ಚಿಕುನ್ ಗುನ್ಯಾಕ್ಕೆ ಚಿಕಿತ್ಸೆ: ಇಲ್ಲವೋ ಅಥವಾ ಬೇಡವೋ?
ಚಿಕುನ್ ಗುನ್ಯಾಕ್ಕೆ ಚಿಕಿತ್ಸೆ: ಇಲ್ಲವೋ ಅಥವಾ ಬೇಡವೋ?
ಆರೋಗ್ಯ ಸಂಪದದಲ್ಲಿ
ಉತ್ತರ ಕರ್ನಾಟಕದ ವಿವಿಧ ಭಾಗಗಳ ಜನರನ್ನು ಈಗಾಗಲೇ ಕಾಡಿದ ಚಿಕುನ್ ಗುನ್ಯಾ ಸೋಂಕು ಇದೀಗ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರವೇಶಿಸಿದೆ. ಸಾವಿರಾರು ಜನ ಸೋಂಕನ್ನು ತಗಲಿಸಿಕೊಂಡಿದ್ದು, ಅದರ ನಿಯಂತ್ರಣಕ್ಕೆ ಸರಕಾರವು 'ಸಮರೋಪಾದಿಯಲ್ಲಿ' ಕಾರ್ಯಪ್ರವೃತ್ತವಾಗಿದೆ'ಯೆಂದು ಈಗಾಗಲೇ ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಬಗ್ಗೆ ಸರಕಾರದ ಜಾಹೀರಾತೊಂದು ನಾಡಿನ ಪ್ರಮುಖ ದೈನಿಕಗಳಲ್ಲಿ ಪ್ರಕಟವಾಗಿದೆ. ಅದರಲ್ಲಿ, ಚಿಕುನ್ ಗುನ್ಯಾ ರೋಗವು 8-10 ದಿನಗಳಲ್ಲಿ ತನ್ನಿಂದ ತಾನೇ ಗುಣ ಹೊಂದುತ್ತದೆಯೆಂದು ಒಂದೆಡೆ ಹೇಳಲಾಗಿದ್ದರೆ, ಇನ್ನೊಂದೆಡೆ ಜೀವರಕ್ಷಕ ಔಷಧಗಳ ಸರಬರಾಜನ್ನು ಮಾಡಲಾಗುತ್ತಿದೆಯೆಂದು ಹೇಳಲಾಗಿದೆ; ಅಲ್ಲದೆ ಅದರ ನಿಯಂತ್ರಣಕ್ಕೆ ಆಯುರ್ವೇದ ಮತ್ತು ಹೋಮಿಯೋಪತಿ ಔಷಧಿಗಳು ಪರಿಣಾಮಕಾರಿಯಾಗಿದ್ದು ಅವನ್ನು ಸಹ ಉಪಯೋಗಿಸಬಹುದು ಎಂದು ಹೇಳಲಾಗಿದೆ.
ಒಂದೇ ಜಾಹೀರಾತಿನಲ್ಲಿ ಪ್ರಕಟಗೊಂಡಿರುವ ಈ ವಿಭಿನ್ನವಾದ ಸರಕಾರಿ ಹೇಳಿಕೆಗಳು ಚಿಕುನ್ ಗುನ್ಯಾ ರೋಗದ ಬಗ್ಗೆ ಸರಕಾರದಲ್ಲಿರುವ (ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳಲ್ಲಿರುವ) ಗೊಂದಲವನ್ನು ಸೂಚಿಸುವುದಷ್ಟೇ ಅಲ್ಲ, ಸಾರ್ವಜನಿಕರಲ್ಲಿ ಹಲವಾರು ಸಂಶಯಗಳಿಗೂ, ಗೊಂದಲಗಳಿಗೂ ಕಾರಣವಾಗಿ, ಪ್ರಯೋಜನಕ್ಕಿಂತ ಹೆಚ್ಚು ತೊಂದರೆಯನ್ನೇ ಉಂಟುಮಾಡಬಹುದು.
ಚಿಕುನ್ ಗುನ್ಯಾ ರೋಗವು ಹೆಣ್ಣು ಈಡಿಸ್ ಸೊಳ್ಳೆಗಳಿಂದ ಹರಡಲ್ಪಡುವ ವೈರಾಣುವಿನಿಂದ ಉಂಟಾಗುವ ಸೋಂಕುರೋಗವಾಗಿದ್ದು, ಒಂದು ವಾರದಲ್ಲಿ ತನ್ನಿಂತಾನೇ ಗುಣವಾಗುತ್ತದೆ; ಅದರಿಂದಾಗಿ ಗಂಭೀರವಾದ ಸಮಸ್ಯೆಗಳಾಗಲೀ, ಸಾವುಗಳಾಗಲೀ ಉಂಟಾಗುವುದಿಲ್ಲ. ಹಾಗಿದ್ದ ಮೇಲೆ, ಅದರ ಚಿಕಿತ್ಸೆಗೆ ಜೀವರಕ್ಷಕ ಔಷಧಗಳ ಅಗತ್ಯವೇನೆಂದಾಗಲೀ, ಯಾವ ಜೀವರಕ್ಷಕ ಔಷಧಗಳನ್ನು ಸರಕಾರವು ಯಾಕಾಗಿ ಸರಬಾಜು ಮಾಡುತ್ತಿದೆಯೆಂದಾಗಲೀ ಅರ್ಥವಾಗುವುದಿಲ್ಲ. ತನ್ನಿಂದ ತಾನೇ ಗುಣವಾಗುವ ಈ ಕಾಹಿಲೆಗೆ ನಿರ್ದಿಷ್ಟ ಚಿಕಿತ್ಸೆಯ ಅಗತ್ಯವಿಲ್ಲ, ಸಂಧಿಗಳಲ್ಲಿ ವಿಪರೀತವಾದ ನೋವಿದ್ದರೆ ಸರಳವಾದ ನೋವುನಿವಾರಕಗಳನ್ನಷ್ಟೇ (ಉದಾ: ಪಾರಾಸಿಟಮಾಲ್) ಬಳಸಿದರೆ ಸಾಕಾಗುತ್ತದೆ. ಹೆಚ್ಚು ಶಕ್ತಿಯುತವಾದ ನೋವುನಿವಾರಕಗಳನ್ನಾಗಲೀ, ಸ್ಟೀರಾಯ್ಡ್ ಔಷಧಗಳನ್ನಾಗಲೀ ಬಳಸುವುದರಿಂದ ಕಾಯಿಲೆಯು ಉಲ್ಬಣಿಸುವ ಅಥವಾ ಔಷಧಗಳಿಂದಲೇ ತೊಂದರೆಗಳಾಗುವ ಸಾಧ್ಯತೆಗಳಿವೆ. ವಸ್ತುಸ್ಥಿತಿಯು ಹೀಗಿರುವಾಗ, ಆಧುನಿಕ ವೈದ್ಯಶಾಸ್ತ್ರದಲ್ಲಿ ಚಿಕುನ್ ಗುನ್ಯಾ ರೋಗಕ್ಕೆ ಚಿಕಿತ್ಸೆಯೇ ಇಲ್ಲ ಎಂದು ಹೇಳುವುದು ಸತ್ಯಕ್ಕೆ ಅಪಚಾರವಾಗುತ್ತದೆ. ಮೊನ್ನೆ ನಡೆದ ದ.ಕ. ಜಿಲ್ಲಾ ಪಂಚಾಯತ್ತಿನ ಸಭೆಯಲ್ಲಿ ಶಾಸಕರೊಬ್ಬರು, 'ವೈದ್ಯ ವಿಜ್ಞಾನ ಇಷ್ಟೆಲ್ಲ ಮುಂದುವರಿದಿದೆ, ಈ ರೋಗಕ್ಕೆ ಮದ್ದಿಲ್ಲ ಎಂದರೆ ಹೇಗೆ' ಎಂದು ಖೇದ ವ್ಯಕ್ತ ಪಡಿಸಿದರಂತೆ. 'ಚಿಕಿತ್ಸೆಯು ಇಲ್ಲ' ಎಂದಲ್ಲ, ಅದರ 'ಅಗತ್ಯವಿಲ್ಲ', ಅಷ್ಟೇ. ಇವೆರಡರ ನಡುವೆ ಅಜಗಜಾಂತರವಿದೆ. 'ಚಿಕಿತ್ಸೆಯೇ ಇಲ್ಲ' ಎಂದೊಡನೆ ರೋಗಪೀಡಿತರು ಕಂಗಾಲಾಗಿಬಿಡುವುದು ಸಹಜವೇ. 'ಅಗತ್ಯವಿಲ್ಲ' ಎಂದರೆ, ರೋಗಪೀಡಿತರಿಗೆ ಧೈರ್ಯ ತುಂಬುತ್ತದೆ, ರೋಗವು ಗುಣಹೊಂದುವ ಬಗ್ಗೆ ಆತ್ಮವಿಶ್ವಾಸ ಮೂಡುತ್ತದೆ.
ರೋಗನಿಯಂತ್ರಣಕ್ಕೆ ಆಯುರ್ವೇದ ಮತ್ತು ಹೋಮಿಯೋಪತಿ ಔಷಧಿಗಳು ಪರಿಣಾಮಕಾರಿಯಾಗಿವೆ ಎಂಬ ಸರಕಾರದ ಹೇಳಿಕೆಗೆ ಆಧಾರಗಳೇನು ಎನ್ನುವುದು ಸ್ಪಷ್ಟವಿಲ್ಲ.
ವಿಶ್ವ ಆರೋಗ್ಯ ಸಂಸ್ಥೆಯಾಗಲೀ, ಭಾರತದ ರಾಷ್ಟ್ರೀಯ ಕೀಟಜನ್ಯ ರೋಗ ನಿಯಂತ್ರಣ ಕಾರ್ಯಕ್ರಮದಲ್ಲಾಗಲೀ ಈ ಬಗ್ಗೆ ಮಾಹಿತಿಯಿಲ್ಲ. ಹಾಗಿರುವಾಗ, ಈ ಔಷಧಗಳನ್ನು ಸರಕಾರವು ಪೂರೈಸುವುದಾಗಲೀ, ಅದನ್ನು ಬಳಸುವಂತೆ ಸಾರ್ವಜನಿಕರಿಗೆ ಹೇಳುವುದಾಗಲೀ ಸಮಂಜಸವೆನಿಸುವುದಿಲ್ಲ. ಈ ಕುರಿತು, ದ.ಕ. ಜಿಲ್ಲೆಯ ವಿಚಾರವಾದಿ ಸಂಘದಿಂದ ಜಿಲ್ಲಾ ಆರೋಗ್ಯಾಧಿಕಾರಿಗಳಿಗೊಂದು ಬಹಿರಂಗ ಪತ್ರವನ್ನು ಬರೆಯಲಾಗಿದೆ.
ಜಿಲ್ಲಾ ಆರೋಗ್ಯಾಧಿಕಾರಿಗಳಿಗೊಂದು ಬಹಿರಂಗ ಪತ್ರ
ಇತ್ತೀಚಿನ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕೆಲ ಭಾಗಗಳಲ್ಲಿ ಚಿಕುನ್ ಗುನ್ಯಾ ಜ್ವರವು ಹರಡುತ್ತಿರುವ ಬಗ್ಗೆ ವರದಿಯಾಗಿದೆ. ವೈರಸ್ ನಿಂದ ಉಂಟಾಗುವ ಈ ಸೋಂಕುರೋಗವು ಹೆಣ್ಣು ಈಡಿಸ್ ಈಜಿಪ್ಟೈ ಎಂಬ ಸೊಳ್ಳೆಗಳ ಮೂಲಕ ಒಬ್ಬರಿಂದೊಬ್ಬರಿಗೆ ಹರಡುತ್ತದೆಯೆನ್ನುವುದು ಸರ್ವವಿದಿತವಾಗಿದೆ. ಸೋಂಕು ತಗಲಿದವರಲ್ಲಿ ಜ್ವರ, ಸಂಧಿಗಳಲ್ಲಿ ನೋವು ಹಾಗೂ ಕೆಲವರಲ್ಲಿ ಚರ್ಮದ ಮೇಲೆ ನವಿರಾದ ದಡಿಕೆಗಳು ಕಂಡು ಬರಬಹುದಾಗಿದ್ದು ಈ ಎಲ್ಲಾ ರೋಗ ಲಕ್ಷಣಗಳೂ ಯಾವುದೇ ವಿಶೇಷ ಚಿಕಿತ್ಸೆಯಿಲ್ಲದೆಯೇ, ತನ್ನಿಂತಾನಾಗಿ, ಒಂದು ವಾರದೊಳಗೆ ವಾಸಿಯಾಗುತ್ತವೆ. ಅಪರೂಪಕ್ಕೆ ಕೆಲವರಲ್ಲಿ ಸಂಧಿಗಳ ನೋವು ಕೆಲ ವಾರಗಳವರೆಗೆ ಉಳಿದುಕೊಳ್ಳಬಹುದಾಗಿದ್ದು ತೀವ್ರ ಸ್ವರೂಪದ ನೋವಿರುವವರು ನೋವು ನಿವಾರಕ ಔಷಧಗಳನ್ನು ಸೇವಿಸಿದರೆ ಸಾಕಾಗುತ್ತದೆ. ಚಿಕುನ್ ಗುನ್ಯಾ ದಿಂದ ಯಾವುದೇ ಗಂಭೀರವಾದ ಸಮಸ್ಯೆಗಳಾಗಲೀ, ಪ್ರಾಣಹಾನಿಯಾಗಲೀ ಸಂಭವಿಸುವ ಬಗ್ಗೆ ವರದಿಗಳಿಲ್ಲ.
ಚಿಕುನ್ ಗುನ್ಯಾ ಸೋಂಕನ್ನು ತಡೆಯುವ ಲಸಿಕೆಯಾಗಲೀ ಔಷಧಗಳಾಗಲೀ ಈ ವರೆಗೆ ಲಭ್ಯವಿರುವುದಿಲ್ಲ. ಅದನ್ನು ತಡೆಯಲು ಸೊಳ್ಳೆಗಳ ನಿಯಂತ್ರಣವೊಂದನ್ನು ಬಿಟ್ಟರೆ ಬೇರಾವುದೇ ಕ್ರಮಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯಲ್ಲಾಗಲೀ, ಭಾರತದ ರಾಷ್ಟ್ರೀಯ ಕೀಟಜನ್ಯ ರೋಗ ನಿಯಂತ್ರಣ ಕಾರ್ಯಕ್ರಮದಲ್ಲಾಗಲೀ ಮಾಹಿತಿಯು ಲಭ್ಯವಿಲ್ಲ. ವಸ್ತುಸ್ಥಿತಿಯು ಹೀಗಿರುತ್ತಾ, ಚಿಕುನ್ ಗುನ್ಯಾ ರೋಗವನ್ನು ತಡೆಯಲು ಯಾವುದೋ ಔಷಧಗಳನ್ನು ಪೀಡಿತ ಪ್ರದೇಶಗಳ ಜನರಿಗೆ ಹಂಚಲಾಗುತ್ತಿದೆಯೆಂದೂ, ಅದಕ್ಕಾಗಿ ಹಲವು ಲಕ್ಷ ರೂಪಾಯಿಗಳನ್ನು ಸರಕಾರವು ವ್ಯಯಿಸುತ್ತಿದೆಯೆಂದೂ ಪತ್ರಿಕೆಗಳಲ್ಲಿ ವರದಿಯಾಗಿದೆ. ಲಭ್ಯ ಮಾಹಿತಿಗಳ ಪ್ರಕಾರ ಹೋಮಿಯೋಪತಿ ಔಷಧಗಳನ್ನು ವಿತರಿಸಲಾಗುತ್ತಿದ್ದು, ಈ ಔಷಧಗಳ ಪರಿಣಾಮ-ಅಡ್ಡಪರಿಣಾಮಗಳ ಬಗ್ಗೆಯಾಗಲೀ, ಪ್ರಯೋಜನಗಳ ಬಗ್ಗೆಯಾಗಲೀ ಯಾವುದೇ ಮಾಹಿತಿಯು ಸಂಬಂಧಿಸಿದ ಇಲಾಖೆಗಳಲ್ಲಿ ಲಭ್ಯವಿದ್ದಂತಿಲ್ಲ.
ಆದ್ದರಿಂದ ಇಂತಹಾ ಔಷಧಗಳನ್ನು ಸಾರ್ವಜನಿಕರಿಗೆ ಹಂಚುವ ಮೊದಲು ಅವುಗಳ ಉಪಯುಕ್ತತೆಯ ಬಗ್ಗೆ ವೈಜ್ಞಾನಿಕವಾದ ಅಧ್ಯಯನಗಳನ್ನು ನಡೆಸಬೇಕೆಂದೂ, ಈಗಾಗಲೇ ಅಂತಹಾ ಅಧ್ಯಯನಗಳಾಗಿದ್ದರೆ ಅವುಗಳ ವರದಿಗಳನ್ನು ಬಹಿರಂಗಪಡಿಸಬೇಕೆಂದೂ ನಾವು ಸಂಬಂಧಪಟ್ಟ ಇಲಾಖಾಧಿಕಾರಿಗಳನ್ನೂ, ಸರಕಾರವನ್ನೂ ಒತ್ತಾಯಿಸುತ್ತೇವೆ. ಅದಿಲ್ಲದಿದ್ದರೆ, ಜನರನ್ನು ಸಮಾಧಾನಪಡಿಸುವ ಹೆಸರಿನಲ್ಲಿ ಇಂತಹಾ ಅವೈಜ್ಞಾನಿಕವಾದ ತಂತ್ರಗಳ ಬಳಕೆಗೆ ಸಾರ್ವಜನಿಕರ ಹಣವನ್ನು ಪೋಲು ಮಾಡುವ ಬದಲಾಗಿ, ಜನರಿಗೆ ಚಿಕುನ್ ಗುನ್ಯದ ಹರಡುವಿಕೆಯ ಬಗ್ಗೆ ವೈಜ್ಞಾನಿಕವಾದ ಮಾಹಿತಿಯನ್ನು ಒದಗಿಸಿ, ಅದರ ಹರಡುವಿಕೆಯನ್ನು ತಡೆಯಲು ಮಾಡಬೇಕಾದ ಸೊಳ್ಳೆನಿಯಂತ್ರಣ ಕಾರ್ಯವನ್ನು ಸಮರೋಪಾದಿಯಲ್ಲಿ, ಸಮುದಾಯದ ನೆರವಿನಿಂದ ಮಾಡಲನುಗುಣವಾಗುವಂತಹಾ ಕ್ರಮಗಳನ್ನು ಈ ಕೂಡಲೇ ಕೈಗೊಳ್ಳಬೇಕೆಂದು ಈ ಮೂಲಕ ನಾವು ಒತ್ತಾಯಿಸುತ್ತೇವೆ.
- ಪ್ರೊ|ನರೇಂದ್ರ ನಾಯಕ್, ಅಧ್ಯಕ್ಷರು, ಅಖಿಲ ಭಾರತ ವಿಚಾರವಾದಿ ಸಂಘಗಳ ಒಕ್ಕೂಟ; ಸಂಚಾಲಕರು, ಬಳಕೆದಾರರ ಶಿಕ್ಷಣ ಟ್ರಸ್ಟ್, ಮಂಗಳೂರು
- ಡಾ| ಕೆ.ಎಸ್.ಮಾಧವ ರಾವ್, ಅಧ್ಯಕ್ಷರು, ದ.ಕ. ಜಿಲ್ಲಾ ವಿಚಾರವಾದಿಗಳ ಸಂಘ, ಮಂಗಳೂರು
- ಡಾ| ಶ್ರೀನಿವಾಸ ಕಕ್ಕಿಲ್ಲಾಯ, ತಜ್ಞ ವೈದ್ಯರು, ಮಂಗಳೂರು
ಮಂಗಳೂರು, 10-6-2008
- Add new comment
- 3154 reads
- reply
- reply
- reply
