There are currently 0 users and 3 guests online.

ನೀವೂ ಪ್ರಕಟಿಸಬಹುದು!

ಆರೋಗ್ಯ ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ಮಧುಮೇಹವೆಂಬ ಗುಪ್ತಗಾಮಿನಿ .........೭

ಮಧುಮೇಹವೆಂಬ ಗುಪ್ತಗಾಮಿನಿ .........೭

ಆರೋಗ್ಯ ಸಂಪದದಲ್ಲಿ

ಗಮನಿಸಿ : ಕೇವಲ ಮಾಹಿತಿಗಾಗಿ, ಒಬ್ಬ ಮಧುಮೇಹಿಯ ದೇಹದಲ್ಲಾಗಬಹುದಾದ ಎಲ್ಲ ದುಷ್ಪರಿಣಾಮಗಳನ್ನು ವಿವರಿಸಿದ್ದೇನೆ.
ಈ ಎಲ್ಲಾ ದುಷ್ಪರಿಣಾಮಗಳು ಪ್ರತಿಯೊಬ್ಬ ಮಧುಮೇಹಿಯಲ್ಲೂ ಕಾಣಲೇಬೇಕೆಂದಿಲ್ಲ. ಬಹಳಷ್ಟು ಮಧುಮೇಹಿಗಳಲ್ಲಿ ಮೇಲೆ ಕಾಣಿಸಿರುವ ದುಷ್ಪರಿಣಾಮಗಳ ಶೇ ೧೦ ರಷ್ಟು ಮಾತ್ರ ಕಾಣಿಸಬಹುದು. ಆದ್ದರಿಂದ ಮೇಲೆ ವಿವರಿಸಿದ ದುಷ್ಪರಿಣಾಮಗಳ ದೊಡ್ಡ ಪಟ್ಟಿಯನ್ನು ನೋಡಿ ಯಾವ ಮಧುಮೇಹಿಯಾಗಲೀ ಗಾಬರಿಪಡಬೇಕಿಲ್ಲ. ಇದೇ ಸಂದರ್ಭದಲ್ಲಿ ಇನ್ನೊಂದು ಸೂಚನೆಯನ್ನೂ ಕೊಡಲು ಬಯಸುತ್ತೇನೆ. ಮುಂದಿನ ಕಂತುಗಳಲ್ಲಿ ಮಧುಮೇಹದ ಉಪಚಾರ ಮತ್ತು ಅದರಲ್ಲಿ ಬಳಸುವು ಔಷಧಿಗಳ ಬಗ್ಗೆಯೂ ತಿಳಿಸುತ್ತೇನೆ. ಆದರೆ ಕೇವಲ ಮಾಹಿತಿಗಾಗಿ ಮಾತ್ರ. ದಯವಿಟ್ಟು ಯಾರೇ ಆಗಲಿ ಈ ಲೇಖನಗಳನ್ನೋದಿ ಸ್ವಚಿಕಿತ್ಸೆಗೆ ಪ್ರಯತ್ನಿಸಬಾರದೆಂದು ಕಳಕಳಿಯಿಂದ ಕೋರುತ್ತೇನೆ.

ಮಧುಮೇಹ : ನಮ್ಮ ದೇಹದ ಅಲ್ಪ ಪರಿಚಯ, ದೇಹಕ್ಕೆ ಬೇಕಾದ ಶಕ್ತಿಯನ್ನೊದಗಿಸುವ ಸಕ್ಕರೆಯ ಪಾತ್ರ, ಸಕ್ಕರೆಯ ಮಟ್ಟವನ್ನು ಕಾಯ್ದು ಕೊಂಡು ಬರುವಲ್ಲಿ ವಿವಿಧ
ಹಾರ್ಮೋನ್ ಗಳ ಪಾತ್ರ ಇವೆಲ್ಲವನ್ನೂ ಅರಿತ ಬಳಿಕ, ಇದೀಗ ಮಧುಮೇಹದ ಬಗ್ಗೆ ತಿಳಿಯಲು ಯತ್ನಿಸೋಣ.
ಮಧುಮೇಹವೆಂದರೆ, ಮೂತ್ರದಲ್ಲಿ ಸಕ್ಕರೆಯ ವಿಸರ್ಜನೆ ಎಂದರ್ಥ. ಸಾಮಾನ್ಯವಾಗಿ ಎಲ್ಲಾ ಮಧುಮೇಹಿಗಳ ಮೂತ್ರದಲ್ಲಿಯೂ ಸಕ್ಕರೆಯ ಅಂಶವಿರಬಹುದಾದರೂ, ಕೇವಲ ಈ ಆಧಾರದ ಮೇಲೆ ಮಧುಮೇಹವನ್ನು ನಿರ್ಧರಿಸಬಾರದು. ಇದಕ್ಕೆ ಕಾರಣವೆಂದರೆ, ಅಪರೂಪಕ್ಕೆ ಕಂಡುಬರುವ ರೀನಲ್ ಗ್ಲೈಕೋಸೂರಿಯಾ ಮತ್ತು ಗರ್ಭಿಣಿ ಸ್ತ್ರೀಯರಲ್ಲಿ ಕಂಡುಬರಬಹುದಾದ ಲ್ಯಾಕ್ಟೋಸೂರಿಯಾ ಎಂಬ ಸ್ಥಿತಿಗಳಲ್ಲಿ, ಮೂತ್ರದಲ್ಲಿ ಸಕ್ಕರೆಯ ಅಂಶವಿದ್ದರೂ, ಅದು ಮಧುಮೇಹವೆನಿಸುವುದಿಲ್ಲ. ಆದ್ದರಿಂದ ಕೇವಲ ಮೂತ್ರವನ್ನು ಮಾತ್ರ ಪರೀಕ್ಷಿಸಿ, ಅದರಲ್ಲಿ ಸಕ್ಕರೆಯ ಅಂಶ ಕಂಡುಬಂದರೆ, ಮಧುಮೇಹವೆಂದು ತರ್ಕಿಸಬಾರದು.

ಮಧುಮೇಹವನ್ನು ಕೆಲವರು ಒಂದು ಕಾಯಿಲೆ (disease) ಎಂದು ಪರಿಗಣಿಸಿದರೆ, ಇನ್ನೂ ಕೆಲವರು ಇದನ್ನು ಒಂದು ಬಗೆಯ ಅವ್ಯವಸ್ಥೆ (disorder) ಎಂದು ಬಗೆಯುತ್ತಾರೆ. ಅದೇನೇ ಇರಲಿ, ಇದನ್ನು ಕಾಯಿಲೆಯೆಂದು ಪರಿಗಣಿಸುವುದೇ ಸೂಕ್ತವಾದುದು. ನಮ್ಮ ದೇಹದಲ್ಲಿ, ಇನ್ಸುಲಿನ್ ನ ಸಂಪೂರ್ಣ ಅಥವಾ ಭಾಗಶಃ ಕೊರತೆಯಿಂದ, ಸಕ್ಕರೆಯ ಬಳಕೆಯಲ್ಲುಂಟಾಗುವ ದೋಷದಿಂದ ಸಂಭವಿಬಹುದಾದ ಹಲವಾರು ರೋಗಲಕ್ಷಣಗಳ ಒಂದು ಸಮೂಹ (syndrome) ಎನ್ನಬಹುದು. ಮಧುಮೇಹದ ಬಹು ಮುಖ್ಯ ಲಕ್ಷಣವೆಂದರೆ, ರಕ್ತದಲ್ಲಿ ಹೆಚ್ಚಿದ ಸಕ್ಕರೆಯ ಮಟ್ಟ (hyperglycemia). ಆದ್ದರಿಂದ, ರಕ್ತದಲ್ಲಿ ಸಹಜ ಮಟ್ಟದಲ್ಲಿರಬೇಕಾದ ಪ್ರಮಾಣಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ ಸಕ್ಕರೆ ಇದ್ದಾಗ, ಮಧುಮೇಹವೆಂದು ಪರಿಗಣಿಸಬಹುದು. ಯಾವಾಗಲೋ ಒಮ್ಮೆ ರಕ್ತದಲ್ಲಿ ಸಕ್ಕರೆಯ ಅಂಶ ಹೆಚ್ಚಾಗಿ ಕಂಡುಬಂದರೆ ಮಧುಮೇಹವೆಂದು ಪರಿಗಣಿಸಬಾರದು. ಸಕ್ಕರೆಯ ಮಟ್ಟ
ಸತತವಾಗಿ ಹೆಚ್ಚಾಗಿದ್ದರೆ ಮಾತ್ರ ಮಧುಮೇಹವನ್ನು ಪರಿಗಣಿಸಬೇಕು.

ಹಾಗಾದರೆ ಮಧುಮೇಹವುಂಟಾಗಲು ಕಾರಣಗಳೇನು ? ರಕ್ತದಲ್ಲಿ ಸಕ್ಕರೆಯ ಅಂಶದ ಸಮತೋಲನದಲ್ಲಿ, ಇನ್ಸುಲಿನ್ ಒಂದು ಕಡೆಯಾದರೆ, ಅದಕ್ಕೆ ವಿರುದ್ಧವಾಗಿ ಕೆಲಸ ಮಾಡುವ ಗ್ಲುಕೋಗಾನ್ ಮುಂತಾದ ಕೆಲವು ಹಾರ್ಮೋನ್ ಗಳು. ಆದ್ದರಿಂದ, ಈ ಕೆಳಕಂಡ ಸಂದರ್ಭಗಳಲ್ಲಿ ಮಧುಮೇಹವುಂಟಾಗಬಹುದು :
೧. ದೇಹದಲ್ಲಿ ಇನ್ಸುಲಿನ್ ನ ಸಂಪೂರ್ಣ ಕೊರತೆ (absolute deficiency of insulin)
೨. ಇನ್ಸುಲಿನ್ ನ ಭಾಗಶಃ ಕೊರತೆ (relative deficiency of insulina)
೩. ಇನ್ಸುಲಿನ್ ಹೆಚ್ಚಾಗಿದ್ದರೂ (hyperinsulinemia) ಅದರೆ ಅದು ನಿರುಪಯೋಗಿರುವಂತಹ ಸ್ಥಿತಿ (insulin resistance)
೪. ಗ್ಲುಕೋಗಾನ್ ಮುಂತಾದ ಹಾರ್ಮೋನ್ ಗಳ ಹೆಚ್ಚಳ.

೧. ದೇಹದಲ್ಲಿ ಇನ್ಸುಲಿನ್ ನ ಸಂಪೂರ್ಣ ಕೊರತೆ: ಕೆಲವೊಮ್ಮೆ ಮೇದೋಜೀರಕ ಗ್ರಂಥಿಯಲ್ಲಿರುವ ಬೀಟಾ ಜೀವಕೋಶಗಳು autoimmune disorder ಎಂಬ ಸ್ಥಿತಿಯಿಂದಾಗಲೀ, ಕೆಲವು ಬಗೆಯ ವೈರಸ್ ಸೋಂಕಿನಿಂದಾಗಲೀ ಸಂಪೂರ್ಣ ನಾಶವಾಗಬಹುದು. ಅಂತಹ ಸಂದರ್ಭದಲ್ಲಿ ಕಾಣಿಸುವ ಮಧುಮೇಹಕ್ಕೆ ಟೈಪ್ 1 ಮಧುಮೇಹ ಎಂದು ಕರೆಯುತ್ತಾರೆ (ಇದಕ್ಕೆ ಜುವೆನೈಲ್ ಡಯಾಬಿಟೀಸ್ ಎಂದು ಮೊದಲು ಕರೆಯುತ್ತಿದ್ದರು) . ಈ ಬಗೆಯ ಮಧುಮೇಹ ಅಪರೂಪವಾದುದು. ಆದರೆ ಇದು ಬಹಳ ತೀವ್ರ ತರಹದ ಮಧುಮೇಹ. ದುರ್ದೈವದಿಂದ, ಇದು ಕಾಣಿಸಿಕೊಳ್ಳುವುದು ಸುಮಾರು ಐದರಿಂದ ಹತ್ತು ಹನ್ನೆರಡು ವರ್ಷ ಪ್ರಾಯದ ಚಿಕ್ಕ ಮಕ್ಕಳಲ್ಲಿ. ಇವರ ದೇಹದಲ್ಲಿ ಇನ್ಸುಲಿನ್
ಸ್ವಲ್ಪವೂ ಇರದೇ ಇರುವುದರಿಂದ, ಇವರಿಗೆ ಆರಂಭದಿಂದಲೂ ಇನ್ಸುಲಿನ್ ಚುಚ್ಚುಮದ್ದನ್ನು ನೀಡಿಯೇ ಉಪಚರಿಸಬೇಕು. ಟೈಪ್ 2 ಮಧುಮೇಹಿಗಳು ಬಳಸುವ ಹಲವಾರು ಬಗೆಯ ಮಾತ್ರೆ ಔಷಧಿಗಳು ಇವರಿಗೆ ಯಾವ ಮಾತ್ರಕ್ಕೂ ಉಪಯೋಗವಾಗುವುದಿಲ್ಲ.

೨. ಇನ್ಸುಲಿನ್ ನ ಭಾಗಶಃ ಕೊರತೆ: ಇದಕ್ಕೆ ಟೈಪ್ 2 ಮಧುಮೇಹವೆನ್ನುತ್ತಾರೆ. ಒಟ್ಟು ಮಧುಮೇಹಿಗಳಲ್ಲಿ ಇವರ ಸಂಖ್ಯೆಯೇ ಹೆಚ್ಚು. ಇವರಲ್ಲಿ ಇನ್ಸುಲಿನ್ ನ ಉತ್ಪಾದನೆ ಇರುವುದಾದರೂ, ದೇಹಕ್ಕೆ ಅಗತ್ಯವಿರುವಷ್ಟು ಪ್ರಮಾಣದಲ್ಲಿರದೇ ಇರುವುದರಿಂದ ಮಧುಮೇಹವುಂಟಾಗುತ್ತದೆ. ಇವರ ದೇಹದಲ್ಲಿನ ಬೀಟಾ ಜೀವಕೋಶಗಳ ಸಂಖ್ಯೆ ಕಡಿಮೆಯಾಗಿರಬಹುದು ಇಲ್ಲವೇ ಅವುಗಳ ಕಾರ್ಯಕ್ಷಮತೆಯಲ್ಲಿ ಕುಂದುಂಟಾಗಿರಬಹುದು. ಇದು ಹೆಚ್ಚಾಗಿ ೩೦ ವರ್ಷ ಪ್ರಾಯದ ನಂತರ ಕಾಣಿಸಿಕೊಳ್ಳುತ್ತದೆ.

೩. ಇನ್ಸುಲಿನ್ ನ ಹೆಚ್ಚಳ: ಕೆಲವು ಮಧುಮೇಹಿಗಳ ರಕ್ತದಲ್ಲಿನ ಇನ್ಸುಲಿನ್ ನ ಮಟ್ಟವನ್ನು ಅಳೆದಾಗ, ಆಶ್ಚರ್ಯಕರ ರೀತಿಯಲ್ಲಿ ಇನ್ಸುಲಿನ್ ನ ಪ್ರಮಾಣ ಸಾಮಾನ್ಯಕ್ಕಿಂತಲೂ ಬಹಳ ಅಧಿಕವಾಗಿರುವುದು. ಇದಕ್ಕೆ ಕಾರಣವೆಂದರೆ ಇವರ ದೇಹದಲ್ಲಿನ ಬೀಟಾ ಜೀವಕೋಶಗಳು ಬಹು ಸಮರ್ಥವಾಗಿರುತ್ತವೆ. ಆದರೆ, ಇವು ಉತ್ಪತ್ತಿ ಮಾಡಿದ ಇನ್ಸುಲಿನ್ ಜೀವಕೋಶಗಳನ್ನು ತಲುಪಿ, ಜೀವಕೋಶಗಳ ಮೇಲಿರುವ ರಿಸೆಪ್ಟರ್ ಎಂಬ ಸೂಕ್ಷ್ಮ ಭಾಗಗಳ ಜೊತೆ ಸಂಯೋಗ ಹೊಂದಿ, (ಬೀಗವನ್ನು ಅದಕ್ಕೆ ಹೊಂದುವ ಬೀಗದ ಕೈ ನಿಂದ ತೆರೆದಂತೆ) ಸಕ್ಕರೆಯು ಜಿವಕೋಶವನ್ನು ಪ್ರವೇಶಿಸಲು ಅನುವು ಮಾಡಿಕೊಳ್ಳಲು ಅಸಮರ್ಥವಾಗಿರುತ್ತದೆ. ಇದಕ್ಕೆ ಕಾರಣ ಇನ್ಸುಲಿನ್ ನ ರಚನೆಯಲ್ಲಿರಬಹುದಾದ ದೋಷ ಇಲ್ಲವೇ, ಜೀವಕೋಶಗಳ ಮೇಲಿರುವ ರಿಸೆಪ್ಟರ್ ಗಳ ದೋಷ. ಹುಟ್ಟಿನಿಂದಲೇ ಬರುವ ಒಂದು ಬಗೆಯ ಅಪರೂಪದ ಮಧುಮೇಹದ ಬಗೆಯಲ್ಲಿ ಜೀವಕೋಶಗಳ ಮೇಲೆ ರಿಸೆಪ್ಟರ್ ಗಳ ಕೊರತೆಯಿರುತ್ತದೆ. ಹೀಗಾಗಿ ಅವರ ದೇಹದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಇನ್ಸುಲಿನ್ ಉತ್ಪತ್ತಿಯಾಗುತ್ತಿದ್ದರೂ, ಅದು ನಿರುಪಯುಕ್ತವೆನಿಸುತ್ತದೆ.

೪. ಗ್ಲುಕೋಗಾನ್ ಮತ್ತಿತರ ಹಾರ್ಮೋನ್ ಗಳ ಹೆಚ್ಚಳ: ಇವು ಬಹಳ ಅಪರೂಪದ ಬಗೆಯ ಮಧುಮೇಹ ಪ್ರಬೇಧಗಳು. ಯಾವುದೇ ಕಾರಣದಿಂದ ದೇಹದಲ್ಲಿ, ಗ್ಲುಕೋಗಾನ್,
ಗ್ರೋತ್ ಹಾರ್ಮೋನ್ ಮತ್ತು ಗ್ಲುಕೋಸ್ಟೀರಾಯ್ಡ್ ಗಳು ಹೆಚ್ಚು ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತಿದ್ದರೆ, ಅವರಲ್ಲಿ ಈ ಬಗೆಯ ಮಧುಮೇಹ ಕಾಣಿಸಿಕೊಳ್ಳಬಹುದು.ಗ್ಲುಕೋಸ್ಟೀರಾಯ್ಡ್ ಗಳನ್ನು ಕೆಲವು ಕಾಯಿಲೆಗಳ ಉಪಚಾರದಲ್ಲಿ ಬಳಸುತ್ತಾರೆ . ಅಂತಹ ಸಂದರ್ಭಗಳಲ್ಲಿ, ಗ್ಲುಕೋಸ್ಟೀರಾಯ್ಡ್ ಗಳನ್ನು ಅಧಿಕ ಪ್ರಮಾಣದಲ್ಲಿ ಬಳಸಿದರೆ, ರಕ್ತದಲ್ಲಿನ ಸಕ್ಕರೆಯ ಅಂಶ ಹೆಚ್ಚಾಗಿ ಮಧುಮೇಹದಂತಹ ಸ್ಥಿತಿ ಯುಂಟಾಗಬಹುದು. ಅಸ್ಥಮಾ, ಸಂಧಿವಾತ, ಅಲರ್ಜಿ, ಹಲವು ಬಗೆಯ ಚರ್ಮದ ಕಾಯಿಲೆಗಳಲ್ಲಿ ಈ ಸ್ಟೀರಾಯ್ಡ್ ಗಳನ್ನು ಅಧಿಕವಾಗಿ ಬಳಸುತ್ತಾರೆ.

೫. ಮಹಿಳೆಯರಲ್ಲಿ ಗರ್ಭಾವಸ್ಥೆಯಲ್ಲಿ ಕಾಣಿಸಿಕೊಳ್ಳಬಹುದಾದ ಮಧುಮೇಹ (pregnancy induced diabetes) ಮತ್ತು ಕೇರಳ, ಕರ್ನಾಟಕದ ಕೆಲವು ಭಾಗಗಳಲ್ಲಿ ಕಂಡುಬರುವ ಕ್ರಾನಿಕ್ ಪ್ಯಾಂಕ್ರಿಯಾಟೈಟಿಸ್( chronic pancreatitis) ನಿಂದ ಕಂಡುಬರುವ ಮಧುಮೇಹದ ಸ್ವರೂಪ ಟೈಪ್ 2 ಮಧುಮೇಹದ್ದಾಗಿರುತ್ತದೆ.

ಮಧುಮೇಹದಲ್ಲಿ ಅನುವಂಶಿಕತೆಯ ಪಾತ್ರ: ಯಾವುದೇ ಬಗೆಯ ಮಧುಮೇಹದಲ್ಲಿ ಅನುವಂಶಿಕತೆಯ ಪ್ರಭಾವವನ್ನು ಕಾಣಬಹುದು. ಆದರೆ, ಈ ಪ್ರಭಾವವನ್ನು ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ. ತಂದೆತಾಯಿಯರಲ್ಲಿ ಯಾರಾದರೊಬ್ಬರಿಗೆ ಮಧುಮೇಹವಿದ್ದಲ್ಲಿ, ಅವರಿಗೆ ಹುಟ್ಟುವ ಮಕ್ಕಳಲ್ಲಿ ಮಧುಮೇಹವಿರುವ ಸಾಧ್ಯತೆ ಹೆಚ್ಚು ಮತ್ತು ಇಬ್ಬರಿಗೂ ಮಧುಮೇಹವಿದ್ದಲ್ಲಿ ಆ ಸಾಧ್ಯತೆ ಇನ್ನೂ ಹೆಚ್ಚಾಗುತ್ತದೆ ಎಂದು ಒಟ್ಟಾರೆಯಾಗಿ ಹೇಳಬಹುದೇ ಹೊರತು ಇದಕ್ಕಿಂತ ಹೆಚ್ಚು ಖಚಿತತೆಯಿಂದ ಹೇಳಲು ಸಾಧ್ಯವಿಲ್ಲ.
ಬಹಳ ಅಪರೂಪದ MODY (Maturity Onset Diabetes of the Young) ಎನ್ನುವ ಒಂದು ಪ್ರಬೇಧದಲ್ಲಿ ಮಾತ್ರ, ಸ್ವಲ್ಪ ಹೆಚ್ಚು ನಿಖರತೆಯಿಂದ ಹೇಳಬಹುದು. ತಂದೆ ಅಥವಾ ತಾಯಿಯರಲ್ಲಿ ಯಾರಿಗಾದರೊಬ್ಬರಿಗೆ ಈ ಬಗೆಯ ಮಧುಮೇಹವಿದ್ದರೂ, ಅವರಿಗೆ ಹುಟ್ಟುವ ಮಕ್ಕಳಲ್ಲಿ ಅರ್ಧದಷ್ಟು ಸಂಖ್ಯೆಯ ಮಕ್ಕಳಲ್ಲಿ ಇದು ಕಾಣಿಸಿಕೊಳ್ಳಬಹುದು.

ಕೆಲವು ಅಂಶಗಳು ಮಧುಮೇಹಕ್ಕೆ ನೇರವಾಗಿ ಕಾರಣವಲ್ಲದಿದ್ದರು, ಮಧುಮೇಹವುಂಟಾಗುವ ಸಾಧ್ಯತೆಯನ್ನು ಹೆಚ್ಚಿಸುವುದರಲ್ಲಿ ಪಾತ್ರವಹಿಸುತ್ತವೆ.
ಅವುಗಳಲ್ಲಿ ಮುಖ್ಯವಾದುದು:
ಅ. ಸ್ಥೂಲ ಕಾಯ: (0besity) ಅತಿ ಸ್ಥೂಲ ಕಾಯದ ವ್ಯಕ್ತಿಗಳಲ್ಲಿ ಟೈಪ್ 2 ಮಧುಮೇಹ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು.
ಆ. ಆಲಸ್ಯ: ಆಲಸಿಯಾಗಿರುವ ಪ್ರವೃತ್ತಿಯಿರುವ, ಅಥವಾ ಒಂದೇ ಕಡೆ ಕುಳಿತು ಕೆಲಸ ಮಾಡುವಂತಹ ಕೆಲಸಗಳಲ್ಲಿ ತೊಡಗಿಕೊಂಡಿರುವವರು. (physical inactivity)
ಇ. ತಿಂಡಿಬಾಕತನ. (gluttony) ಇತ್ಯಾದಿ.

293 reads