There are currently 0 users and 3 guests online.

ನೀವೂ ಪ್ರಕಟಿಸಬಹುದು!

ಆರೋಗ್ಯ ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ಮಧುಮೇಹವೆಂಬ ಗುಪ್ತಗಾಮಿನಿ......೮

ಮಧುಮೇಹವೆಂಬ ಗುಪ್ತಗಾಮಿನಿ......೮

ಆರೋಗ್ಯ ಸಂಪದದಲ್ಲಿ

ಮಧುಮೇಹದ ರೋಗಲಕ್ಷಣಗಳು: (symptoms): ರಕ್ತದಲ್ಲಿ ಸಕ್ಕರೆಯ ಅಂಶ ಹೆಚ್ಚಾದಾಗ ದೇಹದಲ್ಲಿ ಯಾವ ಬಗೆಯ ಪರಿಣಾಮಗಳುಂಟಾಗುತ್ತವೆ ಎಂಬುದನ್ನು ನಾವಾಗಲೇ ಗಮನಿಸಿದೆವು. ಮಧುಮೇಹದ ರೋಗಲಕ್ಷಣಗಳೆಲ್ಲವೂ ಆ ಪರಿಣಾಮಗಳಿಗೆ ಸಂಬಂಧಿಸಿದಂತಹುವೇ. ಈ ಎಲ್ಲಾ ರೋಗಲಕ್ಷಣಗಳೂ ಎಲ್ಲರಲ್ಲಿಯೂ ಕಾಣಬೇಕೆಂದಿಲ್ಲ.
ಮಧುಮೇಹ ಯಾವುದೇ ಬಗೆಯದಾದದ್ದಾದರೂ ರೋಗಲಕ್ಷಣಗಳಲ್ಲಿ ಹೆಚ್ಚೇನೂ ವ್ಯತ್ಯಾಸವಿರುವುದಿಲ್ಲ.

೦೧. ಬಹಳಷ್ಟು ಬಾರಿ, ರಕ್ತದಲ್ಲಿ ಸಕ್ಕರೆಯ ಅಂಶ ಗಣನೀಯವಾಗಿ ಹೆಚ್ಚಾಗಿದ್ದರೂಅತಿ ಯಾವುದೇ ಲಕ್ಷಣಗಳಿಲ್ಲದೇ ಇರಬಹುದು. ಇಂತಹವರು, ಬೇರಾವುದೇ ಸಮಸ್ಯೆಗೆ ರಕ್ತ ಪರೀಕ್ಷೆ ಮಾಡಿಸಿಕೊಂಡಾಗ, ಇಲ್ಲವೇ, ವಿಮೆ ಮಾಡಿಸುವಾಗ, ರಕ್ತದಲ್ಲಿ ಸಕ್ಕರೆಯ ಅಂಶ ಹೆಚ್ಚಾಗಿರುವುದು ಕಂಡು ಬರಬಹುದು.
೦೨. ಪದೇ ಪದೇ ಮೂತ್ರ ವಿಸರ್ಜನೆ. ಸಾಮಾನ್ಯವಾಗಿ ರಾತ್ರಿ ಮಲಗುವ ಮುಂಚೆ ಮೂತ್ರ ಮಾಡಿದ ಮೇಲೆ, ಮತ್ತೆ ಬೆಳಿಗ್ಗೆ ಎದ್ದ ಮೇಲೆಯೇ ಮೂತ್ರ ಮಾಡುವುದು ಸಾಮಾನ್ಯವಾದುದು. ಆದರೆ, ಮಧುಮೇಹಿಗಳು ರಾತ್ರಿ ಹೊತ್ತು ಹಲವಾರು ಮೂತ್ರಕ್ಕಾಗಿ ಏಳಬೇಕಾಗಿ ಬರಬಹುದು.
೦೩.ಅತಿಯಾದ ದಾಹ. ಮಿತಿಮೀರಿದ ಹಸಿವು. ಹೊಟ್ಟೆ ತುಂಬಾ ಊಟದ ಸ್ವಲ್ಪ ಸಮಯದಲ್ಲಿಯೇ ಹೊಟ್ಟೆ ಖಾಲಿಯಾದಂತಹ ಸಂಕಟ, ಹಸಿವು.
೦೪. ಏನೂ ಕಾರಣವಿಲ್ಲದೇ ದೇಹದ ತೂಕ ಕಡಿಮೆಯಾಗುತ್ತಾ ಬರುವುದು.
೦೫. ಚಿಕ್ಕ ಪುಟ್ಟ ಗಾಯಗಳು ಸುಲಭವಾಗಿ ಮಾಯದೇ ಇರುವುದು. ಅಥವಾ ಗಾಯಗಳಲ್ಲಿ ಬಹುಬೇಗ ಕೀವು ಆಗುವುದು (septic)
೦೬. ಸುಲಭವಾಗಿ ಸೋಂಕು ರೋಗಗಳಿಗೆ ಗುರಿಯಾಗಬಹುದು. ಮೂತ್ರದ ಇನ್ ಫೆಕ್ಷನ್,(urinary infection) ಶ್ವಾಸಕೋಶಗಳಲ್ಲಿ ಕ್ಷಯವೂ ಸೇರಿದಂತೆ ಹಲವಾರು ಬಗೆಯ ಇನ್ ಫೆಕ್ಷನ್,(respiratory infections), ಕಾಲ ಬೆರಳ ಸಂದಿಗಳಲ್ಲಿ ಫಂಗಸ್ ಇನ್ ಫೆಕ್ಷನ್. ಚರ್ಮದ ಮೇಲೆ ಕಾಣಿಸಬಹುದಾದ ಫಂಗಸ್ ಇನ್ ಫೆಕ್ಷನ್, ಸರ್ಪಸುತ್ತಿನಂತಹ (herpes zoster) ವೈರಸ್ ಇನ್ ಫೆಕ್ಷನ್ ಗಳು.
೦೭. ಕಣ್ಣಿನ ಮಸೂರ ಮಸುಕಾಗಿ, ದೃಷ್ಟಿದೋಷ ವುಂಟಾಗುವುದು. ಅಕ್ಷಿಪಟಲಕ್ಕೆ ಧಕ್ಕೆಯಾಗಿಯೂ ದೃಷ್ಟಿದೋಷವುಂಟಾಗಬಹುದು. (diabetic retinopathy)
೦೮. ಮೂತ್ರಪಿಂಡಗಳಿಗೆ ಕ್ರಮೇಣ ಹಾನಿಯುಂಟಾಗಿ ಮೂತ್ರಪಿಂಡಗಳ ವೈಫಲ್ಯ ಉಂಟಾಗುವುದು, ಕಾಲುಗಳಲ್ಲಿ ಊತ ಕಂಡುಬರುವುದು, ರಕ್ತದೊತ್ತಡ ಹೆಚ್ಚುವುದು ರಕ್ತಹೀನತೆ
(diabetic nephropathy)
೦೯. ನರದೌರ್ಬಲ್ಯದಿಂದುಂಟಾಗುವ ಸಮಸ್ಯೆಗಳು: ಕೈಕಾಲುಗಳಲ್ಲಿ ಉರಿ, ಜೋಮು ತುಂಬುವುದು (tingling) , ಸ್ಪರ್ಶಜ್ಞಾನ ಕಡಿಮೆಯಾಗುವುದು (numbness),
ಕೈಕಾಲುಗಳಲ್ಲಿ ಶಕ್ತಿ ಕಡಿಮೆಯಾಗುವುದು. ಇವೆಲ್ಲವೂ ಪೆರಿಫರಲ್ ನ್ಯೂರೋಪಥಿ ಎಂಬ ದುಷ್ಪರಿಣಾಮದಿಂದ ಕಂಡುಬರುವ ಲಕ್ಷಣಗಳು. (peripheral neuropathy)
. ಆಟೋನಾಮಿಕ್ ನ್ಯೂರೋಪಥಿಯೆಂಬ ಇನ್ನೊಂದು ಸಮಸ್ಯೆಯಿಂದ, ಮಲಬದ್ಧತೆ,(constipation) ಮೂತ್ರವಿಸರ್ಜನೆಯಲ್ಲಿ ತೊಂದರೆ ಕಂಡುಬರಬಹುದು (dysuria)
ಹೊಟ್ಟೆ ಉಬ್ಬರಿಸುವುದು (epigastric fullness). ಲೈಂಗಿಕ ಸಾಮರ್ಥ್ಯ ಕ್ಷೀಣವಾಗುವುದು (impotence).
೧೦. ಹೃದಯಾಘಾತ, ಮಿದುಳಿನ ಆಘಾತದಂತಹ ಪ್ರಮಾದಗಳು.
೧೧. ಕಾಲುಗಳಲ್ಲಿ ರಕ್ತಸಂಚಾರದ ತಡೆಯಿಂದುಂಟಾಗುವ ಗ್ಯಾಂಗ್ರೀನ್ ಎಂಬ ಪ್ರಮಾದ.
೧೨. ರಕ್ತದಲ್ಲಿ ಸಕ್ಕರೆಯ ಪ್ರಮಾಣ ಅತಿ ಹೆಚ್ಚಾಗಿ ಡಯಾಬೆಟಿಕ್ ಕೀಟೋ ಅಸಿಡೋಸಿಸ್ ಎಂಬ ಪ್ರಮಾದದಿಂದ ಪ್ರಜ್ಞಾಹೀನ ಸ್ಥಿತಿ. (diabetic coma) ಇತ್ಯಾದಿ.ಗ್
೧೩. ಗರ್ಭಣಿಯರಲ್ಲಿ ಮಧುಮೇಹವುಂಟಾದಾಗ, ಗರ್ಭದಲ್ಲಿರುವ ಭ್ರೂಣದ ಬೆಳವಣಿಗೆ ಅತಿ ಹೆಚ್ಚಾಗಿ, ಪ್ರಸವದಲ್ಲಿ ತೊಂದರೆಯಾಗಬಹುದು.

ಮಧುಮೇಹದ ಪತ್ತೆ : (diagnosis) ಒಬ್ಬ ವ್ಯಕ್ತಿಗೆ ಮಧುಮೇಹವಿದೆ ಎಂಬುದನ್ನು ನಿರ್ಧರಿಸುವುದಕ್ಕೆ ಸಾಮಾನ್ಯವಾಗಿ ರಕ್ತದಲ್ಲಿನ ಸಕ್ಕರೆಯ ಅಂಶವನ್ನು
ನಿರ್ಧರಿಸಿದರೆ ಸಾಕಾಗುತ್ತದೆ..

೦೧. ಎಫ್.ಬಿ.ಎಸ್. ಮತ್ತು ಪಿ.ಪಿ.ಬಿ.ಎಸ್ : ಇವೆರಡೂ ಈಗಾಗಲೇ ಹೇಳಿರುವ ಮಿತಿಯನ್ನು ಮೀರಿದ್ದರೆ ( ಎಫ್.ಬಿ.ಎಸ್ ೧೧೦ ಮಿ.ಗ್ರಾಂ ಮೀರಿರುವುದು, ಪಿ.ಪಿ.ಬಿ.ಎಸ್
೧೮೦ ಮಿ.ಗ್ರಾಂ ಮೀರಿರುವುದು, ಮಧುಮೇಹವಿದೆಯೆಂದು ನಿರ್ಧರಿಸಬಹುದು.
೦೨. ಜಿ.ಟಿ.ಟಿ. (glucose tolerance test) ಎಂಬ ಪರೀಕ್ಷೆ.: ಎಫ್.ಬಿ.ಎಸ್ ಮತ್ತು ಪಿ.ಪಿ.ಬಿ.ಎಸ್ ನಿಂದ ಮಧುಮೇಹದ ಇರುವಿಕೆ ಸ್ಪಷ್ಟವಾಗದಿರುವಾಗ ಈ ಒಂದು ಪರೀಕ್ಷೆಯನ್ನು ಮಾಡಬೇಕಾಗಬಹುದು.
೦೩. ರಕ್ತದಲ್ಲಿನ HbA1C ನಿರ್ಧಾರ: ಇದು ೭% ಗಿಂತಲೂ ಕಡಿಮೆಯಿರಬೇಕು. ಇದಕ್ಕಿಂತಲೂ ಹೆಚ್ಚಿದ್ದರೆ, ಮಧುಮೇಹವಿರುವ ಸಾಧ್ಯತೆ ಇದೆ.
೦೪. ಮಧುಮೇಹಿಗಳಲ್ಲಿ ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಅಳೆಯುವ ಪರೀಕ್ಷೆಯೊಂದಲ್ಲದೇ, ಬೇರೆ ಉದ್ದೇಶಗಳಿಗಾಗಿ ಹಲವಾರು ಪರೀಕ್ಷೆಗಳನ್ನು ಮಾಡಬೇಕಾಗುವುದು.
ಉದಾಹರಣೆಗೆ, ಮೂತ್ರಪಿಂಡಗಳಿಗೆ ಆಗಲೇ ಧಕ್ಕೆಯಾಗಿದೆಯೇ ಎಂದು ತಿಳಿದುಕೊಳ್ಳಲು ಮೂತ್ರದಲ್ಲಿ ಆಲ್ಬುಮಿನ್ ಎಂಬ ಪ್ರೋಟೀನ್ ನ ಪತ್ತೆ, ರಕ್ತದಲ್ಲಿನ ಯೂರಿಯಾ ಮತ್ತು ಕ್ರಿಯಾಟಿನಿನ್ ಗಳ ಪರೀಕ್ಷೆ, ಹೃದಯಕ್ಕೆ ಧಕ್ಕೆಯಾಗಿದೆಯೇ ಎಂದು ತಿಳಿದುಕೊಳ್ಳಲು ಇ.ಸಿ.ಜಿ ಯಂತಹ ಪರೀಕ್ಷೆಗಳು.
ಹೀಗೆ ಹಲವಾರು ಪರೀಕ್ಷೆಗಳನ್ನು ಮಾಡಬೇಕಾಗಿ ಬರಬಹುದು.

321 reads