ಉಸಿರಾಟದ ಹೊಸ ಶಿಕ್ಷಕರು
ಉಸಿರಾಟದ ಹೊಸ ಶಿಕ್ಷಕರು
ಆರೋಗ್ಯ ಸಂಪದದಲ್ಲಿ
ಉಸಿರಾಟದ ಹೊಸ ಶಿಕ್ಷಕರು
ಹಲವು ವರ್ಷಗಳ ಹಿಂದೆ, ಅದೊಂದು ದಿನ, ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಒಂದು ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದೆ. ಯಾವುದೋ ಚಾನೆಲ್‌ನಿಂದ ಆಂಗ್ಲ ಮಹಿಳೆಯೊಬ್ಬಳು ಕೇಸರಿ ವಸ್ತ್ರಗಳನ್ನು ಧರಿಸಿ, ಯೋಗಾಸನದಲ್ಲಿ ಕುಳಿತು, ’ಓಂ’ ಶಬ್ದದ ಮಹಿಮೆಯನ್ನು ಆಂಗ್ಲ ಭಾಷೆಯಲ್ಲಿ ಬಣ್ಣಿಸುತ್ತಿದ್ದಳು. ವೈದ್ಯನಾದ ನನಗೆ ಸಹಜವಾಗಿಯೇ ಈ ಕಾರ್ಯಕ್ರಮದಲ್ಲಿ ಆಸಕ್ತಿ ಮೂಡಿ ತದೇಕ ಚಿತ್ತದಿಂದ ವೀಕ್ಷಿಸಲಾರಂಭಿಸಿದೆ.
’ನೀವು ಪ್ರತಿ ಬಾರಿಯೂ ’ಓಂ’ ಎಂದು ಉಚ್ಚರಿಸುವಾಗ, ಈ ಶಬ್ದದ ಮೂರು ಭಾಗಗಳಾದ ಒ,ಔ ಮತ್ತು ಅಂ ಗಳನ್ನೂ ಉಚ್ಚರಿಸುತ್ತಿರುತ್ತೀರಿ. ಓಂ ಎಂಬ ಮಹಾ ಶಬ್ದದ ಈ ಮೂರೂ ಉಪಸ್ವರಗಳಿಗೆ ತಮ್ಮದೇ ಆದ ವೈಶಿಷ್ಠ್ಯವಿದೆ. ಈ ಮೂರೂ ಉಪಸ್ವರಗಳು ನಮ್ಮ ಉಸಿರಾಟದಲ್ಲಿ ಮಹತ್ತರ ಪಾತ್ರವಹಿಸುತ್ತವೆ. ಓಂ ಶಬ್ದವನ್ನು ಉಚ್ಚರಿಸುವಾಗ, ಈ ಶಬ್ದದ ಮೊದಲ ಸ್ವರವು ನಾವು ತೆಗೆದುಕೊಳ್ಳುವ ಶ್ವಾಸವನ್ನು ಶ್ವಾಸಕೋಶಗಳ ಮೇಲ್ಗಡೆ ಭಾಗಗಳಿಗೆ , ಎರಡನೆಯ ಸ್ವರವು ಶ್ವಾಸವನ್ನು ಶ್ವಾಸಕೋಶಗಳ ಮಧ್ಯ ಭಾಗಕ್ಕೆ ಹಾಗೂ ಮೂರನೆಯ ಸ್ವರವು ಶ್ವಾಸವನ್ನು ಶ್ವಾಸಕೋಶಗಳ ಕೆಳ ಭಾಗಗಳಿಗೆ ಪ್ರವಹಿಸುವಂತೆ ಮಾಡುತ್ತವೆ. ಹೀಗಾಗಿ, ಓಂಕಾರವನ್ನು ಉಚ್ಚರಿಸುವುದರಿಂದ, ಶ್ವಾಸಕೋಶಗಳ ಎಲ್ಲಾ ಭಾಗಗಳಿಗೂ ಶ್ವಾಸದ ಪೂರೈಕೆಯಾಗುತ್ತದೆ ’ ಎಂದು ಆಕರ್ಷಕ ಹಸ್ತ ಮತ್ತು ಮುಖಮುದ್ರೆಗಳಿಂದ, ಅತ್ಯಂತ ಆತ್ಮ ವಿಶ್ವಾಸದಿಂದ ವಿವರಿಸುತ್ತಿದ್ದಳು.
ಈ ಒಂದು ಅಪೂರ್ವವಾದ ವಿವರಣೆಯಿಂದ ನಾನೂ ಮೊದಮೊದಲು ಸಂಪೂರ್ಣ ಪ್ರಭಾವಿತನಾದರೂ, ಮನದ ಯಾವುದೋ ಮೂಲೆಯಲ್ಲಿ, ಈ ವಿವರಣೆಯಲ್ಲಿ ಯಾವುದೋ ಅಸಹಜತೆಯಿದೆ ಎಂದೆನಿಸುತ್ತಿತ್ತು. ಆಗ ತಟ್ಟನೇ ಜ್ನಾನೋದಯವಾಯಿತು, ಆಕೆಯ ವಿವರಣೆ ಶುದ್ಧ ಸುಳ್ಳೆಂದು ! ನಾವು ಮಾತನಾಡುವಾಗ , ಶ್ವಾಸವನ್ನು ಧ್ವನಿಪೆಟ್ಟಿಗೆಯ ಮೂಲಕ ಹೊರತಳ್ಳುತ್ತಿರುತ್ತೇವೆಯೇ ಹೊರತು, ಶ್ವಾಸವನ್ನು ಒಳಗೆ ತೆಗದುಕೊಳ್ಳುವುದಿಲ್ಲ. ಹಾಗಾಗಿ, ನಾವು ಓಂ ಎಂದು ಉಚ್ಚರಿಸುವಾಗ, ಶ್ವಾಸವು ಶ್ವಾಸಕೋಶಗಳನ್ನು ಪ್ರವೇಶಿಸುವ ಸಂದರ್ಭವೇ ಇಲ್ಲ. ಆಕೆ ’ಓಂ’ ಶಬ್ದವನ್ನು ಉಚ್ಚರಿಸುವುದರಿಂದಾಗುವ ಲಾಭಗಳನ್ನು ಅತ್ಯಂತ ಅವೈಜ್ನಾನಿಕವಾಗಿ ಸಮರ್ಥಿಸಿಕೊಳ್ಳುತ್ತಿದ್ದಳು ! ಈ ಬಗ್ಗೆ ವಿವರಣೆ ಕೋರಿ ಆ ಚಾನೆಲ್ ನವರಿಗೆ ಪತ್ರ ಬರೆದಿದ್ದೆ. ಇದುವರೆಗೂ ಅವರಿಂದ ಯಾವ ಉತ್ತರವೂ ಬಂದಿಲ್ಲ.
ಇತ್ತೀಚೆಗೆ, ಈ ಬಗೆಯ ಅನೇಕ ಸ್ವಘೋಷಿತ ಉಸಿರಾಟದ ಶಿಕ್ಷಕರು ಅಥವಾ ಉಸಿರಾಟದ ಚಿಕಿತ್ಸಕರು ಉದ್ಭವಿಸಿದ್ದಾರೆ. ಪ್ರತಿಯೊಬ್ಬರೂ ತಾವು ಪ್ರತಿಪಾದಿಸುವ ಉಸಿರಾಟದ ಪದ್ಧತಿಗಳಿಗೆ ತಮ್ಮದೇ ಆದ (ಅ)ವೈಜ್ನಾನಿಕ ಸಮರ್ಥನೆಗಳನ್ನು ನೀಡುತ್ತಿದ್ದಾರೆ. ಅವರು ಪ್ರತಿಪಾದಿಸುವ ಮತ್ತು ಘೋಷಿಸುವ ಯಾವುದೇ ವಿಷಯಕ್ಕೂ ನನ್ನ ಆಕ್ಷೇಪವಿಲ್ಲ. ಅವರು ಪ್ರಚುರಪಡಿಸುತ್ತಿರುವ ವಿಧಾನಗಳಿಂದಾಗುವ ಯಾವ ಪ್ರಭಾವವನ್ನೂ ನಾನು ಪ್ರಶ್ನಿಸುವುದಿಲ್ಲ. ಆದರೆ ತಮ್ಮ ವಿಧಾನಗಳಿಗೆ ಅವರು ಕೊಡುವ ಈ (ಅ)ವೈಜ್ನಾನಿಕ ಸಮರ್ಥನೆಗಳಿಗೆ ಮಾತ್ರ ನನ್ನ ಪ್ರತಿರೋಧವಿದೆ.
ಬಹಳ ಸಾಮಾನ್ಯವಾಗಿ ನೀಡುವ ಸಮರ್ಥನೆಯೆಂದರೆ, ಈ ಬಗೆಯ ಕ್ರಿಯೆಗಳಿಂದ ದೇಹಕ್ಕೆ ಹೆಚ್ಚು ಆಮ್ಲಜನಕ ದೊರೆಯುತ್ತದೆ ಎಂದು. ಇದರೆ ಬಗ್ಗೆ ಸ್ವಲ್ಪ ಗಮನ ಹರಿಸೋಣ. ನಾವು ಜೀವಂತವಾಗಿರಲು ನಮಗೆ ಬಹಳ ಅಗತ್ಯವಾದ ಮೂರು ಅಂಶಗಳಿವೆ. ಅವುಗಳೆಂದರೆ, ಆಹಾರ, ನೀರು ಮತ್ತು ಆಮ್ಲಜನಕ. ಒಂದು ವೇಳೆ, ಯಾವುದೇ ಕಾರಣದಿಂ ಬಹಳಷ್ಟು ದಿನಗಳ ಕಾಲ ನಮ್ಮ ದೇಹಕ್ಕೆ ಆಹಾರ ಮತ್ತು ನೀರು ದೊರೆಯದೇ ಹೋದಾಗ, ದೇಹದಲ್ಲಿ ಶೇಖರಿಸಿಟ್ಟಿರುವ ಆಹಾರವನ್ನೇ ಬಳಸಿಕೊಂಡು ಜೀವಿಸಿರಲು ಸಾಧ್ಯವಿದೆ. ಆದರೆ, ಆಮ್ಲಜನಕದ ವಿಷಯದಲ್ಲಿ ಮಾತ್ರ ಹಾಗಿಲ್ಲ. ನಮ್ಮ ದೇಹಕ್ಕೆ ಆಮ್ಲಜನಕ ಕೇವಲ ಕೆಲವು ನಿಮಿಷಗಳಷ್ಟು ಕಾಲ ದೊರೆಯದೇ ಹೋದರೂ, ಮರಣ ಸಂಭವಿಸಬಹುದಾಗಿದೆ. ಇದನ್ನು ಅರ್ಥಮಾಡಿಕೊಳ್ಳಲು ನಾನು ಈ ಉದಾಹರಣೆ ಕೊಡುತ್ತೇನೆ. ಜಲಮಂಡಳಿಯವರು ಒಂದು ಪ್ರಕಟಣೆ ಹೊರಡಿಸಿ, ನೀರಿನ ಸರಬರಾಜಿನಲ್ಲಿ ಮುಂದಿನ ಎರಡು ಮೂರು ದಿನಗಳ ಕಾಲ ಅಡಚಣೆಯಿದೆಯಾದ ಕಾರಣ, ಈ ದಿನವೇ ಸಾಕಷ್ಟು ನೀರನ್ನು ಸಂಗ್ರಹಿಸಿಟ್ಟುಕೊಳ್ಳಬೇಕೆಂದು ಸಾರ್ವಜನಿಕರಿಗೆ ಸೂಚನೆಕೊಟ್ಟಲ್ಲಿ, ಸ್ವಲ್ಪ ಕಷ್ಟವಾದರೂ ಅವರ ಸೂಚನೆಯನ್ನು ಪಾಲಿಸಲು ಸಾಧ್ಯವಿದೆ. ಆದರೆ, ಇಂತಹುದೇ ಆದೇಶವನ್ನು ವಿದ್ಯುತ್ ಮಂಡಲಿಯವರು ನೀಡಿದರೆ ಅದನ್ನು ಪಾಲಿಸಲು ಸಾಧ್ಯವೇ ? ವಿದ್ಯುತ್ತನ್ನು ಶೇಖರಿಸಿಟ್ಟುಕೊಳ್ಳುವಂತಹ ವ್ಯವಸ್ಥೆ ನಮ್ಮಲ್ಲಿಲ್ಲ. ಅಂತೆಯೇ, ನಮಗೆ ದೊರೆಯಬಹುದಾದ ಹೆಚ್ಚು ಆಮ್ಲಜನಕವನ್ನು ನಾವು ಶೇಖರಿಸಿಟ್ಟುಕೊಳ್ಳಲು ನಮ್ಮ ದೇಹದಲ್ಲಿ ಯಾವುದೇ ವ್ಯವಸ್ಥೆಯಿಲ್ಲ.
ನಮ್ಮ ದೇಹಕ್ಕೆ ಬೇಕಾಗುವ ಆಮ್ಲಜನಕದ ಪ್ರಮಾಣದಲ್ಲಾಗುವ ಏರುಪೇರುಗಳನ್ನು ಗಮನಿಸಿ ತಕ್ಷಣವೇ ಅದಕ್ಕೆ ಪ್ರತಿಕ್ರಿಯಿಸುವಂತಹ ಒಂದು ಅದ್ಭುತ ಏರ್ಪಾಟು ನಮ್ಮ ದೇಹದಲ್ಲಿದೆ. ನೀವೇ ಇದನ್ನು ಗಮನಿಸಿ ನೋಡಿ. ನೀವು ಆರಾಮ ಕುರ್ಚಿಯಲ್ಲಿ ಕುಳಿತು ವಿರಮಿಸುತ್ತಿರುವಾಗ ನಿಮ್ಮ ಉಸಿರಾಟದ ಆಳ ಮತ್ತು ವೇಗವನ್ನು ಗಮನಿಸಿ. ಈಗ, ಕುರ್ಚಿಯಿಂದ ಎದ್ದು ಕೆಲವು ನಿಮಿಷಗಳಷ್ಟು ಕಾಲ ನಿಮಗೆ ತೋಚಿದ ಯಾವುದೇ ಬಗೆಯ ವ್ಯಾಯಾಮವನ್ನು ಮಾಡಿ. ನಿಮ್ಮ ಉಸಿರಾಟದಲ್ಲಾಗಿರುವ ಬದಲಾವಣೆಯನ್ನು ಗಮನಿಸಿ. ನಿಮ್ಮ ಉಸಿರಾಟದ ಆಳ ಮತ್ತು ವೇಗ ಹೆಚ್ಚಾಗಿರುವುದನ್ನು ನೀವು ಗಮನಿಸಬಹುದು. ಇದು ಅನೈಚ್ಛಿಕವಾಗಿ ಆದಂತಹ ಬದಲಾವಣೆ.
ನಮ್ಮ ಮಿದುಳಿನ ಒಂದು ಭಾಗವಾದ ಮೆಡುಲ್ಲಾ ಒಬ್ಲಾಂಗೇಟಾದಲ್ಲಿ ನಮ್ಮ ಉಸಿರಾಟದ ಉಸ್ತುವಾರಿಯನ್ನು ನೋಡಿಕೊಳ್ಳುವ ಕೇಂದ್ರವಿದೆ. ಈ ಕೇಂದ್ರ ಸದಾ ಜಾಗೃತವಾಗಿದ್ದು (ನಾವು ನಿದ್ರಿಸುವ ಸಮಯದಲ್ಲೂ), ನಮ್ಮ ದೇಹದ ಆಮ್ಲಜನಕದ ಅವಶ್ಯಕತೆ ಮತ್ತು ಪೂರೈಕೆಯ ಬಗ್ಗೆ ನಿಗಾ ಇರಿಸಿರುತ್ತದೆ. ನಮ್ಮ ದೇಹದ ಅಗತ್ಯಕ್ಕೆ ತಕ್ಕಂತೆ ನಮ್ಮ ಉಸಿರಾಟದಲ್ಲಿ ಸೂಕ್ತ ಮಾರ್ಪಾಟನ್ನು ಮಾಡುತ್ತಿರುತ್ತದೆ. ನಮ್ಮ ರಕ್ತದಲ್ಲಿನ ಆಮ್ಲಜನಕದ ಪ್ರಮಾಣದಲ್ಲಿ ಸೂಕ್ಷ್ಮವಾದ ವ್ಯತ್ಯಾಸವಾದರೂ ಇದಕ್ಕೆ ತಕ್ಕಂತೆ ಸ್ಪಂದಿಸುತ್ತದೆ.
ಪ್ರಾಣಿಗಳಲ್ಲಿ ಉಸಿರಾಟವು ಸಂಪೂರ್ಣ ಅನೈಚ್ಛಿಕ ಕ್ರಿಯೆಯಾಗಿರುತ್ತದೆ. ಆದರೆ ಮಾನವ ದೇಹದಲ್ಲಿ ಉಸಿರಾಟವು ಬಹುತೇಕ ಅನೈಚ್ಛಿಕ ಕ್ರಿಯೆಯಾದರೂ ಸ್ವಲ್ಪಮಟ್ಟಿನ ಐಚ್ಛಿಕ ನಿಯಂತ್ರಣ ಸಾಧ್ಯವಿದೆ. ಪ್ರಕೃತಿ ಮಾನವನಿಗೆ ಈ ಒಂದು ರಿಯಾಯಿತಿಯನ್ನು ನೀಡಿರುವುದರಿಂದಲೇ ಮಾನವನಿಗೆ ವಾಕ್ ಶಕ್ತಿ ಲಭ್ಯವಾಗಿದೆ. ಉಸಿರನ್ನು ಶ್ಯಾಸಕೋಶಗಳಲ್ಲಿ ಎಳೆದುಕೊಂಡು ಅದನ್ನು ಐಚ್ಚ್ಛಿಕ ನಿಯಂತ್ರಣದಿಂದ ಧ್ವನಿಪೆಟ್ಟಿಗೆಯ ಮೂಲಕ ಹಾಯಿಸುವುದರಿಂದ ನಮಗೆ ಮಾತನಾಡಲು ಸಾಧ್ಯವಾಗುತ್ತದೆ. ದಿನದ ಅತಿ ಹೆಚ್ಚಿನ ಸಮಯದಲ್ಲಿ ಉಸಿರಾಟವು ಮಾನವನಲ್ಲಿ ಕೂಡ ಅನೈಚ್ಛಿಕವಾಗಿರುತ್ತದೆ.
ನಮ್ಮ ಸಹಜ ಉಸಿರಾಟದಲ್ಲಿ ಉಚ್ಚ್ವಾಸ ಮತ್ತು ನಿಶ್ವಾಸಗಳೆಂಬ ಎರಡು ಕ್ರಿಯೆಗಳಿವೆ. ಶ್ವಾಸಕೋಶಗಳಿಗೆ ಉಸಿರನ್ನು ತುಂಬುವ ಉಚ್ಚ್ವಾಸ ಕ್ರಿಯೆಯು ಸಚೇತಕವಾದ ಕ್ರಿಯೆಯಾಗಿದ್ದರೆ, ಉಸಿರನ್ನು ಹೊರಬಿಡುವ ನಿಶ್ವಾಸ ಕ್ರಿಯೆಯು ನಿರಾಯಾಸ ಕ್ರಿಯೆಯಾಗಿರುತ್ತದೆ. ಅರ್ಥಾತ್, ಶ್ವಾಸಕೋಶದಿಂದ ಉಸಿರನ್ನು ಹೊರದೂಡುವ ಕ್ರಿಯೆಯಲ್ಲಿ ನಾವು ಎಳ್ಳಷ್ಟು ಶಕ್ತಿಯನ್ನೂ ವ್ಯಯಿಸುವ ಅಗತ್ಯವಿಲ್ಲ. ಒಂದು ಬಲೂನಿಗೆ ಗಾಳಿ ತುಂಬುವ ಪ್ರಕ್ರಿಯೆಗೆ ಇದನ್ನು ಹೋಲಿಸಬಹುದು. ಬಲೂನಿನಲ್ಲಿ ಗಾಳಿಯನ್ನು ತುಂಬುವಾಗ ನಾವು ಸ್ವಲ್ಪ ಶ್ರಮ ವಹಿಸಬೇಕಾಗುತ್ತದೆ. ಆದರೆ, ಬಲೂನಿನ ಬಾಯಿಯನು ತೆರೆದಕೂಡಲೇ, ಬಲೂನಿನ ರಬ್ಬರಿನ ಸ್ಥಿತಿಸ್ಥಾಪಕ ಗುಣದಿಂದ, ಗಾಳಿಯು ಯಾವ ಶ್ರಮವಿಲ್ಲದೇ ಹೊರದೂಡಲ್ಪಡುತ್ತದೆ. ಕಪಾಲಭಾತಿಯಲ್ಲಿ ನಾವು ಉಚ್ಚ್ವಾಸ ಮತ್ತು ನಿಶ್ವಾಸಗಳೆರಡಕ್ಕೂ ಶಕ್ತಿಯನ್ನು ವ್ಯಯಿಸಬೇಕಾಗುತ್ತದೆ. ನಿಶ್ವಾಸಕ್ಕಾಗಿ, ಕೆಲವು ಬಲವಾದ ಸ್ನಾಯುಗಳನ್ನು ಬಳಸುವುದರಿಂದ , ಬಹಳಷ್ಟು ಶಕ್ತಿ ವ್ಯಯವಾಗುತ್ತದೆ. ಹೀಗಾಗಿ, ಕಪಾಲಭಾತಿಯು ಒಂದು ಪ್ರಭಾವಕಾರಿಯಾದ ವ್ಯಾಯಾಮವೆನಿಸಿದರೂ , ಒಂದು ಬಗೆಯ ಅಸಹಜ ಉಸಿರಾಟವಾಗಿರುತ್ತದೆ.
ನಮ್ಮ ಉಸಿರಾಟದ ಮೇಲೆ ಸ್ವಲ್ಪಮಟ್ಟಿನ ಹತೋಟಿ ಸಾಧ್ಯವಿದೆ ಎಂದು ನಾನಾಗಲೇ ಹೇಳಿದೆ. ಈ ಹತೋಟಿಗೂ ಇತಿಮಿತಿಯಿದೆ. ಒಂದು ದಿಸೆಯಲ್ಲಿ, ನಾವು ಉಸಿರನ್ನು ಐದು ನಿಮಿಷಗಳಿಗಿಂತಲೂ ಹೆಚ್ಚು ಸಮಯ ಹಿಡಿದಿಡಲಾರದಂತಹ ಮಿತಿಯಿದ್ದರೆ, ಇನ್ನೊಂದು ದಿಸೆಯಲ್ಲಿ ನಾವು ನಮ್ಮ ಉಸಿರಾಟವನ್ನು ಅತಿ ರಭಸವಾಗಿ ನಡೆಸಲು ಒಂದು ನಿಮಿಷಕ್ಕಿಂತಲೂ ಹೆಚ್ಚು ಸಮಯ ಸಾಧ್ಯವಿಲ್ಲದಿರುವುದು. ಒಂದು ವೇಳೆ ನಾವು ನಮ್ಮ ಉಸಿರನ್ನು ಕೆಲವು ನಿಮಿಷಗಳಷ್ಟು ಕಾಲ ತಡೆ ಹಿಡಿಯಲು ಯತ್ನಿಸಿದರೆ, ಎರಡು ಮೂರು ನಿಮಿಷಗಳ ನಂತರ ಅಪ್ರಯತ್ನದಿಂದ ಉಸಿರನ್ನು ಎಳೆದುಕೊಳ್ಳುವ ಅವಸ್ಥೆ ಉಂಟಾಗುತ್ತದೆ. ಅದೇ ರೀತಿ ನಾವು ಅತಿ ರಭಸದಿಂದ ಉಸಿರಾಟವಾಡಲು ತೊಡಗಿದಲ್ಲಿ , ಒಂದೇ ನಿಮಿಷದಲ್ಲಿ ಅನೈಚ್ಛಿಕವಾಗಿ ನಮ್ಮ ಉಸಿರಾಟ ಸ್ವಲ್ಪ ಸಮಯ ಸ್ತಬ್ಧಗೊಳ್ಳುತ್ತದೆ.
ನಮ್ಮ ಉಸಿರಾಟದ ಮೇಲೆ ಸ್ವಲ್ಪವಾದರೂ ಹತೋಟಿಯಿದೆಯೆಂದೇ ಈ ಉಸಿರಾಟದ ಶಿಕ್ಷಕರಿಗೆ ತಮ್ಮ ವಿಧವಿಧವಾದ ಪ್ರಯೋಗಗಳ ಬಗ್ಗೆ ಮಾತನಾಡಲು ಅವಕಾಶವುಂಟಾಗಿದೆ. ನಮ್ಮ ಹೃದಯದ ಕಾರ್ಯದಂತೆಯೇ ಉಸಿರಾಟವೂ ಸಂಪೂರ್ಣ ಅನೈಚ್ಛಿಕ ಕ್ರಿಯೆಯಾಗಿದ್ದಿದ್ದರೆ ಇವರ ಯಾವ ’ಉಪದೇಶ’ಕ್ಕೂ ಆಸ್ಪದವಿರುತ್ತಿರಲಿಲ್ಲ. ಸರಿಯಾಗಿ ಉಸಿರಾಟವನ್ನು ಮಾಡಲು ನಮಗೆ ನಿರ್ದೇಶನವನ್ನು ನೀಡುವ ಇವರಿಗೆ ನನ್ನದೊಂದು ಚಿಕ್ಕ ಸವಾಲು. ತಮ್ಮ ಉಸಿರಾಟವನ್ನು ಐದು ನಿಮಿಷಗಳ ಕಾಲ ಸ್ತಬ್ಧಗೊಳಿಸಿ ಉಸಿರಾಟದ ಮೇಲೆ ತಮಗಿರುವ ಪ್ರಭುತ್ವವನ್ನು ಮನದಟ್ಟು ಮಾಡಿಕೊಡಲಿ. ಟಿವಿಯ ಇನ್ನೊಂದು ಚಾನೆಲ್ ನಲ್ಲಿ ಮತ್ತೊಬ್ಬ ’ಉಸಿರಾಟದ ಶಿಕ್ಷಕರು’ ಈ ರೀತಿ ಹೇಳುತ್ತಿದ್ದರು. ’ನೀವು ಉಸಿರಾಡುವಾಗ ನಿಮ್ಮ ಹೊಟ್ಟೆಯ ಭಾಗ ಹಿಂದೆ ಮುಂದೆ ಚಲಿಸುತ್ತಿದ್ದರೆ, ನೀವು ಉಸಿರಾಡುವ ವಿಧಾನ ಸರಿಯಿಲ್ಲ’ ಎಂದು. ಈ ಹೇಳಿಕೆಯೂ ಸರಿಯಲ್ಲ. ನಮಗೆ ಇನ್ನೂ ಸ್ಪಷ್ಟವಾಗಿರದ ಕಾರಣಗಳಿಂದ, ಪುರುಷರು ಉಸಿರಾಡುವಾಗ ಹೊಟ್ಟೆಯ ಭಾಗ ಪ್ರಧಾನವಾಗಿ ಚಲಿಸಿದರೆ, ಸ್ತ್ರೀಯರು ಉಸಿರಾಡುವಾಗ ಎದೆಯ ಭಾಗ ಪ್ರಧಾನವಾಗಿ ಚಲಿಸುವುದು ಸಹಜವಾಗಿದೆ.
ಈ ಉಸಿರಾಟದ ಶಿಕ್ಷಕರ ನೆರವಿಲ್ಲದೇ , ಇದುವರೆಗೂ ಮನುಜ ಕುಲ ಅದು ಹೇಗೆ ಉಳಿದುಕೊಂಡು ಬಂದಿದೆಯೋ ಎಂದು ನನಗೆ ಕೆಲವೊಮ್ಮೆ ಅಚ್ಚರಿಯಾಗುತ್ತದೆ !
ಅದೇನೇ ಇರಲಿ, ಒಟ್ಟಾರೆ ಹೇಳುವುದಾದರೆ, ನಮ್ಮ ಉಸಿರಾಟದ ಉಸ್ತುವಾರಿಯನ್ನು ನಾವು ನೋಡಿಕೊಳ್ಳುವ ಅಗತ್ಯವಿಲ್ಲ. ಅದಕ್ಕೆ ಪ್ರಕೃತಿಯೇ ಸೂಕ್ತ ವ್ಯವಸ್ಥೆಯನ್ನು ಮಾಡಿದೆ. ನಾವು ನೆಮ್ಮದಿಯಿಂದ ಉಸಿರಾಡಿದರೆ ಅಷ್ಟೇ ಸಾಕು !
*****************
ಡಾ. ಕ. ರಮೇಶ ಬಾಬು,
- 7010 reads

Comments
Post new comment