲಿ ಅದೆಷ್ಟೇ ಸಕ್ಕರೆ ಇರಲಿ, ಇನ್ಸುಲಿನ್ ಎಂಬ "ಬೀಗದ ಕೈ" ಇಲ್ಲದಿದ್ದರೆ, ಸಕ್ಕರೆಯ ಕಣಗಳು ಜೀವಕೋಶಗಳನ್ನು ಪ್ರವೇಶಿಸಲಾರವು ಮತ್ತು ಆ ಜೀವಕೋಶಗಳಿಗೆ ಬೇಕಾದ ಶಕ್ತಿಯನ್ನು ಒದಗಿಸಲಾರವು.

ಮೇಲೆ ಹೇಳಿದ ವ್ಯವಸ್ಥೆಯನ್ನು ಅರಿತಾಗ, ಮಧುಮೇಹಿಗಳನ್ನು ಕಾಡುವ ಒಂದು ಪ್ರಶ್ನೆಗೆ ಉತ್ತರ ದೊರೆಯುತ್ತದೆ. " ಸಕ್ಕರೆ ನಮ್ಮ ದೇಹಕ್ಕೆ ಶಕ್ತಿ ಕೊಡುವ ವಸ್ತು ಎನ್ನುತ್ತಾರೆ.
ಆದರೆ, ಮಧುಮೇಹಿಗಳ ರಕ್ತದಲ್ಲಿ ಸಾಮಾನ್ಯರಿಗಿಂತಲೂ ಹೆಚ್ಚಾದ ಪ್ರಮಾಣದಲ್ಲಿ ಸಕ್ಕರೆಯಿದ್ದರೂ, ಮಧುಮೇಹಿಗಳಿಗೆ ನಿಶ್ಯಕ್ತಿಯೇಕೆ ಉಂಟಾಗುತ್ತದೆ.?"
ಉಗ್ರಾಣದ ತುಂಬಾ ಕಾಳುಗಳನ್ನು ತುಂಬಿಕೊಂಡು, ಉಗ್ರಾಣದ ಬೀಗದ ಕೈ ಕಳೆದುಕೊಂಡಂತೆ, ಮಧುಮೇಹಿಗಳ ಪರಿಸ್ಥಿತಿ. ಒಂದು ರೀತಿಯಲ್ಲಿ, ಇದು "ಸಿರಿವಂತಿಕೆಯ ಮಧ್ಯ ಬಡತನ !" (poverty amidst plenty)

ರಕ್ತದಲ್ಲಿ ಸಕ್ಕರೆಯ ಅಂಶವನ್ನು ಒಂದೇ ಮಟ್ಟದಲ್ಲಿ ಕಾಪಾಡುವ ಈ ವ್ಯವಸ್ಥೆ ಒಬ್ಬ ಅದ್ಭುತ ಲೆಕ್ಕಿಗನಂತೆ (accountant) ಕೆಲಸ ಮಾಡುತ್ತದೆ. ನಾವು ಆ ದಿನ ಸೇವಿಸಿದ ಆಹಾರದ ಪ್ರಮಾಣ, ಅದರಲ್ಲಿ ದೇಹ ಶಕ್ತಿಗಾಗಿ ಬಳಸಿಕೊಂಡದ್ದೆಷ್ಟು ಮತ್ತು ಶೇಖರ ಮಾಡಿಟ್ಟು ಕೊಂಡದ್ದೆಷ್ಟು ಎಂಬುದೆಲ್ಲವನ್ನೂ ಲೆಕ್ಕ ಹಾಕುತ್ತದೆ. ಒಬ್ಬ ವ್ಯಕ್ತಿ ಆ ದಿನ ಅದೆಷ್ಟೇ ಆಹಾರ ಹೆಚ್ಚಾಗಿ ಸೇವಿಸಿರಲಿ ಇಲ್ಲವೇ ಉಪವಾಸವಿರಲಿ, ಅವನ ರಕ್ತದಲ್ಲಿಯ ಸಕ್ಕರೆಯ ಅಂಶದಲ್ಲಿ ಹೆಚ್ಚು ಕಡಿಮೆಯಾಗದಂತೆ ನೋಡಿಕೊಂಡು ಆ ದಿನದ ಲೆಕ್ಕವನ್ನು ಅಂದೇ ಪೂರ್ಣಗೊಳಿಸುತ್ತದೆ. ಈ ವಿಷಯ ಹೇಳಲು ಕಾರಣವೇನೆಂದರೆ, ನನ್ನ ಬಳಿ ಸಲಹೆಗೆ ಬಂದ ಮಧುಮೇಹಿಗಳ ರಕ್ತವನ್ನು ಗ್ಲುಕೋಮೀಟರಿನಲ್ಲಿ ಪರೀಕ್ಷಿಸಿ, ಒಮ್ಮೊಮ್ಮೆ ನಾನು ನೀರೀಕ್ಷಿಸಿದುದ್ದಕ್ಕಿಂತ ಹೆಚ್ಚಾಗಿ ಸಕ್ಕರೆಯ ಅಂಶವನ್ನು ತೋರಿಸಿದರೆ, ಆ ಮಧುಮೇಹಿ, ಏನೋ ಒಂದು ತಪ್ಪು ಮಾಡಿದಂತೆ, "ಮೊನ್ನೆ, ಒಂದು ಮದುವೆಯ ಔತಣವಿತ್ತು ಡಾಕ್ಟರೇ,
ಅಂದು ಸ್ವಲ್ಪ ಸ್ವೀಟ್ಸ್ ಹೆಚ್ಚಾಗಿ ತಿಂದೆ ಎಂದು ಕಾಣುತ್ತದೆ ..." ಎಂದು ಸಮಜಾಯಷಿ ನೀಡುತ್ತಾರೆ. ಅದು ತಪ್ಪು ಕಲ್ಪನೆಯೆಂದು ತಿಳಿಸಲು ಎಂದು ಮೇಲಿನ ವಿವರಣೆ ಕೊಟ್ಟಿದ್ದೇನೆ.

359 reads