ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿರುವ ಹಾನಾ ಪೊವೆಲ್ ಎಂಬ ಹತ್ತು ವರ್ಷದ ಬಾಲಕಿಯಲ್ಲಿ ಸ್ತನದ ಕ್ಯಾನ್ಸರ್ ಕಾಣಿಸಿಕೊಂಡಿದೆಯೆಂಬ ಸುದ್ದಿಯು ದಂಗುಬಡಿಸುವಂತಹದ್ದಾಗಿದೆ.[1-4; ಅವಳ ಹೆತ್ತವರು ರಚಿಸಿದ ಜಾಲ ತಾಣ ಇಲ್ಲಿದೆ] ಫ್ರೌಢಾವಸ್ಥೆಗೆ ಕಾಲಿಡುವಷ್ಟರಲ್ಲಿಯೇ ಪುಟ್ಟ ಹುಡುಗಿಯೊಬ್ಬಳು ಇಂತಹಾ ಭೀಕರವಾದ ಸಮಸ್ಯೆಗೆ ತುತ್ತಾಗುವುದೆಂದರೆ ಎಲ್ಲರಿಗೂ ಚಿಂತೆಯ ವಿಷಯವೇ ಸರಿ. ಅಮೆರಿಕಾದಲ್ಲಿ ಪ್ರತಿವರ್ಷ ಸುಮಾರು ಒಂದೂವರೆಯಿಂದ ಎರಡು ಲಕ್ಷ ಹೆಂಗಸರಲ್ಲಿ ಸ್ತನದ ಕ್ಯಾನ್ಸರ್ ಕಂಡುಬರುತ್ತಿದ್ದು, ಇತ್ತೀಚಿನ ವರ್ಷಗಳಲ್ಲಿ ಭಾರತದಂತಹಾ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿಯೂ ಅದು ಹೆಚ್ಚುತ್ತಿರುವುದನ್ನು ಗುರುತಿಸಲಾಗಿದೆ. ಅಷ್ಟೇ ಅಲ್ಲದೆ, ಮೊದಲೆಲ್ಲ 50 ವರ್ಷಗಳಿಗೆ ಮೇಲ್ಪಟ್ಟ ಮಹಿಳೆಯರಲ್ಲೇ ಸಾಮಾನ್ಯವಾಗಿದ್ದ ಈ ತೊಂದರೆಯು, ಇತ್ತೀಚಿನ ವರ್ಷಗಳಲ್ಲಿ ಕಿರಿವಯಸ್ಸಿನ ಮಹಿಳೆಯರಲ್ಲೂ ಹೆಚ್ಚಾಗುತ್ತಿದೆ.[5,6] ಕೇವಲ ಹತ್ತು ವರ್ಷ ವಯಸ್ಸಿನ ಹುಡುಗಿಯಲ್ಲಿ ಸ್ತನದ ಕ್ಯಾನ್ಸರ್ ಗುರುತಿಸಲ್ಪಟ್ಟಿರುವುದು ಬಹುಷಃ ಇದೇ ಮೊದಲು.
ಇದೇಕೆ ಹೀಗೆ? ಕ್ಯಾನ್ಸರ್ ಉಂಟುಮಾಡಬಲ್ಲ ವಂಶವಾಹಿಗಳಿಂದಾಗಿಯೇ ಹೀಗಾಗುತ್ತದೆಯೆಂದು ಕೈತೊಳೆದುಕೊಳ್ಳುವುದು ಸುಲಭದ ಕೆಲಸ.[3] (ರೈತರ ಆತ್ಮಹತ್ಯೆಗೆ ತಾಪಮಾನದ ಏರಿಕೆಯೇ ಕಾರಣ ಎಂದಂತೆ!) ಆದರೆ, ನಮ್ಮ ಜೀವನ ಶೈಲಿ, ನಾವು ತಿನ್ನುತ್ತಿರುವ ಆಹಾರ ಇತ್ಯಾದಿಗಳೆಲ್ಲವೂ ಕ್ಯಾನ್ಸರ್ ಬೆಳವಣಿಗೆಗೆ ಕಾರಣವಾಗಬಹುದು ಎನ್ನುವುದು ತಿಳಿದಿದ್ದರೂ ಆ ಬಗ್ಗೆ ವೈದ್ಯಕೀಯ ಸಮುದಾಯವು ಜಾಣ ಮೌನವನ್ನು ತಾಳುತ್ತಿರುವುದು ಅಥವಾ ಆ ಬಗ್ಗೆ ಹೆಚ್ಚಿನ ಒತ್ತನ್ನು ನೀಡದಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಬೊಜ್ಜಿರುವವರಲ್ಲಿ ಸ್ತನದ ಕ್ಯಾನರ್ ಹೆಚ್ಚು ಸಾಮಾನ್ಯವೆನ್ನುವ ಬಗ್ಗೆ ಹಲವಾರು ವರದಿಗಳಿವೆ[7] ಹಾಗೂ ಅತಿಯಾದ ಆಹಾರ ಸೇವನೆಯೇ ಬೊಜ್ಜಿಗೆ ಮುಖ್ಯವಾದ ಕಾರಣವೆನ್ನುವುದು ಎಲ್ಲರಿಗೂ ತಿಳಿದಿದೆ. ಸಂಸ್ಕರಿಸಲ್ಪಟ್ಟ ಶರ್ಕರ ಪಿಷ್ಠಗಳು, ಸಕ್ಕರೆ, ಹಣ್ಣಿನ ರಸಗಳು ಮತ್ತಿತರ ಗ್ಲೂಕೋಸ್ ಹಾಗೂ ಫ್ರಕ್ಟೋಸ್ ಅತಿಯಾಗಿರುವ ಆಹಾರದ ಸೇವನೆಯೂ ಸ್ತನದ ಕ್ಯಾನ್ಸರಿನ ಸಾಧ್ಯತೆಯನ್ನು ಹೆಚ್ಚಿಸುತ್ತದೆ.[8-11] ಸೋಯಾ ಉತ್ಪನ್ನಗಳು ಕೂಡಾ ಸ್ತನದ ಕ್ಯಾನ್ಸರಿನ ಸಾಧ್ಯತೆಯನ್ನು ಹೆಚ್ಚಿಸುವ ಅಪಾಯವಿದೆಯೆಂದು ಹಲವು ಅಧ್ಯಯನಗಳು ಸಂಶಯವನ್ನು ವ್ಯಕ್ತಪಡಿಸಿವೆ.[12] ಇದಕ್ಕೆ ತದ್ವಿರುದ್ಧವಾಗಿ, ಸೋಯಾದಿಂದ ಅಂತಹಾ ತೊಂದರೆಯೇನೂ ಇಲ್ಲವೆಂದೂ, ಸೋಯಾ ಸೇವನೆಯಿಂದ ಸ್ತನದ ಕ್ಯಾನ್ಸರನ್ನು ತಡೆಯಬಹುದೆಂದೂ ಕೆಲವು ಲೇಖನಗಳು ಪ್ರಕಟಗೊಂಡಿವೆ![13,14] ಇಂತಹಾ ಸಲಹೆಯು ಅತಿರೇಕದ್ದಾಗಿದ್ದು, ಈ ವಿಚಾರದಲ್ಲಿ ಇನ್ನಷ್ಟು ಆಳವಾದ ಅಧ್ಯಯನಗಳ ಅಗತ್ಯವಿದೆಯೆನ್ನುವುದು ಸುಸ್ಪಷ್ಟವಾಗಿದೆ.[15,16]. ಹಾಲು ಮತ್ತದರ ಉತ್ಪನ್ನಗಳ ಬಳಕೆಯೂ ಸ್ತನದ ಕ್ಯಾನ್ಸರಿನ ಅಪಾಯವನ್ನು ಹೆಚ್ಚಿಸಬಹುದೆನ್ನುವ ವರದಿಗಳಿದ್ದು, ಈ ಬಗ್ಗೆಯೂ ಹೆಚ್ಚಿನ ಅಧ್ಯಯನಗಳ ಅಗತ್ಯವಿದೆ.[17,18] ಇತ್ತೀಚಿನ ದಿನಗಳಲ್ಲಿ ಅತಿಯಾಗಿ ಬಳಕೆಯಾಗುತ್ತಿರುವ ಕೃತಕ ಸಿಹಿಕಾರಕಗಳೂ ಕೂಡ ಕ್ಯಾನ್ಸರಿಗೆ ಕಾರಣವಾಗಬಹುದೆನ್ನುವ ವರದಿಗಳಿವೆ.[19]
ಅಡುಗೆ ಮಾಡಲು ಸಮಯದ ಕೊರತೆ, ಮಾರುಕಟ್ಟೆಯ ಒತ್ತಡ, ನಾಲಗೆ ಹಾಗೂ ಮನಸ್ಸಿನ ಮೇಲಾಗುವ ಹಿತಕರ ಅನುಭವ ಇತ್ಯಾದಿ ಕಾರಣಗಳಿಂದಾಗಿ ಸಂಸ್ಕರಿಸಲ್ಪಟ್ಟ ಶರ್ಕರ ಪಿಷ್ಠಗಳು, ಸಕ್ಕರೆ, ಹಣ್ಣಿನ ರಸಗಳು, ಸೋಯಾ, ಹಾಲು ಮತ್ತದರ ಉತ್ಪನ್ನಗಳು ಇವೇ ಮುಂತಾದ ನಿಸರ್ಗ ಸಹಜವಲ್ಲದ ವಸ್ತುಗಳನ್ನೇ ನಾವಿಂದು ಆಹಾರವಾಗಿ ಬಳಸುತ್ತಿದ್ದು, ಹೊಸ ಜನಾಂಗದ ಪಾಲಿಗಂತೂ ತ್ಯಾಜ್ಯ ಖಾದ್ಯಗಳೇ ಬಹು ಮುಖ್ಯ ತಿನಿಸುಗಳಾಗಿಬಿಟ್ಟಿವೆ. ಈ ಕಾರಣಕ್ಕಾಗಿಯೇ ಹಿರಿವಯಸ್ಕರಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿದ್ದ ಮಧುಮೇಹ, ಅಧಿಕ ರಕ್ತದೊತ್ತಡ, ಕ್ಯಾನ್ಸರ್, ಹೃದ್ರೋಗ ಇವೇ ಮುಂತಾದ ಹತ್ತು ಹಲವು ಗಂಭೀರವಾದ ಸಮಸ್ಯೆಗಳು ಹೆಚ್ಚು ಹೆಚ್ಚಾಗಿ ಕಿರಿಯರಲ್ಲಿ ಕಾಣಿಸಿಕೊಳ್ಳಲಾರಂಭಿಸಿವೆ. ನಮ್ಮ ಮಕ್ಕಳ ಭವಿಷ್ಯವು ಆರೋಗ್ಯಪೂರ್ಣವಾಗಿರಬೇಕಾದರೆ ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕಿದೆ. ಹಾನಾಳ ಬವಣೆಯಿಂದ ಪಾಠ ಕಲಿಯಬೇಕಿದೆ.
ಆಕರಗಳು:
Post new comment