There are currently 0 users and 3 guests online.

ನೀವೂ ಪ್ರಕಟಿಸಬಹುದು!

ಆರೋಗ್ಯ ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ಮಧುಮೇಹವೆಂಬ ಗುಪ್ತಗಾಮಿನಿ..........೯

ಮಧುಮೇಹವೆಂಬ ಗುಪ್ತಗಾಮಿನಿ..........೯

ಆರೋಗ್ಯ ಸಂಪದದಲ್ಲಿ

ಮಧುಮೇಹದ ಚಿಕಿತ್ಸೆ: ಒಬ್ಬ ವ್ಯಕ್ತಿಗೆ ಮಧುಮೇಹವಿರುವುದು ಖಚಿತವಾದಾಗ ಯಾವ ಬಗೆಯ ಚಿಕಿತ್ಸೆ ನೀಡಬಹುದು ಎನ್ನುವುದರ ಬಗ್ಗೆ ತಿಳಿಯೋಣ.
ಸದ್ಯಕ್ಕೆ ಮಧುಮೇಹವನ್ನು ಸಂಪೂರ್ಣ ಗುಣಪಡಿಸುವಂತಹ (curative treatment) ಯಾವುದೇ ಚಿಕಿತ್ಸೆ ಲಭ್ಯವಿಲ್ಲ. ಆದರೆ, ಮಧುಮೇಹವನ್ನು ಸರಿಯಾಗಿ ಹತೋಟಿಯಲ್ಲಿಟ್ಟುಕೊಂಡು, ಮಧುಮೇಹದ ಉಪದ್ರವಗಳಿಂದ ಪಾರಾಗಿ, ಸಾಮಾನ್ಯರಂತೆಯೇ ಜೀವಿಸಲು ಅನೇಕ ಚಿಕಿತ್ಸಾಕ್ರಮಗಳಿವೆ. ಯಾರಿಗೇ ಆಗಲಿ ಮಧುಮೇಹವಿದೆಯೆಂದು ತಿಳಿದು ಬಂದಾಗ ಹತಾಶಭಾವನೆಯುಂಟಾಗುವುದು ಸಹಜವಾದುದಾದರೂ, ಮಧುಮೇಹವನ್ನು ಜಯಿಸಿ ಯಶಸ್ವಿ ಜೀವನ ನಡೆಸಿರುವ ಅನೇಕರನ್ನು ಕಂಡಾಗ ಆ ಹತಾಶೆ ಪಡಲು ಕಾರಣವಿಲ್ಲವೆಂಬುದನ್ನು ಮನಗಾಣಬಹುದು. ಐದು ವರ್ಷ ವಯಸ್ಸಿಗೇ ಟೈಪ್ 1 ಮಧುಮೇಹವನ್ನು ಪಡೆದು, ಇತ್ತೀಚೆಗೆ ೯೦ ನೇ ವರ್ಷದ ಹುಟ್ಟುಹಬ್ಬವನ್ನಾಚರಿಸಿಕೊಂಡ ಬಾಬ್ ಕ್ರಾಸ್ ನಂತಹ ವ್ಯಕ್ತಿಗಳು ಮಧುಮೇಹಿಗಳಿಗೆ ಹೊಸ ಉತ್ಸಾಹವನ್ನು ನೀಡುತ್ತಾರೆ.

ಮಧುಮೇಹದ ಚಿಕಿತ್ಸೆಯ ಅಂಶಗಳು:
೦೧. ಆಹಾರದ ಪಥ್ಯಾಕ್ರಮ (dietary management)
೦೨. ದೈಹಿಕ ವ್ಯಾಯಾಮ (physical exercise)
೦೩. ಔಷಧೋಪಚಾರ (drug therapy)
೦೪. ಮಧುಮೇಹದ ದುಷ್ಪರಿಣಾಮಗಳ ಚಿಕಿತ್ಸೆ (treatment of complications of diabetes)
೦೫. ವಿಶೇಷ ಸಂದರ್ಭಗಳಲ್ಲಿ ಮಧುಮೇಹದ ಚಿಕಿತ್ಸೆ (management of diabetes during certain special situations)

೦೧. ಆಹಾರದ ಪಥ್ಯಾಕ್ರಮ: ಮಧುಮೇಹದ ಚಿಕಿತ್ಸೆಯಲ್ಲಿ ಪಥ್ಯ ಬಹಳ ಮುಖ್ಯವಾದುದೆಂಬುದನ್ನು ಎಲ್ಲರೂ ಬಲ್ಲರು. ಈ ಪಥ್ಯದ ಉದ್ದೇಶಗಳೇನು ?
ಅ. ರಕ್ತದಲ್ಲಿ ಸಕ್ಕರೆಯ ಪ್ರಮಾಣದಲ್ಲಿ ಹಠಾತ್ ಏರಿಕೆಯನ್ನು ತಡೆಯಲು,
ಆ. ಮಧುಮೇಹಿಯ ತೂಕ, ಅಪೇಕ್ಷಿತ ತೂಕಕ್ಕಿಂತಲೂ ಹೆಚ್ಚಾಗಿದ್ದಾಗ, ಅಪೇಕ್ಷಿತ ಮಟ್ಟಕ್ಕೆ ದೇಹದ ತೂಕವನ್ನಿಳಿಸಲು.

ಅ. ಹಿಂದಿನ ಅಧ್ಯಾಯಗಳಲ್ಲಿ (ಭಾಗ -೪) ಗ್ಲೈಸೀಮಿಕ್ ಇಂಡೆಕ್ಸ್ ಎಂಬ ವಿಷಯದ ಬಗ್ಗೆ ತಿಳಿದಿದ್ದೇವೆ. ನಾನಾಗಲೇ ಹೇಳಿದಂತೆ, ಅಪರೂಪಕ್ಕೆ ಯಾವಾಗಲೋ ಒಮ್ಮೆ
ಹೆಚ್ಚು ಗ್ಲೈಸೀಮಿಕ್ ಇಂಡೆಕ್ಸ್ ಇರುವ ಆಹಾರವನ್ನು ಸೇವಿಸುವುದು ಅಂತಹ ಪ್ರಮಾದವೇನೂ ಅಲ್ಲ. ಹೆಚ್ಚು ಗ್ಲೈಸೀಮಿಕ್ ಇಂಡೆಕ್ಸ್ ಇರುವ ಆಹಾರ ಪದಾರ್ಥಗಳನ್ನು
ಮಿತಿಗೊಳಿಸಿ, ಕಡಿಮೆ ಇಂಡೆಕ್ಸ್ ಇರುವ ಆಹಾರ ಪದಾರ್ಥಗಳನ್ನೇ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ಮೊದಲನೇ ಉದ್ದೇಶವನ್ನು ಪೂರೈಸಬಹುದು.
ನನ್ನ ಹಿಂದಿನ ಲೇಖನದಲ್ಲಿ ಕೆಲವು ಆಹಾರ ಪದಾರ್ಥಗಳ ಗ್ಲೈಸೀಮಿಕ್ ಇಂಡೆಕ್ಸ್ ನ ಪಟ್ಟಿಯೊಂದನ್ನು ಕೊಟ್ಟಿದ್ದೇನೆ. ಆ ಪಟ್ಟಿಯಲ್ಲಿ ಎಲ್ಲಾ ಆಹಾರ ಪದಾರ್ಥಗಳು ಸೇರಿಲ್ಲ.
ಕೇವಲ ಉದಾಹರಣೆಗಾಗಿ ಕೆಲವು ಪದಾರ್ಥಗಳ ಜಿ.ಐ. ನ್ನು ಮಾತ್ರ ತಿಳಿಸಿದ್ದೆ. ಎಲ್ಲಾ ಆಹಾರ ಪದಾರ್ಥಗಳ ಪಟ್ಟಿಯನ್ನು ನಾನು ಕೊಟ್ಟಿದ್ದರೂ ಅವುಗಳೆಲ್ಲವನ್ನೂ
ಜ್ಞಾಪಕದಲ್ಲಿಟ್ಟುಕೊಳ್ಳಲು ಸಾಧ್ಯವೇ ? ನನಗಂತೂ ಸಾಧ್ಯವಿಲ್ಲ. ಆದಕಾರಣ ನಾವು ಹೀಗೆ ಮಾಡಬಹುದು. ನಾವು ಸಾಮಾನ್ಯವಾಗಿ ಸೇವಿಸುವ ಆಹಾರದಲ್ಲಿ ಅತಿ ಹೆಚ್ಚಿನ
ಪ್ರಮಾಣದಲ್ಲಿ ಬಳಸುವ ಪದಾರ್ಥಗಳನ್ನು ಗುರುತಿಸಿ ಅವುಗಳ ಜಿ.ಐ. ಮಾತ್ರ ತಿಳಿದುಕೊಂಡು ನಮ್ಮ ಆಹಾರದಲ್ಲಿ ಅವುಗಳನ್ನು ಎಷ್ಟು ಪ್ರಮಾಣದಲ್ಲಿ ಬಳಸಿಕೊಳ್ಳಬಹುದು
ಎಂದು ನಿರ್ಧರಿಸಬಹುದು. ಉದಾಹರಣೆಗೆ , ದಕ್ಷಿಣ ಕರ್ನಾಟಕದಲ್ಲಿ ಆಹಾರದ ಅತಿ ಹೆಚ್ಚು ಭಾಗ,
೧. ಅಕ್ಕಿ, ಅಕ್ಕಿ ಹಿಟ್ಟಿನ ಪದಾರ್ಥಗಳು,
೨. ಬೇಳೆ ಕಾಳುಗಳು,
೩. ತರಕಾರಿ
೪. ಹಣ್ಣುಗಳು,
೫. ಹಾಲು, ಮೊಸರು,
೬. ಮಾಂಸ, ಮೀನು, ಮೊಟ್ಟೆ
೧. ಅಕ್ಕಿ ಮತ್ತು ಅಕ್ಕಿ ಹಿಟ್ಟಿನ ಪದಾರ್ಥಗಳನ್ನು ಗೋಧಿ,ಜೋಳ ಮತ್ತು ರಾಗಿಗಳಿಗೆ ಹೋಲಿಸಿದರೆ, ಅಕ್ಕಿ ಮತ್ತು ಅಕ್ಕಿ ಹಿಟ್ಟಿನ ಪದಾರ್ಥಗಳ ಜಿ.ಐ. ಹೆಚ್ಚು. ಹೀಗೆಂದು
ಅನ್ನವನ್ನಾಗಲೀ, ಅಕ್ಕಿ ಹಿಟ್ಟಿನ ಪದಾರ್ಥಗಳನ್ನು ಪೂರ್ಣ ವರ್ಜಿಸಬೇಕೆಂದೇನೂ ಇಲ್ಲ. ಇವುಗಳನ್ನು ಕಡಿಮೆ ಮಾಡಿಕೊಂಡು ಗೋಧಿ, ಜೋಳ ಮತ್ತು ರಾಗಿಗಳ
ಪದಾರ್ಥಗಳನ್ನೂ ಆಹಾರದಲ್ಲಿ ಸೇರಿಸಿಕೊಂಡರೆ ಉತ್ತಮ.
೨. ಬೇಳೆ ಕಾಳುಗಳು ಹೆಚ್ಚಾಗಿ ಪ್ರೋಟೀನ್ ಅಂಶವನ್ನು ಹೊಂದಿ ಬಹಳ ಕಡಿಮೆ ಜಿ.ಐ. ಇಂಡೆಕ್ಸ್ ಹೊಂದಿರುತ್ತವೆ. ಆದ್ದರಿಂದ ಅವುಗಳ ಸೇವನೆಯಲ್ಲಿ ಸಮಸ್ಯೆಯಿಲ್ಲ.
೩. ಬಹಳಷ್ಟು ತರಕಾರಿಗಳು (ಆಲೂಗಡ್ಡೆ, ಕ್ಯಾರೆಟ್ ಮತ್ತು ಬೀಟ್ ರೂಟ್, ಟೊಮ್ಯಾಟೋ ಗಳನ್ನು ಹೊರತು ಪಡಿಸಿ) ಕಡಿಮೆ ಜಿ.ಐ. ಹೊಂದಿರುವುದರಿಂದ ಅವುಗಳನ್ನು (ಅದರಲ್ಲಿಯೂ ವಿಶೇಷವಾಗಿ ಸೊಪ್ಪಿನ ತರಕಾರಿ) ಬಳಸುವುದರಲ್ಲಿ ಸಮಸ್ಯೆಯೇನಿಲ್ಲ. ಆಲೂಗಡ್ಡೆ, ಕ್ಯಾರಟ್ , ಬೀಟ್ ರೂಟ್ ಗಳ ಜಿ.ಐ. ಸ್ವಲ್ಪ ಹೆಚ್ಚಿದ್ದರೂ ಅವುಗಳನ್ನು ವಾರದಲ್ಲಿ ಎರಡು ಮೂರು ಬಾರಿ ಬಳಸುವುದರಲ್ಲಿ ಬಾಧಕವಿಲ್ಲ.
೪. ಹಣ್ಣುಗಳಲ್ಲಿ, ಮಾವಿನ ಹಣ್ಣು, ಅನಾನಸ್, ಬಾಳೆಹಣ್ಣು, ಕಲ್ಲಂಗಡಿಯ ಜಿ. ಐ. ಸ್ವಲ್ಪ ಹೆಚ್ಚು ಇರುವುದರಿಂದ ಇವುಗಳನ್ನು ಮಿತವಾಗಿ ಬಳಸಿ, ಇನ್ನುಳಿದ ಹಣ್ಣುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬಹುದು. ಹಣ್ಣುಗಳ ಬಳಕೆಯಲ್ಲಿ ನಾವು ಹೆಚ್ಚು ನಿಷ್ಠುರವಾಗಿರಬೇಕಿಲ್ಲ. ಇವುಗಳು ನಮ್ಮ ದೇಹಕ್ಕೆ ಅಗತ್ಯವಾದ ನಾರಿನಂಶವನ್ನು (fibre) ಮತ್ತು ಆಂಟಿ ಆಕ್ಸಿಡೆಂಟ್ (antioxidants) ಎಂಬ ಅಗತ್ಯ ವಸ್ತುಗಳನ್ನು ಒದಗಿಸುತ್ತವೆ. ಉತ್ತರ ಕರ್ನಾಟಕದವರು ತಮ್ಮ ಆಹಾರದಲ್ಲಿ ಸಹಜವಾಗಿಯೇ ಜೋಳ ಮತ್ತು ಗೋಧಿಯನ್ನು ಉಪಯೋಗಿಸುವುದರಿಂದ ಅವರು ಯಾವ ಬದಲಾವಣೆಯನ್ನೂ ಮಾಡಿಕೊಳ್ಳಬೇಕಿಲ್ಲ.
೫. ಹಾಲು, ಮೊಸರುಗಳ ಜಿ.ಐ. ಸುಮಾರು ೨೫ ರಿಂದ ಮೂವತ್ತರಲ್ಲಿರುವುದರಿಂದ ಇವುಗಳನ್ನು ಬಳಸಬಹುದು , ಅದರಲ್ಲಿಯೂ ಕೆನೆರಹಿತ ಹಾಲು ಒಳ್ಳೆಯದು.
೬. ಮಾಂಸ, ಮೀನು ಮತ್ತು ಮೊಟ್ಟೆ ಇವುಗಳ ಜಿ.ಐ. ಕೂಡ ಸುಮಾರು ಮೂವತ್ತರಿಂದ ಐವತ್ತರೊಳಗೆ ಇರುವುದರಿಂದ ಅವುಗಳನ್ನು ಮಿತವಾಗಿ ಬಳಸಬಹುದು.

ಕೊನೆಯದಾಗಿ ಒಂದು ಪುಟ್ಟ ಸುಳಿವು: ಆಹಾರ ಪದಾರ್ಥಗಳಲ್ಲಿ ಅಚ್ಚ ಬಿಳಿಯ ಬಣ್ಣ ಹೊಂದಿರುವ ಪದಾರ್ಥಗಳು ಸಾಮಾನ್ಯವಾಗಿ ಹೆಚ್ಚು ಗ್ಲೈಸೀಮಿಕ್
ಇಂಡೆಕ್ಸ್ ಹೊಂದಿರುತ್ತವೆ ಮತ್ತು ಮಾಸಲು ಬಿಳುಪು ಇಲ್ಲವೇ ಕಂದು ಬಣ್ಣದ ಪದಾರ್ಥಗಳು ಕಡಿಮೆ ಜಿ. ಐ. ಹೊಂದಿರುತ್ತವೆ. ಬಿಳಿಯ ಬಣ್ಣದ ಅಕ್ಕಿ ಹಿಟ್ಟು,
ಮೈದಾ, ಬಿಳಿ ಬ್ರೆಡ್ ಹೆಚ್ಚು ಜಿ. ಐ ಹೊಂದಿವೆ. ಮಾಸಲು ಬಿಳುಪಿನ ಗೋಧಿ ಹಿಟ್ಟು, ಜೋಳದ ಹಿಟ್ಟು, ಕರಿ ಬಣ್ಣದ ರಾಗಿ ಹಿಟ್ಟು, ಕಂದು ಬಣ್ಣದ ಬ್ರೆಡ್ (whole
wheat bread) ಇವು ಕಡಿಮೆ ಜಿ. ಐ. ಹೊಂದಿವೆ.

ಆಹಾರವಸ್ತುಗಳ ಜಿ.ಐ ನ ಪಟ್ಟಿ ಬೇಕಿದ್ದವರು ಕೆಳಗಿನ ಲಿಂಕ್ ಗಳನ್ನು ಉಪಯೋಗಿಸಬಹುದು:

http://www.glycemicedge.com/glycemic-index-chart/

http://www.becomehealthynow.com/article/carbs/8/

ಇನ್ನು ಸಕ್ಕರೆಯ ಬದಲು ಬಳಸಬಹುದಾದ ಕಡಿಮೆ ಕ್ಯಾಲೊರಿ ವಸ್ತುಗಳನ್ನು ಗಮನಿಸೋಣ. ಕೃತಕ ಸಿಹಿಕಾರಕಗಳೆಂದು (artificial sweeteners) ಎಂದು
ಕರೆಯಲ್ಪಡುವ ಇವುಗಳಲ್ಲಿ ಬಹಳ ಮುಖ್ಯವಾದುವು,
ಸುಕ್ರಲೋಸ್, ಸ್ಟಿವಿಯಾ, ಕ್ರಿಸ್ಟಲ್ ಫ್ರಕ್ಟೋಸ್, ಆಸ್ಪರ್ಟೇಮ್, ಸ್ಯಾಕರೀನ್ ಇತ್ಯಾದಿ.
ಸುಕ್ರಲೋಸ್ ಹೊಂದಿರುವ ಶುಗರ್ ಫ್ರೀ ನ್ಯಾಚುರಾ(,sugarfree natura), ಸ್ವೀಟೋಸ್ (sweetos), ಸ್ಪ್ಲೆಂಡಾ (splenda), ಟ್ರೂ ಸ್ವೀಟ್ (true sweet)
ರೆಲಿಶ್ (relish), ಗಳ ಜಿ.ಐ. ಹತ್ತಕ್ಕಿಂತಲೂ ಕಡಿಮೆಯಿದ್ದು ಸಕ್ಕರೆಯ ಬದಲಾಗಿ ಬಳಸಲು ಸೂಕ್ತವಾಗಿವೆ.
ಸ್ಟಿವಿಯಾ ವನ್ನು ಹೊಂದಿರುವ ನೇಚರ್ ಸ್ವೀಟ್ (Nature Sweet) ನ ಜಿ.ಐ. ಶೂನ್ಯವೆಂದೇ ಬಿಂಬಿಸಲಾಗಿದೆ. ಇದೂ ಕೂಡ ಬಳಕೆಗೆ ತಕ್ಕದ್ದಾಗಿದೆ.
ಕ್ರಿಸ್ಟಲ್ ಫ್ರಕ್ಟೋಸ್, (crystal fructose) ಇದರ ಜಿ.ಐ. ಸುಮಾರು ಹತ್ತೊಂಭತ್ತು. ಇದನ್ನೂ ಕೂಡ ಆಹಾರದಲ್ಲಿ ಬಳಸಬಹುದಾಗಿದೆ.
ಆಸ್ಪರ್ಟೇಮ್, ಹೊಂದಿರುವ ಶುಗರ್ ಫ್ರೀ ಗೋಲ್ಡ್ , (sugarfree gold) ಈಕ್ವಲ್ (Equal) : ಇದರ ಬಳಕೆಗೆ ಎಲ್ಲರಲ್ಲಿ ಒಮ್ಮತವಿಲ್ಲ.
ಸ್ಯಾಕರೀನ್.(saccharin) ಇದರ ಬಳಕೆಗೆ ಬಹಳಷ್ಟು ಕಡೆ ವಿರೋಧವಿದೆಯಾದ್ದರಿಂದ ಇದರ ಬಳಕೆ ಒಳಿತಲ್ಲ.

ಆ. ಮಧುಮೇಹವಿರುವ ಪ್ರತಿಯೊಬ್ಬ ವ್ಯಕ್ತಿಯೂ ದೇಹದ ತೂಕವಿಳಿಸಲೇ ಬೇಕೆಂದು ಬಹಳಷ್ಟು ಜನರು ತಪ್ಪುತಿಳಿದಿದ್ದಾರೆ. ನಿಜ, ದೇಹದ ತೂಕವಿಳಿಸುವುದರಿಂದ, ಮಧುಮೇಹವನ್ನು ಹೆಚ್ಚು ಸಮರ್ಥವಾಗಿ ಹತೋಟಿಗೆ ತರಬಹುದು. ನಿಗದಿತ ತೂಕಕ್ಕಿಂತಲೂ ಅಧಿಕ ತೂಕವಿರುವ (overweight) ಮಧುಮೇಹಿಗಳಲ್ಲಿ ಮಾತ್ರ ಇದು ಸಾಧ್ಯವಾಗುತ್ತದೆ. ಆದ್ದರಿಂದ ವ್ಯಕ್ತಿಯ ಎತ್ತರಕ್ಕೆ ಅನುಗುಣವಾಗಿ ತೂಕವನ್ನು ಹೊಂದಿರುವಂತಹ, ಅಥವಾ ಅದಕ್ಕೂ ಕಡಿಮೆ ತೂಕವಿರುವ ವ್ಯಕ್ತಿಗಳು ದೇಹದ ತೂಕವನ್ನಿಳಿಸುವ ಪ್ರಯತ್ನ ಸರಿಯಲ್ಲ. ಟೈಪ್ 1 ಮಧುಮೇಹಿಗಳು, ನಿಗದಿತ ತೂಕಕ್ಕಿಂತಲೂ ಕಡಿಮೆಯಿದ್ದರೆ, ಅವರು ಹೆಚ್ಚು ಆಹಾರವನ್ನು ಸೇವಿಸಿ, ದೇಹದ ತೂಕವನ್ನು ಹೆಚ್ಚಿಸಿಕೊಳ್ಳಲು ಸೂಚಿಸಲಾಗುತ್ತದೆ.

ನಾವು ಸೇವಿಸುವ ವಿವಿಧ ಆಹಾರ ಪದಾರ್ಥಗಳು, ಅವು ನಮ್ಮ ದೇಹಕ್ಕ ನೀಡುವ ಶಕ್ತಿಯ ಪ್ರಮಾಣದಲ್ಲಿ (calorific value) ಕೂಡ ಭಿನ್ನವಾಗಿರುತ್ತವೆ. ೧೦೦ ಗ್ರಾಂ
ಬೆಣ್ಣೆ, ಅಥವಾ ತುಪ್ಪ, ಸರಿಸುಮಾರು ೨೦೦ ಗ್ರಾಂ ಸಕ್ಕರೆ ನೀಡುವಷ್ಟೇ ಶಕ್ತಿಯನ್ನು ನೀಡುತ್ತದೆ, ಅಂದರೆ, ಒಂದೇ ಪ್ರಮಾಣದ ತುಪ್ಪ ಅಥವಾ ಬೆಣ್ಣೆ, ಅದೇ ಪ್ರಮಾಣದ ಸಕ್ಕರೆಗಿಂತ ಎರಡುಪಟ್ಟು ಶಕ್ತಿಯನ್ನು ನೀಡುತ್ತದೆ. ಪ್ರತಿಯೊಬ್ಬ ವ್ಯಕ್ತಿಯ ವಯಸ್ಸು, ಲಿಂಗ, ಮತ್ತು ಆ ವ್ಯಕ್ತಿಯ ದೈನಂದಿನ ದೈಹಿಕ ಚಟುವಟಿಕೆಯನ್ನಾಧರಿಸಿ ಆ ವ್ಯಕ್ತಿಗೆ ಪ್ರತಿ ದಿನ ಬೇಕಾಗುವ ಶಕ್ತಿಯ ಪ್ರಮಾಣವನ್ನು ನಿರ್ಧರಿಸಬಹುದು. ಹಾಗೆ ನಿಗದಿ ಮಾಡಿದ ಶಕ್ತಿಯ ಪ್ರಮಾಣಕ್ಕಿಂತಲೂ ಕಡಿಮೆ ಶಕ್ತಿಯನ್ನೊದಗಿಸುವಷ್ಟು ಆಹಾರವನ್ನು ಸೇವಿಸುವುದರಿಂದ, ದೇಹದ ತೂಕವನ್ನು ಇಳಿಸಿ ಎರಡನೇ ಉದ್ದೇಶವನ್ನು ಪೂರೈಸಬಹುದು. ಉದಾಹರಣೆಗೆ, ಚುರುಕಾಗಿ ಓಡಾಡಿಕೊಂಡು ಕೆಲಸ ಮಾಡುವಂತಹ ಒಬ್ಬ ನಲವತ್ತು ವರ್ಷ ಪ್ರಾಯದ
ಪುರುಷನೊಬ್ಬನಿಗೆ ಪ್ರತಿದಿನ ಬೇಕಾಗುವ ಆಹಾರ (ಕ್ಯಾಲೋರಿ ಲೆಕ್ಕದಲ್ಲಿ) ೨೪೦೦. ಇಂತಹ ವ್ಯಕ್ತಿ ಪ್ರತಿದಿನವೂ ಉದ್ದೇಶ ಪೂರ್ವಕವಾಗಿ, ಪ್ರತಿದಿನ ೨೦೦೦ ಕ್ಯಾಲೋರಿಗಳಷ್ಟು
ಆಹಾರವನ್ನು ಮಾತ್ರ ಸೇವಿಸುತ್ತಾನೆ ಎಂದುಕೊಳ್ಳೋಣ. ಆಗ ಅವನು ಎರಡು ತಿಂಗಳ ಬಳಿಕ ೨ ಕೆ.ಜಿ. ಯಷ್ಟು ತೂಕವನ್ನು ಕಳೆದುಕೊಳ್ಳಬಹುದು. ಅಥವಾ ೨೪೦೦ ಕ್ಯಾಲೋರಿಗಳಷ್ಟು ಆಹಾರವನ್ನೇ ಸೇವಿಸುತ್ತಿದ್ದರೂ, ಪ್ರತಿದಿನವೂ ಸುಮಾರು ೪೦೦ ಕ್ಯಾಲೋರಿಗಳು ವ್ಯಯವಾಗುವಷ್ಟು ವ್ಯಾಯಾಮವನ್ನು ಮಾಡುತ್ತಾನೆ ಎಂದುಕೊಳ್ಳೋಣ. ಆಗಲೂ ಕೂಡಾ ಅವನು ಅದೇ ಫಲಿತಾಂಶವನ್ನು ಪಡೆಯಬಹುದು. ಅದೇ ರೀತಿ, ಆಹಾರದ ಪ್ರಮಾಣದಲ್ಲಿ ಕಡಿಮೆ ಮಾಡಿಕೊಳ್ಳುವುದಲ್ಲದೇ, ವ್ಯಾಯಾಮ ಮಾಡುವ ಮೂಲಕ
ಶಕ್ತಿಯ ವ್ಯಯವನ್ನೂ ಹೆಚ್ಚಿಸಿಕೊಂಡರೆ ಇನ್ನೂ ಸಮರ್ಥವಾಗಿ ತನ್ನ ದೇಹದ ತೂಕವನ್ನಿಳಿಸಬಹುದು.

294 reads