ಡೆಂಗೀ ಜ್ವರ, ಚಿಕುಂಗುನ್ಯಾ, ಮಲೇರಿಯಾ ಬಗ್ಗೆ ಅಲಕ್ಷ್ಯವೇಕೆ?
ಡೆಂಗೀ ಜ್ವರ, ಚಿಕುಂಗುನ್ಯಾ, ಮಲೇರಿಯಾ ಬಗ್ಗೆ ಅಲಕ್ಷ್ಯವೇಕೆ?
ಆರೋಗ್ಯ ಸಂಪದದಲ್ಲಿ
ವಿದೇಶಗಳಿಂದ ಮರಳುವಾಗ ಇನ್ ಫ್ಲುಯೆಂಜಾ ಎ (H1N1) (ಹಂದಿ ಜ್ವರ) ವನ್ನು ಹೊತ್ತು ತಂದು, ರೋಗ ಲಕ್ಷಣಗಳಿದ್ದರೂ ಅಡಗಿಸಿಟ್ಟು, ಮನೆಮಂದಿಗೆ ಹಾಗೂ ಅಕ್ಕ ಪಕ್ಕದವರಿಗೆಲ್ಲ ಹರಡುವ ಶ್ರೀಮಂತರ 'ಮನವೊಲಿಸಲು' ಆರೋಗ್ಯಾಧಿಕಾರಿಗಳು ಅಂತಹವರ ಕಾಲಿಗೆ ಬಿದ್ದು ಬೇಡಿಕೊಳ್ಳುತ್ತಿರುವ ಬಗ್ಗೆ ವರದಿಯಾಗಿದೆ. [ನೋಡಿ 1,2]
ಆದರೆ, ಬೆಂಗಳೂರಿನ ಜನಸಾಮಾನ್ಯರಲ್ಲಿ ಒಂದೇ ಸವನೆ ಹರಡುತ್ತಿರುವ ಡೆಂಗೀ [ನೋಡಿ] ಹಾಗೂ ಚಿಕುಂಗುನ್ಯಾ ರೋಗಗಳ ಬಗ್ಗೆ ಯಾರಿಗೂ ಚಿಂತೆಯಿದ್ದಂತಿಲ್ಲ. ಕಳೆದೆರಡು ವಾರಗಳಲ್ಲಿ ಬೆಂಗಳೂರಿನಲ್ಲಿ ಡೆಂಗೀ ಜ್ವರದಿಂದ ಹನ್ನೊಂದು ಜನ ಸಾವನ್ನಪ್ಪಿದ್ದು, ಹಲವರಿಗೆ ಅದು ಹರಡುತ್ತಿದೆ. ಹಾಸಿಗೆ ಬಿಟ್ಟೇಳಲಾಗದಷ್ಟು ತೀವ್ರವಾದ ಗಂಟುಬೇನೆಯನ್ನುಂಟು ಮಾಡುವ ಚಿಕುಂಗುನ್ಯಾ ಕೂಡಾ ಈ ಪ್ರದೇಶಗಳಲ್ಲಿ ಹರಡುತ್ತಿದೆ. ಅದೇ ರೀತಿ, ಕರ್ನಾಟಕದ ಹಲವು ಭಾಗಗಳಲ್ಲಿ, ವಿಶೇಷವಾಗಿ ಕರಾವಳಿ ಜಿಲ್ಲೆಗಳಲ್ಲಿ, ಮಲೇರಿಯಾ ಪಿಡುಗು ವ್ಯಾಪಕವಾಗಿದ್ದು ಮಳೆಗಾಲದಲ್ಲಿ ಇನ್ನಷ್ಟು ಹೆಚ್ಚುತ್ತಿದೆ.[ನೋಡಿ] ಡೆಂಗೀ ಹಾಗೂ ಚಿಕುಂಗುನ್ಯಾ ರೋಗಗಳು ಈಡಿಸ್ ಜಾತಿಯ ಹೆಣ್ಣು ಸೊಳ್ಳೆಗಳಿಂದ ಹರಡಿದರೆ, ಮಲೇರಿಯಾವನ್ನು ಹೆಣ್ಣು ಅನಾಫಿಲಿಸ್ ಸೊಳ್ಳೆಗಳು ಹರಡುತ್ತವೆ. ಈ ಸೊಳ್ಳೆಗಳು ನಿಂತಿರುವ ನೀರಿನಲ್ಲಿ ಮೊಟ್ಟೆಯಿಟ್ಟು ವೃದ್ಧಿಸುತ್ತವೆಯಾದ್ದರಿಂದ ಮಳೆಗಾಲದಲ್ಲಿ ಈ ರೋಗಗಳ ಹರಡುವಿಕೆಯು ಹೆಚ್ಚುತ್ತದೆ. ಇವಕ್ಕೆ ಹೋಲಿಸಿದರೆ, ಇನ್ ಫ್ಲುಯೆಂಜಾ ಎ (H1N1) ತನ್ನಿಂತಾನೇ ಗುಣ ಹೊಂದುವ ಅಲ್ಪ ತೀವ್ರತೆಯ ಸೋಂಕಾಗಿದ್ದು, ಒಬ್ಬರಿಂದೊಬ್ಬರಿಗೆ ಸರಳ ಸಂಪರ್ಕದ ಮೂಲಕ ಅತಿ ಸುಲಭವಾಗಿ ಹರಡುತ್ತದೆ. ಅಷ್ಟೇನೂ ಉಪಯುಕ್ತವಲ್ಲದಿದ್ದರೂ,
ಟಾಮಿಫ್ಲು, ರೆಲೆಂಜಾಗಳಂತಹ ದೊಡ್ಡ ಮನುಷ್ಯರ ದೊಡ್ಡ ಕಂಪೆನಿಗಳ ಔಷಧಗಳನ್ನು ಇನ್ ಫ್ಲುಯೆಂಜಾ ಎ (H1N1) ನ ಚಿಕಿತ್ಸೆ ಹಾಗೂ ತಡೆಗಟ್ಟುವಿಕೆಗಾಗಿ ಬಳಸಲು ಕೋಟಿಗಟ್ಟಲೆ ವ್ಯಯಿಸಲಾಗುತ್ತಿದ್ದು, ಡೆಂಗೀ ಹಾಗೂ ಚಿಕುಂಗುನ್ಯಾ ರೋಗಗಳ ಪಾಲಿಗೆ ಇಂತಹಾ ಔಷಧಗಳಾವುವೂ ಲಭ್ಯವಿಲ್ಲ (ಅವುಗಳ ಅಗತ್ಯವೂ ಇಲ್ಲವೆನ್ನುವುದು ಬೇರೆ ಮಾತು).
ಇನ್ ಫ್ಲುಯೆಂಜಾ ಎ (H1N1) ನಿಯಂತ್ರಣಕ್ಕೆ ಶ್ರೀಮಂತರ ಕಾಲು ಹಿಡಿಯುವ ಆರೋಗ್ಯಾಧಿಕಾರಿಗಳು, ಜನಸಾಮಾನ್ಯರಲ್ಲಿ ಸಾಕಷ್ಟು ಸಾವು-ನೋವುಗಳಿಗೆ ಕಾರಣವಾಗುತ್ತಿರುವ ಡೆಂಗೀ, ಚಿಕುಂಗುನ್ಯಾ ಹಾಗೂ ಮಲೇರಿಯಾ [ನೋಡಿ] ರೋಗಗಳ ನಿಯಂತ್ರಣದ ಬಗ್ಗೆಯೂ ಗಮನ ಹರಿಸಿಯಾರೆಂದು ಆಶಿಸೋಣವೇ? ಅಷ್ಟೇನೂ ಉಪಯುಕ್ತವಲ್ಲದ ಟಾಮಿಫ್ಲುನಂತಹಾ ಔಷಧಗಳನ್ನು ಹಂಚಲು ಕೋಟಿಗಟ್ಟಲೆ ಹಣವನ್ನು ವ್ಯಯಿಸಲು ಹಿಂದೆ ಮುಂದೆ ನೋಡದ ನಮ್ಮ ಸರಕಾರವು, ಮಲೇರಿಯಾ ಚಿಕಿತ್ಸೆಗಾಗಿ ಆರೋಗ್ಯ ಇಲಾಖೆಯ ಗೋದಾಮುಗಳಲ್ಲಿ ಈಗಾಗಲೇ ದಾಸ್ತಾನು ಮಾಡಿರುವ ಆರ್ಟೆಸುನೇಟ್ ನಂತಹಾ ದುಬಾರಿ ಔಷಧಗಳನ್ನು ಸೂಕ್ತವಾಗಿ ಬಳಸಲು ಕ್ರಮ ಕೈಗೊಂಡೀತೆಂದುನಿರೀಕ್ಷಿಸಬಹುದೇ? ಇನ್ ಫ್ಲುಯೆಂಜಾ ಎ (H1N1) ನಿಯಂತ್ರಣಕ್ಕೆ ಲಕ್ಷಗಟ್ಟಲೆ ಜನರಿಗೆ ಮುಖಕವಚ ತೊಡಿಸುವ ಆರೋಗ್ಯ ಇಲಾಖೆಯು, ಡೆಂಗೀ, ಚಿಕುಂಗುನ್ಯಾ, ಮಲೇರಿಯಾಗಳಂತಹಾ ಗಂಭೀರವಾದ ರೋಗಗಳನ್ನು ಹರಡುವ ಸೊಳ್ಳೆಗಳ ನಿಯಂತ್ರಣಕ್ಕಾಗಿ ಸಾಕಷ್ಟು ಶ್ರಮವಹಿಸೀತೆಂದು ಅಪೇಕ್ಷಿಸಬಹುದೇ?
ಇವನ್ನೂ ನೋಡಿ:
ಇನ್ನೊಂದು ಹೊಸ ಲೇಖನ ಇಲ್ಲಿದೆ:
- Add new comment
- 2132 reads
- reply
