ಯೋಗ ನಮಗೆ ಬೇಕೆ?
ಯೋಗ ನಮಗೆ ಬೇಕೆ?
ಆರೋಗ್ಯ ಸಂಪದದಲ್ಲಿ
ನೀವೊಬ್ಬ ಯೋಗಾಸಕ್ತರಾಗಿದ್ದರೆ ಈ ಪ್ರಶ್ನೆಗಳನ್ನು ಪರಿಗಣಿಸಿ:
- ಇಂದು ಯೋಗಾಭ್ಯಾಸದ ಹತ್ತು ಹಲವು ರೂಪಗಳು ಪ್ರಚಲಿತವಿದ್ದು, ಅವುಗಳಲ್ಲಿ ಪ್ರತಿಯೊಂದೂ ತನ್ನ ಶ್ರೇಷ್ಠತೆಯನ್ನೂ, ಪರಿಶುದ್ಧತೆಯನ್ನೂ ಹೇಳಿಕೊಳ್ಳುತ್ತಿರುವಾಗ, ಪ್ರಾಚೀನ ಭಾರತದಲ್ಲಿ ಋಷಿ-ಮುನಿಗಳು ಮಾಡುತ್ತಿದ್ದ ಯೋಗಾಭ್ಯಾಸಕ್ಕೂ ಈ ಆಧುನಿಕ ಯೋಗ ವಿಧಾನಗಳಿಗೂ ಏನಾದರೂ ಸಾಮ್ಯತೆಗಳಿವೆಯೇ?
- ಮನುಷ್ಯನ ಆರೋಗ್ಯ ರಕ್ಷಣೆಯಲ್ಲಿ ಮತ್ತು ಕಾಹಿಲೆಗಳನ್ನು ತಡೆಯುವಲ್ಲಿ ಅಥವಾ ಗುಣಪಡಿಸುವಲ್ಲಿ ಯೋಗವು ಪರಿಣಾಮಕಾರಿಯೆಂದು ನಿಸ್ಸಂದೇಹವಾಗಿ ಶ್ರುತಪಡಿಸುವ ಆಧಾರಗಳೇನಾದರೂ ಲಭ್ಯವಿವೆಯೇ?
- ಯೋಗಾಭ್ಯಾಸವು ಸಂಪೂರ್ಣವಾಗಿ ಸುರಕ್ಷಿತವೇ?
ಭಾರತದ ಪ್ರಾಚೀನ ವಿದ್ಯೆಯಾದ ಯೋಗವು ಇಂದು ಬಹುರೂಪಿಯಾಗಿ ವಿಶ್ವಾದ್ಯಂತ ಹರಡಿರುವುದು ಮೇಲ್ನೋಟಕ್ಕೇ ಕಾಣಿಸುತ್ತದೆ. ಪತ್ರಿಕೆಗಳ ಆರೋಗ್ಯ ಅಂಕಣಗಳಿಂದ ಟಿವಿ ಚಾನಲ್ ಗಳ ವರೆಗೆ, ಭಾರತದಿಂದ ಅಮೆರಿಕದವರೆಗೆ, ಮಕ್ಕಳಿಂದ ವೃದ್ಧರವರೆಗೆ ಎಲ್ಲೆಲ್ಲೂ ವ್ಯಾಪಕವಾಗಿ ಯೋಗವು ಸರ್ವಸಮ್ಮತವಾಗಿ ಬಿಟ್ಟಿದೆಯೆಂದೇ ಬಿಂಬಿಸಲಾಗುತ್ತಿದೆ. ವಿಜ್ಞಾನ, ಗಣಿತ, ತತ್ವಶಾಸ್ತ್ರ, ಕಲೆ ಇವೇ ಮುಂತಾದ ಕ್ಷೇತ್ರಗಳಿಗೆ ಪ್ರಾಚೀನ ಭಾರತದ ಕೊಡುಗೆಗಳೆಲ್ಲ ನಗಣ್ಯವಾಗಿ ಯೋಗಶಾಸ್ತ್ರವೇ ಮನುಕುಲಕ್ಕೆ ಭಾರತದ ಅತಿ ಶ್ರೇಷ್ಠವಾದ ಕೊಡುಗೆಯೆಂದು ಹೇಳಲಾಗುತ್ತಿದೆ. ತಪಸ್ವಿಗಳ ಯೋಗಾಭ್ಯಾಸವು ಇಂದು ಹಲವರಿಗೆ ಕೋಟಿಗಟ್ಟಲೆ ವ್ಯವಹಾರದ ಹೆಬ್ಬಾಗಿಲನ್ನೇ ತೆರೆದಿಟ್ಟಂತಾಗಿದೆ. ಕೆಲವರು ಅಪ್ಪಟ ವ್ಯಾವಹಾರಿಕ ಶೈಲಿಯಲ್ಲಿ ವಿಶಿಷ್ಟವಾದ, ಪೇಟೆಂಟ್ ಯುಕ್ತ, ಹವಾನಿಯಂತ್ರಿತ ಯೋಗ 'ಸ್ಟುದಿಯೋ'ಗಳನ್ನು ನಡೆಸುತ್ತಿದ್ದರೆ, ಜನರ ಮರ್ಮವನ್ನು ಅರ್ಥಮಾಡಿಕೊಳ್ಳುವಲ್ಲಿ ನಿಷ್ಣಾತರಾದ ಇನ್ನು ಕೆಲವರು ಯೋಗಾಭ್ಯಾಸದ ಒಂದೆರಡು ವಿಧಗಳನ್ನು ಅಲ್ಪಸ್ವಲ್ಪ ರೂಪಾಂತರಿಸಿ, ಅದಕ್ಕೊಂದು ವಿಶೇಷವಾದ ನಾಮಕರಣ ಮಾಡಿ, ತಲೆಕೂದಲು-ಗಡ್ದಗಳನ್ನು ಅತ್ತಿಂದಿತ್ತ ಇಳಿಬಿಟ್ಟು, ಕಿರುನಗೆ ಬೀರಿ, ಶ್ರೀ ಶ್ರೀ ಯಾ ಮಹಾಪೂಜನೀಯ ಬಿರುದಾಂಕಿತ ಜಗದ್ಗುರುಗಳಾಗಿ ಮೆರೆಯುತ್ತಿದ್ದಾರೆ. ಬಹುಷಃ ಇವರೆಲ್ಲರ 'ಅದ್ಭುತ ಕೆಲಸಗಳಿಂದ' ಪ್ರೇರೇಪಿತರಾಗಿ ಕೇಂದ್ರ ಹಾಗೂ ಕೆಲ ರಾಜ್ಯ ಸರಕಾರಗಳ ಮಂತ್ರಿಗಳು ಶಾಲಾ ಮಕ್ಕಳಿಗೆ ಒಂದನೇ ತರಗತಿಯಿಂದಲೇ ಕಡ್ಡಾಯ ಯೋಗ ಶಿಕ್ಷಣವನ್ನು ಆರಂಭಿಸುವ ನಿರ್ಧಾರಕ್ಕೆ ಬಂದಂತಿದೆ. ಭಾರತ ಮೂಲದ ಎಲ್ಲವನ್ನೂ 'ರಕ್ಷಿಸುವ' ಏಕಸ್ವಾಮ್ಯತೆ ತಮ್ಮದೆಂದು ಹೇಳಿಕೊಳ್ಳುವ ಕೆಲ ಶಕ್ತಿಗಳು ಯೋಗವನ್ನೂ ತಮ್ಮ ಬಗಲಿಗೇರಿಸಿಕೊಂಡಿದ್ದು, ಯೋಗದ ಬಗ್ಗೆ ಯಾರಾದರೂ ಏನನ್ನಾದರೂ ಸಂಶಯಗಳನ್ನು ವ್ಯಕ್ತಪಡಿಸಿದರೆ ಅಂತಹವರನ್ನು ಹಿಂದೂ ವಿರೋಧಿಗಳೆಂದೂ, ದೇಶಪ್ರೇಮವಿಲ್ಲದವರೆಂದೂ, ದೇಶದ್ರೋಹಿಗಳೆಂದೂ ಕೂಡಲೇ ಜರೆಯಲಾಗುತ್ತದೆ.
ಆದರೆ ಯೋಗಾಭ್ಯಾಸವು ನಮಗೆ ಅಗತ್ಯವೇ? ಅದರಿಂದ ಯಾವುದೇ ಪ್ರಯೋಜನಗಳಿವೆಯೇ? ಅದು ಅತ್ಯಂತ ಸುರಕ್ಷಿತವೇ?
ಯೋಗ ಅಂದರೇನು?
ನಮ್ಮ ದೇಶದಲ್ಲಿ ಅನಾದಿ ಕಾಲದಿಂದಲೂ ಯೋಗಾಭ್ಯಾಸವು ಪ್ರಚಲಿತವಿದ್ದು, ವರ್ಷಗಟ್ಟಲೆ ತಪಸ್ಸಿನಲ್ಲಿ ತೊಡಗಿ ಬಲು ಕಠಿಣವಾದ ಜೀವನಕ್ರಮವನ್ನು ಪಾಲಿಸುತ್ತಿದ್ದ ಋಷಿ-ಮುನಿಗಳು ತಮ್ಮ ಧ್ಯಾನಕಾಲದಲ್ಲಿ ಅದನ್ನು ಬಳಸುತ್ತಿದ್ದಿರಬೇಕು. ಕ್ರಿ.ಪೂ.2ನೇ ಶತಮಾನದಲ್ಲಿ ಪತಂಜಲಿ ಮುನಿ ಬರೆದ 'ಯೋಗ ಸೂತ್ರಗಳು' ಈ ಧ್ಯಾನವಿಧಾನಗಳನ್ನೆಲ್ಲ ಒಳಗೊಂಡ ಯೋಗಶಾಸ್ತ್ರದ ಮೂಲಗ್ರಂಥವೆಂದು ಪರಿಗಣಿಸಲ್ಪಟ್ಟಿದೆ. ಅಲ್ಲಿಂದೀಚೆಗೆ ಯೋಗಾಶಾಸ್ತ್ರದಲ್ಲಿ ಹಲವು ಬಗೆಯ ಬೆಳವಣಿಗೆಗಳಾಗಿದ್ದು, ಸ್ವಾಮಿ ಗೋರಖನಾಥರ ಶಿಷ್ಯನಾಗಿದ್ದ ಯೋಗಿ ಸ್ವಾತ್ಮರಾಮರು ಕ್ರಿ.ಶ. 15ನೇ ಶತಮಾನದಲ್ಲಿ ಬರೆದ ಹಠ ಯೋಗ ಪ್ರದೀಪಿಕ ಅವುಗಳಲ್ಲಿ ಮುಖ್ಯವಾದುದು. ಹಠ ಯೋಗವು ಪತಂಜಲಿಯ ರಾಜ ಯೋಗವನ್ನು ಸಾಧಿಸುವುದಕ್ಕಿರುವ ಮೆಟ್ಟಲೆಂದೂ, ಉನ್ನತ ಧ್ಯಾನಾಭ್ಯಾಸಕ್ಕೆ ದೇಹವನ್ನು ಅಣಿಗೊಳಿಸುವ ದೈಹಿಕ ಶುದ್ಧೀಕರಣದ ಹಂತವೆಂದೂ ಸ್ವಾತ್ಮರಾಮರು ತಮ್ಮ ಗ್ರಂಥವನ್ನು ಪರಿಚಯಿಸುತ್ತಾರೆ. ಇಂದು ಪತಂಜಲಿಯ ರಾಜ ಯೋಗ ಹಾಗೂ ಸ್ವಾತ್ಮರಾಮರ ಹಠ ಯೋಗಗಳಲ್ಲದೆ ಇನ್ನೂ ಅಸಂಖ್ಯಾತ ಯೋಗ ಹಾಗೂ ಧ್ಯಾನ ವಿಧಾನಗಳು ಕಾಣಸಿಗುತ್ತವೆ: ಅಗ್ನಿ ಯೋಗ, ಅನಾಹತ ಯೋಗ, ಆರ್ಟಿಸ್ಟಿಕ್ ಯೋಗ, ಅಷ್ಟಾಂಗ ವಿನ್ಯಾಸ ಯೋಗ, ಭಕ್ತಿ ಯೋಗ, ಬಿಕ್ರಂ ಯೋಗ ಅಥವಾ ಹಾಟ್ ಯೋಗ, ಡಿಸ್ಕೋ ಯೋಗ, 'ಬಾಬಾ' ರಾಮದೇವನ ದಿವ್ಯ ಯೋಗ, ಡ್ರೀಂ ಯೋಗ, ಹಿಪ್ ಹಾಪ್ ಯೋಗ, ಇಂಟೆಗ್ರಲ್ ಯೋಗ, ಐಯ್ಯಂಗಾರ್ ಯೋಗ, ಜ್ಞಾನ ಯೋಗ, ಕರ್ಮ ಯೋಗ, ಕ್ರಿಯಾ ಯೋಗ, ಕುಂಡಲಿನಿ ಯೋಗ, ನಾಟ್ಯ ಯೋಗ, ಪವರ್ ಯೋಗ, ರಿಸ್ಟೊರಟಿವ್ ಯೋಗ, ಪ್ರಭಾಕರ ಋಷಿಯ ಸಿದ್ಧ ಸಮಾಧಿ ಯೋಗ, ನರೋಪನ ಆರು ಯೋಗ, ಸಹಜ ಯೋಗ, ಸಿಲ್ವರ್ ಯೋಗ, ಶಿವಾನಂದ ಯೋಗ, ರವಿಶಂಕರನ ಸುದರ್ಶನ ಕ್ರಿಯೆ, ಸುರತ್ ಶಬ್ದ ಯೋಗ, ಮಹೇಶ್ ಯೋಗಿಯ ಟ್ರಾಂಸೆಂಡೆಂಟಲ್ ಮೆಡಿಟೇಶನ್, ವಿನಿಯೋಗ, ಯಂತ್ರ ಯೋಗ, ಯೋಗ ನಿದ್ರಾ ಇತ್ಯಾದಿ ಉದಾಹರಣೆಗಳಾಗಿವೆ. ಈ ವಿವಿಧ ಯೋಗ ವಿಧಾನಗಳ ಗುಣ ವಿಶೇಷಗಳೂ, ಜನಪ್ರಿಯತೆಯೂ ಅವುಗಳ ಪ್ರವರ್ತಕರ ವ್ಯವಹಾರ ಹಾಗೂ ಸಂವಹನ ಕೌಶಲ್ಯಗಳಿಗೆ ಅನುಗುಣವಾಗಿದೆಯೆನ್ನುವುದನ್ನು ಬೇರೆ ಹೇಳ ಬೇಕಾಗಿಲ್ಲ. ಬಾಬಾ ರಾಮದೇವ್ ಸ್ವಾಮಿ ಮಹಾರಾಜರು ಏಳು ವಿಧದ ಪ್ರಾಣಾಯಮಗಳನ್ನು, ಅದರಲ್ಲೂ ವಿಶೇಷವಾಗಿ ಕಪಾಲಭಾತಿಯನ್ನು ಕಲಿಸುವವರಾದರೆ,[1] ಮಹಾಪೂಜನೀಯರಾದ ಶ್ರೀ ಶ್ರೀ ರವಿಶಂಕರ್ ಅವರು 'ಸುದರ್ಶನ ಕ್ರಿಯೆ ಎಂಬ ಅತ್ಯಂತ ಪ್ರಭಾವಶಾಲಿಯಾದ ಉಸಿರಾಟದ ವಿಧಾನವನ್ನು ಜಗತ್ತಿಗೆ ಸಮರ್ಪಿಸುವುದಕ್ಕಾಗಿ ಹತ್ತು ದಿನಗಳ ಕಾಲ ಆಳವಾದ ಚಿಂತನೆ ಹಾಗೂ ಮೌನದಲ್ಲಿ' ಕಳೆಯಬೇಕಾಯಿತಂತೆ.[2-5]
ಇಂದು ಪ್ರಚಲಿತವಿರುವ 'ಯೋಗ'ದಲ್ಲಿ ಇಷ್ಟೊಂದು ವೈವಿಧ್ಯತೆಯಿರುವಾಗ, ನೀವು ಕಲಿತಿರುವುದು ಯಾ ಮಾಡುತ್ತಿರುವುದು ನಿಜಕ್ಕೂ ಭಾರತದ ಪ್ರಾಚೀನ ಯೋಗವೇ? ಅಲ್ಲದೆ, ತಪಸ್ವಿಗಳ ಅಭ್ಯಾಸವಾಗಿ ರೂಪತಳೆದ ಯೋಗವು ನಮಗೆ ಅಗತ್ಯವೇ?
ಯೋಗದಿಂದ ಪ್ರಯೋಜನಗಳಿವೆಯೇ?
ಧ್ಯಾನದತ್ತ ತಮ್ಮ ಗಮನವನ್ನು ಕೇಂದ್ರೀಕರಿಸಲು ನೆರವಾಗಲೆಂದು ಋಷಿ-ಮುನಿಗಳು ಬಳಸುತ್ತಿದ್ದ ಯೋಗಾಭ್ಯಾಸವು ಇಂದು 'ಸರ್ವರೋಗ ನಿವಾರಕ ವಿಜ್ಞಾನ'ವಾಗಿ ಬೆಳೆದಿರುವುದು ಹೇಗೆ? ಬಾಬಾ ರಾಮದೇವನನ್ನು ನಂಬಬಹುದಾದರೆ, ಅವನು 'ವಿಪುಲವಾಗಿ ದೊರೆಯುವ ಪ್ರಾಣ (ಆಮ್ಲಜನಕ) ವನ್ನು ಔಷಧವಾಗಿ ಬಳಸಿದವರಲ್ಲಿ ವಿಶ್ವದ ಆರೋಗ್ಯದ ಚರಿತ್ರೆಯಲ್ಲಿಯೇ ಮೊತ್ತ ಮೊದಲನೆಯವನಾಗಿದ್ದಾನೆ ಮತ್ತು ಆ ಮೂಲಕ ಆಧುನಿಕ ವೈದ್ಯ ವಿಜ್ಞಾನಕ್ಕೆ ಸವಾಲಾಗಿರುವ ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯಬೇನೆ, ರಕ್ತನಾಳಗಳಲ್ಲಿ ತೊಡಕು, ಬೊಜ್ಜು, ಅಸ್ತಮಾ, ಶ್ವಾಸನಾಳಗಳ ಕಾಹಿಲೆ, ಬಿಳಿತೊನ್ನು, ಖಿನ್ನತೆ, ಪಾರ್ಕಿನ್ಸನ್ ಕಾಹಿಲೆ, ನಿದ್ರಾಹೀನತೆ, ತಲೆಶೂಲೆ, ಥೈರಾಯ್ಡ್ (?), ಸಂಧಿವಾತ, ಕತ್ತು ನೋವು, ಹೆಪಟೈಟಿಸ್, ಮೂತ್ರ ಪಿಂಡಗಳ ವೈಫಲ್ಯ, ಕ್ಯಾನ್ಸರ್, ಯಕೃತ್ತಿನ ವೈಫಲ್ಯ, ಗಾಳಿ, ಮಲಬದ್ಧತೆ, ಆಮ್ಲೀಯತೆ ಇವೇ ಮುಂತಾದ ಮಾರಕ ರೋಗಗಳಿಂದ ಬಳಲುತ್ತಿರುವ ಸಹಸ್ರಾರು ಜನರಿಗೆ ಚಿಕಿತ್ಸೆ ನೀಡುವಲ್ಲಿ ಯಶಸ್ವಿಯಾಗಿದ್ದಾನೆ. ಪ್ರಾಣ (ಆಮ್ಲಜನಕ)ದ ಔಷಧೀಯ ಗುಣಗಳನ್ನು ತಿಳಿಯುವ ನಿಟ್ಟಿನಲ್ಲಿ ಅವನು ನಡೆಸುತ್ತಿರುವ ಅವಿರತ ಪ್ರಯತ್ನಗಳು ಶೀಘ್ರದಲ್ಲಿಯೇ ಆಧುನಿಕ ವೈದ್ಯ ವಿಜ್ಞಾನದ ದಿಕ್ಕನ್ನೇ ಬದಲಿಸಲಿದೆ'[6] ರಾಮದೇವನ ಈ ಸರ್ವರೋಗ ನಿವಾರಕ ವಿಧಾನಗಳನ್ನು ಕಲಿಯಬೇಕಾದರೆ ಆತನು ನಡೆಸುವ ಶಿಬಿರಗಳಿಗೆ (ಮುಂದಿನ ಸಾಲುಗಳಿಂದ ಹಿಂದಿನ ಸಾಲುಗಳ ವರೆಗೆ ಸಾವಿರಗಟ್ಟಲೆಯಿಂದ ತೊಡಗಿ ಬೇರೆ ಬೇರೆ ಮೌಲ್ಯವನ್ನು ತೆತ್ತು) ಹೋಗಬಹುದು ಅಥವಾ ಅವನೇ ನಡೆಸುವ ಟಿವಿ ವಾಹಿನಿಯಿಂದ ಉಚಿತವಾಗಿ ನೋಡಿ ಕಲಿಯಬಹುದು! ಸಾಮುದಾಯಿಕ ಆರೋಗ್ಯಕ್ಕೆ ಸಮೂಹ ಯೋಗಾಭ್ಯಾಸ! ಯೋಗದ ಪ್ರಚಾರ [ಅಥವಾ ಖಾವಿ ಯಾ ಬಿಳಿವಸ್ತ್ರ, ಉದ್ದನೆಯ ಗಡ್ಡ ಮೀಸೆ, ತುಟಿಯಂಚಿನ ಕಿರುನಗೆಗಳು] ಎಷ್ಟೊಂದು ಪ್ರಭಾವಶಾಲಿಯೆಂದರೆ, ವಿದ್ಯಾವಂತರೆನಿಸಿಕೊಂಡವರೂ, ದೊಡ್ಡ ವ್ಯಕ್ತಿಗಳೆನಿಸಿಕೊಂಡವರೂ ಈ ಹೇಳಿಕೆಗಳನ್ನೆಲ್ಲ ಯಾವುದೇ ಪ್ರಶ್ನೆಗಳಿಲ್ಲದೆ ತೆಪ್ಪಗೆ ಒಪ್ಪಿಕೊಳ್ಳುತ್ತಾರೆ. ತೀವ್ರ ಹೃದಯಾಘಾತ ಹಾಗೂ ಮಿದುಳಿನ ತೊಂದರೆಗೆ ಒಳಗಾಗಿ ಕೃತಕ ಉಸಿರಾಟವನ್ನು ಪಡೆಯುತ್ತಾ ತೀವ್ರ ನಿಗಾ ಘಟಕದಲ್ಲಿರುವ ಕೇಂದ್ರದ ಸಚಿವ ಪ್ರಿಯ ರಂಜನದಾಸ ಮುನ್ಶಿಯವರ ಚಿಕಿತ್ಸೆಗೆ ಅವರ ಸಂಬಂಧಿಗಳು ರಾಮದೇವನ ಮೊರೆ ಹೋಗಿ, ಅದಕ್ಕಾಗಿ ಪ್ರತಿಷ್ಠಿತ ಅಖಿಲ ಭಾರತ ವೈದ್ಯ ವಿಜ್ಞಾನ ಸಂಸ್ಥೆಯಿಂದ ಅವರನ್ನು ಬಿಡಿಸಿಕೊಂಡು ಖಾಸಗಿ ಆಸ್ಪತ್ರೆಗೆ ದಾಖಲುಗೊಳಿಸಿದ್ದು ಇತ್ತೀಚಿನ ನಿದರ್ಶನಗಳಲ್ಲೊಂದು.[7] ಹಲವು ಕೇಂದ್ರ ಹಾಗೂ ಕೆಲ ರಾಜ್ಯ ಸರಕಾರಗಳ ಮಂತ್ರಿಗಳು ಶಾಲಾ ಮಕ್ಕಳಿಗೆ ಒಂದನೇ ತರಗತಿಯಿಂದಲೇ ಕಡ್ಡಾಯ ಯೋಗ ಶಿಕ್ಷಣವನ್ನು ಆರಂಭಿಸುವ ನಿರ್ಧಾರಕ್ಕೆ ಬಂದಿರುವುದೂ ಬಹುಷಃ ಇದೇ ಕಾರಣಕ್ಕಾಗಿರಬಹುದು.[8,9]
ಆದರೆ ಯೋಗಾಭ್ಯಾಸದಿಂದ ಆರೋಗ್ಯಪಾಲನೆಗೆ ಏನಾದರೂ ಪ್ರಯೋಜನಗಳಿರುವ ಬಗ್ಗೆ ನಿಸ್ಸಂದೇಹವಾದ ಪುರಾವೆಗಳೆಲ್ಲಿ?
ಮನುಷ್ಯನ ಆರೋಗ್ಯ ಹಾಗೂ ಕಾಹಿಲೆಗಳ ಮೇಲೆ ಯೋಗಾಭ್ಯಾಸದ ಪರಿಣಾಮಗಳ ಬಗ್ಗೆ ಹಲವಾರು ಸಂಶೋಧನೆಗಳನ್ನು ನಡೆಸಲಾಗಿದೆ. ಇವುಗಳಲ್ಲಿ ಹೆಚ್ಚಿನವುಗಳನ್ನು ಸಹಜವಾಗಿಯೇ ಭಾರತದಲ್ಲಿಯೇ ನಡೆಸಲಾಗಿದ್ದು[10], ಕೆಲವನ್ನು ದೆಹಲಿಯ ಅಖಿಲ ಭಾರತ ವೈದ್ಯ ವಿಜ್ಞಾನ ಸಂಸ್ಥೆ (ಎ ಐ ಐ ಎಂ ಎಸ್), ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರರೋಗ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಮುಂತಾದ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಗಳಲ್ಲಿ ಹಾಗೂ ಅನ್ಯ ದೇಶಗಳಲ್ಲಿಯೂ ನಡೆಸಲಾಗಿದೆ. ಈ ಸಂಶೋಧನೆಗಳ ಹೆಚ್ಚಿನ ವರದಿಗಳು ಭಾರತದ ವೈದ್ಯಕೀಯ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದರೆ, ಕೆಲವೊಂದು ವಿದೇಶೀ ಪತ್ರಿಕೆಗಳಲ್ಲಿ, ಮುಖ್ಯವಾಗಿ ಬದಲಿ ಹಾಗೂ ಪೂರಕ ಚಿಕಿತ್ಸಾ ಪದ್ಧತಿಗಳ ಪತ್ರಿಕೆಗಳಲ್ಲಿ, ಪ್ರಕಟಗೊಂಡಿವೆ. ಈ ಅಧ್ಯಯನಗಳಲ್ಲಿ ಬೆರಳೆಣಿಕೆಯ ಕೆಲವನ್ನು ಬಿಟ್ಟರೆ ಮತ್ತೆಲ್ಲವೂ ಸಣ್ಣ ಪ್ರಮಾಣದ, ಅಲ್ಪಾವಧಿಯ, ಯಾದೃಚ್ಛಿಕವಲ್ಲದ, ನಿಯಂತ್ರಿತವಲ್ಲದ, ವೀಕ್ಷಕನ ಪಕ್ಷಪಾತಕ್ಕೆ ಅವಕಾಶವಿರುವಂತೆ ತೆರೆದ, ಸೇರ್ಪಡೆ ಹಾಗೂ ಹೊರಗಿಡುವಿಕೆಗೆ ಸ್ಪಷ್ಟವಾದ ಮಾನದಂಡಗಳನ್ನು ಗುರುತಿಸಿಲ್ಲದ, ಯೋಗಾಭ್ಯಾಸದ ಸ್ಪಷ್ಟ ವಿಧಾನಗಳನ್ನು ಗುರುತಿಸಿಲ್ಲದ, ಅಡ್ಡ ಪರಿಣಾಮಗಳ ಬಗ್ಗೆ ಹಾಗೂ ಅಧ್ಯಯನವನ್ನು ಮಧ್ಯದಲ್ಲಿಯೇ ತೊರೆದು ಹೋದವರ ಬಗ್ಗೆ ಮಾಹಿತಿಯನ್ನು ಒದಗಿಸದ ಅಧ್ಯಯನಗಳಾಗಿವೆ.
ಉಸಿರಾಟ, ಹೃದಯದ ಗತಿ, ರಕ್ತದೊತ್ತಡ, ಸ್ವಾಯತ್ತ ನರಮಂಡಲ, ರೋಗರಕ್ಷೆ ಇವೇ ಮುಂತಾದ ದೈಹಿಕ ಕಾರ್ಯಗಳ ಮೇಲೆ ಹಾಗೂ ಮಧುಮೇಹ, ಅಧಿಕ ರಕ್ತದೊತ್ತಡ, ಬೊಜ್ಜು, ಮೇದಸ್ಸಿನ ತೊಂದರೆಗಳು, ಅರ್ಬುದ ರೋಗಗಳು, ಅಸ್ತಮಾ, ದಮ್ಮು, ಅಪಸ್ಮಾರ, ಭಾವನೆಗಳು, ಆತಂಕ, ಖಿನ್ನತೆ, ಇಚ್ಚಿತ್ತ ವಿಕಲತೆ, ಗೀಳು ರೋಗ, ಅವಧಾನ ನ್ಯೂನತೆ, ತಿನ್ನುವ ತೊಂದರೆಗಳು, ಕರುಳಿನ ರೋಗಗಳು, ಮೇದೋಜೀರಕಾಂಗದ ಉರಿಯೂತ, ಗರ್ಭಿಣಿಯರು, ಋತುಬಂಧ, ಸ್ನಾಯುವೇದನೆ, ಮಾದಕ ದ್ರವ್ಯವ್ಯಸನ, ಸಂಧಿವಾತ, ಬೆನ್ನು ನೋವು, ಥೈರಾಯ್ಡ್ ಕಾಹಿಲೆಗಳು, ನಿದ್ರೆ, ಪಾರ್ಶ್ವವಾಯು, ಮಲ್ಟಿಪ್ಲ್ ಸ್ಕ್ಲಿರೋಸಿಸ್, ಮುಂಗೈ ನೋವು, ಮೂತ್ರಜನಕಾಂಗದ ಕಾಹಿಲೆಗಳು, ವೃದ್ಧಾಪ್ಯ, ತಲೆಶೂಲೆ, ಕ್ಷಯ, ಫೈಲೇರಿಯ ಇತ್ಯಾದಿ ರೋಗಗಳ ಮೇಲೆ ಯೋಗಾಭ್ಯಾಸದ ಪರಿಣಾಮಗಳ ಬಗ್ಗೆ ಅಧ್ಯಯನಗಳನ್ನು ನಡೆಸಲಾಗಿದೆ. ಈ ಅಧ್ಯಯನಗಳಲ್ಲಿ ಒಂದು ನಿರ್ದಿಷ್ಟವಾದ ಯೋಗವಿಧಾನದ ಬದಲಾಗಿ ಅಷ್ಟಾಂಗ ಯೋಗ, ಸಹಜ ಯೋಗ, ಹಠ ಯೋಗ, ಕುಂಡಲಿನಿ ಯೋಗ, ಐಯ್ಯಂಗಾರ್ ಯೋಗ, ಸಿಲ್ವರ್ ಯೋಗ, ರೆಸ್ಟೊರೇಟಿವ್ ಯೋಗ, ಸಿದ್ಧ ಸಮಾಧಿ ಯೋಗ, ಸುದರ್ಶನ ಕ್ರಿಯೆ, ಇಂಟೆಗ್ರೇಟೆಡ್ ಯೋಗ ಇವೇ ಮುಂತಾದ ವಿಧಾನಗಳನ್ನೂ, ಶವಾಸನ, ಶೀರ್ಷಾಸನ, ಕಪಾಲಭಾತಿ, ಕುಂಜಲ ಕ್ರಿಯೆ, ಅನುಲೋಮ ವಿಲೋಮ ಪ್ರಾಣಾಯಾಮ, ಮುಖ ಭಸ್ತ್ರಿಕ ಮತ್ತಿತರ ಪ್ರತ್ಯೇಕ ಆಸನಗಳನ್ನೂ, ಮಂತ್ರ, ವಿಪಾಸನ, ಟ್ರಾಂಸೆಂಡೆಂಟಲ್ ಮೆಡಿಟೇಶನ್ ಮುಂತಾದ ಧ್ಯಾನ ವಿಧಗಳನ್ನೂ ಬಳಸಿಕೊಳ್ಳಲಾಗಿದೆ.
ಪ್ರಕಟಗೊಂಡಿರುವ ಎಲ್ಲಾ ಅಧ್ಯಯನಗಳ ವಿವರಗಳನ್ನು ಇಲ್ಲಿ ಒದಗಿಸಲು ಸಾಧ್ಯವಿಲ್ಲದಿರುವುದರಿಂದ, ಈ ಅಧ್ಯಯನಗಳ ಬಗ್ಗೆ ಲಭ್ಯವಿರುವ ವಿಮರ್ಶೆಗಳ ವರದಿಗಳ ಸಾರಾಂಶಗಳನ್ನು ಇಲ್ಲಿ ನೀಡುತ್ತಿದ್ದೇನೆ. ಇವೆಲ್ಲವೂ, ಯೋಗಾಭ್ಯಾಸದ ಬಗ್ಗೆ ಹೆಚ್ಚಾಗಿ ಯೋಗ ತಜ್ಞರೇ ನಡೆಸಿದ ಅಧ್ಯಯನಗಳಲ್ಲಿ ಹಾಗೂ ಅವುಗಳ ಬಗ್ಗೆ ತಜ್ಞರು ನಡೆಸಿದ ವಿಶ್ಲೇಷಣೆಗಳಲ್ಲಿ ವ್ಯಕ್ತಗೊಂಡಿರುವ ಅಭಿಪ್ರಾಯಗಳೇ ಆಗಿದ್ದು ಲೇಖಕನ ಸ್ವಂತ ಅಭಿಪ್ರಾಯಗಳನ್ನು ಇದರಲ್ಲಿ ತೂರಿಸಿಲ್ಲವೆನ್ನುವುದನ್ನು ಮೊದಲಲ್ಲೇ ಸ್ಪಷ್ಟಪಡಿಸುತ್ತೇನೆ.
ಯೋಗವೂ ಸೇರಿದಂತೆ ಐದು ಧ್ಯಾನ ವಿಧಾನಗಳ ಕುರಿತು 1956ರಿಂದ 2005ರವರೆಗೆ ಪ್ರಕಟಗೊಂಡ 813 ಸಂಶೋಧನಾ ಬರಹಗಳನ್ನು ವಿಶ್ಲೇಷಿಸಿ ಮರಿಯಾ ಒಸ್ಪಿನಾ ಮತ್ತಿತರರು ಪ್ರಕಟಿಸಿರುವ ವರದಿಯನುಸಾರ, ಈ ಅಧ್ಯಯನಗಳ ಒಟ್ಟಾರೆ ಗುಣಮಟ್ಟವು ಕಳಪೆಯಾಗಿದ್ದು, ಬಹುಪಾಲು ಬರಹಗಳಲ್ಲಿ ಅಧ್ಯಯನಗಳ ಸ್ವರೂಪದ ಬಗ್ಗೆ ಪಾರದರ್ಶಕವಾದ ವಿವರಣೆಗಳೇ ಲಭ್ಯವಿರಲಿಲ್ಲ. ಯೋಗ ಅಥವಾ ಟ್ರಾಂಸೆಂಡೆಂಟಲ್ ಮೆಡಿಟೇಶನ್ ಗಳಿಂದ ಅಧಿಕ ರಕ್ತದೊತ್ತಡ, ಬೊಜ್ಜು ಹಾಗೂ ಕೊಲೆಸ್ಟರಾಲ್ ಮೇಲೆ ಯಾವುದೇ ಗಣನೀಯವಾದ ಪರಿಣಾಮಗಳೂ ಈ ಅಧ್ಯಯನಗಳಲ್ಲಿ ಕಂಡುಬರಲಿಲ್ಲ. ಆದ್ದರಿಂದ ಲಭ್ಯವಿರುವ ಸಂಶೋಧನೆಗಳ ಆಧಾರದಲ್ಲಿ ಯೋಗಾಭ್ಯಾಸವು ಈ ಕಾಹಿಲೆಗಳ ಚಿಕಿತ್ಸೆಯಲ್ಲಿ ಪರಿಣಾಮಕಾರಿಯೆಂದು ಹೇಳಲಾಗದು.[11]
ಯೋಗ ಮತ್ತು ಮಧುಮೇಹ
ಯೋಗಾಭ್ಯಾಸದಿಂದ ಮಧುಮೇಹ ನಿಯಂತ್ರಣದ ಮೇಲಾಗುವ ಪರಿಣಾಮಗಳ ಬಗ್ಗೆ ಹಲವಾರು ಅಧ್ಯಯನಗಳನ್ನು ನಡೆಸಲಾಗಿದ್ದು, ಇವುಗಳನ್ನು ವಿಶ್ಲೇಷಿಸಿ ಇನ್ನೆಸ್ ಮತ್ತಿತರರು[12], ಇನ್ನೆಸ್ ಹಾಗೂ ವಿನ್ಸೆಂಟ್[13], ಯಾಂಗ್[14], ಅಲ್ಜಸಿರ್[15] ಮತ್ತು ಅಲೆಕ್ಸಾಂಡರ್[16] ಅವರೆಲ್ಲ ತಯಾರಿಸಿರುವ ವರದಿಗಳಲ್ಲಿ, ಈ ಅಧ್ಯಯನಗಳು ಅಲ್ಪ ಕಾಲಾವಧಿಯವುಗಳಾಗಿದ್ದು, ಮಧುಮೇಹ ನಿಯಂತ್ರಣದ ಮೇಲೆ ದೀರ್ಘಕಾಲೀನ ಪರಿಣಾಮಗಳ ಬಗ್ಗೆ ಯಾವುದೇ ಮಾಹಿತಿಯು ಅವುಗಳಲ್ಲಿ ಲಭ್ಯವಿಲ್ಲದಿರುವುದರಿಂದ ಯೋಗಾಭ್ಯಾಸದಿಂದ ಮಧುಮೇಹದ ಚಿಕಿತ್ಸೆಯಲ್ಲಿ ಆಗಬಹುದಾದ ಪ್ರಯೋಜನಗಳ ಬಗ್ಗೆ ಖಚಿತವಾಗಿ ಏನನ್ನೂ ಹೇಳಲು ಸಾಧ್ಯವಾಗದೆನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ಅಧ್ಯಯನಗಳಲ್ಲಿ ಭಾಗವಹಿಸಿದವರಿಗೆ ಆಗಿರಬಹುದಾದ ತೊಂದರೆಗಳ ಬಗೆಗೆ ಯಾವುದೇ ಮಾಹಿತಿಯಿಲ್ಲದಿರುವುದನ್ನೂ ವಿಶ್ಲೇಷಕರು ಗುರುತಿಸಿದ್ದಾರೆ. ಈ ಕಾರಣಗಳಿಂದಾಗಿ ಮಧುಮೇಹದ ಚಿಕಿತ್ಸೆಯಲ್ಲಿ ಯೋಗಾಭ್ಯಾಸವನ್ನು ಬಳಸಬಹುದೆನ್ನುವ ಸಲಹೆಯನ್ನು ನೀಡುವ ಮೊದಲು ಸಾಕಷ್ಟು ದೊಡ್ದದಾದ, ದೀರ್ಘಕಾಲೀನ ಅಧ್ಯಯನಗಳ ಅಗತ್ಯವಿದೆಯೆನ್ನುವುದು ಅವರೆಲ್ಲರ ಅಭಿಪ್ರಾಯವಾಗಿದೆ.
ಯೋಗ ಮತ್ತು ಕ್ಯಾನ್ಸರ್
ಕ್ಯಾನ್ಸರ್ ರೋಗಿಗಳಲ್ಲಿ ಯೋಗದ ಪ್ರಯೋಜನಗಳ ಬಗ್ಗೆ ನಡೆಸಲಾಗಿರುವ ಅಧ್ಯಯನಗಳನ್ನು ಸ್ಮಿತ್ ಹಾಗೂ ಪುಕಾಲ್ [17] ವಿಶ್ಲೇಷಿಸಿದ್ದಾರೆ. ಈ ಅಧ್ಯಯನಗಳಲ್ಲಿ ಭಾಗಿಗಳಾಗಿದ್ದವರು ಬಹುತೇಕ ಮಹಿಳೆಯರಾಗಿದ್ದು, ಸ್ತನದ ಕ್ಯಾನ್ಸರ್ ನಿಂದ ಬಳಲುತ್ತಿದ್ದವರಾಗಿದ್ದರು. ಈ ಅಧ್ಯಯನಗಳ ವೈಧಾನಿಕ ಗುಣಮಟ್ಟಗಳು ವಿಭಿನ್ನವಾಗಿದ್ದುವಲ್ಲದೆ, ಬಳಸಲಾದ ಯೋಗವಿಧಾನದಲ್ಲೂ ವ್ಯತ್ಯಾಸಗಳಿದ್ದವು. ಈ ಕಾರಣಗಳಿಂದಾಗಿ, ಕ್ಯಾನ್ಸರ್ ಚಿಕಿತ್ಸೆಯಲ್ಲಿ ಯೋಗವನ್ನು ಬಳಸಬಹುದೆನ್ನುವ ಬಗ್ಗೆ ಈಗಲೇ ಖಚಿತವಾಗಿ ಏನನ್ನೂ ಹೇಳುವಂತಿಲ್ಲವೆಂದು ಸ್ಮಿತ್ ಹಾಗೂ ಪುಕಾಲ್ ಅಭಿಪ್ರಾಯ ಪಡುತ್ತಾರೆ.
ಯೋಗ ಮತ್ತು ಅಧಿಕ ರಕ್ತದೊತ್ತಡ
ಅಧಿಕ ರಕ್ತದೊತ್ತಡದ ನಿಯಂತ್ರಣದಲ್ಲಿ ಯೋಗದ ಪಾತ್ರದ ಕುರಿತು ನಡೆಸಲಾಗಿರುವ ಅಧ್ಯಯನಗಳಲ್ಲಿ ಕೇವಲ ರಕ್ತದೊತ್ತಡದ ಮೇಲಿನ ಪರಿಣಾಮಗಳನ್ನಷ್ಟೇ ಪರಿಗಣಿಸಲಾಗಿದೆಯಲ್ಲದೆ, ರೋಗಿಯ ಮೇಲಾಗುವ ಒಟ್ಟಾರೆ ಪರಿಣಾಮಗಳ ಬಗೆಗಾಗಲೀ, ಸಾವು ಅಥವಾ ಇತರ ತೊಂದರೆಗಳ ಬಗೆಗಾಗಲೀ ಯಾವುದೇ ಮಾಹಿತಿಯನ್ನು ಒದಗಿಸಿಲ್ಲ. ಆದ್ದರಿಂದ ಕೇವಲ ಯೋಗವನ್ನಷ್ಟೇ ಬಳಸಿ ಅಧಿಕ ರಕ್ತದೊತ್ತಡದ ಚಿಕಿತ್ಸೆಯನ್ನು ಮಾಡುವುದಕ್ಕೆ ಸಾಕಷ್ಟು ಪುರಾವೆಗಳಿಲ್ಲ ಹಾಗೂ ಹಾಗೆ ಮಾಡುವುದಿದ್ದರೆ ರಕ್ತದೊತ್ತಡವನ್ನೂ, ಅದರಿಂದಾಗ ಬಹುದಾದ ತೊಂದರೆಗಳನ್ನೂ ಸೂಕ್ಷ್ಮವಾಗಿ ಗಮನಿಸುತ್ತಿರಬೇಕಾದುದು ಅತ್ಯಗತ್ಯವೆನ್ನುವುದು ಡೋಷ್ ಅವರ ಅಭಿಮತವಾಗಿದೆ.[18]
ಅಪಸ್ಮಾರಕ್ಕೆ ಯೋಗಚಿಕಿತ್ಸೆ
ಅಪಸ್ಮಾರಕ್ಕೆ ಯೋಗಚಿಕಿತ್ಸೆಯ ಬಗ್ಗೆ ಲಭ್ಯವಿರುವ ಅಧ್ಯಯನಗಳಲ್ಲಿ ಹಲವು ನ್ಯೂನತೆಗಳಿದ್ದು ಅವುಗಳ ಗುಣಮಟ್ಟವು ಅಪೇಕ್ಷಣೀಯ ಮಟ್ಟದಲ್ಲಿಲ್ಲದಿರುವುದರಿಂದ ಅಪಸ್ಮಾರಕ್ಕೆ ಯೋಗಚಿಕಿತ್ಸೆಯ ಬಗ್ಗೆ ಯಾವುದೇ ನಂಬಲರ್ಹವಾದ ಸಲಹೆಗಳನ್ನು ನೀಡುವಂತಿಲ್ಲವೆಂದು ಈ ಅಧ್ಯಯನಗಳನ್ನು ವಿಶ್ಲೇಷಿಸಿದ ನಂದನ್ ಯಾರ್ಡಿ[19] ಹಾಗೂ ಕೊಕ್ರೇನ್ ವಿಮರ್ಶಕರಾದ ರಾಮರತ್ನಂ ಮತ್ತಿತರರು[20] ಅಭಿಪ್ರಾಯ ಪಡುತ್ತಾರೆ.
ಆತಂಕ ಹಾಗೂ ಖಿನ್ನತೆಗಳಿಗೆ ಯೋಗ ಚಿಕಿತ್ಸೆ
ಆತಂಕ ಮತ್ತು ಖಿನ್ನತೆಗಳ ಚಿಕಿತ್ಸೆಯಲ್ಲಿ ಯೋಗಾಭ್ಯಾಸದ ಬಳಕೆಯ ಬಗೆಗೆ ನಡೆಸಲಾದ ಅಧ್ಯಯನಗಳನ್ನು ವಿಶ್ಲೇಷಿಸಿದ ಪಿಲ್ಕಿಂಗ್ಟನ್ ಮತ್ತಿತರರು[21], ಜರ್ಮ್ ಮತ್ತಿತರರು[22], ಕಿರ್ಕ್ ವುಡ್ ಮತ್ತಿತರರು[23] ಹಾಗೂ ಕೊಕ್ರೇನ್ ವಿಮರ್ಶಕರು [24] ಈ ಅಧ್ಯಯನಗಳಲ್ಲಿ ಏಕರೂಪತೆಯ ಕೊರತೆ, ಕಳಪೆ ಗುಣಮಟ್ಟ, ಅಲ್ಪ ಕಾಲದ ವಿವರಗಳು ಹಾಗೂ ಅಡ್ಡ ಪರಿಣಾಮಗಳ ಬಗ್ಗೆ ಸೂಕ್ತ ಮಾಹಿತಿಯ ಕೊರತೆಗಳಿಂದಾಗಿ ಯೋಗಾಭ್ಯಾಸದಿಂದ ಆತಂಕ ಮತ್ತು ಖಿನ್ನತೆಗಳ ಚಿಕಿತ್ಸೆಯಲ್ಲಿ ಯಾವುದೇ ಪ್ರಯೋಜನವಾಗಬಹುದೆಂಬುದನ್ನು ನಿಖರವಾಗಿ ಹೇಳುವಂತಿಲ್ಲವೆಂಬ ಅಭಿಮತವನ್ನು ವ್ಯಕ್ತಪಡಿಸಿದ್ದಾರೆ.
ಅಸ್ತಮಾಕ್ಕೆ ಯೋಗಚಿಕಿತ್ಸೆ
ಅಸ್ತಮಾ ಚಿಕಿತ್ಸೆಯಲ್ಲಿ ಬದಲಿ ಪದ್ಧತಿಗಳ ಪ್ರಯೋಗವು ಸಾಮಾನ್ಯವಾಗಿದ್ದು 30-40%ಕ್ಕೂ ಹೆಚ್ಚು ರೋಗಿಗಳು ಒಂದಲ್ಲೊಂದು ಬದಲಿ ಚಿಕಿತ್ಸೆಯ ಮೊರೆ ಹೋಗಿರುತ್ತಾರೆ.[25] ಅಸ್ತಮಾ ಚಿಕಿತ್ಸೆಯಲ್ಲಿಯೂ ಯೋಗ ಹಾಗೂ ಇನ್ನಿತರ 'ಉಸಿರಾಟ ಚಿಕಿತ್ಸೆ'ಗಳನ್ನು ಸಾಕಷ್ಟು ಜನ ಪ್ರಯತ್ನಿಸುತ್ತಾರೆ. ಆದರೆ ಇಂತಹಾ ಪ್ರಯತ್ನಗಳಿಂದ ಯಾರಿಗೆ, ಹೇಗೆ, ಎಷ್ಟೊಂದು ಪ್ರಯೋಜನಗಳಿವೆಯೆನ್ನುವ ಬಗ್ಗೆ ಯಾವುದೇ ಸ್ಪಷ್ಟವಾದ ಪುರಾವೆಯೂ ಲಭ್ಯವಿಲ್ಲ.[26] ಕೊಕ್ರೇನ್ ವಿಮರ್ಶೆಗೊಳಪಟ್ಟ ಎರಡು ಅಧ್ಯಯನಗಳಲ್ಲಿ ವಿಭಿನ್ನ ಯೋಗ ವಿಧಾನಗಳನ್ನು ಅಳವಡಿಸಲಾಗಿತ್ತು; ಒಂದರಲ್ಲಿ, 16 ವಾರಗಳ ಅವಧಿಗೆ, ವಾರಕ್ಕೆ ಮೂರು ಸಲ, ಪ್ರತಿ ಬಾರಿ 45 ನಿಮಿಷಗಳಂತೆ ಯೋಗಾಭ್ಯಾಸವಿದ್ದರೆ, ಇನ್ನೊಂದರಲ್ಲಿ ಎರಡು ವಾರಗಳಲ್ಲಿ 2.5 ಗಂಟೆಗಳ ಯೋಗಾಭ್ಯಾಸವಿತ್ತು ಹಾಗೂ ಈ ಎರಡು ಅಧ್ಯಯನಗಳ ಪರಿಣಾಮಗಳಲ್ಲೂ ಭಿನ್ನತೆಗಳಿದ್ದವು. ಹೀಗಾಗಿ, ಅಸ್ತಮಾದಲ್ಲಿ ಯೋಗಾಭ್ಯಾಸದ ಪರಿಣಾಮಗಳ ಬಗ್ಗೆ ಈ ಅಧ್ಯಯನಗಳ ಆಧಾರದಲ್ಲಿ ಏನನ್ನೂ ಹೇಳುವುದು ಅಸಾಧ್ಯವೆನ್ನುವುದು ವಿಮರ್ಶಕರ ಅಭಿಪ್ರಾಯವಾಗಿದೆ. ಸ್ಟಾನ್ ಫೋರ್ಡ್ ವಿಶ್ವವಿದ್ಯಾಲಯದ ಥಾಮಸ್ ರಿಟ್ಜ್[28], ಲೇನ್ ಡಿಜೆ[29], ಕ್ಲಾಡಿಯಾ ಸ್ತ್ಯೂರರ್[30] ಮತ್ತಿತರರ ವಿಮರ್ಶೆಗಳಲ್ಲೂ ಅಸ್ತಮಾ ಚಿಕಿತ್ಸೆಯಲ್ಲಿ ಯೋಗದ ಪ್ರಯೋಜನಗಳ ಬಗೆಗೆ ನಡೆಸಲಾಗಿರುವ ಅಧ್ಯಯನಗಳು ಅಲ್ಪಾವಧಿಯವುಗಳೂ, ಅಪರ್ಯಾಪ್ತವೂ ಆಗಿರುವುದರಿಂದ ಯೋಗದ ಉಪಯುಕ್ತತೆಯ ಬಗ್ಗೆ ಖಚಿತವಾದ ತೀರ್ಮಾನಕ್ಕೆ ಬರುವಂತಿಲ್ಲವೆಂದೂ, ಕೆಲವು ಅಧ್ಯಯನಗಳಲ್ಲಿ ಮಧ್ಯದಲ್ಲಿಯೇ ಬಿಟ್ಟು ಹೋದವರ ಸಂಖ್ಯೆಯು ಸಾಕಷ್ಟು ದೊಡ್ಡದಿದ್ದು, ಯೋಗಾಭ್ಯಾಸದಿಂದಾಗಿರಬಹುದಾದ ತೊಂದರೆಗಳ ಬಗ್ಗೆ ಸಾಕಷ್ಟು ಮಾಹಿತಿ ದೊರೆಯುವುದಿಲ್ಲವೆಂದೂ ಅಭಿಪ್ರಾಯವನ್ನು ವ್ಯಕ್ತಪಡಿಸಲಾಗಿದೆ.
ದೀರ್ಘ ಕಾಲದ ನೋವಿಗೆ ಯೋಗಾಭ್ಯಾಸ
ಹಿರಿ ವಯಸ್ಕರಲ್ಲಿ ದೀರ್ಘ ಕಾಲದ ನೋವಿಗೆ ಯೋಗಾಭ್ಯಾಸವೂ ಸೇರಿದಂತೆ ಮನೋದೈಹಿಕ ಚಿಕಿತ್ಸಾಕ್ರಮಗಳಿಂದಾಗುವ ಪ್ರಯೋಜನಗಳ ಬಗೆಗಿನ ಎಂಟು ಅಧ್ಯಯನಗಳ ವಿಮರ್ಶೆಯಲ್ಲಿ[31] ಇವ್ಯಾವುವೂ ಸಾಕಷ್ಟು ಗಟ್ಟಿಯಾದ ಪುರಾವೆಯನ್ನು ಒದಗಿಸುವುದಿಲ್ಲವೆಂದೂ, ಈ ಕುರಿತು ದೊಡ್ಡ ಅಧ್ಯಯನಗಳ ಅಗತ್ಯವಿದೆಯೆಂದೂ ಹೇಳಲಾಗಿದೆ.
ಮಕ್ಕಳಲ್ಲಿ ಯೋಗಾಭ್ಯಾಸ
ಯೋಗಾಭ್ಯಾಸದಿಂದ ಮಕ್ಕಳ ದೇಹ ಹಾಗೂ ಜೀವನ ಗುಣಮಟ್ಟದ ಮೇಲಾಗುವ ಪರಿಣಾಮಗಳ ಬಗೆಗೆ ನಡೆಸಲಾಗಿರುವ 24 ಅಧ್ಯಯನಗಳನ್ನು ವಿಶ್ಲೇಷಿಸಿರುವ ಗಲಾಂಟಿನೋ ಮತ್ತಿತರರು ತಮ್ಮ ವರದಿಯಲ್ಲಿ[32] ಇವುಗಳ ಪೈಕಿ ಯಾವೊಂದು ಅಧ್ಯಯನವೂ ಅತ್ಯುತ್ತಮ ಗುಣಮಟ್ಟದ್ದಾಗಿರಲಿಲ್ಲವೆಂದೂ, ಮಕ್ಕಳ ಬೆಳವಣಿಗೆಯ ಸಾಕಷ್ಟು ಕಾಲಾವಧಿಯನ್ನು ಅಧ್ಯಯನಕ್ಕೆ ಒಳಪಡಿಸಿಲ್ಲವೆಂದೂ, ಬಳಸಲಾದ ವಿಧಾನಗಳಲ್ಲಿ ಬಹಳಷ್ಟು ಭಿನ್ನತೆಗಳಿದ್ದವೆಂದೂ, ಮಕ್ಕಳಲ್ಲಿ ಯೋಗದ ಸುರಕ್ಷತೆಯ ಬಗ್ಗೆ ಸಾಕಷ್ಟು ಮಾಹಿತಿಯಿಲ್ಲದಿದ್ದು ಆ ಬಗ್ಗೆ ಖಚಿತವಾಗಿ ಹೇಳುವಂತಿಲ್ಲವೆಂದೂ, ಮಕ್ಕಳಲ್ಲಿ ಯೋಗಾಭ್ಯಾಸದ ಗುಣಾವಗುಣಗಳ ಬಗ್ಗೆ ಏನನ್ನೇ ಹೇಳಲು ಈ ಅಧ್ಯಯನಗಳು ಅಪರ್ಯಾಪ್ತವೆಂದೂ ಹೇಳಿದ್ದಾರೆ.
ಯೋಗ ಮತ್ತು ಸ್ಮರಣ ಶಕ್ತಿ
ಯೋಗಾಭ್ಯಾಸದಿಂದ ಏಕಾಗ್ರತೆ ಹಾಗೂ ಸ್ಮರಣ ಶಕ್ತಿಯ ಮೇಲೆ ಅಪಾರವಾದ ಪ್ರಯೋಜನಗಳಿವೆಯೆನ್ನುವುದು ಸಾಮಾನ್ಯವಾದ ನಂಬಿಕೆಯಷ್ಟೇ ಅಲ್ಲ, ಅದುವೇ ಯೋಗಾಭ್ಯಾಸದ ಮೂಲ ಉದ್ದೇಶವೆಂದು ಯೋಗಶಿಕ್ಷಕರಿಂದ ಹಿಡಿದು ಅದನ್ನೀಗ ಮಕ್ಕಳ ಮೇಲೆ ಹೇರಲು ಹೊರಟಿರುವ ನಮ್ಮ ಸರಕಾರಗಳ ಅಂಬೋಣ. ಆಶ್ಚರ್ಯದ ಸಂಗತಿಯೆಂದರೆ, ಯೋಗಾಭ್ಯಾಸದಿಂದ ಸ್ಮರಣ ಶಕ್ತಿಯಾಗಲೀ, ಏಕಾಗ್ರತೆಯಾಗಲೀ ಬಲಗೊಳ್ಳುತ್ತದೆಯೆಂದು ದೃಢಪಡಿಸುವ ಯಾವುದೇ ಅಧ್ಯಯನಗಳು ಲಭ್ಯವಿಲ್ಲ! ಕೆಲವು ಸಣ್ಣ, ಅಲ್ಪ ಕಾಲದ ಅಧ್ಯಯನಗಳಲ್ಲಿ ಸ್ಮರಣ ಶಕ್ತಿಯ ಮೇಲೆ ಮಿತವಾದ ಪ್ರಭಾವವನ್ನು ಗುರುತಿಸಲಾಗಿದ್ದರೆ [33-36], ಇನ್ನು ಕೆಲವು ಅಧ್ಯಯನಗಳಲ್ಲಿ ಯಾವುದೇ ಪ್ರಯೋಜನಗಳು ಕಂಡುಬಂದಿಲ್ಲ.[37,38]
ಬಾಬಾ ರಾಮದೇವನ 'ಸಂಶೋಧನೆ'
'ತನ್ನ ಸಂಶೋಧನೆಗಳು ಯೋಗದ ಪ್ರಯೋಜನಗಳನ್ನು ದೃಢ ಪಡಿಸಿವೆ' ಎನ್ನುವುದು ರಾಮದೇವನ ಅಂಬೋಣ.[6] 'ಶೀಘ್ರದಲ್ಲಿಯೇ ಆಧುನಿಕ ವೈದ್ಯ ವಿಜ್ಞಾನದ ದಿಕ್ಕನ್ನೇ ಬದಲಿಸಲು' ಹೊರಟಿರುವ ರಾಮದೇವನ ಸಂಶೋಧನೆಗಳೇನು ಎನ್ನುವುದನ್ನು ಸ್ವಲ್ಪ ನೋಡೋಣ. ಅವನ ಜಾಲತಾಣದಲ್ಲಿ ದಾಖಲಿಸಿರುವ 'ಸಂಶೋಧನೆಯ' ವಿವರಗಳು ಹೀಗಿವೆ: ಮಧುಮೇಹದ ಹತ್ತು ರೋಗಿಗಳ - 8 ದಿನಗಳ ನಂತರ ರಕ್ತದ ಗ್ಲುಕೋಸ್ ಪರೀಕ್ಷೆ; ಕೊಲೆಸ್ಟರಾಲ್ ಹೆಚ್ಚಿದ್ದ 8 ರೋಗಿಗಳ - 8 ದಿನಗಳ ನಂತರ ಕೊಲೆಸ್ಟರಾಲ್ ಪರೀಕ್ಷೆ; ಶೀತ್ ಜ್ವರ - "ಶೀಘ್ರದಲ್ಲೇ ಬರಲಿದೆ"; ಸಂಧಿವಾತ - "ಶೀಘ್ರದಲ್ಲೇ ಬರಲಿದೆ"; ಮೂಳೆಸವೆತ - "ಶೀಘ್ರದಲ್ಲೇ ಬರಲಿದೆ"; ಖಿನ್ನತೆ - "ಶೀಘ್ರದಲ್ಲೇ ಬರಲಿದೆ"; ಮೂತ್ರಪಿಂಡದ ಕಾಹಿಲೆಗಳು - 6 ರೋಗಿಗಳ ಹೆಚ್ಚಿನ ವಿವರಗಳು ಸಾಮಾನ್ಯರಿಗೆ ಹತ್ತಿರ, ಸುಧಾರಣೆ ಅತ್ಯಲ್ಪ; ಇಸಿಜಿ ಮತ್ತು ಶ್ವಾಸಕಾರ್ಯಗಳ ಪರೀಕ್ಷೆ - ವಿವರಗಳಿಲ್ಲ, ತೊಂದರೆಗಳು ಸರಿಯಾದವೆಂಬ ಹೇಳಿಕೆಯಷ್ಟೇ.
ರಾಮದೇವನ ಪತಂಜಲಿ ಯೋಗಪೀಠದಿಂದ ಎರಡು 'ಸಂಶೋಧನಾ ಬರಹಗಳು' ಸಂಪಾದಕರಿಗೆ ಪತ್ರಗಳ ರೂಪದಲ್ಲಷ್ಟೇ ಪ್ರಕಟಗೊಂಡಿವೆ. ಮಂಜುನಾಥ ಕೃಷ್ಣಮೂರ್ತಿ ಹಾಗೂ ಶೆರ್ಲಿ ಟೆಲಿಸ್ ಅವರ ಅಧ್ಯಯನದಲ್ಲಿ[39] ಯೋಗ ಹಾಗೂ ಆಯುರ್ವೇದ ಚಿಕಿತ್ಸೆಯನ್ನು ಪಡೆದವರಲ್ಲಿ ಕ್ರಮವಾಗಿ ಶೇ.22 ಹಾಗೂ ಶೇ.47ರಷ್ಟು ರೋಗಿಗಳು ಮತ್ತೆ ಪರೀಕ್ಷೆಗೆ ಬರಲೇ ಇಲ್ಲ; ಹಾಗಿದ್ದರೂ ಇವರು ಯಾವ ಚಿಕಿತ್ಸೆಯನ್ನೂ ಪಡೆಯದವರಿಗಿಂತ (ಇವರಲ್ಲೂ ಶೇ. 13ರಷ್ಟು ಮತ್ತೆ ಬರಲಿಲ್ಲ) ಬೇಗನೇ ಗುಣಮುಖರಾದರೆನ್ನುವ ತೀರ್ಮಾನ ಸಂಶೋಧಕರದು! ಬೊಜ್ಜು, ಅಧಿಕ ರಕ್ತದೊತ್ತಡ, ರಕ್ತದ ಗ್ಲುಕೋಸ್ ಹಾಗೂ ಕೊಲೆಸ್ಟರಾಲ್ ಮೇಲೆ ಯೋಗ ಹಾಗೂ ಪ್ರಾಣಾಯಾಮಗಳ ಪ್ರಭಾವದ ಬಗ್ಗೆ ನಡೆಸಲಾದ ಅಧ್ಯಯನವು [40] ಅದೆಂತು ಪ್ರಕಟಯೋಗ್ಯವಾಗಿ ಕಂಡಿತೆನ್ನುವುದೇ ಒಂದು ಸೋಜಿಗವಾಗಿದೆ: ಈ ಅಧ್ಯಯನದಲ್ಲಿ ಹಲವು ನ್ಯೂನತೆಗಳಿದ್ದುವೆಂದು ಸ್ವತಃ ಸಂಶೋಧಕರೇ ಒಪ್ಪಿಕೊಂಡಿದ್ದು, ಅವುಗಳಲ್ಲಿ ಕೆಲವನ್ನು ಹೇಳಿಕೊಂಡಿದ್ದಾರೆ - 'ಅದು ನಿಯಂತ್ರಿತವಾಗಿರಲಿಲ್ಲ', 'ರಕ್ತದ ಗ್ಲುಕೋಸ್ ಮಾಪಕವು ಕೆಟ್ಟಿತ್ತು', 'ಪರಿಣಾಮಗಳನ್ನು 6-7 ದಿನಗಳಲ್ಲೇ ಅಳೆಯಲಾಯಿತು' (ಆದರೂ, ಬಹಳಷ್ಟು ಪ್ರಯೋಜನಗಳು ಕಂಡುಬಂದವೆಂದು ಅವರೇ ಹೇಳಿಕೊಂಡಿದ್ದಾರೆ!), 'ಪ್ರಯೋಜನಗಳು ಉಳಿದುಕೊಂಡವೇ ಎನ್ನುವುದು ತಿಳಿಯಲಿಲ್ಲ', 'ತೂಕದಲ್ಲುಂಟಾದ ಇಳಿಕೆಯು ಆಹಾರಕ್ರಮದ ಬದಲಾವಣೆಯಿಂದಲೂ ಆಗಿರಬಹುದು' ಇತ್ಯಾದಿ. ರಾಮದೇವ್ ಹಾಗೂ ಆತನ 'ಶಿಷ್ಯರ' ಇನ್ನಿತರ 'ಸಂಶೋಧನೆಗಳ'[41,42] ಗುಣಮಟ್ಟವೂ ಹೀಗೆಯೇ ಇದ್ದು ಇವನ್ನೆಲ್ಲ 'ಸಂಶೋಧನೆಗಳು' ಎನ್ನಬಹುದಾದಲ್ಲಿ ಬೇರೆ ಏನನ್ನೂ ಸಂಶೋಧನೆ ಎಂದು ಕರೆಯಲು ಅಡ್ಡಿಯೇನು?
ಸುದರ್ಶನ ಕ್ರಿಯೆಯ ಬಗ್ಗೆ ಅಧ್ಯಯನಗಳು
ರವಿಶಂಕರನ ಸುದರ್ಶನ ಕ್ರಿಯೆಯ ಪ್ರಯೋಜನಗಳ ಬಗೆಗೂ ಕೆಲವು ವರದಿಗಳು ಪ್ರಕಟವಾಗಿದ್ದು[43], ಇವುಗಳನ್ನು ದೃಢಪಡಿಸಬೇಕಾದರೆ ಇನ್ನಷ್ಟು ದೊಡ್ದದಾದ, ನಿಯಂತ್ರಿತವಾದ, ಗಟ್ಟಿ ವಿನ್ಯಾಸವುಳ್ಳ ಅಧ್ಯಯನಗಳ ಅಗತ್ಯವಿದೆಯೆಂದು ಅವುಗಳಲ್ಲಿ ಹೆಚ್ಚಿನವುಗಳ ಲೇಖಕರೇ ಸ್ಪಷ್ಟವಾಗಿ ಹೇಳಿದ್ದಾರೆ. ಹಾಗಿದ್ದರೂ, ತಮ್ಮ ಕಾರ್ಯಕ್ರಮಗಳ ಅತ್ಯುತ್ತಮ ಪ್ರಯೋಜನಗಳನ್ನು ಸ್ವತಂತ್ರ ವೈದ್ಯಕೀಯ ಅಧ್ಯಯನಗಳು ದೃಢಪಡಿಸಿದ್ದು, ಆರ್ಟ್ ಆಫ್ ಲಿವಿಂಗ್ ನಡೆಸುವ ಕಾರ್ಯಾಗಾರಗಳು ವಿಶ್ವದೆಲ್ಲೆಡೆ ಅಷ್ಟೊಂದು ಜನಪ್ರಿಯವಾಗಿರುವುದಕ್ಕೆ ನಿದರ್ಶನವೆಂದು ಸಂಸ್ಥೆಯು ಯಾವುದೇ ಹಿಂಜರಿಕೆಯಿಲ್ಲದೆ ಹೇಳಿಕೊಂಡಿದೆ![44]
ಯೋಗದ ಬಗೆಗೆ ನಡೆಸಲಾಗಿರುವ ಅಧ್ಯಯನಗಳ ಗುಣಮಟ್ಟದ ಬಗ್ಗೆ ಕೆಲವು ಯೋಗತಜ್ಞರಿಗೇ ತೃಪ್ತಿಯಿಲ್ಲ. ಅಮೆರಿಕಾದ ಫಿಲಡೆಲ್ಫಿಯಾದಲ್ಲಿರುವ ಬಿ ಕೆ ಎಸ್ ಐಯ್ಯಂಗಾರ್ ಯೋಗ ಕೇಂದ್ರದ ನಿರ್ದೇಶಕರಾಗಿರುವ ಮರಿಯನ್ ಗಾರ್ಫಿಂಕ್ಲ್ [45] ಹೇಳುವಂತೆ, ಬದಲಿ ಚಿಕಿತ್ಸಾ ವಿಧಾನಗಳ ಬಗ್ಗೆ ಸುಸ್ಪಷ್ಟವಾದ, ನಿಯಂತ್ರಿತ ಅಧ್ಯಯನಗಳನ್ನು ನಡೆಸಿಲ್ಲವಾದ್ದರಿಂದ ಅವುಗಳ ಉಪಯುಕ್ತತೆಯ ಬಗ್ಗೆ ಸಾಕಷ್ಟು ಪ್ರಬಲ ಆಧಾರಗಳು ಅಲಭ್ಯವಿದ್ದು, ಇದು ಮುಂದಿನ ಅಧ್ಯಯನಗಳಿಗೂ ತೊಡಕಾಗಬಹುದು. ಹೆಚ್ಚಿನ ಬದಲಿ ಚಿಕಿತ್ಸೆಗಳನ್ನು ವೈಜ್ಞಾನಿಕ ಮಾನದಂಡಗಳ ಅಧ್ಯಯನಗಳಲ್ಲಿ ಪರೀಕ್ಷಿಸಲು ಸಾಧ್ಯವಿಲ್ಲ, ಬದಲಾಗಿ ನಂಬಿಕೆ, ಅಲ್ಲಿಲ್ಲೊಂದು ಉದಾಹರಣೆಗಳು ಮತ್ತು ಅವುಗಳದ್ದೇ ಆದ ಸಿದ್ದಾಂತಗಳನ್ನೇ ನೆಚ್ಚಿಕೊಂಡು ಅವುಗಳ ಬಳಕೆಯನ್ನು ಮುಂದುವರಿಸಬೇಕೆಂಬ ವಾದಗಳಿದ್ದರೂ, [46] ಉಪಯುಕ್ತತೆ ಹಾಗೂ ಸುರಕ್ಷತೆಯ ಬಗ್ಗೆ ಸಾಕಷ್ಟು ಪ್ರಬಲವಾದ ಆಧಾರಗಳಿಲ್ಲದೆ ಅವುಗಳನ್ನು ಬಳಸಬೇಕೆನ್ನುವುದು ಒಪ್ಪತಕ್ಕಂತಹುದಲ್ಲ ಹಾಗೂ ಈ ಬಗ್ಗೆ ಹೆಚ್ಚಿನ ಅಧ್ಯಯನಗಳು ಅತ್ಯಗತ್ಯ ಎಂದವರು ಹೇಳುತ್ತಾರೆ.
ಹೀಗಿರುವಾಗ, ಯೋಗವು ಅಬಾಲವೃದ್ಧರಾಗಿ ಸರ್ವರಿಗೂ, ಸರ್ವರೋಗಗಳ ನಿಯಂತ್ರಣಕ್ಕೂ, ನಿವಾರಣೆಗೂ ಅತ್ಯುಪಯುಕ್ತವೆಂದು ಹೇಳುವುದನ್ನು ನಾವು ನಂಬಬೇಕಾದ ಅಗತ್ಯವಿದೆಯೇ?
ಯೋಗವು ಸುರಕ್ಷಿತವೇ?
ಮಕ್ಕಳಿಗೆ ಯೋಗಶಿಕ್ಷಣವನ್ನು ಕಡ್ಡಾಯಗೊಳಿಸಬಾರದು ಎಂದು ನಾವು ನೀಡಿದ ಪತ್ರಿಕಾ ಪ್ರಕಟಣೆಗೆ ಉತ್ತರವಾಗಿ ಮಂಗಳೂರಿನ ಪತ್ರಿಕೆಯೊಂದು 'ಯೋಗ: ಸಲ್ಲದ ಆಕ್ಷೇಪ' ಎಂಬ ಶೀರ್ಷಿಕೆಯ ಸಂಪಾದಕೀಯವನ್ನೇ ಪ್ರಕಟಿಸಿತು. ಯೋಗದ ಬಗ್ಗೆ ಯಾರೂ ಆಕ್ಷೇಪಗಳನ್ನು ಎತ್ತದಿರುವಾಗ ಕೆಲವೇ ಕೆಲವು ಬುದ್ಧಿಜೀವಿಗಳೆನಿಸಿಕೊಂಡವರ ಆಕ್ಷೇಪವು ಹಾಸ್ಯಾಸ್ಪದವೆಂದೂ (ಬುದ್ಧಿಜೀವಿಗಳೆಂಬ ಹಣೆಪಟ್ಟಿ ಹಚ್ಚಿ ಅವರನ್ನು ಅಜ್ಞಾನಿಗಳೆಂದೂ, ಭ್ರಾಂತರೆಂದೂ ಹೀಯಾಳಿಸುವುದು ಕೆಲವರಿಗೆ ಪರಿಪಾಠವೇ ಆಗಿದೆ; ದಾಳಿಯೇ ಅತ್ಯುತ್ತಮ ರಕ್ಷಣೆಯಲ್ಲವೇ? ಆದರೆ 'ಬುದ್ಧಿಜೀವಿಗಳು' ಅಜ್ಞಾನಿಗಳೂ ಆಗಿರುವುದು ಹೇಗೆ ಎನ್ನುವುದನ್ನು ಪತ್ರಿಕೆಯವರೇ ಹೇಳಬೇಕು!), ಯೋಗಕ್ಕೆ ಮಾರು ಹೋಗಿರುವ ವಿದೇಶೀಯರೇನೂ ಕುರುಡರಲ್ಲವೆಂದೂ (ರಾಷ್ಟ್ರೀಯತೆಯ ಬಗ್ಗೆ ಕಿರಿಚಾಡುವ ಈ ಪತ್ರಿಕೆಗೆ ವಿದೇಶೀಯರ ಮೇಲೆ ಕುರುಡು ಪ್ರೇಮ ಅದೇಕೆಂದು ತಿಳಿಯದು), ಯೋಗದ ದುಷ್ಪರಿಣಾಮಗಳ ಬಗ್ಗೆ ಯಾವುದೇ ಉಲ್ಲೇಖಗಳೇ ಇಲ್ಲವೆಂದೂ ಪತ್ರಿಕೆಯಲ್ಲಿ ಘೋಷಿಸಲಾಯಿತು. ತಾವು ತಿಳಿದಿರುವುದಷ್ಟೇ ಸರ್ವಜ್ಞಾನವೆಂದು ಭಾವಿಸಿದಂತಿರುವ ಈ ಕೂಪಮಂಡೂಕಗಳು ತಮ್ಮ ಅಂಧಶೃದ್ಧೆಯನ್ನೇ ಸಾರ್ವಜನಿಕರೆಲ್ಲರಿಗೆ ಅಂಟಿಸಿ ಎಷ್ಟೊಂದು ಹಾನಿಯನ್ನುಂಟು ಮಾಡಬಲ್ಲರೆನ್ನುವುದಕ್ಕೆ ಇದೊಂದು ಅತ್ಯುತ್ತಮ ನಿದರ್ಶನವಾಗಿದೆ.
ಒಂದೆಡೆಯಲ್ಲಿ,. ಯೋಗದ ಬಗ್ಗೆ ನಡೆಸಲಾಗಿರುವ ಬಹುತೇಕ ಎಲ್ಲಾ ಅಧ್ಯಯನಗಳಲ್ಲಿಯೂ ಅಡ್ಡಪರಿಣಾಮಗಳ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ, ಮಾತ್ರವಲ್ಲ, ಕೆಲವು ಅಧ್ಯಯನಗಳಲ್ಲಿ ಅದನ್ನು ತೊರೆದು ಹೋದವರ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿದ್ದು ಅವರೇಕೆ ತೊರೆದರೆನ್ನುವ ಮಾಹಿತಿಯನ್ನೂ ನೀಡಲಾಗಿಲ್ಲ. ಇನ್ನೊಂದೆಡೆ, ಯೋಗಾಭ್ಯಾಸದಿಂದಾಗಿ ತಲೆನೋವಿನಿಂದ ಹಿಡಿದು ಮಿದುಳು ಹಾಗೂ ನರಮಂಡಲಕ್ಕೆ ಶಾಶ್ವತ ಹಾನಿಯುಂಟಾದಂತಹ ಅತಿ ಗಂಭೀರವಾದ ತೊಂದರೆಗಳಾದ ಬಗ್ಗೆ ಹಲವಾರು ವರದಿಗಳಿವೆ. ಅಮೆರಿಕಾದ ಬಳಕೆ ಉತ್ಪನ್ನಗಳ ಸುರಕ್ಷತಾ ಆಯೋಗದ ವರದಿಯ ಪ್ರಕಾರ, ಮೂರು ವರ್ಷಗಳ ಅವಧಿಯಲ್ಲಿ 13000ಕ್ಕೂ ಅಧಿಕ ಜನರು ಯೋಗಾಭ್ಯಾಸದ ವೇಳೆ ಉಂಟಾದ ತೊಂದರೆಗಳಿಗಾಗಿ ತುರ್ತು ಚಿಕಿತ್ಸಾ ಘಟಕಗಳಿಗೋ, ವೈದ್ಯರ ಬಳಿಗೋ ಹೋಗಬೇಕಾಯಿತು.[47,48] ಸ್ನಾಯುಗಳಿಗೆ ಹಾನಿ ಹಾಗೂ ಮೂಳೆಮುರಿತಗಳು[49-52] (ಯೋಗ ಶಿಕ್ಷಕಿಯರಲ್ಲೂ ಸಹ [52]), ಪಾರ್ಶ್ವವಾಯು[53-55], ಕತ್ತಿನಲ್ಲಿ ಮೆದುಳುಬಳ್ಳಿಗೆ ಗಂಭೀರವಾದ ಹಾನಿ[56], ಪಾದದ ಬಲಹೀನತೆ[57], ಶ್ವಾಸಕೋಶದ ಪೊರೆಯಲ್ಲಿ ಗಾಳಿಸೋರಿಕೆ[58], ಚರ್ಮದಡಿಯಲ್ಲಿ ಹಾಗೂ ಎದೆಯೊಳಕ್ಕೆ ಗಾಳಿಸೋರಿಕೆ[59], ಉದರದ ಸ್ನಾಯುವಿನಲ್ಲಿ ರಕ್ತಸ್ರಾವ[60], ಹಲ್ಲುಕೊರೆತ[61], ಕಣ್ಣಿನ ದ್ರವದ ಒತ್ತಡದಲ್ಲಿ ಏರಿಕೆ ಮತ್ತು ಗ್ಲೊಕೋಮಾ[62-66], ರಕ್ತನಾಳದೊಳಕ್ಕೆ ಗಾಳಿ ಸೋರಿಕೆಯ ಮಾರಕ ತೊಂದರೆ[67] ಇತ್ಯಾದಿಗಳೆಲ್ಲ ಯೋಗಾಭ್ಯಾಸದ ವೇಳೆ ಉಂಟಾಗಿರುವ ಬಗ್ಗೆ ವರದಿಯಾಗಿವೆ.
ಯೋಗಾಭ್ಯಾಸದ ವೇಳೆ ದೇಹಕ್ಕೆ ಹಾನಿಯಾಗುವ ಸಾಧ್ಯತೆಗಳಿವೆಯೆನ್ನುವುದನ್ನು ಯೋಗತಜ್ಞರೇ ಒಪ್ಪುತ್ತಾರೆ. ಯೋಗಾಭ್ಯಾಸಿಗಳು ಆಸನಗಳನ್ನು ಸರಿಯಾಗಿ ಮಾಡದಿದ್ದರೆ, ಶಿಕ್ಷಕರ ಸೂಚನೆಗಳನ್ನು ಸರಿಯಾಗಿ ಪಾಲಿಸದಿದ್ದರೆ ಅಥವಾ ಶಿಕ್ಷಕರು ಸರಿಯಾದ ಸೂಚನೆಗಳನ್ನು ಕೊಡದಿದ್ದರೆ ಅಂತಹಾ ಹಾನಿಗಳುಂಟಾಗುವ ಸಂಭವನೀಯತೆಯು ಹೆಚ್ಚಿರುತ್ತದೆ.[68] ಯೋಗಾಭ್ಯಾಸದಿಂದ ಕಾಲು, ತೊಡೆ, ಕುತ್ತಿಗೆ ಮತ್ತು ಬೆನ್ನಿನ ಕೆಳಭಾಗಗಳ ಸ್ನಾಯುಗಳಿಗೆ ಹಾನಿಯಾಗುವುದು ಸಾಮಾನ್ಯ. ಕೆಲವೊಂದು ನಿರ್ದಿಷ್ಟ ಯೋಗ ಭಂಗಿಗಳಿಂದ ಭುಜ, ಮೊಣಕೈ ಹಾಗೂ ಮಣಿಗಂಟುಗಳಿಗೆ ಹಾನಿಯಾಗಬಹುದು. ಮೊಣಕಾಲು ಹಾಗೂ ಮೊಣಕೈಗಳನ್ನು ವಿಪರೀತವಾಗಿ ಬಗ್ಗಿಸುವುದರಿಂದ ಈ ಸಂಧಿಗಳಿಗೆ ಹಾನಿಯಾಗುವ ಸಾಧ್ಯತೆಗಳಿವೆ. ಬೆನ್ನೆಲುಬಿನ ಮೇಲೆ ಹಲವು ರೀತಿಯ ಗಂಭೀರ ತೊಂದರೆಗಳಿಗೂ ಯೋಗಾಸನಗಳು ಕಾರಣವಾಗಬಹುದು.[68]
ಅಷ್ಟಾಂಗ ವಿನ್ಯಾಸ ಯೋಗವನ್ನು ಅಭ್ಯಾಸ ಮಾಡುತ್ತಿದ್ದ 110 ಜನರಲ್ಲಿ ನಡೆಸಿದ ಅಧ್ಯಯನವೊಂದರಲ್ಲಿ,[49] ಸ್ನಾಯುಗಳು ಹಾಗೂ ಮೂಳೆಗಳಿಗೆ ತೊಂದರೆಯಾದ 107 ಪ್ರಕರಣಗಳು ಗುರುತಿಸಲ್ಪಟ್ಟವು ಹಾಗೂ ಆ ಪೈಕಿ 68 ಜನರಲ್ಲಿ (62%) ಕನಿಷ್ಠ ಒಂದು ವಿಧದ ಹಾನಿಯು ಒಂದು ತಿಂಗಳಿಗೂ ಹೆಚ್ಚು ಕಾಲ ಉಳಿದುಕೊಂಡುದನ್ನು ಗುರುತಿಸಲಾಯಿತು. ಕಾಲಿನ ಸ್ನಾಯುಗಳು, ಮೊಣಗಂಟು ಹಾಗೂ ಕೆಳಬೆನ್ನಿನ ತೊಂದರೆಗಳು ಅವರಲ್ಲಿ ಹೆಚ್ಚು ಸಾಮಾನ್ಯವಾಗಿದ್ದವು. ಯೋಗನಿರತಳಾಗಿದ್ದ 15 ವರ್ಷದ ಹುಡುಗಿಯೊಬ್ಬಳ ಕಾಲಿನ ಸಂಧಿಯಲ್ಲಿ ಮುರಿತವುಂಟಾದ ಪ್ರಕರಣವೂ ವರದಿಯಾಗಿದ್ದು,[51] ಮಕ್ಕಳಲ್ಲಿ ಯೋಗಾಭ್ಯಾಸದ ಸುರಕ್ಷತೆಯ ಬಗ್ಗೆ ಆತಂಕಕ್ಕೆ ಕಾರಣವಾಗಿದೆ.
ಬಾಬಾ ರಾಮದೇವನ ಯೋಗಶಿಬಿರವೊಂದರಲ್ಲಿ 14 ವರ್ಷದ ಬಾಲಕನೊಬ್ಬ ಸಾವನ್ನಪ್ಪಿದಾಗ[69], ಮೊದಲಲ್ಲಿ ರಾಮದೇವನು ಅದು ಯೋಗದಿಂದಾದ ಸಾವೆನ್ನುವುದನ್ನು ಅಲ್ಲಗಳೆದರೂ, ಮರುದಿನವೇ, ಯೋಗಾಭ್ಯಾಸದಲ್ಲಿ ಜಾಗರೂಕತೆಯಿರಬೇಕಾದದ್ದು ಅತ್ಯಗತ್ಯವೆಂದು ಆತನೇ ತನ್ನ ಶಿಬಿರಾರ್ಥಿಗಳಿಗೆ ಬೋಧಿಸಿದ![70]
ಯೋಗಾಭ್ಯಾಸವು ಅತಿ ಸುರಕ್ಷಿತವಲ್ಲವೆನ್ನುವ ಅಭಿಪ್ರಾಯವನ್ನು ಹಲವು ಯೋಗತಜ್ಞರೇ ವ್ಯಕ್ತಪಡಿಸಿದ್ದಾರೆ. ಅಮೆರಿಕಾದ ಕ್ಲೀವ್ ಲ್ಯಾಂಡಿನಲ್ಲಿರುವ ವರ್ತನಾ ವೈದ್ಯವಿಜ್ಞಾನ ಕೇಂದ್ರದ ವಿಜಯ ಶರ್ಮಾ ಅವರ ಪ್ರಕಾರ,[71] ನಿಧಾನವಾಗಿ ಉಸಿರಾಡುವ ಪ್ರಾಣಾಯಾಮ ಕ್ರಿಯೆಗಳಾದ ಭ್ರಮರಿ, ಶಿತಾಲಿ, ಸಿತ್ಕರಿ ಅಥವಾ ನಾಡಿ ಶೋಧನಗಳಿಂದ ಆರೋಗ್ಯದ ಮೇಲೆ ಹಾನಿಯಾಗುವ ಸಾಧ್ಯತೆಗಳು ಕಡಿಮೆಯಿದ್ದರೂ, ಅಭ್ಯಾಸಿಯು ಏಕಾಗ್ರತೆಯನ್ನೂ,, ತಾಳ್ಮೆಯನ್ನೂ, ಶಿಸ್ತನ್ನೂ ಕಾಪಾಡಿಕೊಂಡು, ಅವು ಹಿತದಾಯಕವಾಗಿರುವಂತೆ ಮಿತಿಯನ್ನು ಕಾಯ್ದುಕೊಂಡಿರಬೇಕಾಗುತ್ತದೆ. ಆದರೆ, ತೀವ್ರಗತಿಯ ಉಸಿರಾಟ ಕ್ರಿಯೆಯನ್ನೊಳಗೊಂಡಿರುವ ಕಪಾಲಭಾತಿ ಹಾಗೂ ಭಸ್ತ್ರಿಕದಂತಹ ಪ್ರಾಣಾಯಾಮಗಳಿಂದ (ರಾಮದೇವ್ ಹಾಗೂ ರವಿಶಂಕರ್ ಸಾಕಷ್ಟು ಪ್ರಚುರಪಡಿಸಿರುವುದು ಇವನ್ನೇ) ಹೆಚ್ಚಿನ ತೊಂದರೆಗಳಾಗಬಹುದು. ಇವುಗಳ 'ಪ್ರಯೋಜನಗಳ' ಬಗ್ಗೆ ಉತ್ಪ್ರೇಕ್ಷಿತ ಮಾತುಗಳನ್ನು ಕೇಳಿದ ಕೆಲವರು ಅತ್ಯುತ್ಸಾಹದಿಂದ ತಮ್ಮ ಉಸಿರಾಟದ ಗತಿಯನ್ನು ವಿಪರೀತ ಹೆಚ್ಚಿಸಿಕೊಳ್ಳುವುದರಿಂದ ಅತಿ ಉಸಿರಾಟದ ಹಲವು ತೊಂದರೆಗಳಿಗೆ ಕಾರಣವಾಗಬಹುದು. ಮನ ಬಂದಂತೆ ಕಪಾಲಭಾತಿ ಹಾಗೂ ಭಸ್ತ್ರಿಕದಂತಹ ಪ್ರಾಣಾಯಾಮಗಳನ್ನು ಮಾಡುವುದರಿಂದ ಆಗಲೇ ಇರಬಹುದಾದ ದೈಹಿಕ ಹಾಗೂ ಮಾನಸಿಕ ತೊಂದರೆಗಳು ಹೆಚ್ಚಾಗಬಹುದು, ಹೃದಯದ ಮೇಲೆ ಒತ್ತಡವು ಹೆಚ್ಚಬಹುದು ಹಾಗೂ ನೋವು ಇತ್ಯಾದಿ ಅಸೌಖ್ಯತೆಗಳಾಗಬಹುದು. ಆದ್ದರಿಂದ ಗರ್ಭಿಣಿಯರು, ಇತ್ತೀಚೆಗೆ ಶಸ್ತ್ರಕ್ರಿಯೆಗಳಿಗೆ ಒಳಗಾದವರು, ಶ್ವಾಸಾಂಗದ ಕಾಹಿಲೆಗಳು, ಬೆನ್ನೆಲುಬಿನ ವಕ್ರತೆ, ರಕ್ತದೊಟ್ಟಡದ ಇಳಿಕೆ ಯಾ ಹೆಚ್ಚಳ, ಮಧುಮೇಹ, ಮೂತ್ರಪಿಂದದ ಕಾಹಿಲೆಗಳು, ಅಪಸ್ಮಾರ, ಕಿವಿ-ಮೂಗು-ಗಂಟಲಿನ ರೋಗಗಳು, ಕಣ್ಣಿನ ತೊಂದರೆಗಳು, ತಲೆಶೂಲೆ ಮುಂತಾದ ತೊಂದರೆಗಳಿರುವವರು (ಇನ್ನುಳಿದವರು ಯಾರೋ?) ಇವನ್ನು ಮಾಡಬಾರದೆಂದು ಶರ್ಮಾ ಎಚ್ಚರಿಸುತ್ತಾರೆ. ಅಸಾಧಾರಣವಾದ ತಾಳ್ಮೆ ಹಾಗೂ ಸ್ವನಿಯಂತ್ರಣವಿಲ್ಲದೆ ಕಪಾಲಭಾತಿ ಹಾಗೂ ಭಸ್ತ್ರಿಕ ಪ್ರಾಣಾಯಾಮಗಳನ್ನು ಮಾಡುವುದು ಅಪಾಯವನ್ನು ಅಹ್ವಾನಿಸಿದಂತೆಯೇ ಎಂದವರು ಹೇಳುತ್ತಾರೆ.[71] ಮರಿಯನ್ ಗರ್ಫಿಂಕ್ಲ್ ಹೇಳುವಂತೆ,[45] ಯೋಗಾಸನಗಳನ್ನು ಸರಿಯಾಗಿ ಮಾಡದಿದ್ದರೆ ಹಾನಿಯುಂಟಾಗುವ ಸಾಧ್ಯತೆಗಳಿದ್ದು, ಯೋಗ ಶಿಕ್ಷಕರು ಹಾಗೂ ಅಭ್ಯಾಸಿಗಳ ಯೋಗಾಭ್ಯಾಸದ ಕ್ರಮದಲ್ಲಿ ವ್ಯತ್ಯಾಸಗಳೂ, ವೈವಿಧ್ಯತೆಗಳೂ ಹೆಚ್ಚುತ್ತಿರುವುದು ಗೊಂದಲಕ್ಕೆ ಕಾರಣವಾಗಬಹುದು.
ಯೋಗಾಭ್ಯಾಸದಂದ ಯಾವುದೇ ದುಷ್ಪರಿಣಾಮಗಳಾದ ಬಗ್ಗೆ ಉಲ್ಲೇಖಗಳಿಲ್ಲ ಎನ್ನುವವರಿಗೆ ಈ ಮೇಲಿನ ವಿವರಣೆ ಸಾಕಾಗಬಹುದು.
ನಮಗೆ ಯೋಗಾಭ್ಯಾಸದ ಅಗತ್ಯವಿದೆಯೇ?
ಈ ಎಲ್ಲಾ ಮಾಹಿತಿಯನ್ನು ಪರಿಗಣಿಸಿದಾಗ, ಈ ಕೆಳಗಿನ ಅಂಶಗಳು ಎದ್ದು ತೋರುತ್ತವೆ:
- ಪ್ರಾಚೀನ ಭಾರತದಲ್ಲಿ ತಪಸ್ವಿಗಳಾಗಿ ಬಹಳ ಕಠಿಣವಾದ ಜೀವನಕ್ರಮವನ್ನು ಪಾಲಿಸುತ್ತಿದ್ದ ಋಷಿ-ಮುನಿಗಳೂ, ಯೋಗಿಗಳೂ ಮಾಡುತ್ತಿದ್ದ ಯೋಗಾಭ್ಯಾಸವು ಇಂದಿನ ಜನಸಾಮಾನ್ಯರ ನಿತ್ಯಜೀವನಕ್ಕೆ ಹೇಗೆ ಹೊಂದಿಕೆಯಾಗುತ್ತದೆ ಎನ್ನುವುದು ಸ್ಪಷ್ಟವಿಲ್ಲ.
- ಪ್ರಾಚೀನ ಯೋಗದ ಪ್ರಯೋಜನಗಳನ್ನು ಒದಗಿಸುವ ಭರವಸೆಯನ್ನು ನೀಡುವ ಹಲವಾರು ಯೋಗವಿಧಾನಗಳು ಈಗ ಪ್ರಚಲಿತವಿದ್ದು, ಪತಂಜಲಿಯ ಯೋಗ ಸೂತ್ರಗಳು ಹಾಗೂ ಸ್ವಾತ್ಮರಾಮನ ಹಠ ಯೋಗ ಪ್ರದೀಪಿಕೆಯಲ್ಲಿ ಹೇಳಲಾಗಿರುವ ಯೋಗದ ಮೂಲ ಶೈಲಿಗಳನ್ನು ಇವು ರೂಪಾಂತರಗೊಳಿಸಿ, ಸರಳಗೊಳಿಸಿ, ಪುನರ್ ನಾಮಕರಣ ಮಾಡಿ ಬಳಸುತ್ತಿದ್ದು, ಹೀಗೆ ಮಾಡುವುದಕ್ಕೆ ಆಧಾರಗಳೇನು ಎನ್ನುವುದಾಗಲೀ, ಅದರಿಂದ ಯೋಗದ ಮೂಲ ಉದ್ದೇಶಗಳನ್ನು ಸಾಧಿಸಲು ಸಾಧ್ಯವೇ ಎನ್ನುವುದಾಗಲೀ ಸ್ಪಷ್ಟವಿಲ್ಲ. ಅಮೆರಿಕಾದ ಲಾಸ್ ಏಂಜಲೀಸ್ ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಗೆಫೆನ್ ವೈದ್ಯಕೀಯ ವಿದ್ಯಾಲಯದಲ್ಲಿ ಬಹಳ ವರ್ಷಗಳಿಂದ ಪ್ರಾಧ್ಯಾಪಕರಾಗಿಯೂ, ಸಂಶೋಧಕರಾಗಿಯೂ ಕೆಲಸ ಮಾಡುತ್ತಿದ್ದು, ಹತ್ತಕ್ಕೂ ಹೆಚ್ಚು ವರ್ಷಗಳಿಂದ ಐಯ್ಯಂಗಾರ್ ಯೋಗಪ್ರವೃತ್ತರಾಗಿರುವ ಡೇವಿಡ್ ಶೆಪಿರೋ ಅವರ ಪ್ರಕಾರ, ಯೋಗದ ಶಿಕ್ಷಣ ಸಂಸ್ಥೆಗಳಲ್ಲಿ, ವಿಧಗಳಲ್ಲಿ ಮತ್ತು ಸಿದ್ಧಾಂತಗಳಲ್ಲಿರುವ ಅತಿವೈವಿಧ್ಯತೆಯು ಒಂದು ಗಂಭೀರವಾದ ಸಮಸ್ಯೆಯಾಗಿದೆಯೆನ್ನುವುದು ನಿಸ್ಸಂಶಯ.[72].
- ಯೋಗದ ಬಗ್ಗೆ ನಡೆಸಲಾಗಿರುವ ಅಧ್ಯಯನಗಳಲ್ಲಿ ಬಳಸಲಾಗಿರುವ ಯೋಗ ವಿಧಾನಗಳು, ಸನ್ನಿವೇಶಗಳು, ರೋಗನಮೂನೆಗಳು ಹಾಗೂ ಮಾನದಂಡಗಳು ತೀರಾ ವಿಭಿನ್ನವಾಗಿದ್ದು, ಅವುಗಳಲ್ಲಿ ಯಾವುದೇ ಸಾಮ್ಯತೆಗಳಿಲ್ಲ. ಈ ಅಧ್ಯಯನಗಳ ಬಗ್ಗೆ ನಡೆಸಲಾಗಿರುವ ಎಲ್ಲಾ ವಿಶ್ಲೇಷಣೆಗಳು ಕೂಡಾ, ಈ ಅಧ್ಯಯನಗಳ ಕಳಪಯಾದ ಗುಣಮಟ್ಟ ಹಾಗೂ ಅಸಮರ್ಪಕವಾದ ಮಾನದಂಡಗಳನ್ನು ಎತ್ತಿ ತೋರಿಸಿವೆ. ಇಂತಹಾ ಅಧ್ಯಯನಗಳ ಆಧಾರದಲ್ಲಿ ಯೋಗಾಭ್ಯಾಸದ ಪ್ರಯೋಜನಗಳು ಯಾ ಸುರಕ್ಷತೆಯ ಬಗ್ಗೆ ಯಾವುದೇ ಖಚಿತವಾದ ನಿರ್ಧಾರಗಳನ್ನು ಹೇಳಲಾಗದು.
- ಯೋಗದ ಬಗೆಗಿನ ಹಲವು ಅಧ್ಯಯನಗಳಲ್ಲಿ, ಅವನ್ನು ತೊರೆದು ಹೋದವರ ಸಂಖ್ಯೆಯು ಬಹಳ (ಕೆಲವೊಂದರಲ್ಲಿ ಶೇ.50ರಷ್ಟು) ಹೆಚ್ಚಿದ್ದು, ತೊರೆಯುವಿಕೆಗೆ ಕಾರಣಗಳ ಬಗೆಗಾಗಲೀ, ವ್ಯತಿರಿಕ್ತವಾದ ಪರಿಣಾಮಗಳ ಬಗೆಗಾಗಲೀ ಅವುಗಳಲ್ಲಿ ಯಾವುದೇ ಮಾಹಿತಿಯು ಲಭ್ಯವಿಲ್ಲ. ಇನ್ನೊಂದೆಡೆ, ಯೋಗಾಭ್ಯಾಸದಿಂದ ಹಲತರದ ಗಂಭೀರವಾದ ತೊಂದರೆಗಳುಂಟಾಗಿರುವ ಬಗ್ಗೆ ಸಾಕಷ್ಟು ವರದಿಗಳಿದ್ದು, ಯೋಗಾಭ್ಯಾಸದಲ್ಲಿ ಸಮಸ್ಯೆಗಳಾಗಬಹುದು ಹಾಗೂ ಸಾಕಷ್ಟು ಮುಂಜಾಗ್ರತೆಗಳನ್ನು ವಹಿಸುವುದು ಅಗತ್ಯವೆಂದು ಕೆಲವು ಯೋಗತಜ್ಞರೇ ಹೇಳುತ್ತಾರೆ.
- ಮಕ್ಕಳಲ್ಲಿ ಯೋಗಾಭ್ಯಾಸದ ಬಗೆಗೆ ಸಣ್ಣ ಪ್ರಮಾಣದ, ಅಲ್ಪ ಕಾಲಾವಧಿಯ, ತೆರೆದ ಅಧ್ಯಯನಗಳಷ್ಟೇ ನಡೆದಿದ್ದು, ಮಕ್ಕಳಲ್ಲಿ ಯೋಗದಿಂದಾಗುವ ತೊಂದರೆಗಳ ಬಗ್ಗೆ ಯಾವ ಅಧ್ಯಯನಗಳಲ್ಲೂ ಮಾಹಿತಿಯಿಲ್ಲ; ಅಷ್ಟೇ ಅಲ್ಲ, ಅತಿ ಕಿರಿಯ ಮಕ್ಕಳಲ್ಲಿ ಯಾವ ಅಧ್ಯಯನಗಳೂ ನಡೆದಿಲ್ಲ. ಆದ್ದರಿಂದ ಮಕ್ಕಳಲ್ಲಿ ಯೋಗಾಭ್ಯಾಸದ ಪ್ರಯೋಜನಗಳ ಬಗ್ಗೆ ಹಾಗೂ ಸುರಕ್ಷತೆಯ ಬಗ್ಗೆ ನಂಬಲರ್ಹವಾದ ಮಾಹಿತಿಯಿಲ್ಲ.
ಆದ್ದರಿಂದ ಈ ಕೆಳಗಿನ ಸಲಹೆಗಳು ಸಮುಚಿತವೆನಿಸಬಹುದು:
- ಕೆಲವರಿಗೆ ವೈಯಕ್ತಿಕ ನೆಲೆಯಲ್ಲಿ, ಸೀಮಿತವಾಗಿ, ಯೋಗವು ಪ್ರಯೋಜನಕರವೆಂದು ಕಂಡುಬರಬಹುದು ಮತ್ತು ಯೋಗಾಭ್ಯಾಸವನ್ನು ಮಾಡಬಯಸುವ ಅಂತಹವರು ತಮ್ಮ ದೇಹಸ್ಥಿತಿ ಹಾಗೂ ಅದರ ಅಗತ್ಯಗಳಿಗೆ ಸರಿಹೊಂದುವ ಯೋಗಾಭ್ಯಾಸದ (ಪ್ರಾಣಾಯಾಮ, ಆಸನಗಳು ಇತ್ಯಾದಿಗಳ) ವಿಧಗಳ ಬಗ್ಗೆ ವೈದ್ಯರು ಹಾಗೂ ನುರಿತ, ಆಸಕ್ತ ಯೋಗತಜ್ಞರ ಸಲಹೆಯನ್ನು ಪಡೆದು ಯೋಗಾಭ್ಯಾಸವನ್ನು ಮಾಡಬಹುದು.
- ಸರ್ವರಿಗೂ, ಸಕಲ ಸಂದರ್ಭಗಳಲ್ಲೂ, ಸರ್ವ ರೋಗಗಳಿಗೂ ಯೋಗವು ಪ್ರಯೋಜನಕರವೆಂದು ಅಥವಾ ಅದು ಸಂಪೂರ್ಣವಾಗಿ ಸುರಕ್ಷಿತವೆಂದು ಹೇಳುವುದಕ್ಕೆ ಯಾವುದೇ ಪುರಾವೆಯು ಲಭ್ಯವಿಲ್ಲದಿರುವುದರಿಂದ ಅಂತಹಾ ನಂಬಿಕೆಯೊಂದಿಗೆ ಯೋಗಾಭ್ಯಾಸಕ್ಕೆ ತೊಡಗುವುದು ಸರಿಯಲ್ಲ.
- ಮಕ್ಕಳಲ್ಲಿ ಯೋಗಾಭ್ಯಾಸದ ಸುರಕ್ಷತೆಯ ಬಗ್ಗೆ ಯಾವುದೇ ಮಾಹಿತಿಯು ಲಭ್ಯವಿಲ್ಲ. ಹುಟ್ಟಿನಿಂದ ಇರಬಹುದಾದ ಹೃದ್ರೋಗಗಳು, ಅಸ್ತಮಾ, ಸಂಧಿಗಳಲ್ಲಿ, ಅದರಲ್ಲೂ ವಿಶೇಷವಾಗಿ ಬೆನ್ನೆಲುಬಿನಲ್ಲಿ, ತೊಂದರೆಗಳಿರುವ ಮಕ್ಕಳಲ್ಲಿ ಯೋಗಾಭ್ಯಾಸವು ಗಂಭೀರವಾದ ಪರಿಣಾಮಗಳನ್ನುಂಟು ಮಾಡಬಹುದು. ಯೋಗಾಭ್ಯಾಸಕ್ಕೆ ಬರೆಹೊಟ್ಟೆಯಲ್ಲಿರಬೇಕಾದ ಹಾಗೂ ಸಮರ್ಪಕವಾದ ಬಟ್ಟೆಗಳನ್ನು ಧರಿಸಬೇಕಾದ ಅಗತ್ಯವಿರುವುದು ಹಾಗೂ ಋತುಸ್ರಾವದ ವೇಳೆಯಲ್ಲಿ ಹುಡುಗಿಯರು ಯೋಗಾಭ್ಯಾಸವನ್ನು ಮಾಡಬಾರದೆನ್ನುವ ಮಿತಿಗಳಿರುವುದರಿಂದ ಕಡ್ಡಾಯ ಯೋಗಶಿಕ್ಷಣವು ಮಕ್ಕಳಿಗೆ ಹಾಗೂ ಹೆತ್ತವರಿಗೆ ಹಲವು ತರಹದ ತೊಂದರೆಗಳನ್ನೂ, ಮುಜುಗರವನ್ನೂ ಉಂಟುಮಾಡುವುದು ಖಂಡಿತ.
- ಆದ್ದರಿಂದ ನುರಿತ ಯೋಗ ಶಿಕ್ಷಕರ ನೇರ ಭಾಗವಹಿಸುವಿಕೆ ಹಾಗೂ ನಿಗಾವಣೆಗಳಿಲ್ಲದೆ ಸಾಮೂಹಿಕ ಶಿಬಿರಗಳಲ್ಲಿ, ಶಾಲೆಗಳಲ್ಲಿ ಅಥವಾ ಟಿವಿಯ ಮುಂದೆ ನಿಂತು ಯೋಗಾಭ್ಯಾಸವನ್ನು ಮಾಡುವುದರಿಂದ ಯಾವುದೇ ಪ್ರಯೋಜನವಾಗದು, ಮಾತ್ರವಲ್ಲ, ಅದರಿಂದ ತೊಂದರೆಗಳೂ ಆಗಬಹುದು.
- ಹಾಗೆಯೇ, ಕೇಂದ್ರ ಸರಕಾರವು ಯೋಚಿಸುತ್ತಿರುವಂತೆ ಹಾಗೂ ಕೆಲ ರಾಜ್ಯ ಸರಕಾರಗಳು ಈಗಾಗಲೇ ಸಿದ್ಧತೆ ನಡೆಸಿರುವಂತೆ, ದೈಹಿಕ ಶಿಕ್ಷಕರ ಮೂಲಕ ಒಂದನೇ ತರಗತಿಯಿಂದಲೇ ಕಡ್ಡಾಯವಾಗಿ ಯೋಗಾಭ್ಯಾಸವನ್ನು ಮಾಡುವುದು ಯಾವುದೇ ಸಂದರ್ಭದಲ್ಲೂ ಅಪೇಕ್ಷಣೀಯವಲ್ಲ.
References:
- http://divyayoga.com/YogScienceCamp.htm
- Breath of Life Available at http://www.artofliving.org/Programmes/
- Sudarshan Kriya : How The Magic Unfolds. Available at
http://www.tehelka.com/story_main16.asp?filename=Ne030406Sudarshan_CS.asp - Pranayama. Available at
http://knowyoga.org/tiki-index.php?page=Pranayama - Art of Living Practice of Sudarshan Kriya. Available at
http://www.pranajournal.com/kriya.htm - http://www.divyayoga.com/main.htm
- Baba Ramdev bats for minister on ventilator. Available at
- Yoga to be mandatory in schools. Available at
- Off to a good start. Available at
- Khalsa SB. Yoga as a therapeutic intervention: a bibliometric analysis of published research studies. Indian J Physiol Pharmacol. 2004 Jul;48(3):269-85.
Abstract at
http://www.ncbi.nlm.nih.gov/pubmed/15648399 - Ospina MB, Bond K, Karkhaneh M et al. Meditation
Practices for Health: State of the Research. AHRQ Publication No. 07-E010. June 2007. Available at
http://www.ahrq.gov/downloads/pub/evidence - Innes KE, Bourguignon C, Taylor AG. Risk Indices Associated with the Insulin Resistance Syndrome, Cardiovascular
Disease, and Possible Protection with Yoga: A Systematic Review. The Journal of the American Board of Family Practice.
2005;18:491-519 Available at http://www.jabfm.org/cgi/reprint/18/6/491 - Innes KE, Vincent HK. The Influence of Yoga-Based Programs on Risk Profiles in Adults with Type 2 Diabetes Mellitus: A Systematic Review. eCAM 2007 4(4):469-486; doi:10.1093/ecam/nel103 Available at
http://ecam.oxfordjournals.org/cgi/reprint/4/4/469 - Yang K. A Review of Yoga Programs for Four Leading Risk Factors of Chronic Diseases. eCAM, doi:10.1093/ecam/nem154. Available at
http://ecam.oxfordjournals.org/cgi/reprint/nem154v1 - Aljasir B, Bryson M, Al-shehri B. Yoga Practice for the Management of Type II Diabetes Mellitus in Adults: A systematic review. eCAM, doi:10.1093/ecam/nen027 Available at
http://ecam.oxfordjournals.org/cgi/reprint/nen027v1 - Alexander GK, Taylor AG, Innes KE, Pamela K, Selfe TK. Contextualizing the Effects of Yoga Therapy on Diabetes Management: A Review of the Social Determinants of Physical Activity. Family & Community Health. July/September 2008;31(3):228-239. Abstract at
http://www.familyandcommunityhealth.com/ - Smith KB, Pukall CF. An evidence-based review of yoga as a complementary intervention for patients with cancer
Psycho-Oncology. 2008 Sep 26
http://www3.interscience.wiley.com/journal/121410881/abstract - Dosh SA. The Treatment of Adults with Essential Hypertension.The Journal of Family Practice January 2002;51(1):74-79
Available at http://www.jfponline.com - Yardi N. Yoga for control of epilepsy. Seizure. 2001;10(1):7-12.
http://linkinghub.elsevier.com/ - Ramaratnam S, Sridharan K. Yoga for epilepsy. Cochrane
Database of Systematic Reviews. 2002,
Issue 1. Art. No.: CD001524. DOI: 10.1002/14651858.CD001524. Available at
http://mrw.interscience.wiley.com/cochrane/ - Pilkington K, Kirkwood G, Rampes H, Richardson J. Yoga for depression: The research evidence. Journal of Affective Disorders. December 2005;89(1-3):13-24 Abstract at
http://www.sciencedirect.com/ - Jorm AF, Christensen H, Griffiths KM, Rodgers B. Effectiveness of complementary and self-help treatments for depression.
MJA 2002;176:S84–S96. Available at
http://www.mja.com.au/ - Kirkwood G, Rampes H, Tuffrey V, Richardson J,
Pilkington K. Yoga for anxiety: a systematic review of the research evidence. British Journal Of Sports Medicine. December 2005;39(12):884-891. Available at
http://pt.wkhealth.com/ - Krisanaprakornkit T, Krisanaprakornkit W, Piyavhatkul N, Laopaiboon M. Meditation therapy for anxiety disorders. Cochrane
Database of Systematic Reviews 2006,
Issue 1. Art. No.: CD004998. DOI: 10.1002/14651858.CD004998.pub2. Available at
http://mrw.interscience.wiley.com/cochrane/ - Ernst E. Complementary/Alternative Medicine for Asthma: We Do Not Know What We Need To Know. CHEST. January
1999;115(1):1-3 Available at http://www.chestjournal.org/content/115/1/1.full - Thomas, M. Breathing exercises and asthma. THORAX. August 2003;58(8):649-650 Available at http://pt.wkhealth.com/
- Holloway EA, Lasserson TJ. Breathing exercises for asthma. Cochrane Database of Systematic Reviews 2004,
Issue 1. Art. No.: CD001277. DOI: 10.1002/14651858.CD001277.pub2. http://mrw.interscience.wiley.com/cochrane/ - Ritz T. Relaxation Therapy in Adult Asthma: Is There New Evidence for Its Effectiveness? Behavior Modification 2001;25(4):640-666. Available at http://bmo.sagepub.com/cgi/content/abstract/25/4/640
- DJ Lane, TV Lane. Alternative and complementary
medicine for asthma. Thorax 1991;46:787-797. Available at
http://www.pubmedcentral.nih.gov/ - Steurer-Stey C, Russi EW, Steurer J. Complementary and alternative medicine in asthma – do they work? A summary and appraisal of
published evidence Swiss Med Wkly
2002;132:338–344 Available at http://www.smw.ch/docs/ - Morone NE, Greco CM. Mind-body interventions for chronic pain in older adults: a structured review. Pain Med. 2007 May-Jun;8(4):359-75
http://www.ncbi.nlm.nih.gov/pubmed/ - Galantino, ML, Galbavy R, Quinn L. Therapeutic Effects of Yoga for Children: A Systematic Review of the Literature. Pediatric Physical Therapy. 2008;20(1):66-80. Available at
http://www.pedpt.com/pt/re/ - Srinivasan N, Baijal S. Concentrative meditation enhances preattentive processing: a mismatch negativity study. Neuroreport. 2007 Oct 29;18(16):1709-12.
- Joshi M, Telles S. Immediate effects of right and left nostril breathing on verbal and spatial scores. Indian J Physiol Pharmacol. 2008 Apr-Jun;52(2):197-200.
- Manjunath NK, Telles S. Spatial and verbal memory test scores following yoga and fine arts camps for school children. Indian J Physiol Pharmacol. 2004 Jul;48(3):353-6.
- Naveen KV, Nagarathna R, Nagendra HR, Telles S. Yoga breathing through a particular nostril increases spatial memory scores without lateralized effects. Psychol Rep. 1997 Oct;81(2):555-61.
- Madden DJ, Blumenthal JA, Allen PA, Emery CF. Improving aerobic capacity in healthy older adults does not necessarily lead to improved cognitive performance. Psychol Aging. 1989 Sep;4(3):307-20.
- Kimbrough S, Balkin R, Rancich A. The Effect of Inverted Yoga Positions on Short-term Memory. The Online Journal of Sport Psychology. 2007;9(2):34-42 Available at http://www.athleticinsight.com/Vol9Iss2/YogaPDF.pdf
- Krishnamurthy M, Telles S. Effects of Yoga and an Ayurveda preparation on gait, balance and mobility in older persons.
Med Sci Monit 2007;13(12). Available at
http://www.medscimonit.com/fulltxt.php?ICID=563739 - Gokal R, Shillito L, Swami Ramdevji Maharaj. Pilot study on the impact of yoga and pranayam on obesity, hypertension, blood sugar,
and cholesterol. The Journal of Alternative
and Complementary Medicine. December 1, 2007, 13(10): 1056-1058. Available at http://www.liebertonline.com/doi/abs/10.1089/acm.2007.0679 - Deshpande PB. Improve health and reduce healthcare costs from Pranayam with six sigma. Available at
http://www.sixsigmaquality.com - Past Research (2003-2007) at http://www.divyayoga.com/RandD.htm
- Published research. Available at
http://www.aolresearch.org/pubresearch.html - http://www.artofliving.org/Programmes/
- Garfinkel M. Yoga as a Complementary Therapy. Geriatrics Aging. 2006;9(3):190-194.
Available at http://www.medscape.com/viewarticle/525187_1 - Fontanarosa P, Lundberg G. Alternative medicine meets science. JAMA 1998;280:1618-9.
- Paul P. When Yoga Hurts. Time. Oct. 04, 2007. Available at http://www.time.com/time/magazine/article/0,9171,1668470,00.html
- Perrine JW. Bad karma: When yoga harms instead of heals: Inexperienced teachers and overeager students behind rise in injuries. Available at
http://www.msnbc.msn.com/id/25400799/ - Mikkonen J, Pedersen P, McCarthy PW. A Survey of Musculoskeletal Injury among Ashtanga Vinyasa Yoga Practitioners. International Journal of Yoga Therapy
2008;18(1):59-64 Available at
http://iayt.metapress.com/content/l0748p25k2558v77/ - Platts-Mills TF, Burg MD, Pollack ZT. Calcaneal avulsion fracture. Emergency Medicine Journal 2007;24:231
- Bianchi G, Cavenago C, Marchese M. Can the practice of yoga be dangerous? Considerations over a case of epiphyseal
separation of the distal tibia in a teenager. Journal of Orthopaedics and Traumatology. 2004;5(3):188-190. Available at
http://www.springerlink.com/content/66kdhup2376xr6b5/ - Goodall EY. Preventing & Healing Injury in Asana: Acetabular Labral Tears. Yoga Therapy in Practice August 2006;2(3):16-17
Available at http://www.iayt.org/publications_Vx2/ytip/aug06/Goodall0806.pdf - Nagler W. Vertebral artery obstruction by hyperextension of
the neck. Arch Phys Med Rehabil 1973;54:237-240 - Hanus SH, Homer TD, Harter DH. Vertebral artery occlusion
complicating yoga exercises. Arch Neurol 1977;4:574-575 - Russell WR. Yoga and the vertebral arteries. Br Med J [Clin
Res] 1972;1:685 - Sethi PK, Batra A, Sethi NK, Torgovnick J, Tortolani E. Compressive Cervical Myelopathy Due To Sirsasana, A Yoga Posture: A Case Report: The Internet Journal of Neurology.
2007; 6(1): http://www.ispub.com/ostia/index.php - Chusid J. Yoga foot drop. JAMA. 1971;217:827-828.
- Johnson DB, Tierney MJ, Sadighi PJ. Kapalabhati Pranayama: Breath of Fire or Cause of Pneumothorax? A Case Report. CHEST May 2004;125(5):1951-1952 Available at
http://www.chestjournal.org/content/125/5/1951.full.pdf+html - Kashyap AS, Anand KP, Kashyap S. Complications of yoga. Emergency Medicine Journal 2007;24:231;
doi:10.1136/emj.2006.036459 - Sharma H, Shekhawat NS, Bhandari S, Memon B, Memon MA. Rectus sheath haematoma: a rare presentation of non-contact strenuous exercises. British Journal Of Sports Medicine. October 2007;41(10):688-690 Available at
http://pt.wkhealth.com/pt/ - Meshramkar R, Patil SB, Patil NP. A case report of patient practising yoga leading to dental erosion. International Dental Journal 2007;57(3s1):184-186
- Baskaran M, Raman K, Ramani K, Roy J, Vijaya L, Badrinath S. Intraocular Pressure Changes and Ocular Biometry
during Sirsasana (Headstand Posture) in Yoga Practitioners.
Ophthalmology 113(8):1327-1332. Available at
http://linkinghub.elsevier.com/retrieve/pii/S0161642006005379 - Fahmy JA, Fledelius H. Yoga-induced attacks of acute glaucoma. A case report. Acta Ophthalmol (Copenh). 1973;51(1):80-4.
- Gallardo MJ, Aggarwal N, Cavanagh HD, Whitson JT. Progression of glaucoma associated with the Sirsasana (headstand) yoga posture Advances in Therapy. 2006;23(6):921-925 Available at http://www.springerlink.com/content/7028026506g54887/
- Monteiro de Barros DS, Bazzaz S, Gheith ME, Siam GA,
Moster MR. Progressive Optic Neuropathy in Congenital Glaucoma Associated With the Sirsasana Yoga Posture Ophthalmic Surg Lasers Imaging 2008;39:339-340 Available at http://osli.com/showAbst.asp?thing=17763 - Bertschinger DR, Mendrinos E, Dosso A. Yoga can be dangerous-glaucomatous visual field defect worsening due to postural yoga. British Journal of Ophthalmology. 2007;91(10):1413-1414
- Corrigan GE. Fatal air embolism after Yoga breathing exercises. JAMA. 1969 Dec 8;210(10):1923
- Crews L. Injury prevention: Yoga IDEA Fitness Journal Feb 2006 p56
- Mishra A. Boy, 14, dies at Ramdev's yoga camp 4 Jan 2007. Available at
http://timesofindia.indiatimes.com/articleshow/1042573.cms - Mishra A. Don't overdo yoga, warns Ramdev 5 Jan 2007. Available at
http://timesofindia.indiatimes.com/articleshow/1055735.cms - Sharma VP. Yoga Therapy in Practice:
Pranayama Can Be Practiced Safely International Journal of Yoga Therapy 2007;17:75-79 - David Shapiro. Is the Yoga World Ready? An Academic Perspective. International Journal of Yoga Therapy 2006;16:7-8
- Add new comment
- 8908 reads
- reply
- reply
- reply
- reply
- reply
- reply
- reply
- reply
- reply
- reply
- reply
