There are currently 0 users and 2 guests online.

ನೀವೂ ಪ್ರಕಟಿಸಬಹುದು!

ಆರೋಗ್ಯ ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ಚಿಕುಂಗುನ್ಯಾಕ್ಕೆ 'ಬದಲಿ ಚಿಕಿತ್ಸೆ' ಇದೆಯೇ?

ಚಿಕುಂಗುನ್ಯಾಕ್ಕೆ 'ಬದಲಿ ಚಿಕಿತ್ಸೆ' ಇದೆಯೇ?

ಆರೋಗ್ಯ ಸಂಪದದಲ್ಲಿ

ವಿಪತ್ತನ್ನು ಎದುರಿಸಲು ನಾವು ಸರ್ವಸನ್ನದ್ಧರಾಗಿರುವುದು ಅಪರೂಪವೇ ಆಗಿರುವುದರಿಂದ ಅಂತಹದೇನಾದರೂ ಧುತ್ತನೆ ಬಂದೆರಗಿದರೆ ತಡಬಡಾಯಿಸುವುದು ಸಾಮಾನ್ಯ ಕ್ರಮವೇ ಆಗಿಬಿಟ್ಟಿದೆ. ಅಂತಹಾ ಸಂದರ್ಭಗಳನ್ನು 'ಸದುಪಯೋಗಪಡಿಸಿಕೊಳ್ಳಲು' ಯತ್ನಿಸುವವರೂ ಬೇಕಷ್ಟಿದ್ದಾರೆ. ಇತ್ತೀಚೆಗೆ ದಕ್ಷಿಣ ಕನ್ನಡ ಹಾಗೂ ಇತರ ಜಿಲ್ಲೆಗಳಲ್ಲಿ ಚಿಕುಂಗುನ್ಯಾ ರೋಗವು ಹರಡಲಾರಂಭಿಸಿದ ಸಂದರ್ಭದಲ್ಲಿಯೂ ಇಂತಹುದೇ ನಡೆಯಿತು. ರೋಗದ ನಿಯಂತ್ರಣಕ್ಕೆ ಯಾವುದೇ ಯೋಚನೆಗಳಾಗಲೀ, ಯೋಜನೆಗಳಾಗಲೀ ಇಲ್ಲದಿದ್ದ ಆರೋಗ್ಯ ಇಲಾಖೆಯ ಅಧಿಕಾರಿಗಳು, ಆಧುನಿಕ ವೈದ್ಯಶಾಸ್ತ್ರದಲ್ಲಿ ಚಿಕುಂಗುನ್ಯಾ ರೋಗಕ್ಕೆ ಔಷಧಗಳಾಗಲೀ, ತಡೆಯಬಲ್ಲ ಉಪಾಯಗಳಾಗಲೀ ಇಲ್ಲವೆಂದು ತಮ್ಮ ಕೈತೊಳೆದುಕೊಂಡರು. ಅಷ್ಟಕ್ಕೆ ನಿಲ್ಲದೆ, ಹೋಮಿಯೋಪತಿ ಹಾಗೂ ಆಯುರ್ವೇದಗಳಲ್ಲಿ ಚಿಕುಂಗುನ್ಯಾ ರೋಗಕ್ಕೆ ಚಿಕಿತ್ಸೆ ಮಾತ್ರವೇ ಅಲ್ಲ, ಅದನ್ನು ತಡೆಯಬಲ್ಲ ಔಷಧಗಳೂ ಲಭ್ಯವೆಂದು ಪ್ರಚಾರ ಮಾಡುವುದಕ್ಕೆ ಹಾಗೂ ‘ರೋಗ ನಿಯಂತ್ರಣಕ್ಕಾಗಿ ಹೋಮಿಯೋಪತಿ ಔಷಧಗಳನ್ನು ವಿತರಿಸುವ’ ಶಿಬಿರಗಳನ್ನು ಹಳ್ಳಿ-ಹಳ್ಳಿಗಳಲ್ಲಿ ನಡೆಸುವುದಕ್ಕೆ ಆರೋಗ್ಯ ಇಲಾಖೆಯ ವತಿಯಿಂದ ಅವಕಾಶವನ್ನು ಮಾಡಿಕೊಡಲಾಯಿತು. ಚಿಕುಂಗುನ್ಯಾ ನಿಯಂತ್ರಣಕ್ಕೆ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ರಾಜ್ಯ ಸರಕಾರವು ಜೂನ್ 13, 2008ರ ಪ್ರಮುಖ ದೈನಿಕಗಳ ಮುಖಪುಟದಲ್ಲಿ ಜಾಹೀರಾತನ್ನು ಪ್ರಕಟಿಸಿತು. ಈ ಜಾಹೀರಾತಿನಲ್ಲಿ, ಒಂದೆಡೆ ಚಿಕುಂಗುನ್ಯಾ ರೋಗವು 'ಕ್ರಮೇಣ 8-10 ದಿನಗಳಲ್ಲಿ ತನ್ನಿಂದ ತಾನೇ ಗುಣಮುಖ'ವಾಗುವುದೆಂದೂ, 'ಈ ರೋಗವು ಮಾರಣಾಂತಿಕವಲ್ಲ'ವೆಂದೂ ಹೇಳಿದ್ದರೆ, ಇನ್ನೊಂದೆಡೆ, 'ಜೀವರಕ್ಷಕ ಔಷಧಗಳ ಸರಬರಾಜು ಮತ್ತು ಔಷಧೋಪಚಾರ'ಗಳನ್ನು ಇಲಾಖೆಯ ಮೂಲಕ 'ಸಮರೋಪಾದಿಯಲ್ಲಿ ಕೈಗೊಳ್ಳಲಾಗುತ್ತಿದೆ'ಯೆಂದು ಹೇಳಲಾಗಿದೆ. ಅದಲ್ಲದೆ, ರೋಗದ ಹರಡುವಿಕೆಯನ್ನು ತಡೆಯುವಲ್ಲಿ 'ಆಯುರ್ವೇದ ಮತ್ತು ಹೋಮಿಯೋಪತಿ ಔಷಧಗಳು ಪರಿಣಾಮಕಾರಿಯಾಗಿದ್ದು, ಈ ಔಷಧಗಳನ್ನೂ ಸಹ ಉಪಯೋಗಿಸಬಹುದು' ಎಂದೂ ಈ ಜಾಹೀರಾತಿನಲ್ಲಿ ಹೇಳಲಾಗಿದೆ. ಮಳೆ ಬಂದೊಡನೆ ಸೊಳ್ಳೆಮರಿಗಳು ನಾಶವಾಗಿ ರೋಗದ ಹರಡುವಿಕೆಯು ತನ್ನಿಂತಾನೇ ಕಡಿಮೆಯಾಗಲಿದೆ ಎಂಬ ಅಭಯವನ್ನು ನೀಡುವ ಮೂಲಕ ದ.ಕ. ಜಿಲ್ಲಾ ಆರೋಗ್ಯಾಧಿಕಾರಿಗಳು ತಮ್ಮ ಜ್ಞಾನವನ್ನು ಪ್ರದರ್ಶಿಸಿದರು. ಈ ಮಧ್ಯೆ, ಸಾವಿರಾರು ಜನ ಚಿಕುಂಗುನ್ಯಾ ಪೀಡಿತರಾಗಿ ನರಳಿದರು. ಈ ರೋಗವನ್ನು ಹಿಂದೆಂದೂ ಕಂಡರಿಯದಿದ್ದ ವೈದ್ಯರಲ್ಲಿ ಕೆಲವರು ಗೊಂದಲಕ್ಕೊಳಗಾದರೆ ಇನ್ನು ಕೆಲವು ಬದಲಿ ವೈದ್ಯರು ತಾವೇ ಅದರ ತಜ್ಞರೆಂಬಂತೆ ವರ್ತಿಸುತ್ತ ತಮ್ಮಲ್ಲಿ ಅದಕ್ಕೆ ವಿಶೇಷವಾದ ಚಿಕಿತ್ಸೆಯಿದೆಯೆಂದು ಕೊಚ್ಚಿಕೊಂಡರು. ಹಲವು ವೈದ್ಯರೂ, ಆಸ್ಪತ್ರೆಗಳೂ ಹಗಲಿರುಳು ಮಾನವೀಯ ಸೇವೆಯಲ್ಲಿ ನಿರತರಾಗಿದ್ದರೆ, ಕೆಲವು ಅಸಲಿ, ಬದಲಿ ಹಾಗೂ ನಕಲಿ ವೈದ್ಯರು ತಮ್ಮ ಶುಲ್ಕವನ್ನು ಹೆಚ್ಚಿಸಿಕೊಂಡು ‘ವಿಶೇಷ ಸೇವೆ’ಯನ್ನು ಸಲ್ಲಿಸಿದರು. ಈ ಎಲ್ಲ ಗೊಂದಲಗಳನ್ನು ಮಾಧ್ಯಮಗಳು ‘ಹೇಗೋ ಹಾಗೆಯೇ’ ವರದಿ ಮಾಡಿದ್ದರಿಂದ ಈ ಗೊಂದಲ ಹಾಗೂ ಆತಂಕಗಳು ಇನ್ನಷ್ಟು ಹೆಚ್ಚುವುದಕ್ಕೆ ಸಹಕಾರಿಯಾಯಿತೆಂದೇ ಹೇಳಬಹುದು.

ಚಿಕುಂಗುನ್ಯಾ ಪೀಡಿತ ಪ್ರದೇಶಗಳಲ್ಲಿ ರೋಗ ನಿಯಂತ್ರಣಕ್ಕಾಗಿ ಹೋಮಿಯೋಪತಿ ‘ಔಷಧಗಳನ್ನು’ ಉಚಿತವಾಗಿ ವಿತರಿಸುವ ಶಿಬಿರಗಳನ್ನು ಸರಕಾರದ ವತಿಯಿಂದಲೇ ನಡೆಸಿದ ಔಚಿತ್ಯವನ್ನೂ, ಅದಕ್ಕೆ ಕಾರಣಗಳನ್ನೂ, ಆಧಾರಗಳನ್ನೂ ಪ್ರಶ್ನಿಸಿ, ಮಾಹಿತಿ ಕಾಯಿದೆಯಡಿಯಲ್ಲಿ ನಾವು ಸಲ್ಲಿಸಿದ ಅರ್ಜಿಗಳಿಗೆ ದ.ಕ. ಜಿಲ್ಲಾ ಆರೋಗ್ಯಾಧಿಕಾರಿಗಳ ಕಛೇರಿಯಿಂದ ಹಾಗೂ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ದೊರೆತ ಉತ್ತರಗಳನ್ನು ನೋಡಿದರೆ, ಜನಸಮುದಾಯವನ್ನು ವ್ಯಾಪಕವಾಗಿ ಕಾಡುವ ರೋಗವೊಂದರ ನಿಯಂತ್ರಣಕ್ಕೆ ಸರಕಾರೀ ವ್ಯವಸ್ಥೆಯು ಹೇಗೆ ಸ್ಪಂದಿಸುತ್ತದೆಯೆನ್ನುವುದು ಮನದಟ್ಟಾಗುತ್ತದೆ. ಅದರ ಜೊತೆಗೆ, ಆಧುನಿಕ ವೈದ್ಯಶಾಸ್ತ್ರಜ್ಞರು ಪರಿಸ್ಥಿತಿಯನ್ನು ನಿಭಾಯಿಸಲಾಗದೆ, ತಡಬಡಾಯಿಸಿ, ಕೈಚೆಲ್ಲಿ ಕುಳಿತರೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯು ‘ಬದಲಿ ವೈದ್ಯಕೀಯ ಪದ್ಧತಿಗಳಿಗೆ’ ವಿವೇಚನಾರಹಿತವಾಗಿ ಶರಣಾಗುವ ಪರಿಸ್ಥಿತಿಯು ಉಂಟಾಗುತ್ತದೆಯೆನ್ನುವುದೂ ಇದರಿಂದ ಸ್ಪಷ್ಟವಾಗುತ್ತದೆ. (ದ.ಕ. ಜಿಲ್ಲಾ ಆರೋಗ್ಯಾಧಿಕಾರಿಗಳ ಕಛೇರಿ ಹಾಗೂ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾಹಿತಿ ಅಧಿಕಾರಿಗಳಿಗೆ ಮಾಹಿತಿ ಕಾಯಿದೆ 2005ರಡಿಯಲ್ಲಿ ನಾವು ಕೇಳಿದ ಪ್ರಶ್ನೆಗಳು ಹಾಗೂ ಅಲ್ಲಿಂದ ದೊರೆತ ಉತ್ತರಗಳನ್ನು ಪ್ರತ್ಯೇಕವಾಗಿ ಮುಂದಕ್ಕೆ ಒದಗಿಸಲಾಗುವುದು)

ಚಿಕುಂಗುನ್ಯಾ ರೋಗಕ್ಕೆ ಆಧುನಿಕ ವೈದ್ಯವಿಜ್ಞಾನದಲ್ಲಿ ಚಿಕಿತ್ಸೆಯಿಲ್ಲವೆ? ಅದರ ಬಗ್ಗೆ ಆಧುನಿಕ ವೈದ್ಯವಿಜ್ಞಾನಕ್ಕೆ ಸಾಕಷ್ಟು ತಿಳಿದಿಲ್ಲವೆ?

ಚಿಕುಂಗುನ್ಯಾ ರೋಗದ ಬಗ್ಗೆ ಆಧುನಿಕ ವೈದ್ಯವಿಜ್ಞಾನದಲ್ಲಿ ಬಹಳಷ್ಟು ಅಧ್ಯಯನಗಳಾಗಿವೆ. ಚಿಕುಂಗುನ್ಯಾ ವೈರಾಣುವಿನ ರಚನೆ, ಅದು ಹರಡುವ ಬಗೆ, ರೋಗ ಲಕ್ಷಣಗಳು, ಅದರಿಂದ ಉಂಟಾಗಬಹುದಾದ ತೊಂದರೆಗಳು, ಗರ್ಭಿಣಿಯರು ಮತ್ತು ನವಜಾತ ಶಿಶುಗಳು, ವಯೋವೃದ್ಧರು ಮತ್ತಿತರರಲ್ಲಿ ರೋಗದ ಸ್ವರೂಪ, ಚಿಕುಂಗುನ್ಯಾದಲ್ಲಿ ಸಾವಿನ ಸಂಭವನೀಯತೆ, ಚಿಕುಂಗುನ್ಯಾ ಹಾಗೂ ಅದರಿಂದ ವಾರಗಟ್ಟಲೆ ಉಳಿಯಬಲ್ಲ ಸಂಧಿನೋವಿಗೆ ನೀಡಬಹುದಾದ ಪರಿಣಾಮಕಾರಿ ಚಿಕಿತ್ಸೆ ಇತ್ಯಾದಿಗಳ ಕುರಿತು ಸವಿವರವಾದ ಅಧ್ಯಯನಗಳಾಗಿದ್ದು, ಅವುಗಳ ವರದಿಗಳು ಮತ್ತು ಹಲವಾರು ವೈಜ್ಞಾನಿಕ ಲೇಖನಗಳು ಪ್ರತಿಷ್ಠಿತ ಪತ್ರಿಕೆಗಳಲ್ಲೂ, ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಟಣೆಗಳಲ್ಲೂ ಪ್ರಕಟಗೊಂಡಿವೆ. ಚಿಕುಂಗುನ್ಯಾ ರೋಗವು ಕಳೆದ ನಾಲ್ಕು ವರ್ಷಗಳಿಂದ ಆಫ್ರಿಕಾ ಹಾಗೂ ಏಷಿಯಾದ [ಭಾರತವೂ ಸೇರಿದಂತೆ] ಸುಮಾರು 23 ರಾಷ್ಟ್ರಗಳಲ್ಲಿ ಹರಡುತ್ತಿದ್ದು, ಆಫ್ರಿಕಾದಲ್ಲಿ ರೋಗವನ್ನುಂಟುಮಾಡಿದ ವೈರಾಣು ತಳಿಯೇ ಭಾರತದಲ್ಲಿಯೂ ಹರಡುತ್ತಿದೆಯೆನ್ನುವುದನ್ನು ಗುರುತಿಸಲಾಗಿದೆ.

ಚಿಕುಂಗುನ್ಯಾ ಪೀಡಿತರೆಲ್ಲರೂ 4-10 ದಿನಗಳಲ್ಲಿ ತನ್ನಿಂತಾನೇ ಗುಣಮುಖರಾಗುವುದರಿಂದ ಅದಕ್ಕೆ ಯಾವುದೇ ನಿರ್ದಿಷ್ಟವಾದ ಚಿಕಿತ್ಸೆಯ ಅಗತ್ಯವಿಲ್ಲ ಎನ್ನುವುದು ಆಧುನಿಕ ವೈದ್ಯವಿಜ್ಞಾನದಲ್ಲಿ ಸರ್ವ ಸಮ್ಮತವಾದ ಅಭಿಪ್ರಾಯವಾಗಿದೆ. ಜ್ವರ ಅಥವಾ ಸಂಧಿನೋವುಗಳು ವಿಪರೀತವಾಗಿದ್ದರೆ ಜ್ವರ/ನೋವುನಿವಾರಕ ಔಷಧವಾದ ಪಾರಾಸಿಟಮಾಲ್ ಅನ್ನು ಸೇವಿಸಿದರೆ ಸಾಕಾಗುತ್ತದೆ. ಅಪರೂಪಕ್ಕೊಮ್ಮೆ ತೀವ್ರ ಸ್ವರೂಪದ ಲಕ್ಷಣಗಳಿದ್ದರೆ, ಅದಕ್ಕನುಗುಣವಾದ ಚಿಕಿತ್ಸೆಯನ್ನು ನೀಡಬೇಕಾಗುತ್ತದೆ. ಶೇ. 12ರಷ್ಟು ರೋಗಬಾಧಿತರಲ್ಲಿ ಸಂಧಿನೋವು ವಾರಗಟ್ಟಲೆ ಉಳಿಯುವುದನ್ನು ಗುರುತಿಸಲಾಗಿದ್ದು ಅಂತಹವರು ಕ್ಲೋರೋಕ್ವಿನ್ ನಂತಹ ಔಷಧಗಳನ್ನು ತೆಗೆದುಕೊಳ್ಳಬಹುದು. ಆಧುನಿಕ ವೈದ್ಯವಿಜ್ಞಾನದಲ್ಲಿ ಚಿಕುಂಗುನ್ಯಾ ಮತ್ತದರ ಚಿಕಿತ್ಸೆಯ ಬಗ್ಗೆ ಹೀಗೆ ಸುಸ್ಪಷ್ಟವಾದ ವಿವರಗಳಿದ್ದು ಯಾವುದೇ ಸಂಶಯ ಅಥವಾ ಗೊಂದಲಗಳಿಗೀಡಾಗುವ ಅಗತ್ಯವಿಲ್ಲ. ಚಿಕುಂಗುನ್ಯಾ ಬಗ್ಗೆ ಇನ್ನಷ್ಟು ಅಧ್ಯಯನಗಳು ಮುಂದುವರಿದಿದ್ದು, ಅದನ್ನು ತಡೆಯಬಲ್ಲ ಲಸಿಕೆಯ ಶೋಧವೂ ನಡೆದಿದೆ.[1-5]

ಚಿಕುಂಗುನ್ಯಾ ರೋಗಕ್ಕೆ ‘ಬದಲಿ ವೈದ್ಯಕೀಯ’ ಪದ್ಧತಿಗಳಲ್ಲಿ ನಿರ್ದಿಷ್ಟವಾದ ಚಿಕಿತ್ಸೆ ಇದೆಯೇ ಮತ್ತು ಅವು ಪರಿಣಾಮಕಾರಿಯೇ?

ಇಲ್ಲ. ಚಿಕುಂಗುನ್ಯಾ ರೋಗಕ್ಕೆ ಯಾವುದೇ ‘ಬದಲಿ ವೈದ್ಯಕೀಯ’ ಪದ್ಧತಿಗಳಲ್ಲಿ ನಿರ್ದಿಷ್ಟವಾದ ಚಿಕಿತ್ಸೆ ಇಲ್ಲ. ನಿಜವೆಂದರೆ, ಈ ‘ಬದಲಿ ವೈದ್ಯಕೀಯ’ ಪದ್ಧತಿಗಳು ಚಿಕುಂಗುನ್ಯಾವನ್ನು ಒಂದು ನಿರ್ದಿಷ್ಟವಾದ ಕಾಹಿಲೆಯೆಂದು ಪರಿಗಣಿಸುವುದೇ ಇಲ್ಲ. ಹೋಮಿಯೋಪತಿ, ಆಯುರ್ವೇದ ಉನಾನಿ ಹಾಗೂ ಸಿದ್ಧ ಪದ್ಧತಿಗಳಲ್ಲಿ ವ್ಯಕ್ತಿ ಹಾಗೂ ಪರಿಸರಗಳ ಅಸಮತೋಲನವೇ ಎಲ್ಲಾ ರೋಗಗಳಿಗೆ ಕಾರಣವೆಂದು ಪರಿಗಣಿಸಲಾಗುತ್ತದೆಯಲ್ಲದೆ, ರೋಗಾಣುಗಳಿಂದ ರೋಗವುಂಟಾಗುವ ಪರಿಕಲ್ಪನೆಯೇ ಅವುಗಳಲ್ಲಿಲ್ಲ. [ಮುಂದೆ ಓದಿ] ಹಾಗಿದ್ದರೂ, ಚಿಕುಂಗುನ್ಯಾದ ಬಗ್ಗೆ ಈ ಪದ್ಧತಿಗಳ ‘ತಜ್ಞರು’ ಬರೆದಿರುವ ಲೇಖನಗಳನ್ನು ಗಮನಿಸಿದರೆ, ಚಿಕುಂಗುನ್ಯಾವು ವೈರಾಣುವಿನಿಂದ ಉಂಟಾಗುವ ಕಾಹಿಲೆ ಎಂಬಲ್ಲಿಂದ ತೊಡಗಿ ಕಾಹಿಲೆಯ ಬಗೆಗಿನ ಎಲ್ಲಾ ವಿವರಗಳನ್ನು ಆಧುನಿಕ ವೈದ್ಯವಿಜ್ಞಾನದ ಆಕರಗಳಿಂದ ನೇರವಾಗಿ ಕತ್ತರಿಸಿ ಅಂಟಿಸಿರುವುದು ಮೇಲ್ನೋಟಕ್ಕೇ ಸ್ಪಷ್ಟವಾಗುತ್ತದೆ! ಇದೇನು ವಿಪರ್ಯಾಸ?

ಈ ಎಲ್ಲಾ ‘ಬದಲಿ ಪದ್ಧತಿಗಳಲ್ಲಿ’ ಚಿಕುಂಗುನ್ಯಾದಲ್ಲಿ ಕಂಡು ಬರುವ ರೋಗಲಕ್ಷಣಗಳಿಗೆ ಬಿಡಿಬಿಡಿಯಾಗಿ ಚಿಕಿತ್ಸೆಯನ್ನು ಸೂಚಿಸಲಾಗಿದೆಯೇ ಹೊರತು [6-13] ಕಾಹಿಲೆಗೆ ಇಡಿಯಾಗಿ ಯಾವುದೇ ಚಿಕಿತ್ಸೆಯಾಗಲೀ, ಸಲಹೆಯಾಗಲೀ ಕಂಡುಬರುವುದಿಲ್ಲ. ಚಿಕುಂಗುನ್ಯಾಕ್ಕೆ ಹೋಮಿಯೋಪತಿ ಚಿಕಿತ್ಸೆಯ ಬಗ್ಗೆ ಪ್ರಕಟವಾಗಿರುವ ಹಲವು ಲೇಖನಗಳಲ್ಲಿ [6,7] ಪ್ರಮುಖ ಆಕರವೆಂದು ಉಲ್ಲೇಖಿಸಲಾಗಿರುವ ಬೆರಿಕ್ ನ ಹೋಮಿಯೋಪತಿ ಔಷಧಕೋಶದಲ್ಲಿ ಚಿಕುಂಗುನ್ಯಾ ಎಂಬ ಪದವನ್ನು ಹುಡುಕಿದರೂ ಸಿಗುವುದಿಲ್ಲ.[14] ಈ ಚಿಕಿತ್ಸೆಗಳು ಪರಿಣಾಮಕಾರಿಯೆಂದು ಶ್ರುತಪಡಿಸುವ ಅಧ್ಯಯನಗಳ ವರದಿಗಳು ಯಾವುದೇ ವೈದ್ಯಕೀಯ ಪತ್ರಿಕೆಗಳಲ್ಲಿ ಇದುವರೆಗೆ ಪ್ರಕಟಗೊಂಡಂತೆಯೂ ಕಾಣಿಸುತ್ತಿಲ್ಲ; ಚಿಕುಂಗುನ್ಯಾ ಚಿಕಿತ್ಸೆಯಲ್ಲಿ ಹೋಮಿಯೋಪತಿ ಔಷಧಗಳು ಪರಿಣಾಮಕಾರಿಯೆಂದು ಸಾಧಿಸಲು ಕರ್ನಾಟಕ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಒದಗಿಸಿರುವ ಅಧ್ಯಯನಗಳೂ ಯಾವುದೇ ವೈದ್ಯಕೀಯ ಪತ್ರಿಕೆಗಳಲ್ಲಿ ಇದುವರೆಗೆ ಪ್ರಕಟಗೊಂಡಂತಿಲ್ಲ.[15-17] ಹೀಗಾಗಿ, ಚಿಕುಂಗುನ್ಯಾ ರೋಗಕ್ಕೆ ಆಧುನಿಕ ವೈದ್ಯವಿಜ್ಞಾನದಲ್ಲಿ ಯಾವುದೇ ಚಿಕಿತ್ಸೆಯಿಲ್ಲ, ಆದರೆ ‘ಬದಲಿ ವೈದ್ಯಕೀಯ’ ಪದ್ಧತಿಗಳಲ್ಲಿ ನಿರ್ದಿಷ್ಟವಾದ ಚಿಕಿತ್ಸೆಯಿದೆ ಎಂದು ಘಂಟಾಘೋಷವಾಗಿ ಹೇಳಿಕೊಳ್ಳುವುದು ‘ಬದಲಿ ವೈದ್ಯಕೀಯ’ ಪದ್ಧತಿಗಳ ‘ತಜ್ಞರ’ ಸ್ವಯಂಘೋಷಣೆಗಳಷ್ಟೇ ಅಲ್ಲದೆ ಬೇರೇನಲ್ಲ ಎನ್ನಲೇಬೇಕಾಗುತ್ತದೆ.

ಚಿಕುಂಗುನ್ಯಾ ರೋಗಕ್ಕೆ ‘ಬದಲಿ ವೈದ್ಯಕೀಯ’ ಪದ್ಧತಿಗಳ ಚಿಕಿತ್ಸೆಯೇನು?

ಹೋಮಿಯೋಪತಿ, ಆಯುರ್ವೇದ, ಉನಾನಿ ಹಾಗೂ ಸಿದ್ಧ ಪದ್ಧತಿಗಳಲ್ಲಿ ಚಿಕುಂಗುನ್ಯಾದಲ್ಲಿ ಕಂಡು ಬರುವ ರೋಗಲಕ್ಷಣಗಳಿಗೆ ಹಲವು ತರಹದ ಔಷಧಗಳನ್ನು ಸೂಚಿಸಲಾಗಿದೆ.
ಹೋಮಿಯೋಪತಿಯಲ್ಲಿ, ಒಬ್ಬ ವ್ಯಕ್ತಿಯಲ್ಲಿ ಕಂಡುಬರುವ ರೋಗದ ವಿವಿಧ ಲಕ್ಷಣಗಳಿಗನುಗುಣವಾಗಿ, ಅವೇ ಲಕ್ಷಣಗಳನ್ನುಂಟುಮಾಡಬಲ್ಲ ವಸ್ತುಗಳನ್ನು ಅತಿ ಕಡಿಮೆ ಪ್ರಮಾಣದಲ್ಲಿ ನೀಡುವುದೇ ಚಿಕಿತ್ಸೆಯೆಂದೆನಿಸಿಕೊಳ್ಳುತ್ತದೆ.[18] ಚಿಕುಂಗುನ್ಯಾದ ರೋಗಲಕ್ಷಣಗಳಿಗನುಗುಣವಾಗಿ ಹಲವಾರು ಔಷಧಗಳನ್ನು ಹೋಮಿಯೋಪತಿಯಲ್ಲಿ ಸೂಚಿಸಲಾಗಿದೆ: [6, 8-11, 16,17,20] ಮೈಕೈ ನೋವಿಗೆ ಯುಪಟೋರಿಯಂ, ವಿಪರೀತವಾದ ನೋವಿದ್ದರೆ ಚೈನ, ಏರುಜ್ವರಕ್ಕೆ ಪೈರೊಜನ್, ಜ್ವರದಿಂದಾಗಿ ಆತಂಕಗೊಂಡರೆ, ವಿಚಲಿತನಾದರೆ ಆರ್ಸೆನಿಕ್, ವಾಂತಿಯಿದ್ದರೆ ನಕ್ಸ್ ವೊಮಿಕ, ತಲೆನೋವಿದ್ದರೆ ಜೆಲ್ಸಿಮಿಯಂ, ಕೆಂಪಗಿನ ದಡಿಕೆ ಹಾಗೂ ಸಂಧಿ ನೋವಿದ್ದರೆ ರಸ್, ದೇಹವಿಡೀ ಕೆಂಪಾಗಿದ್ದರೆ ಅರ್ನಿಕ, ಮುಖ ಕೆಂಪಾಗಿದ್ದರೆ ಬೆಲಡೊನ, ನಾಡಿಬಡಿತ ಜೋರಾಗಿದ್ದರೆ ಬ್ರಯೋನಿಯ, ಪದೇ ಪದೇ ಕಾಡುವ ನೋವು ಹಾಗೂ ಉದ್ರೇಕಗಳಿಗೆ ಕಾಫಿ, ನೋವು ಹಾಗೂ ಕೋಪಕ್ಕೆ ಚಮೋಮಿಲ್ಲ, ನೋವು ಹಾಗೂ ಕಿರಿಕಿರಿಗೆ ನಕ್ಸ್ ವೊಮಿಕ, ಗಲಭೆಗೆ ಬೆಲಡೊನ, ಶಾಂತಚಿತ್ತರಾಗಿದ್ದರೆ ಬ್ರಯೋನಿಯ, ಅಳುತ್ತಿದ್ದರೆ ಇಗ್ನೇಶಿಯ, ಖಿನ್ನರಾಗಿದ್ದರೆ ಓರಂ (ಚಿನ್ನ) ಹಾಗೂ ಲೆಡಂ ಪಾಲ್, ರುಟಾ ಗ್ರವೆಯೋಲೆನ್ಸ್, ಅಪಿಸ್, ಫೊರ್ಮಿಕಾ ರುಫಾ ಇತ್ಯಾದಿ. ಚಿಕುಂಗುನ್ಯಾದ (ಅಥವಾ ಇನ್ಯಾವುದೇ ರೋಗದ) ಲಕ್ಷಣಗಳನ್ನು ಈ ರೀತಿಯಲ್ಲಿ ವಿಂಗಡಿಸಿ ಅವುಗಳಿಗೆ ಪ್ರತ್ಯೇಕವಾದ ಚಿಕಿತ್ಸೆಯನ್ನು ನೀಡುವುದಕ್ಕೆ ವೈಜ್ಞಾನಿಕವಾದ ಆಧಾರಗಳೇನಾದರೂ ಇವೆಯೇ? ಹೇಗಿದ್ದರೂ, ಹೋಮಿಯೋಪತಿಯಲ್ಲಿ ಒಂದು ರೋಗದ ಸ್ವರೂಪವನ್ನು ಯಾವ ಮಾನದಂಡಗಳಿಂದ ವಿಶ್ಲೇಷಿಸಲಾಗುತ್ತದೆ ಹಾಗೂ ಅದಕ್ಕೆ ನೀಡಬೇಕಾದ ಚಿಕಿತ್ಸೆಯನ್ನು ಹೇಗೆ ನಿರ್ಧರಿಸಲಾಗುತ್ತದೆ ಎನ್ನುವುದನ್ನು ಈ ವಿವರಗಳು ನಮಗೆ ತೋರಿಸಿಕೊಡುತ್ತವೆ. ಅಷ್ಟೇ ಅಲ್ಲ, ಹೋಮಿಯೋಪತಿಯಲ್ಲಿ ಚಿಕುಂಗುನ್ಯಾ ರೋಗಕ್ಕೆ ನಿರ್ದಿಷ್ಟವಾದ ಚಿಕಿತ್ಸೆಯೇನೂ ಇಲ್ಲ ಎನ್ನುವುದಂತೂ ಇದರಿಂದ ಅತಿ ಸ್ಪಷ್ಟವಾಗುತ್ತದೆ.

ಚಿಕುಂಗುನ್ಯಾ ರೋಗದ ಚಿಕಿತ್ಸೆಯಲ್ಲಿ ಹೋಮಿಯೋಪತಿಯು ಪರಿಣಾಮಕಾರಿಯೆಂದು ಸಾಧಿಸಲು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶನಾಲಯವು ಒದಗಿಸಿರುವ ಮೂರು ದಾಖಲೆಗಳನ್ನು [16,17,20] ಪರಿಶೀಲಿಸೋಣ. [ಯಾವುದೋ ದೃಕ್ ಶ್ರವಣ ಪ್ರಾತ್ಯಕ್ಷಿಕೆಗಳ ಪ್ರತಿಗಳಂತೆ ಕಾಣುವ ಈ ದಾಖಲೆಗಳ (16,17) ಜಾಡನ್ನು ಅಂತರ್ಜಾಲದಲ್ಲಿ ಅರಸಿ, ಅವುಗಳ ಮೂಲ ಲೇಖನಗಳನ್ನು ಹೊರತೆಗೆಯಬೇಕಾಯಿತು] ಚಿಕುಂಗುನ್ಯಾ ರೋಗಪೀಡಿತರಿಗೆ ಹೋಮಿಯೋಪತಿ ಚಿಕಿತ್ಸೆಯ ಬಗ್ಗೆ ಬಿಜು ಎಸ್.ಜಿ. ಹಾಗೂ ಸರತ್ ಚಂದ್ರನ್ ಅವರು ಕೇರಳ ರಾಜ್ಯದಲ್ಲಿ ನಡೆಸಿದ ಪ್ರಾಥಮಿಕ ಅಧ್ಯಯನದಲ್ಲಿ [16] ಲೆಡಂ ಪಾಲ್, ರುಟಾ ಗ್ರವೆಯೋಲೆನ್ಸ್, ರಸ್ ಟಾಕ್ಸ್, ಬೆಲಡೊನ, ಯುಪಟೋರಿಯಂ, ಬ್ರಯೋನಿಯ, ಅಪಿಸ್, ಫೊರ್ಮಿಕಾ ರುಫಾ, ಆರ್ಸೆನಿಕ್ ಎಂಬ ಒಂಭತ್ತು ಔಷಧಗಳನ್ನು ಬಳಸಲಾಗಿದೆ. ಇತ್ತ, ಕರ್ನಾಟಕದ ಆಯುಷ್ ನಿರ್ದೇಶಕರು ರಾಜ್ಯ ಆರೋಗ್ಯ ಇಲಾಖೆಗೆ ಬರೆದ ಪತ್ರದಲ್ಲಿ, [20] ಕರ್ನಾಟಕದ ಚಿಕುಂಗುನ್ಯಾ ಪೀಡಿತರಿಗೆ ರಸ್ ಟಾಕ್ಸ್, ಲೆಡಂ ಪಾಲ್, ಬೆಲಡೋನ ಅಥವಾ ಬ್ರಯೋನಿಯ ಎಂಬ ನಾಲ್ಕು ಬಗೆಯ ಔಷಧಗಳನ್ನು ಬಳಸುವಂತೆ ಸೂಚಿಸುತ್ತಾರೆ! ಕೇರಳದಲ್ಲಿ ಚಿಕುಂಗುನ್ಯ ಚಿಕಿತ್ಸೆಗೆ ಒಂಭತ್ತು ಔಷಧಗಳಾದರೆ, ಕರ್ನಾಟಕಕ್ಕೆ ನಾಲ್ಕೇ ಸಾಕಾಗುತ್ತದೆ! ಕರ್ನಾಟಕಕ್ಕೂ ಕೇರಳಕ್ಕೂ ಇಷ್ಟೊಂದು ವ್ಯತ್ಯಾಸಗಳಿದ್ದರೂ(!) , ಕರ್ನಾಟಕದಲ್ಲಿ ಚಿಕುಂಗುನ್ಯಾಕ್ಕೆ ಹೋಮಿಯೋಪತಿ ಔಷಧಗಳನ್ನು ಬಳಸುವುದಕ್ಕೆ ಕೇರಳದಲ್ಲಿ ನಡೆಸಲಾದ ಅಧ್ಯಯನವೇ ಆಧಾರವೆಂದು ರಾಜ್ಯದ ಆರೋಗ್ಯ ಇಲಾಖೆಯು ಹೇಳಿಕೊಳ್ಳುತ್ತದೆ!

ಕರ್ನಾಟಕದ ಆಯುಷ್ ನಿರ್ದೇಶಕರು ಸೂಚಿಸಿರುವ ಔಷಧಗಳಿಂದ 70-80% ರೋಗಿಗಳಲ್ಲಿ 5 ದಿನಗಳಲ್ಲಿ ರೋಗವು ಉಪಶಮನಗೊಳ್ಳುವುದು ಎಂದು ಹೇಳಲಾಗಿದೆ [ಇದಕ್ಕೆ ಆಧಾರವಾಗಿ ಬೆಂಗಳೂರಿನ ಸರಕಾರಿ ಹೋಮಿಯೋಪತಿ ವಿದ್ಯಾಲಯದ ಪ್ರಾಂಶುಪಾಲರು ಹಾಗೂ ಒಂದನೇ ದರ್ಜೆಯ ವೈದ್ಯಕೀಯ ತಜ್ಞರ ವರದಿಯನ್ನು ಅವರು ಉಲ್ಲೇಖಿಸಿದ್ದಾರಾದರೂ, ಅದರ ಪ್ರತಿಯನ್ನು ಲಗತ್ತಿಸಿಲ್ಲ, ಈ ಕುರಿತು ಪ್ರತ್ಯೇಕವಾದ ಅಧ್ಯಯನಗಳಾವುವೂ ನಡೆದಂತಿಲ್ಲ]. ಕರ್ನಾಟಕದಲ್ಲಿ ಅಧ್ಯಯನಗಳಾಗದಿದ್ದರೆ ಹೋಗಲಿ, ಕೇರಳದಲ್ಲಿ ನಡೆಸಲಾದ ಅಧ್ಯಯನದಲ್ಲಿ ಚಿಕುಂಗುನ್ಯಾ ಪೀಡಿತರಿಗೆ ಹೋಮಿಯೋಪತಿಯಿಂದ ಪ್ರಯೋಜನವೇನಾದರೂ ಆಗಿರುವ ಪುರಾವೆಯಿದೆಯೇ? ಬಿಜು ಹಾಗೂ ಸರತ್ ಚಂದ್ರನ್ ಅವರು ನಡೆಸಿದ ಪ್ರಾಥಮಿಕ ಅಧ್ಯಯನವು [16] 532 ಚಿಕುಂಗುನ್ಯಾ ರೋಗಿಗಳನ್ನು ಒಳಗೊಂಡಿತ್ತು. ಈ ಪೈಕಿ ಶೇ. 16 ರಷ್ಟು ಮಂದಿ 3 ದಿನಗಳಲ್ಲಿ, ಶೇ.43 ರಷ್ಟು ಮಂದಿ 7 ದಿನಗಳಲ್ಲಿ, ಶೇ.28ರಷ್ಟು ಮಂದಿ 14 ದಿನಗಳಲ್ಲಿ, ಶೇ.3ರಷ್ಟು ಮಂದಿ 30 ದಿನಗಳಲ್ಲಿ ರೋಗಶಮನವಾಗುವ ಲಕ್ಷಣಗಳನ್ನು ಕಂಡರೆಂದೂ, ಸುಮಾರು 24 ಬಗೆಯ ‘ರೋಗ ಲಕ್ಷಣಗಳು’ ಶೇ.11ರಿಂದ ಶೇ.87ರಷ್ಟು ಕಡಿಮೆಯಾದವೆಂದೂ ಈ ವರದಿಯಲ್ಲಿ ಹೇಳಲಾಗಿದೆ. (ಅಂದರೆ ಯಾರೊಬ್ಬರಲ್ಲೂ ಯಾವ ರೋಗಲಕ್ಷಣವೂ ಸಂಪೂರ್ಣವಾಗಿ ವಾಸಿಯಾಗಲಿಲ್ಲ ಎಂದಾಯಿತು). ಅದೇ ರೀತಿ, ಜ್ವರಶಮನವಾದ ನಂತರ ಉಳಿದುಕೊಂಡ ತೊಂದರೆಗಳೂ ಶೇ.8ರಿಂದ ಶೇ.50ರಷ್ಟು ಮಾತ್ರ (ಸರಾಸರಿ ಶೇ.30) ಕಡಿಮೆಯಾದವು. ಆದರೆ ವಾಸ್ತವದಲ್ಲಿ, ಯಾವುದೇ ಚಿಕಿತ್ಸೆಯನ್ನು ಪಡೆಯದಿದ್ದವರಲ್ಲೂ ರೋಗಲಕ್ಷಣಗಳು ಹೀಗೆಯೇ, ಇದೇ ಕಾಲಾವಧಿಯಲ್ಲಿ, ತನ್ನಿಂತಾನಾಗಿ ಕಡಿಮೆಯಾಗುತ್ತವೆ!

ಒಂದೇ ಔಷಧವನ್ನು ಬಳಸಿ ಚಿಕಿತ್ಸೆ ನೀಡುವುದು ಹೋಮಿಯೋಪತಿಯ ಮೂಲಮಂತ್ರವಾಗಿದ್ದು, ಒಂದಕ್ಕಿಂತ ಹೆಚ್ಚು ಔಷಧಗಳನ್ನು ಬಳಸಿದರೆ ಅವುಗಳ ತಾಕಲಾಟದಿಂದ ತೊಂದರೆಗಳಾಗಬಹುದೆಂದು ಹೋಮಿಯೋಪತಿಯ ಆಕರಗಳಲ್ಲೇ ಹೇಳಲಾಗಿದೆ.[18] ಹೀಗಿದ್ದರೂ, ಕೇರಳದ ಅಧ್ಯಯನದಲ್ಲಿ ಒಂದಕ್ಕಿಂತ ಹೆಚ್ಚು ಹೋಮಿಯೋಪತಿ ಔಷಧಗಳನ್ನು ಏಳು ದಿನಗಳ [ಅಥವಾ ಹೆಚ್ಚು] ಕಾಲ ಬಳಸಲಾಗಿತ್ತು; ಮಾತ್ರವಲ್ಲ, ಈ ಔಷಧಗಳ ‘ತಾಕಲಾಟ’ದಿಂದ ಏನಾದರೂ ಅಡ್ಡ ಪರಿಣಾಮಗಳು ಉಂಟಾಗಿದ್ದವೋ ಎನ್ನುವುದನ್ನು ಪರೀಕ್ಷಿಸಿದ ಬಗ್ಗೆ ವರದಿಯಲ್ಲಿ ಚಕಾರವೂ ಇಲ್ಲ.[16] ಚಿಕುಂಗುನ್ಯಾ ಚಿಕಿತ್ಸೆಯಲ್ಲಿ ಹೋಮಿಯೋಪತಿ ಔಷಧಗಳು ‘ಅತ್ಯಂತ ಪರಿಣಾಮಕಾರಿ’ಯೆಂಬ ಅಂತಿಮ ತೀರ್ಮಾನವನ್ನು ಈ ಅಧ್ಯಯನಕಾರರು ಘೋಷಿಸಿರುವುದನ್ನು [16] ನೋಡಿದರೆ, ಇಂತಹಾ ‘ಅಧ್ಯಯನಗಳ’ ಗುಣಮಟ್ಟವನ್ನೂ, ಅವುಗಳನ್ನೇ ‘ಆಧಾರಗಳೆಂದು’ ಹೇಳಿಕೊಳ್ಳುವವರ ವಿವೇಚನಾ ಸಾಮರ್ಥ್ಯವನ್ನೂ, ಉದ್ದೇಶಗಳನ್ನೂ ಪ್ರಶ್ನಿಸದೇ ಬೇರೆ ದಾರಿಯಿಲ್ಲ.

ಚಿಕುಂಗುನ್ಯಾದ ಲಕ್ಷಣಗಳನ್ನು ವಿಧ-ವಿಧವಾಗಿ ವಿಂಗಡಿಸಿ, ಅವುಗಳಿಗೆ ವಿಧವಿಧವಾದ ಔಷಧಗಳನ್ನು ಬಳಸುವ ಹೋಮಿಯೋಪತಿಯ ವಿಧಾನದಿಂದ ಬೆರಗಾಗಿ (!) ಈ ವಿಚಾರವನ್ನೇ ಇನ್ನೂ ಸ್ವಲ್ಪ ಕೆದಕಿದೆ. ಹೋಮಿಯೋಪತಿಯಲ್ಲಿ ರೋಗಲಕ್ಷಣಗಳನ್ನು ಪರಿಗಣಿಸಿ ಚಿಕಿತ್ಸೆಯನ್ನು ನಿರ್ಧರಿಸುವುದರಿಂದ, ರೋಗಗಳ ಕಾರಣಗಳು ಏನೇ ಇದ್ದರೂ ಅವುಗಳ ಲಕ್ಷಣಗಳಲ್ಲಿ ಸಾಮ್ಯತೆಯೇನಾದರೂ ಇದ್ದರೆ ಅವುಗಳ ಚಿಕಿತ್ಸೆಯೂ ಒಂದೇ ಆಗಿರಬೇಕಾಗುತ್ತದೆ. ಹಾಗಾದರೆ, ಚಿಕುಂಗುನ್ಯಾ ರೋಗದ ಲಕ್ಷಣಗಳಿಗೆ ನೀಡಲಾಗುವ ಔಷಧಗಳನ್ನು ಜ್ವರ, ಸಂಧಿನೋವು ಇತ್ಯಾದಿಗಳನ್ನುಂಟುಮಾಡುವ ಇನ್ನಿತರ ಕಾಹಿಲೆಗಳಲ್ಲಿಯೂ ಬಳಸಲಾಗುತ್ತದೆಯೇ ಎಂಬ ಕುತೂಹಲದಿಂದ ಅಂತರ್ಜಾಲದಲ್ಲಿ ಸ್ವಲ್ಪ ಹುಡುಕಾಡಿದೆ. ನನಗೇನು ಸಿಕ್ಕಿತು ಗೊತ್ತೆ? ಚಿಕುಂಗುನ್ಯಾಕ್ಕೆ ಬಳಸಲಾಗುವ ನಾಲ್ಕು ಔಷಧಗಳನ್ನು ಡೆಂಗೀ ಜ್ವರಕ್ಕೆ, ಐದನ್ನು ಮಲೇರಿಯಾಕ್ಕೆ ಮತ್ತು ಒಂದನ್ನು ಕ್ಷಯ ರೋಗಕ್ಕೆ ಬಳಸಬಹುದಂತೆ! [12,21-23] ವೈರಾಣುಗಳಿಂದ ಉಂಟಾಗುವ ಚಿಕುಂಗುನ್ಯಾ ಹಾಗೂ ಡೆಂಗೀ ಜ್ವರಗಳಿಗೂ, ಪರೋಪಪಜೀವಿಗಳಿಂದ ಉಂಟಾಗುವ ಮಲೇರಿಯಾಕ್ಕೂ ಸುಮಾರು ಒಂದೇ ತರಹದ ಚಿಕಿತ್ಸೆಯಿರುವುದು ಹೋಮಿಯೋಪತಿಯ ವೈಶಿಷ್ಟ್ಯವೇ ಸರಿ! ಚಿಕುಂಗುನ್ಯಾ ಹಾಗೂ ಡೆಂಗೀ ಜ್ವರಗಳು ಯಾವುದೇ ಚಿಕಿತ್ಸೆಯಿಲ್ಲದೆಯೇ ಗುಣಮುಖವಾಗಬಲ್ಲವಾದರೂ, ಸರಿಯಾದ ಚಿಕಿತ್ಸೆಯಿಲ್ಲದಿದ್ದರೆ ಮಾರಣಾಂತಿಕವಾಗಬಲ್ಲ ಮಲೇರಿಯ ರೋಗಕ್ಕೆ ಹೋಮಿಯೋಪತಿ ಚಿಕಿತ್ಸೆಯನ್ನು ಪಡೆದವರ ಪಾಡೇನು?

ಆಯುರ್ವೇದ, ಯುನಾನಿ ಮತ್ತು ಸಿದ್ಧ ಪದ್ಧತಿಗಳಲ್ಲೂ ಚಿಕುಂಗುನ್ಯಾಕ್ಕೆ ರೋಗಲಕ್ಷಣಗಳಿಗನುಗುಣವಾದ ಚಿಕಿತ್ಸೆಯನ್ನು ಹೇಳಲಾಗಿದೆ. ಆಯುರ್ವೇದದಲ್ಲಿ ಪಂಚಭೂತಗಳಿಂದಾದ ದೇಹ, ಸಪ್ತ ಧಾತುಗಳು ಮತ್ತು ತ್ರಿದೋಷಗಳ ಪರಿಕಲ್ಪನೆಯಿದ್ದು, ರೋಗಾಣುಗಳಿಂದ ರೋಗವುಂಟಾಗುತ್ತದೆಯೆನ್ನುವುದಿಲ್ಲ. ಯುನಾನಿ ಮತ್ತು ಸಿದ್ಧ ಪದ್ಧತಿಗಳಲ್ಲೂ ಇಂತಹದೇ ಪರಿಕಲ್ಪನೆಗಳಿವೆಯೆನ್ನಬಹುದು.[24-27]

ಬೆಂಗಳೂರಿನ ಸರಕಾರಿ ಆಯುರ್ವೇದ ವಿದ್ಯಾಲಯದ ಪ್ರಾಂಶುಪಾಲರ ವರದಿಯನುಸಾರ, ಚಿಕುಂಗುನ್ಯಾಕ್ಕೆ ಆಯುರ್ವೇದದಲ್ಲಿ ಅಮೃತಾದಿ ಗುಗ್ಗುಲು, ರಸನ ಎರಂದ ಕ್ವತ ಚೂರ್ಣಗಳ ಚಿಕಿತ್ಸೆಯನ್ನು ಆರಂಭದಲ್ಲೇ ನೀಡಿದರೆ ಮೂರು ದಿನಗಳಲ್ಲಿ ರೋಗವನ್ನು ಗುಣಪಡಿಸಬಹುದು.[20] ವಿಲವಾದಿ ಮತ್ತು ಸುದರ್ಶನ ಮಾತ್ರೆಗಳಿಂದಲೂ ಪ್ರಯೋಜನವಿದೆಯಂತೆ.[12] ಆದರೆ ಇವ್ಯಾವುದಕ್ಕೂ ಆಧಾರಗಳು ಲಭ್ಯವಿಲ್ಲ.

ಉನಾನಿಯ ಪ್ರಕಾರ, ಮಜೂನ-ಎ-ಸುರಂಜನ್ ಅಥವಾ ಹಪ-ಎ- ಸುರಂಜನ್ , ರೊಗನ್-ಎ-ಸುರ್ಕ್, ಹಬೆ-ಎ-ಅಸ್ಕಂದ್ , ಸಫೂಫ-ಎ-ತಬಶೀರ್ ಗಳನ್ನು ಬಳಸಿದರೆ (ಖರ್ಚು ಪ್ರತಿ ರೋಗಿಗೆ ರೂ. 200) ಶೇ. 50ರಷ್ಟು ರೋಗಿಗಳು ಒಂದು ವಾರದೊಳಗೆ ಗುಣಮುಖರಾಗುತ್ತಾರೆ, ಇನ್ನುಳಿದ 25% ರೋಗಿಗಳು 1-2 ವಾರಗಳಲ್ಲಿ ಗುಣಮುಖರಾಗುತ್ತಾರೆ. [ಬೆಂಗಳೂರಿನ ಸರಕಾರಿ ಯುನಾನಿ ವಿದ್ಯಾಲಯದ ಪ್ರಾಂಶುಪಾಲರ ವರದಿ; ಕಾಲೇಜಿನ ಹೊರ ರೋಗಿ ವಿಭಾಗದಲ್ಲಿ ಹಾಗೂ ಶಿಬಿರಗಳಲ್ಲಿ ನೋಡಿದ ಸುಮಾರು 200 ಪ್ರಕರಣಗಳ ಅನುಭವವೇ ಆಧಾರ][20]

ಸಿದ್ಧ ಪದ್ಧತಿಯಲ್ಲಿ ಚಿಕುಂಗುನ್ಯಾಕ್ಕೆ ಈ ಕೆಳಗಿನ ಔಷಧಗಳನ್ನು ಸೂಚಿಸಲಾಗಿದೆ: ನಿಲವೆಂಬು ಕಷಾಯ (ಜ್ವರಕ್ಕೆ), ವತಾಜುರ ಕಷಾಯ (ಸಂಧಿ ನೋವಿಗೆ), ಶಾಂತ ಚಂದ್ರೋದಯ, ಬಲಸಂಜೀವಿ, ಬ್ರಹ್ಮಾನಂದ ಭೈರವ, ಅಷ್ಠ ಭೈರವ ಹಾಗೂ ವಸಂತ ಕುಸುಮರಾಗ. ಈ ಬಗ್ಗೆ ಹೆಚ್ಚಿನ ವಿವರಗಳಾಗಲೀ, ಆಧಾರಗಳಾಗಲೀ ಲಭ್ಯವಿಲ್ಲ.[13]
ಇದನ್ನೆಲ್ಲ ಪರಿಗಣಿಸಿದರೆ ಒಂದಂತೂ ಸ್ಪಷ್ಟವಾಗುತ್ತದೆ: ಚಿಕುಂಗುನ್ಯಾ ರೋಗಕ್ಕೆ ಯಾವುದೇ ಬದಲಿ ಪದ್ಧತಿಯಲ್ಲಿ ಯಾವುದೇ ವಿಶೇಷವಾದ ಚಿಕಿತ್ಸೆಯಿಲ್ಲ ಮಾತ್ರವಲ್ಲ, ಅವುಗಳಿಂದ ಯಾವುದೇ ವಿಶೇಷವಾದ ಪ್ರಯೋಜನವೂ ಇಲ್ಲ. ಈ ಔಷಧಗಳನ್ನು ಸೇವಿಸಿರುವವರಲ್ಲಿ ರೋಗಲಲಕ್ಷಣಗಳು ವಾಸಿಯಾಗುವ ಪರಿಗೂ, ಸಹಜವಾಗಿಯೇ ರೋಗವು ಗುಣಮುಖವಾಗುವ ಪರಿಗೂ ಯಾವ ವ್ಯತ್ಯಾಸವೂ ಇಲ್ಲ.

‘ಬದಲಿ ಔಷಧಗಳಿಂದ’ ಚಿಕುಂಗುನ್ಯಾವನ್ನು ತಡೆಯಬಹುದೇ?

ತನ್ನಿಂತಾನೇ ಗುಣಹೊಂದುವ ಚಿಕುಂಗುನ್ಯಾಕ್ಕೆ ತಮ್ಮಲ್ಲೇನೋ ವಿಶೇಷವಾದ ಔಷಧಗಳಿವೆಯೆಂದು ಯಾವುದೇ ಆಧಾರಗಳಿಲ್ಲದೆಯೇ ಹೇಳಿಕೊಳ್ಳುವ ‘ಬದಲಿ ತಜ್ಞರುಗಳನ್ನು’ ತಡೆಯುವವರಾರೂ ಇಲ್ಲದಿರುವುದರಿಂದ ಅವರು ಇನ್ನೂ ಒಂದು ಹೆಜ್ಜೆಯನ್ನು ಮುಂದಿಡುವ ಸಾಹಸವನ್ನು ಮಾಡಿ ಅದರಲ್ಲಿ ಅದ್ಭುತವಾದ ಯಶಸ್ಸನ್ನೂ ಕಂಡಿದ್ದಾರೆ ಎನ್ನಲಡ್ಡಿಯಿಲ್ಲ. ಚಿಕುಂಗುನ್ಯಾವನ್ನು ತಡೆಯಲು ಆಧುನಿಕ ವೈದ್ಯವಿಜ್ಞಾನದಲ್ಲಿ ಲಸಿಕೆಯಿಲ್ಲದಿದ್ದರೇನಂತೆ, ಅದನ್ನು ತಡೆಯಬಲ್ಲ ‘ಬದಲಿ ಔಷಧಗಳು’ ತಮ್ಮಲ್ಲಿವೆ ಎಂದು ಸಾರಾಸಗಟಾಗಿ ಘೋಷಿಸಿಕೊಂಡಿರುವುದಷ್ಟೇ ಅಲ್ಲ, ಸಹಸ್ರಾರು ಜನರನ್ನು ಒಮ್ಮೆಗೇ ಕಾಡುವ ಚಿಕುಂಗುನ್ಯಾವನ್ನು ನಿಯಂತ್ರಿಸಲು ಯಾವುದೇ ಉಪಾಯಗಳನ್ನು ಕಾಣದೇ ದಿಕ್ಕು ತೋಚದಂತಾಗಿದ್ದ ಅರೋಗ್ಯ ಇಲಾಖೆಯ ಅಧಿಕಾರಿಗಳನ್ನು ನಂಬಿಸಿ ಚಿಕುಂಗುನ್ಯಾವನ್ನು ತಡೆಯುವ ಹೆಸರಿನಲ್ಲಿ ಲಕ್ಷಗಟ್ಟಲೆ ಜನರಿಗೆ ತಮ್ಮ ಔಷಧಗಳನ್ನು ಹಂಚುವ ಶಿಬಿರಗಳನ್ನು ಸರಕಾರೀ ಖರ್ಚಿನಲ್ಲಿ ಸಂಘಟಿಸುವಲ್ಲಿ ಯಶಸ್ವಿಯೂ ಆಗಿದ್ದಾರೆ.

ಆದರೆ, ಚಿಕುಂಗುನ್ಯಾವನ್ನು ತಡೆಯುವಲ್ಲಿ ‘ಬದಲಿ ಔಷಧಗಳು’ ಪರಿಣಾಮಕಾರಿಯೇ? ಹೋಮಿಯೋಪತಿಯ ಪ್ರಕಾರ, ಚಿಕುಂಗುನ್ಯಾ ಚಿಕಿತ್ಸೆಗೆ ಬಳಸಲಾಗುವ ಔಷಧಗಳನ್ನೇ ರೋಗ ನಿಯಂತ್ರಣಕ್ಕೂ ಬಳಸಬಹುದಂತೆ! ಅಂದರೆ, ರೋಗ ತಗಲಿಸಿಕೊಂಡವನಿಗೆ ನೀಡುವ ಔಷಧಗಳೂ, ಯಾವುದೇ ರೋಗವಿಲ್ಲದವನಿಗೆ ರೋಗವು ಬಾರದಂತೆ ಕೊಡುವ ಔಷಧಗಳೂ ಒಂದೇ ಆಗಿರುತ್ತವೆ! ಬಲು ಸುಲಭ! ಹಾಗೇನಿಲ್ಲ. ಚಿಕುಂಗುನ್ಯಾ ಕಾಹಿಲೆ ಒಂದೇ ವೈರಾಣುವಿನಿಂದ ಬರುವುದೇ ಆಗಿದ್ದರೂ ಸಹ (ಇದು ಆಧುನಿಕ ವಿಜ್ಞಾನದ ಮಾತಾಯಿತು, ಹೋಮಿಯೋಪತಿ ಇದನ್ನು ಒಪ್ಪುವಂತಿಲ್ಲವಲ್ಲ) ಆ ರೋಗವನ್ನು ತಡೆಯುವ ಔಷಧಗಳು ಒಂದು ಊರಿಂದ ಇನ್ನೊಂದು ಊರಿಗೆ ಬೇರೆಯೇ ಆಗಿರಬೇಕಾಗುತ್ತದೆಯಂತೆ! ಮತ್ತು ಯಾವ ಊರಿಗೆ ಯಾವುದು ಸೂಕ್ತವೆಂದು ಹೋಮಿಯೋಪತಿ ತಜ್ಞರೇ ಕೂಲಂಕಷವಾಗಿ ಸ್ಥಳವನ್ನು ಪರಿಶೀಲಿಸಿ ನಿರ್ಧರಿಸಬೇಕಂತೆ! ಕೇರಳ ರಾಜ್ಯದ ಕೊಟ್ಟಾಯಂನಲ್ಲಿ ಬ್ರಯೊನಿಯ, ಕೇರಳದ ಕಲ್ಲಿಕೋಟೆ ಹಾಗೂ ಆಂಧ್ರದ ಹೈದರಾಬಾದ್ ಗಳಲ್ಲಿ ಯುಪಟೋರಿಯಂ, ರಾಜಸ್ಥಾನದಲ್ಲಿ ಮತ್ತು ಕರ್ನಾಟಕದಲ್ಲಿ ರಸ್ ಟಾಕ್ಸ್, ತಮಿಳುನಾಡಿನ ಚೆನ್ನೈಯಲ್ಲಿ ಲೆಡಂ ಪಾಲ್ ಮತ್ತು ಚಮೊಮಿಲ್ಲ ಹೀಗೆ ಒಂದೊಂದೂರಿಗೆ ಒಂದೊಂದು. [28] ಆ ಮಟ್ಟಿಗಾದರೂ ರಾಜಸ್ಥಾನ ಹಾಗೂ ಕರ್ನಾಟಕಗಳಿಗೆ ಸಾಮ್ಯತೆ! ಕರ್ನಾಟಕಕ್ಕೆ ರಸ್ ಟಾಕ್ಸ್, ಲೆಡಂ ಪಾಲ್ ಮತ್ತು ಟ್ಯುಬರ್ಕುಲಿನಂ ಔಷಧಗಳು ಪ್ರಶಸ್ತವೆಂದೂ, ಈ ಕುರಿತಾದ ಅಧ್ಯಯನಗಳ ಫಲಿತಾಂಶಗಳು ಇನ್ನಷ್ಟೇ ಬರಬೇಕಾಗಿದೆ ಎಂದೂ ಆಯುಷ್ ನಿರ್ದೇಶಕರು ರಾಜ್ಯದ ಆರೋಗ್ಯ ಮತ್ತು ಕು.ಕ ಇಲಾಖೆಗೆ ತಿಳಿಸಿರುವುದು ಒಂದೆಡೆಯಾದರೆ,[20] ಕೇರಳದ ತಿರುವನಂತಪುರಂನಲ್ಲಿ ಯುಪಟೋರಿಯಂ ಔಷಧವನ್ನು ಬಳಸಿ ನಡೆಸಲಾದ ಅಧ್ಯಯನವು ಚಿಕುಂಗುನ್ಯಾ ತಡೆಗಟ್ಟುವಲ್ಲಿ ಹೋಮಿಯೋಪತಿ ಔಷಧಗಳು ಪರಿಣಾಮಕಾರಿಯೆಂದು ತೋರಿಸಲು ಆಧಾರವೆಂದು ನಮ್ಮ ರಾಜ್ಯದ ಆರೋಗ್ಯ ಮತ್ತು ಕು.ಕ. ಇಲಾಖೆಯು ಹೇಳುವುದು ಇನ್ನೊಂದೆಡೆ! [29] ತಿರುವನಂತಪುರಕ್ಕೆ ‘ಸೂಕ್ತವಾದ’ ಯುಪಟೋರಿಯಂನ ಅಧ್ಯಯನದ ಆಧಾರದಲ್ಲಿ ಕರ್ನಾಟಕದಲ್ಲಿ ರಸ್ ಟಾಕ್ಸ್, ಲೆಡಂ ಪಾಲ್ ಮತ್ತು ಟ್ಯುಬರ್ಕುಲಿನಂ ಔಷಧಗಳು ಪರಿಣಾಮಕಾರಿಯಾಗಿವೆ ಎನ್ನಲು ಹೇಗೆ ಸಾಧ್ಯವಿದೆ? ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ಔಷಧಗಳನ್ನು ಬಳಸಬೇಕೆನ್ನುವುದು ಸರಿಯಾದರೆ, ಆಯಾ ಪ್ರದೇಶಗಳಲ್ಲಿ ಅಲ್ಲಿಗೆ ಸೂಕ್ತವೆನಿಸುವ ಔಷಧಗಳ ಬಗ್ಗೆ ಪ್ರತ್ಯೇಕವಾಗಿ ಅಧ್ಯಯನಗಳನ್ನು ನಡೆಸುವ ಅಗತ್ಯವಿಲ್ಲವೆ? ಲಕ್ಷಗಟ್ಟಲೆ ಜನರಿಗೆ ಸರಕಾರಿ (ಜನಸಾಮಾನ್ಯರ ತೆರಿಗೆಯ) ಖರ್ಚಿನಲ್ಲಿ ಔಷಧಗಳನ್ನು ಹಂಚುವುದಕ್ಕೆ ಸಂಶಯಾತೀತ ಪುರಾವೆಗಳ ಅಗತ್ಯವಿದೆಯೆಂದು ನಮ್ಮ ಅಧಿಕಾರಿಗಳಿಗಾಗಲೀ, ವೈದ್ಯರುಗಳಿಗಾಗಲೀ ಅನಿಸುವುದಿಲ್ಲವೆ? ಅನಿಸುವುದಿಲ್ಲವಾದರೆ ಅದಕ್ಕೆ ಕಾರಣವೇನು?

ಅದಿರಲಿ, ತಿರುವನಂತಪುರದ ಈ ಅಧ್ಯಯನವು [17,29] ನಂಬಲರ್ಹವೇ? ಹೋಮಿಯೋಪತಿ ಔಷಧಗಳಿಂದ ಚಿಕುಂಗುನ್ಯಾವನ್ನು ತಡೆಯುವ ಬಗ್ಗೆ ಈ ಅಧ್ಯಯನವನ್ನು ನಡೆಸಲಾಗಿದೆ ಎಂದು ಹೇಳಲಾಗಿದ್ದರೂ, ಔಷಧವನ್ನು ಪಡೆದವರಲ್ಲಿ ಜ್ವರವುಂಟಾಗಿತ್ತೇ ಎಂಬುದನ್ನಷ್ಟೇ ಪರಿಗಣಿಸಲಾಗಿದೆಯಲ್ಲದೆ ಚಿಕುಂಗುನ್ಯಾ ಬಂದಿತ್ತೇ ಎಂಬುದನ್ನಲ್ಲ! ಈ ಅಧ್ಯಯನವು ಆರಂಭದಲ್ಲಿ 2000 ಜನರನ್ನು ಒಳಗೊಂಡಿದ್ದು, ಆ ಪೈಕಿ 376 ಜನರನ್ನು ಕೈಬಿಡಲಾಯಿತು ಹಾಗೂ ಅದಕ್ಕೆ ಯಾವ ಕಾರಣಗಳನ್ನೂ ವರದಿಯಲ್ಲಿ ನಮೂದಿಸಿಲ್ಲ! ಅಲ್ಲದೆ, ಬಳಸಲಾದ ಔಷಧಗಳ ಅಡ್ಡ ಪರಿಣಾಮಗಳನ್ನು ಗುರುತಿಸಿ ದಾಖಲಿಸಿರುವುದು ಕಾಣಿಸುವುದಿಲ್ಲ. [17] ಹೋಮಿಯೋಪತಿ ಔಷಧಗಳಿಗೆ ಅಡ್ಡ ಪರಿಣಾಮಗಳೇ ಇಲ್ಲ ಎಂಬ ದೃಢವಾದ (ಹಾಗೂ ಶಾಶ್ವತವಾದ) ನಂಬಿಕೆಯಿಂದ ಸಂಶೋಧನಾಕಾರರಿಗೆ ಅದರ ಅಗತ್ಯವು ಕಂಡಿರಲಾರದು. ಆದರೆ ಈ ಅಧ್ಯಯನಗಳ ಆಧಾರದಲ್ಲಿ ಮಹತ್ವದ [ಲಕ್ಷಗಟ್ಟಲೆ ಖರ್ಚಾಗುವ] ನಿರ್ಧಾರಗಳನ್ನು ಕೈಗೊಳ್ಳುವ ರಾಜ್ಯದ ಆರೋಗ್ಯ ಇಲಾಖೆಗೆ ಅದರ ಅಗತ್ಯವು ಕಾಣಿಸಿಲ್ಲವೆ?

ಚಿಕುಂಗುನ್ಯಾಕ್ಕೆ ಹೋಮಿಯೋಪತಿ ಔಷಧಗಳನ್ನು ಬಳಸುವ ಬಗೆಗಿನ ಎರಡೂ ಅಧ್ಯಯನಗಳು [16,17] ಸಹಚಿಂತಕರ ವಿಮರ್ಷೆಗೊಳಪಟ್ಟು ಯಾವುದಾದರೂ ವೈದ್ಯಕೀಯ ಪತ್ರಿಕೆಗಳಲ್ಲಿ ಪ್ರಕಟಗೊಂಡಂತೆ ಕಾಣುವುದಿಲ್ಲ. (ರೆಜಿಕುಮಾರ್ ಅವರ ಲೇಖನವನ್ನು ಬ್ರಿಟಿಷ್ ಹೋಮಿಯೋಪತಿ ಜರ್ನಲ್ ಗೆ ವಿಮರ್ಷೆಗಾಗಿ ಕಳುಹಿಸಲಾಗಿದೆಯಂತೆ)[15] ಈ ರೀತಿಯ ವೈಜ್ಞಾನಿಕ ಪ್ರಕ್ರಿಯೆಗಳಿಗೆ ಒಳಪಡದ ಅಧ್ಯಯನಗಳನ್ನು ಆಧಾರವಾಗಿರಿಸಿಕೊಂಡು ಇಡೀ ಸಮುದಾಯಕ್ಕೆ ಔಷಧಗಳನ್ನು ವಿತರಿಸುವುದು ಸಾಧುವೇ? ಆಯುಷ್ ನಿರ್ದೇಶಕರೇ ತಿಳಿಸಿರುವಂತೆ, ಕರ್ನಾಟಕದಲ್ಲಿ ನಡೆಸಲಾಗಿದೆಯೆನ್ನಲಾದ ಅಧ್ಯಯನದ ಫಲಿತಾಂಶಗಳು ‘ಇನ್ನಷ್ಟೇ ಲಭ್ಯವಾಗಬೇಕಿದೆ’. ಹಾಗಿದ್ದೂ, ಚಿಕುಂಗುನ್ಯಾ ತಡೆಗೆ ಔಷಧಗಳ ಬಳಕೆಯನ್ನು ಅವರೇ ಸೂಚಿಸಿರುವುದೇಕೆ?

ಒಟ್ಟಿನಲ್ಲಿ, ಚಿಕುಂಗುನ್ಯಾ ಚಿಕಿತ್ಸೆಯಲ್ಲಿ ಹೋಮಿಯೋಪತಿಯೂ ಸೇರಿದಂತೆ ‘ಬದಲಿ ಔಷಧಗಳನ್ನು’ ಬಳಸುವುದಕ್ಕೆ ವೈಜ್ಞಾನಿಕ ಆಧಾರಗಳೇನೆಂದು ಮಾಹಿತಿ ಕಾಯಿದೆಯಡಿಯಲ್ಲಿ ನಾವು ಕೇಳಿದ ಪ್ರಶ್ನೆಗಳಿಗೆ ಉತ್ತರವಾಗಿ ರಾಜ್ಯದ ಆರೋಗ್ಯ ಮತ್ತು ಕು.ಕ. ಇಲಾಖೆಯು ಒದಗಿಸಿರುವ ಮಾಹಿತಿ ಹಾಗೂ ಅದರೊಂದಿಗೆ ಲಗತ್ತಿಸಿರುವ ದಾಖಲೆಗಳು ಚಿಕುಂಗುನ್ಯಾ ಚಿಕಿತ್ಸೆಯಲ್ಲಿ ‘ಬದಲಿ ಔಷಧಗಳ’ ಪ್ರಯೋಜನವನ್ನು ಸಾಬೀತುಪಡಿಸುವ ಬದಲಾಗಿ ಹಲವಾರು ಸಂಶಯಗಳನ್ನೂ, ಪ್ರಶ್ನೆಗಳನ್ನೂ ಉಂಟುಮಾಡುತ್ತವೆ. ಈ ದಾಖಲೆಗಳನ್ನೂ, ಅಂತರ್ಜಾಲದಲ್ಲಿ ಲಭ್ಯವಿರುವ ಇನ್ನಿತರ ಆಕರಗಳನ್ನೂ ಸವಿವರವಾಗಿ ವಿಮರ್ಶಿಸಿದಾಗ ಈ ಕೆಳಗಿನ ಅಂಶಗಳು ಸ್ಪಷ್ಟವಾಗುತ್ತವೆ:

1. ಚಿಕುಂಗುನ್ಯಾದ ಬಗ್ಗೆ ಸವಿಸ್ತಾರವಾದ ಹಾಗೂ ಆಳವಾದ ವೈಜ್ಞಾನಿಕ ಅಧ್ಯಯನಗಳು ಆಧುನಿಕ ವೈದ್ಯ ವಿಜ್ಞಾನದಲ್ಲಷ್ಟೇ ಆಗಿದ್ದು, ಸಾಕಷ್ಟು ವಿವರಗಳು ಲಭ್ಯವಿವೆ. ಚಿಕುಂಗುನ್ಯಾದ ಬಗ್ಗೆ ಇನ್ನಷ್ಟು ಸಂಶೋಧನೆಗಳು ಮುಂದುವರಿದಿದ್ದು ಲಸಿಕೆಯ ಶೋಧವೂ ನಡೆಯುತ್ತಿದೆ. 2. ಚಿಕುಂಗುನ್ಯಾವು ವೈರಾಣುವಿನಿಂದ ಉಂಟಾಗುವ ಸೋಂಕುರೋಗವಾಗಿದ್ದು, ಯಾವುದೇ ಮಾರಣಾಂತಿಕವಾಗಬಲ್ಲ ಸಮಸ್ಯೆಗಳನ್ನುಂಟು ಮಾಡದೆಯೇ 4-10ದಿನಗಳಲ್ಲಿ ತನ್ನಿಂತಾನೇ ಗುಣಹೊಂದುತ್ತದೆ. ಅದರಿಂದ ಉಂಟಾಗಬಹುದಾದ ಜ್ವರ, ಸಂಧಿನೋವು ಇತ್ಯಾದಿ ತೊಂದರೆಗಳ ಉಪಶಮನಕ್ಕೆ ಸರಳವಾದ, ಹೆಚ್ಚೇನೂ ಅಡ್ಡ ಪರಿಣಾಮಗಳಿಲ್ಲದ ಆಧುನಿಕ ಔಷಧಗಳನ್ನು ಬಳಸಬಹುದಾಗಿದೆ. 3. ಚಿಕುಂಗುನ್ಯಾ ರೋಗಕ್ಕೆ ವಿಶೇಷವಾದ, ನಿರ್ದಿಷ್ಟವಾದ ಚಿಕಿತ್ಸೆಯು ಯಾವುದೇ ‘ಬದಲಿ ವೈದ್ಯಕೀಯ ಪದ್ಧತಿಯಲ್ಲಿ’ ಲಭ್ಯವಿಲ್ಲ ಮತ್ತು ಈ ಕುರಿತು ಯಾವುದೇ ಸಂಶೋಧನೆಗಳು ಯಾವುದೇ ವಿಶ್ವಾಸಾರ್ಹ ಪತ್ರಿಕೆಗಳಲ್ಲಿ ಇದುವರೆಗೆ ಪ್ರಕಟವಾಗಿಲ್ಲ. ಎಲ್ಲಾ ‘ಬದಲಿ ವೈದ್ಯಕೀಯ ಪದ್ಧತಿಗಳಲ್ಲಿಯೂ’ ಚಿಕುಂಗುನ್ಯಾದ ರೋಗಲಕ್ಷಣಗಳಿಗೆ ಹಲವು ತರಹದ ಔಷಧಗಳನ್ನು ಸೂಚಿಸಲಾಗಿದ್ದು ಇವುಗಳ ಪರಿಣಾಮಗಳ ಬಗ್ಗೆಯಾಗಲೀ, ಅಡ್ಡ ಪರಿಣಾಮಗಳ ಬಗ್ಗೆಯಾಗಲೀ ಸಾಕಷ್ಟು ಸಂಶೋಧನೆಗಳಾಗಿಲ್ಲ.
4. ಚಿಕುಂಗುನ್ಯಾವನ್ನು ತಡೆಯಲು ಹೋಮಿಯೋಪತಿಯಲ್ಲಾಗಲೀ, ಇತರ ಯಾವುದೇ ಪದ್ಧತಿಗಳಲ್ಲಾಗಲೀ ಔಷಧಗಳಿವೆಯೆನ್ನುವುದಕ್ಕೆ ಸಶಕ್ತವಾದ ಆಧಾರಗಳು ರಾಜ್ಯ ಆರೋಗ್ಯ ಮತ್ತು ಕು.ಕ. ಇಲಾಖೆಯಲ್ಲಾಗಲೀ, ಅಂತರ್ಜಾಲದಲ್ಲಾಗಲೀ ಲಭ್ಯವಿಲ್ಲ ಮತ್ತು ಈ ಕುರಿತು ಯಾವುದೇ ಸಂಶೋಧನೆಗಳು ಯಾವುದೇ ವಿಶ್ವಾಸಾರ್ಹ ಪತ್ರಿಕೆಗಳಲ್ಲಿ ಇದುವರೆಗೆ ಪ್ರಕಟವಾಗಿಲ್ಲ. 5. ಆದ್ದರಿಂದ ಚಿಕುಂಗುನ್ಯಾದ ಚಿಕಿತ್ಸೆಗೆ ಅಥವಾ ನಿಯಂತ್ರಣಕ್ಕೆ ಯಾವುದೇ ‘ಬದಲಿ ವೈದ್ಯಕೀಯ ಪದ್ಧತಿಯಲ್ಲಿ’ ಆಧುನಿಕ ವೈದ್ಯ ವಿಜ್ಞಾನಕ್ಕಿಂತ ಮಿಗಿಲಾದ ಔಷಧಗಳು ಲಭ್ಯವಿವೆ ಎನ್ನುವುದಕ್ಕೆ ಯಾವುದೇ ಆಧಾರಗಳಿಲ್ಲ.

ಆಕರಗಳು:
1. Powers AM, Logue H. Changing patterns of chikungunya virus: reemergence of a zoonotic arbovirus. J Gen Virol. 2007;88:2363-2377 Full Text available at http://www.sgm.ac.uk/jgvdirect/82858/82858ft.pdf
2. Pialoux G et al. Chikungunya, an emerging arbovirus. Lancet Infect Dis. 2007;7:319-327 Full Text available at http://www.ifmt.auf.org/IMG/pdf/TLIDarticle.Chikungunya.pdf
3. Isabelle Quatresous. Chikungunya outbreak in Réunion, a French ‘overseas département’ Eurosurveillance, 2006;11(5) At http://www.eurosurveillance.org/ViewArticle.aspx?ArticleId=2904
4. Chhabra M, Mittal V, Bhattacharya D, Rana U, Lal S. Chikungunya fever: A re-emerging viral infection. Indian J Med Microbiol [serial online] 2008 [cited 2008 Jun 24];26:5-12. Available from: http://www.ijmm.org/text.asp?2008/26/1/5/38850
5. Swaroop A, Jain A, Kumhar M, Parihar N, Jain S. Chikungunya Fever. Journal, Indian Academy of Clinical Medicine 2007;(2):164-68 Full Text Available at http://medind.nic.in/jac/t07/i2/jact07i2p164.pdf
6. Sunila Chikungunya: Homeopathic Management. Available at http://www.similima.com/chikungunya.html
7. Thomas M. Chikungunya and Homeopathy. Available at http://www.medindia.net/alternativemedicine/homeopathy/Chikungunya_Refer...
8. Chikungunya Available at http://www.hpathy.com/diseases/chikungunya-symptoms-treatment-cure.asp
9. Chikungunya - Homeopathy for treatment and prevention Available at http://www.homeopathyhelps.com/chikungunya-treatment.htm
10. Thomas M. Chikungunya and Homeopathy. Available at http://www.medindia.net/alternativemedicine/homeopathy/Chikungunya_Homoe...
11. Vallabhassery BS. Chikungunya Available at http://www.hospitals-directory.com/harticle6.htm
12. Fight Chikungunya and Viral Fever with Ayurveda Available at http://www.keralaayurvedics.com/media/articles/fight-chikungunya-and-vir...
13. Spencer Jones Chikungunya [ Chicken Guinea ] Available at http://www.siddhaphysician.com/Chikungunya-Chicken-Guinea.html
14. William Boericke Homœopathic Materia Medica Available at
http://www.homeoint.org/books/boericmm/index.htm
15. Rejikumar R. Personal communication to author by e-mail
16. Biju SG, Sarathchandran. A Pilot Study on Treatment of Chikun Gunya. Available at http://www.slideshare.net/shebees/chiqun-gunya/ and http://similiacare.com/wp-content/uploads/2008/06/cgunya2t.pdf
17. Rejikumar R, Dinesh RS et al. A Study On The Prophylactic Efficacy Of Homoeopathic Preventive Medicine Against Chikungunya Fever. Available at http://www.similima.com/gen126.html
18. Homeopathy Principles Available at http://www.hpathy.com/basics/homeopathicprinciples.asp
19. Biju SG. A Pilot Study on Treatment of Chikun Gunya. Found in the copy of the presentation provided by the Karnataka Health and Family Welfare Directorate. [Copy with the author]
20. Communication from Director, Ayush, Karnataka. Provided by the Karnataka Health and Family Welfare Directorate under the provisions of RTI, 2005. In the possession of the author.
21. Thomas M. Dengue and Homeopathy. Available at http://www.medindia.net/alternativemedicine/homeopathy/dengue_remedies.htm
22. Tuberculosis. University Maryland Medical Centre. Available at http://www.umm.edu/altmed/articles/tuberculosis-000165.htm
23. Intermittent fever/malaria. Available at http://www.hpathy.com/diseases/intermittent-fever-symptoms-treatment-cur...
24. Tridosha Principle. Available at http://library.thinkquest.org/04apr/01297/html/basic.htm
25. Ayurveda Concepts Available at http://ayurveda.iloveindia.com/ayurveda-fundamentals/index.html
26. Unani – A System of Medicine So Close to Ayurveda Available at http://www.keralaayurvedics.com/category/other-resources/unani-medicine
27. Thas JJ. Siddha medicine--background and principles and the application for skin diseases. Clin Dermatol. 2008 Jan-Feb;26(1):62-78. Available at http://www.ncbi.nlm.nih.gov/pubmed/18280906
28. Management Of Epidemics Available at http://ccrhindia.org/epidemic.asp
29. Rejikumar R, Dinesh RS et al. A Study On The Prophylactic Efficacy Of Homoeopathic Preventive Medicine Against Chikungunya Fever. Found in the copy of the presentation provided by the Karnataka Health and Family Welfare Directorate. [Copy with the author]

3641 reads