Skip to main content

ದಾನಶೂರ ಬಿಲ್ ಗೇಟ್ಸನೂ, ನಮ್ಮ ಆರೋಗ್ಯವೂ

ನಮ್ಮ ಕಾಲದ ದಾನಶೂರನೆಂದು ಬಿಂ‍ಬಿಸಲ್ಪಡುತ್ತಿರುವ ಬಿಲ್ ಗೇಟ್ಸ್ ಮಹಾಶಯನ ದಾನಗಳ ಬಗ್ಗೆ ಲ‍ಂಡನ್ ವಿಶ್ವವಿದ್ಯಾಲಯದ ಡೇವಿಡ್ ಮೆಕಾಯ್, ಗಾಯತ್ರಿ ಕೆಂಭಾವಿ, ಜಿನೇಶ್ ಪಟೇಲ್ ಮತ್ತು ಅಕಿಶ್ ಲಿಂಟೆಲ್ ನಡೆಸಿದ ಅಧ್ಯಯನದ ವರದಿಯು ಪ್ರತಿಷ್ಠಿತ ವೈದ್ಯಕೀಯ ಪತ್ರಿಕೆಯಾದ ದಿ ಲಾಂಸೆಟ್ ನಲ್ಲಿ ಮೇ 9 ರಂದು ಪ್ರಕಟಗೊಂಡಿದೆ. ಈ ವರದಿಯ ಪ್ರಕಾರ, ಇದುವರೆಗೆ ಬಿಡುಗಡೆ ಮಾಡಿದ 8.95 ಬಿಲಿಯ ಡಾಲರುಗಳಲ್ಲಿ ಶೇ. 65ರಷ್ಟನ್ನು ಅಮೆರಿಕಾದಲ್ಲಿರುವ 20 ಸಂಸ್ಥೆಗಳಿಗೆ (ಅದರಲ್ಲಿ ಹಲವು ಗೇಟ್ಸ್ ನ ನೆಲೆಯಾದ ಸಿಯಟ್ಲ್ ನಲ್ಲೇ ಇರುವಂತವು) ನೀಡಲಾಗಿದೆ. (ಬಲಗೈಯಿಂದ ಕೊಟ್ಟು ಎಡಗೈಯಿಂದ ಪಡೆಯುವ ವ್ಯವಸ್ಥೆಯೇ?) ಇದರಲ್ಲಿ ಶೇ. 42ರಷ್ಟು ಹಣವನ್ನು ಆರೋಗ್ಯ ಸೇವೆಗಳ ದೊರಕುವಿಕೆಯನ್ನು ಹೆಚ್ಚಿಸುವ ಪ್ರಯತ್ನಗಳಿಗೂ, ಶೇ. 37ರಷ್ಟನ್ನು ಹೊಸ ಔಷಧಗಳು ಹಾಗೂ ಲಸಿಕೆಗಳ ಸಂಶೋಧನೆಗೂ ಒದಗಿಸಲಾಗಿದೆ. ಶೇ. ೭೫ರಷ್ಟು ನೆರವನ್ನು ಹೆಚ್ಐವಿ/ಏಡ್ಸ್, ಮಲೇರಿಯಾ, ಕ್ಷಯ ರೋಗಗಳೂ ಸೇರಿದಂತೆ ಆರು ಕ್ಷೇತ್ರಗಳಿಗೆ ಒದಗಿಸಲಾಗಿದೆ. ಇಂದು ವಿಶ್ವ ಆರೋಗ್ಯ ಸಂಸ್ಥೆಗೆ ಜಿ20 ರಾಷ್ಟ್ರಗಳು ಒಟ್ಟಾಗಿ ಒದಗಿಸುವುದಕ್ಕಿಂತ ಹೆಚ್ಚಿನ ಹಣವನ್ನು ಗೇಟ್ಸ್ ನಿಧಿಯು ನೀಡುತ್ತಿದೆ. ಬಿಲ್ ಗೇಟ್ಸ್ ಈ 'ದಾನವನ್ನು' ಸುಮ್ಮನೇ ನೀಡುತ್ತಿಲ್ಲ. ವಿಶ್ವದ ಆರೋಗ್ಯ ರಕ್ಷಣಾ ಕಾರ್ಯಕ್ರಮಗಳ ರೀತಿ-ನೀತಿಗಳನ್ನು ನಿರ್ಧರಿಸುವಲ್ಲಿ ಗೇಟ್ಸ್ ನಿಧಿ ಸಾಕಷ್ಟು ಪ್ರಭಾವವನ್ನು ಬೀರುತ್ತಿದೆ, ಹೆಚ್ 8 ಎಂಬ ಸ್ವಯಂ-ಘೋಷಿತ ಆರೋಗ್ಯ ನೀತಿ ನಿರ್ಧಾರಕ ಕೂಟದಲ್ಲಿ ವಿಶ್ವ ಆರೋಗ್ಯ ಸಂಸ್ಥೆ, ವಿಶ್ವ ಬ್ಯಾಂಕ್ ಇತ್ಯಾದಿಗಳ ಜೊತೆ ಗೇಟ್ಸ್ ನಿಧಿಯೂ ಸೇರಿದೆ. ಆದ್ದರಿಂದಲೇ, ಬಿಲ್ ಗೇಟ್ಸ್ ನೀಡುತ್ತಿರುವ ನೆರವಿನ ಬಗ್ಗೆ ಕೂಲಂಕಷವಾದ ಅಧ್ಯಯನವಾಗಬೇಕೆಂದು ಲೇಖಕರು ಅಭಿಪ್ರಾಯ ಪಟ್ಟಿದ್ದಾರೆ. ಗೇಟ್ಸ್ ನಿಧಿ ಪ್ರಾಯೋಜಿತ ಸಂಶೋಧನಾ ಪ್ರಬಂಧಗಳೆಲ್ಲ ಹೆಚ್ಚೇನೂ ಅಡ್ಡಿ ಆತಂಕಗಳಿಲ್ಲದೆಯೇ ಮಂಡನೆಯಾಗುತ್ತವೆ, ಆದ್ಯತೆಯೊಂದಿಗೆ ಪ್ರಕಟಗೊಳ್ಳುತ್ತವೆ. ಈ ಅಧ್ಯಯನಗಳಲ್ಲಿ 'ಹೊರಹೊಮ್ಮುವ' ಅಂಕಿ-ಅಂಶಗಳು ಜಗತ್ತಿನೆಲ್ಲೆಡೆಯ ಆರೋಗ್ಯ ರಕ್ಷಣೆಯ ನೀತಿ-ನಿಯಮಗಳನ್ನು ನಿರ್ಧರಿಸುವಲ್ಲಿ ಸಾಕಷ್ಟು ಪ್ರಭಾವವನ್ನು ಬೀರುತ್ತವೆ. ಒಂದು ಕಾಲಕ್ಕೆ ಸ್ವತಂತ್ರವಾಗಿ ಅಧ್ಯಯನಗಳನ್ನು ನಡೆಸುತ್ತಿದ್ದ ಹಲವಾರು ಅತ್ಯುತ್ತಮ ದರ್ಜೆಯ ಸಂಶೋಧಕರು ಇಂದು ಗೇಟ್ಸ್ ನಿಧಿಯ ಆಸೆಗೆ ಕಟ್ಟು ಬಿದ್ದಿರುವುದು ಕಂಡು ಬರುತ್ತಿದೆ. ಈ ಕಾರಣಕ್ಕಾಗಿಯೇ, ಮಲೇರಿಯಾ ಸಂಶೋಧನೆಯಲ್ಲಿಯೂ, ಮಲೇರಿಯಾ ಸಂಬಂಧಿ ನೀತಿಗಳ ನಿರೂಪಣೆಯಲ್ಲಿಯೂ ಗೇಟ್ಸ್ ನಿಧಿಯ ಹಣದಿಂದಾಗಿ ಬಹಳಷ್ಟು ತೊಂದರೆಗಳಾಗುತ್ತಿವೆಯೆಂದು ವಿಶ್ವ ಆರೋಗ್ಯ ಸಂಸ್ಥೆಯ ಮಲೇರಿಯಾ ವಿಭಾಗದ ಮುಖ್ಯಸ್ಥರಾಗಿದ್ದ ಅರಾಟಾ ಕೊಚಿ ಕಳೆದ ವರ್ಷ ಫೆಬ್ರವರಿಯಲ್ಲಿ ದೂರಿದ್ದರು. ನಮ್ಮ ನಿಮ್ಮ ಆರೋಗ್ಯ ರಕ್ಷಣೆಯಲ್ಲಿ ಬಿಲ್ ಗೇಟ್ಸ್ ಮಾತಿಗೆ ಎಲ್ಲಿಲ್ಲದ ಬೆಲೆ! ನಮ್ಮನ್ನು ವಿಶೇಷವಾಗಿ ಕಾಡುತ್ತಿರುವ ಮಲೇರಿಯಾ, ಕ್ಷಯ ಹಾಗೂ ಹೆಚ್ಐವಿ/ಏಡ್ಸ್ ಬಗ್ಗೆ ಗೇಟ್ಸ್ ಗೆ ವಿಪರೀತವಾದ ಕಾಳಜಿ. ಈ ಮೂರೂ ರೋಗಗಳಲ್ಲಿ ಒಂದು ಸಾಮ್ಯತೆಯಿದೆ. ಈ ರೋಗಗಳನ್ನುಂಟು ಮಾಡುವ ಸೂಕ್ಷ್ಮ ಜೀವಿಗಳು ನಮ್ಮ ರೋಗ ನಿರೋಧಕ ವ್ಯವಸ್ಥೆಯ ಕಣ್ಣು ತಪ್ಪಿಸಿ ವರ್ಷಗಟ್ಟಲೆ ನಮ್ಮ ದೇಹದೊಳಗೆ ಅಡಗಿ ಕುಳಿತಿರುವ ಸಾಮರ್ಥ್ಯವನ್ನು ಹೊಂದಿವೆ. ಹಾಗಾಗಿ, ಅವು ಸೋಂಕಿತನ ದೇಹದಲ್ಲಿ ಯಾವುದೇ ರೋಗಲಕ್ಷಣಗಳನ್ನುಂಟು ಮಾಡದೆಯೇ, ವರ್ಷಗಟ್ಟಲೆ ಉಳಿದು, ಹಲವರಿಗೆ ಹರಡಬಲ್ಲವು. ಆದ್ದರಿಂದಲೇ ಈ ರೋಗಗಳನ್ನು ಸಮುದಾಯದ ಮಟ್ಟದಲ್ಲಿ ನಿಯಂತ್ರಿಸುವುದು ಅಷ್ಟೊಂದು ಸುಲಭವಲ್ಲ ಮತ್ತು ಅವು ಹಲವು ಶತಮಾನಗಳಿಂದ ನಮ್ಮನ್ನು ಕಾಡುತ್ತಿವೆ, ಮುಂದೆಯೂ ಕಾಡಲಿವೆ. ಈ ರೋಗಗಳು ನಮ್ಮ ರೋಗ ನಿರೋಧಕ ವ್ಯವಸ್ಥೆಯನ್ನೇ ದಿಕ್ಕು ತಪ್ಪಿಸುವುದರಿಂದ ಅವುಗಳ ವಿರುದ್ಧ ಲಸಿಕೆಗಳ ತಯಾರಿಯು ಕಷ್ಟಕರವೆನಿಸುತ್ತಿದೆ. ಆದರೆ ಒಂದೊಮ್ಮೆ ಆ ಪ್ರಯತ್ನ ಸಫಲವಾದರೆ, ಜಗತ್ತಿನ ಜನರೆಲ್ಲಾ ಅವನ್ನು ಖರೀದಿಸಲೇಬೇಕೆಂದು ಒತ್ತಾಯಿಸಬಹುದಲ್ಲವೇ? (ಹೆಚ್ 8ಕ್ಕೆ ಬೇರೇನು ಕೆಲಸ?) ಅದೇ ರೀತಿ, ಕೋಟಿಗಟ್ಟಲೆ ಜನರನ್ನು ಕಾಡುತ್ತಿರುವ ಈ ರೋಗಗಳ ಪತ್ತೆ ಹಾಗೂ ಚಿಕಿತ್ಸೆಯೂ ಬಲು ದೊಡ್ಡ ವ್ಯಾಪಾರದ ಅವಕಾಶವೆಂದು ಬೇರೆ ಹೇಳಬೇಕೇ? ವರ್ಷಕ್ಕೆ 50 ಕೋಟಿಯಷ್ಟು ಮಲೇರಿಯಾ ಪ್ರಕರಣಗಳು, ಒಂದು ಕೋಟಿಯಷ್ಟು ಹೊಸ ಕ್ಷಯ ರೋಗದ ಪ್ರಕರಣಗಳು, ಒಟ್ಟು ಮೂರು ಕೋಟಿಗೂ ಮಿಕ್ಕಿದ ಹೆಚ್ಐವಿ ಪೀಡಿತರು; ಕ್ಷಯ ರೋಗಕ್ಕೆ 6-8 ತಿಂಗಳ ಚಿಕಿತ್ಸೆಯಾದರೆ, ಹೆಚ್ಐವಿಗೆ ವರ್ಷಗಟ್ಟಲೆ. ಅದಕ್ಕಾಗಿಯೇ ಈ ರೋಗಗಳನ್ನು ಪತ್ತೆ ಮಾಡುವ ಪರೀಕ್ಷೆಗಳನ್ನೂ, ಚಿಕಿತ್ಸೆಯ ಔಷಧಗಳನ್ನೂ ಮಾರಾಟ ಮಾಡುವ ಹಲವು ಕಂಪೆನಿಗಳಲ್ಲಿ ಗೇಟ್ಸ್ ಬಹಳಷ್ಟು ಹಣ ಹೂಡಿಯಾಗಿದೆ. ಕೋಟಿಗಟ್ಟಲೆ ಜನರನ್ನು ಬಾಧಿಸುತ್ತಿರುವ ಈ ರೋಗಗಳಿಗೆ ಯಾವ ಪರೀಕ್ಷೆಗಳನ್ನು ಮಾಡಬೇಕು, ಯಾವ ಔಷಧಗಳನ್ನು ಎಷ್ಟು ಬಳಸಬೇಕು ಎಂಬೆಲ್ಲಾ ನೀತಿಗಳನ್ನು ನಿರ್ಧರಿಸಲು ಹೇಗೂ ಹೆಚ್ 8 ಇದ್ದೇ ಇದೆಯಲ್ಲ? ಇನ್ನೊಂದೆಡೆ, ರಕ್ತದಲ್ಲಿ ಕೊಲೆಸ್ಟರಾಲ್ ಇಳಿಸುವ ಸ್ಟಾಟಿನ್ ಔಷಧವನ್ನು ತಯಾರಿಸುವ ಅತಿ ದೊಡ್ಡ ಕಂಪೆನಿಯಾದ ಫೈಜರ್ ನಲ್ಲಿಯೂ ಹಣ ಹೂಡಿರುವ ಬಿಲ್ ಗೇಟ್ಸ್, ರಕ್ತದ ಕೊಲೆಸ್ಟರಾಲ್ ಹೆಚ್ಚಲು ಮುಖ್ಯ ಕಾರಣಗಳಲ್ಲೊಂದಾದ ಶೀಘ್ರ ತಿನಿಸುಗಳನ್ನು ತಯಾರಿಸುವ ಹಲವಾರು ಕಂಪೆನಿಗಳೊಂದಿಗೆ ಸೇರಿಕೊಂಡು, ಈ ತಿನಿಸುಗಳಲ್ಲಿ ವೈಟಮಿನ್ ಬೆರೆಸಿ ಮಾರುವುದಕ್ಕೆ ನೆರವಾಗುತ್ತಿದ್ದಾರೆ! ಬಿಲ್ ಗೇಟ್ಸ್ ನಿಯಂತ್ರಣದಲ್ಲಿ ನಮ್ಮೆಲ್ಲರ ಆರೋಗ್ಯವು ಅತಿ ಸುರಕ್ಷಿತ!! ಜಾರ್ಜ್ ಬುಷ್ ಪಾಲಿಗೆ ಮಧುಮೇಹ ಹಾಗೂ ಖಿನ್ನತೆಗಳು (ಬುಷ್ ಆಡಳಿತದ ನೀತಿಗಳಿಂದ ಉಂಟಾಗಿರುವ ಆರ್ಥಿಕ ಹಿಂಜರಿತದಿಂದ ಲಕ್ಷಗಟ್ಟಲೆ ಅಮೆರಿಕನ್ನರು ಖಿನ್ನರಾದರೆ ಬುಷ್ ಒಡೆತನದ ಕಂಪೆನಿಗೆ ಒಳ್ಳೆಯ ಸುಗ್ಗಿ!), ರಮ್ಸ್ ಫೆಲ್ಡ್ ಪಾಲಿಗೆ ಕೋಳಿಜ್ವರ, ಹಂದಿಜ್ವರ ಇತ್ಯಾದಿಗಳು, ಬಿಲ್ ಗೇಟ್ಸ್ ಪಾಲಿಗೆ ಮಲೇರಿಯಾ, ಕ್ಷಯ, ಹೆಚ್ಐವಿ, ’ಕೊಲೆಸ್ಟರಾಲ್’ ಇತ್ಯಾದಿಗಳು ಕುಬೇರನ ಅರಮನೆಗೆ ಮೆಟ್ಟಲುಗಳಷ್ಟೆ. ಹೊಸತು: ದಿ ಲಾನ್ಸೆಟ್ ನಲ್ಲಿ ಡಾ| ಗೋಪಾಲ ದಾಬಡೆ ಪತ್ರ ; ಜೂನ್ 30ರ ದಿ ಹಿಂದೂ ವರದಿ (ಸೇರ್ಪಡೆ: ಜೂನ್ 30, 2009) ಹೆಚ್ಚಿನ ಮಾಹಿತಿ:

Comments

hpn's picture
ಇ-ಮೇಯ್ಲ್ ಮೂಲಕ ಆಗಲೇ ಕಳುಹಿಸಿದ್ದ ಲಿಂಕ್ ಇಲ್ಲಿ ಮತ್ತೆ ಸೇರಿಸುತ್ತಿರುವೆ. ಓದುಗರಿಗೆ ಸಹಾಯವಾಗಬಹುದು: http://business.in.com/article/cross-border/how-bill-gates-blew-$258-million-in-indias-hiv-corridor/852/1 ಬಿಲ್ ಗೇಟ್ಸ್ ಹಾಕಿದ ಲೆಕ್ಕಾಚಾರಗಳ ಹಿಂದು ಮುಂದು ಮೇಲಿನ ಲೇಖನದಲ್ಲಿದೆ :)