ಫ್ಲೂ ಔಷಧಗಳ ಬಗ್ಗೆ ಬ್ರಿಟಿಷ್ ಮೆಡಿಕಲ್ ಜರ್ನಲ್ ನಲ್ಲಿ ಕಟು ವಿಮರ್ಶೆ


ಹೊಸ ರೂಪದಲ್ಲಿ ಬಂದ ಹಳೆಯ ಇನ್ ಫ್ಲುಯೆಂಜಾ ಈಗಾಗಲೇ ನಮ್ಮ ದೇಶವೂ ಸೇರಿದಂತೆ ವಿಶ್ವದಾದ್ಯಂತ ಲಕ್ಷಗಟ್ಟಲೆ ಜನರನ್ನು ಸೋಂಕಿದೆ. ಸೋಂಕು ತಗಲಿದವರಲ್ಲಿ ಶೇ.99.1ರಷ್ಟು ಮಂದಿ ಯಾವುದೇ ತೊಂದರೆಗಳಿಲ್ಲದೆ, ಯಾವುದೇ ಚಿಕಿತ್ಸೆಯಿಲ್ಲದೆ ತಂತಾನೇ ಗುಣಮುಖರಾಗಿದ್ದಾರೆ. ಆದರೆ ಆರೋಗ್ಯ ಪಾಲನೆಯ ನೀತಿ-ನಿಯಮಗಳನ್ನು ರೂಪಿಸುವ ಘನ ಜವಾಬ್ದಾರಿಯುಳ್ಳ ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಅಮೆರಿಕಾದ ಸಿ.ಡಿ.ಸಿ ಗಳು ಕಿಡಿಯೇ ಇಲ್ಲದಲ್ಲಿ ಹೊಗೆಯೆಬ್ಬಿಸಿ ಎಲ್ಲರನ್ನೂ ಗೊಂದಲಕ್ಕೆ ದೂಡುವ ಕೆಲಸವನ್ನು ಮಾಡಿದವು ಎನ್ನುವುದು ದಿನ ಕಳೆದಂತೆಲ್ಲ ಸ್ಪಷ್ಟವಾಗುತ್ತಿದೆ. ಈ ‘ಹೊಸ’ ವೈರಸ್ ಗುರುತಿಸಲ್ಪಟ್ಟ ಎಪ್ರಿಲ್ ತಿಂಗಳಿಂದಲೇ ಅದರ ಬಗ್ಗೆ ಆಧಾರರಹಿತವಾದ ಪುಕಾರುಗಳನ್ನು ತೇಲಿಬಿಟ್ಟು ಜಗತ್ತಿನಾದ್ಯಂತ ಭೀತಿಯನ್ನು ಸೃಷ್ಟಿಸಲಾಯಿತು, ಎಲ್ಲೆಂದರಲ್ಲಿ ಅತ್ತಿತ್ತ ಹೋಗುವವರನ್ನು ತಪಾಸಣೆ ನಡೆಸುವಂತೆಯೂ, ಕೆಮ್ಮಿದವರಲ್ಲೂ, ಸೀನಿದವರಲ್ಲೂ ವೈರಸ್ ಪತ್ತೆಗಾಗಿ ಅತಿ ದುಬಾರಿಯಾದ ಪರೀಕ್ಷೆಗಳನ್ನು ನಡೆಸುವಂತೆಯೂ ಸೂಚಿಸಲಾಯಿತು. ಜ್ವರವಿದ್ದವರಿಗೆ, ಸೀನಿದವರಿಗೆ, ಗಂಟಲು ಕೆರೆದವರಿಗೆ, ಅಷ್ಟೇ ಅಲ್ಲ, ಅಂತಹವರ ಮನೆಮಂದಿಗೆ ಹಾಗೂ ಸಂಪರ್ಕಕ್ಕೆ ಬಂದ ಎಲ್ಲರಿಗೂ ಟಾಮಿಫ್ಲು (ಒಸೆಲ್ಟಾಮಿವಿರ್) ಎಂಬ ಔಷಧವನ್ನು ನೀಡಬೇಕೆಂಬ ಸಲಹೆಯನ್ನೂ ನೀಡಲಾಯಿತು. ಈ ಸಲಹೆ, ಅದಕ್ಕೆ ದೊರೆತ ಅಬ್ಬರದ ಪ್ರಚಾರ ಹಾಗೂ ಅದರಿಂದ ಹುಟ್ಟಿದ ಜನಾಭಿಪ್ರಾಯದ ಒತ್ತಡದಿಂದಾಗಿ ಹೆಚ್ಚಿನ ರಾಷ್ಟ್ರಗಳು ಕೋಟಿಗಟ್ಟಲೆಯಲ್ಲಿ ಟಾಮಿಫ್ಲು ಖರೀದಿಸುವಂತಾಯಿತು. ರೋಗ ತಗಲಿದ ಬಹುತೇಕರು ಟಾಮಿಫ್ಲು ತೆಗೆದುಕೊಳ್ಳದೆಯೂ ಗುಣಮುಖರಾದರು; ರೋಗ ಉಲ್ಬಣಿಸಿದವರು ಟಾಮಿಫ್ಲು ತೆಗೆದುಕೊಂಡರೂ ಬದುಕುಳಿಯಲಿಲ್ಲ. ಈ ಔಷಧದಿಂದ ಪ್ರಯೋಜನವಿದೆಯೇ ಎನ್ನುವ ಪ್ರಶ್ನೆಯನ್ನು ಆಗ ಯಾರೂ ಕೇಳಲಿಲ್ಲ; ಸಮೂಹ ಸನ್ನಿಯ ವೇಳೆ ಅದನ್ನು ಕೇಳುವಂತೆಯೂ ಇರಲಿಲ್ಲ.

ಈಗ ಟಾಮಿಫ್ಲು ಹಾಗೂ ರೆಲೆಂಜಾಗಳ ಬಗ್ಗೆ ಸವಿವರವಾದ ವಿಮರ್ಶೆಗಳು ಪ್ರತಿಷ್ಠಿತ ವೈದ್ಯಕೀಯ ಪತ್ರಿಕೆಯಾದ ಬ್ರಿಟಿಷ್ ಮೆಡಿಕಲ್ ಜರ್ನಲ್ ನ 2009ರ ಡಿಸೆಂಬರ್ 8ರ ಸಂಚಿಕೆಯಲ್ಲಿ ಪ್ರಕಟವಾಗಿವೆ. ಮಕ್ಕಳಲ್ಲಿ ಈ ಔಷಧಗಳ ಬಳಕೆಯ ಬಗ್ಗೆ ಮಾಥ್ಯೂ ಥಾಂಸನ್ ಮತ್ತಿತರರು ಬರೆದ ವಿಶ್ಲೇಷಣೆಯು ಅದೇ ಪತ್ರಿಕೆಯಲ್ಲಿ 2009ರ ಆಗಸ್ಟ್ 10ರಂದೇ ಪ್ರಕಟಗೊಂಡಿತ್ತು. ವಯಸ್ಕರಲ್ಲಿ ಈ ಔಷಧಗಳ ಬಳಕೆಯ ಬಗ್ಗೆ ಟಾಂ ಜೆಫರ್ಸನ್ ಮತ್ತಿತರರು ಕೊಕ್ರೇನ್ ಸಂಸ್ಥೆಗಾಗಿ ಮಾಡಿರುವ ವಿಶ್ಲೇಷಣೆಯು ದಿಸೆಂಬರ್ 8ರ ಸಂಚಿಕೆಯಲ್ಲಿ ಪ್ರಕಟಗೊಂಡಿದೆ. ನಾವು ಬಳಸುವ ವಿವಿಧ ಚಿಕಿತ್ಸಾ ಕ್ರಮಗಳನ್ನು ಒರೆಗಲ್ಲಿಗೆ ಹಚ್ಚುವ ಕೊಕ್ರೇನ್ ವಿಮರ್ಶೆಯು ಒಸೆಲ್ಟಾಮಿವಿರ್ ಬಗ್ಗೆ 2005ರಲ್ಲಿ ಪ್ರಕಟಿಸಿದ್ದ ವಿಶ್ಲೇಷಣೆಯನ್ನು ಪರಿಷ್ಕರಿಸಿ ಈ ಹೊಸ ಲೇಖನವನ್ನು ಸಿದ್ಧಪಡಿಸಲಾಗಿದ್ದು, ಈ ಔಷಧಗಳ ನಿರುಪಯುಕ್ತತೆಯನ್ನು ಅದು ಸ್ಪಷ್ಟವಾಗಿ ಸಾಬೀತುಪಡಿಸುತ್ತದೆ. ಒಸೆಲ್ಟಾಮಿವಿರ್ ನ ಅಧ್ಯಯನಗಳಲ್ಲಿರುವ ಹಲವಾರು ನ್ಯೂನತೆಗಳ ಬಗ್ಗೆ, ಅವುಗಳ ವಿಶ್ವಾಸಾರ್ಹತೆಯ ಬಗ್ಗೆ, ಔಷಧ ತಯಾರಕ ಕಂಪೆನಿಗಳೇ ಪ್ರಾಯೋಜಿಸುವ ಅಂತಹಾ ಅಧ್ಯಯನಗಳನ್ನು ನಂಬಿ ವೈದ್ಯರು ಔಷಧಗಳನ್ನು ಬಳಸುವ ಔಚಿತ್ಯದ ಬಗ್ಗೆ ಲೇಖನಗಳನ್ನೂ, ಸಂಪಾದಕೀಯವನ್ನೂ ಈ ಸಂಚಿಕೆಯಲ್ಲಿ ಬರೆಯಲಾಗಿದೆ.

ಟಾಮಿಫ್ಲು ವನ್ನು ಅಮೆರಿಕಾದ ಮಾಜಿ ರಕ್ಷಣಾ ಕಾರ್ಯದರ್ಶಿಗಳಾದ ಡೊನಾಲ್ಡ್ ರಮ್ಸ್ ಫೆಲ್ಡ್ ಹಾಗೂ ಹಜಾರ್ಜ್ ಶುಲ್ಸ್ ರಂತಹವರು ನಿರ್ದೇಶಕರಾಗಿರುವ ಗಿಲಿಯಡ್ ಸಯನ್ಸಸ್ ತಯಾರಿಸಿ ದೈತ್ಯ ಕಂಪೆನಿಯಾದ ರೋಷ್ ಮಾರಾಟಮಾಡುತ್ತದೆ. ಅದರ ಕುರಿತು ನಡೆಸಲಾಗಿರುವ ಆಧ್ಯಯನಗಳೆಲ್ಲವೂ ಕಂಪೆನಿ ಪ್ರಾಯೋಜಕತ್ವದಲ್ಲಿಯೇ ನಡೆದಿದ್ದು, ಅವುಗಳಲ್ಲಿ ಹಲವಾರು ನ್ಯೂನತೆಗಳಿರುವುದನ್ನು ಈ ಲೇಖನಗಳಲ್ಲಿ ಎತ್ತಿ ತೋರಿಸಲಾಗಿದೆ. ಈ ಔಷಧಗಳ ಅಡ್ದ ಪರಿಣಾಮಗಳ ಬಗ್ಗೆ ಹಾಗೂ ಸುರಕ್ಷತೆಯ ಬಗ್ಗೆ ಯಾವುದೇ ಅಧ್ಯಯನಗಳು ನಡೆದಿಲ್ಲವೆನ್ನುವ ಆಘಾತಕಾರಿ ವಿಚಾರವನ್ನೂ ಪತ್ರಿಕೆಯು ಹೊರಗೆಡವಿದೆ. ಎಲ್ಲಾ ಔಷಧಗಳನ್ನು ಬಳಸುವ ಮೊದಲು ಅವುಗಳ ಬಗ್ಗೆ ಸ್ವತಂತ್ರವಾದ ಹಾಗೂ ನಿಷ್ಪಕ್ಷಪಾತಿಯಾದ ಅಧ್ಯಯನಗಳಾಗುವುದು ಅತ್ಯಗತ್ಯವೆಂದು ಸಂಪಾದಕೀಯದಲ್ಲಿ ಹೇಳಲಾಗಿದೆ. ಜಾರ್ಜ್ ಬುಷ್ ಒಡೆತನದ ಎಲಿ ಲಿಲಿಯ ಮಾನವ ಇನ್ಸುಲಿನ್ ಬಗ್ಗೆ ಕೊಕ್ರೇನ್ ವಿಮರ್ಶೆಯು ಈ ಹಿಂದೆ ಇಂತಹದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದನ್ನು ಈ ಹಿಂದೆ ಇಲ್ಲಿ ಬರೆಯಲಾಗಿತ್ತು.

ಇಂತಹಾ ವಿಮರ್ಶೆಗಳು ಹೊರ ಬರುವಾಗ ಸಾಕಷ್ಟು ತಡವಾಗಿರುತ್ತದೆ, ಕಸರತ್ತುಗಳಲ್ಲಿ ನಿಷ್ಣಾತರಾಗಿರುವ ಔಷಧ ದೈತ್ಯರು ಅದಾಗಲೇ ಸಾಕಷ್ಟು ಲಾಭವನ್ನು ದೋಚಿಯಾಗಿರುತ್ತದೆ. ಬಿಎಂಜೆಯ ಸಂಪಾದಕೀಯದ ಆಶಯಗಳು ನಿಜವಾಗಬಲ್ಲವೇ ಎನ್ನುವುದು ಯಕ್ಷಪ್ರಶ್ನೆಯಾಗಿಯೇ ಉಳಿಯಬಹುದು ಅನಿಸಿದರೆ ತಪ್ಪಲ್ಲ.

ನೋಡಿ:

13 Feb17:40

ಸಮಯೋಚಿತ ಲೇಖನ

By kumara subrahmanya .muliyala (not verified)

ಓರ್ವ ವೈದ್ಯರಾಗಿ, ನಿಮ್ಮ ಕಾಳಜಿ ಮತ್ತು ವಿಷಯವನ್ನು ತಿಳಿಸುವ ರೀತಿ ತು೦ಬಾ ಮೆಚ್ಚುಗೆಯಾಯಿತು. ಮು೦ದೆ ಇ೦ತಹ ಔಷಧಿಗಳ ವಿಶ್ವಾಸಾರ್ಹತೆಯನ್ನು ಓರ್ವ ವೈದ್ಯರಾಗಿ ಪರಿಗಣಿಸುವುದು ಹೇಗೆ? ಬಹುಶ ಬರುವ ರೋಗಿಗಳೆಲ್ಲ ಪ್ರಯೋಗ ಪಶುಗಳಾದಾರೇ?.
ಔಷಧಿ ಕ೦ಪೆನಿಯೊ೦ದರ ಪ್ರತಿನಿಧಿಯಾಗಿ ನನಗೂ ಯಕ್ಷ ಪ್ರಶ್ನೆಯಗಿಯೇ ಉಳಿದಿದೆ.ಹಣ ಒ೦ದು ಹ೦ತದಲ್ಲಿ ತತ್ವ ಸಿದ್ಧಾ೦ತಗಳನ್ನು ನು೦ಗಿ ಹಾಕಿ ಪ್ರಶ್ನೆಯನ್ನು ಪ್ರಶ್ನೆಯಾಗಿಯೇ ಉಳಿಯಗೊಡುತ್ತದೆ ಅಲ್ಲವೇ?
( ಸಾರ್ ದಶಕಗಳ ಹಿ೦ದೆ medical rep ಆಗಿ ಬಲ್ಮಠದ ನಿಮ್ಮಚೇ೦ಬರಿನಲ್ಲಿ ಭೇಟಿಯಾಗುತ್ತಿದ್ದೆ.ನಿಮ್ಮ ಈ ಆಸಕ್ಥಿಗಳು ಗೊತ್ತಿರಲಿಲ್ಲ.ಈಗ೦ತೂ ಬಹಳ ಸ೦ತೋಷವಾಗಿದೆ.ನಾನ೦ತೂ ನಿಮ್ಮ fanಆಗ್ಬಿಟ್ಟೆ.ಅಭಿನ೦ದನೆಗಳು ಸಾರ್)

Post new comment

The content of this field is kept private and will not be shown publicly.
CAPTCHA
This question is for testing whether you are a human visitor and to prevent automated spam submissions.