ಫ್ಲೂ ಹೋಯ್ತು, ಲಸಿಕೆ ಬಂತು ಢುಂ ಢುಂ ಢುಂ!
ಫ್ಲೂ ಹೋಯ್ತು, ಲಸಿಕೆ ಬಂತು ಢುಂ ಢುಂ ಢುಂ!
ಆರೋಗ್ಯ ಸಂಪದದಲ್ಲಿ
ನಿನ್ನೆ, ಬುಧವಾರ, ದೊಡ್ಡ ಕಂಪೆನಿಯ ಅಧಿಕಾರಿಯೊಬ್ಬರು ನನ್ನಲ್ಲಿಗೆ ಬಂದಿದ್ದರು. ಶನಿವಾರ ಸಂಜೆಯಿಂದ ಜ್ವರ ಬರುತ್ತಿದ್ದು, ಆಗಲೇ ಮೂವರು ವೈದ್ಯರನ್ನು ಅವರು ಕಂಡಾಗಿತ್ತು. ನೋವಿಗೆ, ಜ್ವರಕ್ಕೆ ಮಾತ್ರೆಗಳನ್ನೂ, ಸೂಕ್ಷ್ಮಾಣು ನಿರೋಧಕವೊಂದನ್ನೂ ಅದಾಗಲೇ ತೆಗೆದುಕೊಳ್ಳುತ್ತಿದ್ದರವರು. ಐದು ದಿನಗಳಾದರೂ ಮೈಕೈ ನೋವು, ಬೆನ್ನು ನೋವು, ತಲೆನೋವು, ಗಂಟಲು ಕೆರೆತಗಳು ಕಡಿಮೆಯಾಗಿರಲಿಲ್ಲ. ಪರೀಕ್ಷಿಸಿಯಾದ ಬಳಿಕ ’ನಿಮಗೆ ಫ್ಲೂ ಇರುವಂತಿದೆ’ ಅಂದೆ. ಅದು ಸಾಧ್ಯವೇ ಇಲ್ಲ, ಮೂಗಿನೊಳಕ್ಕೆ ಸಿಂಪಡಿಸುವ ಫ್ಲೂ ಲಸಿಕೆಯನ್ನು ಅದಾಗಲೇ ತಾನು ಹಾಕಿಸಿಕೊಂಡಿರುವುದಾಗಿ ಧೈರ್ಯದಿಂದ ಹೇಳಿಕೊಂಡರು. ಯಾವಾಗ ಅಂತ ಕೇಳಿದಾಗ, ’ಶನಿವಾರ ಬೆಳಗ್ಗೆ’ ಅಂದರು! ’ನಿಮ್ಮ ತೊಂದರೆಗಳೆಲ್ಲವೂ ಫ್ಲೂ ಸೋಂಕಿನ ಲಕ್ಷಣಗಳೇ ಆಗಿವೆ, ಆದರೆ ಇವು ಫ್ಲೂ ಲಸಿಕೆಯಿಂದ ಉಂಟಾದದ್ದು’ ಅಂದೆ.
ವೃತ್ತಿ ನಿಮಿತ್ತ ಊರಿಂದೂರಿಗೆ ಸುತ್ತಬೇಕಾಗಿದ್ದ ಅವರನ್ನು ಫ್ಲೂ ಲಸಿಕೆ ಹಾಕಿಸಿಕೊಳ್ಳುವಂತೆ ಅವರ ತಂದೆಯವರೇ ಒತ್ತಾಯಿಸಿದರಂತೆ. "ಯಾವತ್ತೂ ತಂದೆಯವರ ಮಾತನ್ನು ಕೇಳದ ನಾನು ಮೊನ್ನೆ ಕೇಳಬೇಕಾಯಿತು, ಬಹಳಷ್ಟು ಬಲವಂತ ಪಡಿಸಿದರು, ಅವರೂ ಇದೇ ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ, ಅವರಿಗೂ ಮೊನ್ನೆಯವರೆಗೆ ಕೆಮ್ಮು, ಜ್ವರ, ತಲೆನೋವು ಇತ್ಯಾದಿಗಳಿದ್ದವು, ಅವರೂ ಔಷಧಗಳನ್ನು ನುಂಗುತ್ತಿದ್ದಾರೆ " ಎಂದೂ ಸೇರಿಸಿದರು.
ಎಲ್ಲಿ ಲಸಿಕೆ ಹಾಕಿಸಿಕೊಂಡಿರಿ, ಎಷ್ಟು ಖರ್ಚಾಯಿತು, ನಾನು ಕೇಳಿದೆ.
"ಬೆಂಗಳೂರಿನ ವೈದ್ಯರೊಬ್ಬರು ಈ ಲಸಿಕೆಯನ್ನು ಮೂಗಿನೊಳಕ್ಕೆ ಹಾಕಿದರು, ವೈದ್ಯರ ಫೀಸು, ಕೆಲವು ರಕ್ತದ ಪರೀಕ್ಷಗಳು ಮತ್ತು ಲಸಿಕೆ ಅಂತ ಒಟ್ಟು ಒಂದು ಸಾವಿರ ರೂಪಾಯಿ ತೆರಬೇಕಾಯಿತು".
ಅಗತ್ಯವೇ ಇಲ್ಲದ ಲಸಿಕೆ. ಅನಗತ್ಯವಾದ ಲಸಿಕೆಯ ಕ್ರಯ ನೂರೈವತ್ತು ರೂಪಾಯಿಯಾದರೆ, ಅದನ್ನು ಹಾಕಿದ್ದಕ್ಕೂ, ಹಾಕುವ ಮೊದಲು ಅಗತ್ಯವಿಲ್ಲದ ಪರೀಕ್ಷೆಗಳನ್ನು ಮಾಡಿದ್ದಕ್ಕೂ ವೈದ್ಯರ ಬಿಲ್ಲು 850 ರೂಪಾಯಿಗಳು! ಲಸಿಕೆಯಿಂದ ಉಂಟಾದ ಜ್ವರ, ಮೈಕೈ ನೋವು ಇತ್ಯಾದಿಗಳ ಚಿಕಿತ್ಸೆಗೆ ನಾಲ್ಕು ವೈದ್ಯರ ಬಳಿ ಇನ್ನೊಂದು ಸಾವಿರದಷ್ಟು ಖರ್ಚು! ಲಸಿಕೆ ಹಾಕಿದ ವೈದ್ಯರು ಅದರ ಅಡ್ಡ ಪರಿಣಾಮಗಳ ಬಗ್ಗೆ ಮೊದಲೇ ಹೇಳಿದ್ದರೆ ಈ ಒಂದು ಸಾವಿರವನ್ನಾದರೂ ಉಳಿಸಬಹುದಿತ್ತು,
ಈ ಲಸಿಕೆಯನ್ನು ತಯಾರಿಸುವ ಕಂಪೆನಿಯ ಪ್ರತಿನಿಧಿಗಳಿಬ್ಬರು ಕೂಡಾ ನಿನ್ನೆಯೇ ನನ್ನ ಬಳಿ ಬಂದಿದ್ದರು. ಅವರು ಬರುವುದಕ್ಕೂ ಕಾರಣವಿತ್ತು. ಕೆಲ ದಿನಗಳ ಹಿಂದೆ ತೀರ್ಥಹಳ್ಳಿಯಲ್ಲಿರುವ ನನ್ನ ಮಿತ್ರರೊಬ್ಬರು ನನಗೆ ಫೋನ್ ಮಾಡಿ, ಅಲ್ಲಿನ ಸೇವಾ ಸಂಸ್ಥೆಯೊಂದರ ಸದಸ್ಯರು ಆಟೋ ರಿಕ್ಷಾವೊಂದಕ್ಕೆ ಧ್ವನಿವರ್ಧಕಗಳನ್ನು ಬಿಗಿದು ಫ್ಲೂ ಲಸಿಕೆಯನ್ನು ಹಾಕಿಸಿಕೊಳ್ಳುವಂತೆ ಪ್ರಚಾರ ಮಾಡುತ್ತಿದ್ದರೆನ್ನುವುದನ್ನು ತಿಳಿಸಿ, ಇದೆಂತಹಾ ದುರವಸ್ಥೆ ಬಂತೆಂದು ಆತಂಕ ವ್ಯಕ್ತಪಡಿಸಿದ್ದರು. ಆ ಲಸಿಕೆಯ ಬಗ್ಗೆ ಹೆಚ್ಚಿನ ಮಾಹಿತಿಯಿದ್ದರೆ ಒದಗಿಸುವಂತೆಯೂ ನನ್ನನ್ನು ಕೇಳಿದ್ದರು. ಈ ಹೊಸ ಲಸಿಕೆಯ ದಕ್ಷತೆಯ ಬಗ್ಗೆ ಇನ್ನೂ ಸಾಕಷ್ಟು ಅಧ್ಯಯನಗಳಾದಂತಿಲ್ಲ, ಆಗಿದ್ದರೂ ಅಂತಹಾ ಅಧ್ಯಯನಗಳ ಪ್ರಕಟಿತ ಆಕರಗಳು ಸುಲಭವಾಗಿ ಲಭ್ಯವಿಲ್ಲ. ಹಾಗಾಗಿ, ನಮ್ಮಲ್ಲೀಗ ಮಾರಲಾಗುತ್ತಿರುವ ಮೂಗಿನೊಳಕ್ಕೆ ಸಿಂಪಡಿಸುವ ಲಸಿಕೆಯನ್ನು ತಯಾರಿಸುತ್ತಿರುವ ಕಂಪೆನಿಯ ಅಧಿಕಾರಿಗಳನ್ನು ನಾನು ಸಂಪರ್ಕಿಸಿ, ಈ ಲಸಿಕೆಯ ದಕ್ಷತೆಯ ಬಗೆಗೇನಾದರೂ ವಿವರಗಳಿದ್ದರೆ ಕೊಡುವಂತೆ ಕೇಳಿದ್ದೆ. ’ಮಾಹಿತಿ ಇಲ್ಲವೆಂದೇನಿಲ್ಲ, ಇದೆ; ನಮ್ಮ ಪ್ರತಿನಿಧಿಯೊಬ್ಬರು ನಿಮ್ಮನ್ನು ಕಾಣುತ್ತಾರೆ’ ಎನ್ನುವ ಉತ್ತರ ಬಂದಿತ್ತು. ಅದಾದ ಎರಡು ದಿನಗಳಲ್ಲಿ, ಈ ಲಸಿಕೆಯನ್ನು ತಯಾರಿಸಿ ಮಾರಾಟ ಮಾಡಲು ದೆಹಲಿಯಲ್ಲಿರುವ ಮುಖ್ಯ ಔಷಧ ನಿಯಂತ್ರಕರು ಆ ಕಂಪೆನಿಗೆ ನೀಡಿರುವ ಪರವಾನಿಗೆಯ ಪ್ರತಿಯೊಂದನ್ನು ಮಿಂಚೋಲೆಯಲ್ಲಿ ನನಗೆ ಕಳುಹಿಸಲಾಯಿತು. ’ನಾನು ಕೇಳಿರುವುದು ಇದನ್ನಲ್ಲ, ಲಸಿಕೆಯ ದಕ್ಷತೆಯ ಬಗ್ಗೆ ಕಂಪೆನಿಯು ನಡೆಸಿರುವ ಯಾವುದೇ ಅಧ್ಯಯನದ ಬಗ್ಗೆ ಮಾಹಿತಿಯಿದ್ದರೆ ನೀಡಿ’ ಎಂದು ಮತ್ತೆ ಕೇಳಿದ್ದೆ. ಎರಡು ದಿನಗಳಲ್ಲಿ ಯಾವುದೇ ಪ್ರತಿಕ್ರಿಯೆಯೂ ಬಾರದಿದ್ದಾಗ, ’ನಿಮ್ಮಲ್ಲಿ ಅಂತಹಾ ಮಾಹಿತಿಯೇ ಇಲ್ಲವೆಂದು ನಾನು ಭಾವಿಸಬಹುದೇ?’ ಎಂದು ಮತ್ತೆ ಕೇಳಿದ್ದೆ. ಅದಕ್ಕುತ್ತರವಾಗಿ ಈ ಇಬ್ಬರು ಪ್ರತಿನಿಧಿಗಳು ನನ್ನನ್ನು ಕಾಣಲು ಬಂದಿದ್ದರು. ತಮ್ಮ ಕಂಪೆನಿಯ ಲಸಿಕೆಯು ರಷ್ಯನ್ ಕಂಪೆನಿಯೊಂದು ತಯಾರಿಸಿರುವ ಲಸಿಕೆಯಷ್ಟೇ ಪರಿಣಾಮಕಾರಿಯೆಂದು ಹೇಳಿ, ತಾವು ತಂದಿದ್ದ ವರದಿಯೊಂದನ್ನು ನನಗೆ ತೋರಿಸಿದಂತೆ ಮಾಡಿ ಒಳಗಿಟ್ಟರು. ಅದರ ಪ್ರತಿಯನ್ನು ಕೇಳಿದಾಗ, ಅದಿನ್ನೂ ಪ್ರಕಟಗೊಂಡಿಲ್ಲದಿರುವುದರಿಂದ ಈಗ ಕೊಡಲಾಗದು ಎಂದರು. ಬೆಳಗ್ಗೆ ಫ್ಲೂ ಲಸಿಕೆಯಿಂದ ತೊಂದರೆಗೀಡಾಗಿ ನನ್ನಲ್ಲಿ ಬಂದಿದ್ದವರ ಬಗ್ಗೆ ಪ್ರಸ್ತಾಪಿಸಿದೆ. ’ನಮ್ಮ ಲಸಿಕೆ ಅತಿ ಸುರಕ್ಷಿತ, ಹಲವು ವೈದ್ಯರು ಅದನ್ನೀಗ ನೀಡುತ್ತಿದ್ದಾರೆ, ಅಡ್ಡ ಪರಿಣಾಮಗಳಾದ ಬಗ್ಗೆ ಎಲ್ಲಿಂದಲೂ ವರದಿಯಾಗಿಲ್ಲ’ ಎನ್ನುವ ಉತ್ತರ. ’ಲಭ್ಯವಿರುವ ವರದಿಗಳಲ್ಲಿ ಶೇ. 45ರಷ್ಟು ಜನರಲ್ಲಿ ಅಡ್ದ ಪರಿಣಾಮಗಳಾಗಿರುವ ಬಗ್ಗೆ ಹೇಳಲಾಗಿದೆಯಲ್ಲವೇ? ಇವತ್ತು ನನ್ನ ಗಮನಕ್ಕೆ ಬಂದ ಎರಡು ಪ್ರಕರಣಗಳಲ್ಲಿ ಇಬ್ಬರಲ್ಲೂ ಅಡ್ದ ಪರಿಣಾಮಗಳಿದ್ದವಲ್ಲ, ಅದಕ್ಕೇನಂತೀರಿ?' ಏನಂತಾರೆ?
ಈ ಲಸಿಕೆಯ ಬಗ್ಗೆ ಇನ್ನಷ್ಟು ಜಾಲಾಡಿದಾಗ ದೊರೆತ ಮಾಹಿತಿಯಲ್ಲಿ ಎಲ್ಲಿಯೂ ಅದರ ದಕ್ಷತೆಯ ಬಗ್ಗೆ ಸ್ಪಷ್ಟವಾದ ವಿವರಗಳಿಲ್ಲ; ಹಳೆಯ ಲಸಿಕೆಯಷ್ಟೇ ಇವು ದಕ್ಷವಾಗಿವೆ ಎಂದೇ ಹೆಚ್ಚಿನೆಡೆ ಹೇಳಲಾಗಿದೆ.[1-8] ರಷ್ಯನ್ ಲಸಿಕೆಯ ಬಗೆಗೆ ಲಭ್ಯವಿರುವ ಮಾಹಿತಿಯನ್ನು ಗಮನಿಸಿದರೆ, ಲಸಿಕೆಯ ಒಂದು ಡೋಸಿನ ನಂತರ ಅದರ ಒಟ್ಟಾರೆ ದಕ್ಷತೆಯು ಶೇ. 50ಕ್ಕಿಂತಲೂ ಕಡಿಮೆಯಿರುವುದು ಕಂಡುಬರುತ್ತದೆ.[3] ಈ ಲಸಿಕೆಯನ್ನು ಹಾಕಿಸಿಕೊಂಡಿರುವವರೆಲ್ಲರನ್ನೂ ಅದು ಫ್ಲೂ ಸೋಂಕಿನಿಂದ ರಕ್ಷಿಸುತ್ತದೆಯೆಂದು ಹೇಳುವಂತಿಲ್ಲವೆಂದು ಅದನ್ನು ತಯಾರಿಸುವ ಕಂಪೆನಿಯೇ ಹೇಳುತ್ತದೆ![1] ಅದೇ ವೇಳೆ, ಲಸಿಕೆಯನ್ನು ಪಡೆದ ಅರ್ಧದಷ್ಟು ಮಂದಿ ಮೂಗಿನಿಂದ ನೀರಿಳಿಯುವುದು, ಗಂಟಲು ಕೆರೆತ, ಮೈಕೈ ನೋವು, ತಲೆನೋವು ಇವೇ ಮುಂತಾದ ಅಡ್ಡ ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ. ಅಗತ್ಯವಿಲ್ಲದ ಈ ಲಸಿಕೆಯನ್ನು ಹಾಕಿಸಿಕೊಂಡವರ ದುಡ್ಡಂತೂ ಹೋಗುತ್ತದೆ, ಇಬ್ಬರಲ್ಲೊಬ್ಬರಿಗೆ ಅಡ್ಡ ಪರಿಣಾಮಗಳೂ ಉಂಟಾಗುತ್ತವೆ, ಆದರೆ ಪ್ರಯೋಜನವಾಗುವುದು ದಿಟವಿಲ್ಲ! [ಅಡ್ಡ ಪರಿಣಾಮಗಳ ದೊಡ್ಡ ಪಟ್ಟಿಯೇ ಇದೆ, 2-9]
ಚುಚ್ಚಿಸಿಕೊಳ್ಳುವ ಫ್ಲೂ ಲಸಿಕೆಯ ಕಥೆಯೇನೂ ಭಿನ್ನವಾಗಿಲ್ಲ, ಚುಚ್ಚಿಸಿಕೊಳ್ಳುವ ನೋವು ಮತ್ತು ಎರಡು ಪಟ್ಟು ಬೆಲೆ ಎಕ್ಸ್ ಟ್ರಾ ಅಷ್ಟೇ![9]
ಮೂಗಿನೊಳಕ್ಕೆ ಸಿಂಪಡಿಸುವ ಲಸಿಕೆಯನ್ನು ಬಹಳಷ್ಟು ಜನರಿಗೆ ನೀಡುವಂತೆಯೇ ಇಲ್ಲ! ಮೂರು ವರ್ಷಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳು ಮತ್ತು ಐವತ್ತು ವರ್ಷಕ್ಕೆ ಮೇಲ್ಪಟ್ಟ ಹಿರಿಯರು, ಗರ್ಭಿಣಿಯರು, ರೋಗರಕ್ಷಣಾ ವ್ಯವಸ್ಥೆಯು ಕುಂಠಿತಗೊಂಡಿರುವವರು, ದೀರ್ಘಕಾಲೀನ ಕಾಹಿಲೆಗಳಾದ ಹೃದ್ರೋಗ, ಅಸ್ತಮಾ, ಮೂತ್ರಪಿಂಡಗಳ ವೈಫಲ್ಯ, ಯಕೃತ್ತಿನ ಕಾಹಿಲೆ, ಮಧುಮೇಹ, ರಕ್ತಕೊರೆ ಇತ್ಯಾದಿಗಳಿಂದ ಬಳಲುತ್ತಿರುವವರು, ನರಮಂಡಲದ ಯಾ ಸ್ನಾಯುಸಂಬಂಧಿ ರೋಗಗಳಿರುವವರು, ಈ ಹಿಂದೆ ಲಸಿಕೆಗಳಿಂದ ತೊಂದರೆಗೀಡಾಗಿರುವವರು ಈ ಲಸಿಕೆಯನ್ನು ಹಾಕಿಸಿಕೊಳ್ಳಬಾರದು.[2-7] ಆದರೆ ಇಂತಹಾ ತೊಂದರೆಗಳಿರುವವರೇ ಫ್ಲೂ ಸೋಕಿನಿಂದ ಹೆಚ್ಚಿನ ಸಮಸ್ಯೆಗಳಿಗೆ ತುತ್ತಾಗುವುದರಿಂದ ಅಂತಹವರಿಗೆ ನೀಡಲಾಗದ ಈ ಲಸಿಕೆಯಿಂದ ಯಾರಿಗೆ ಏನು ಉಪಕಾರವಾಗುತ್ತದೋ ತಿಳಿಯದು.
ಫ್ಲೂ ಲಸಿಕೆಯನ್ನು ಶತಾಯ ಗತಾಯ ಮಾರುವುದಕ್ಕೆ ಸಂಘ=ಸಂಸ್ಥೆಗಳನ್ನೆಲ್ಲಾ ಬಳಸಿಕೊಂಡು ಆಟೋರಿಕ್ಷಾಗಳಲ್ಲೂ ಢಂಗುರ ಸಾರುತ್ತಿರುವುದು ಒಂದೆಡೆಯಾದರೆ, ಇನ್ನೊಂದೆಡೆ, ಈ ಲಸಿಕೆಯನ್ನು ಆದಷ್ಟು ಬೇಗನೇ ಹೊರತಂದು ಎಲ್ಲರಿಗೂ ನೀಡುವುದು ಅತ್ಯಗತ್ಯವೆಂದು ಹೇಳುವ ಮೂಲಕ ಈ ಪ್ರಕ್ರಿಯೆಗೆ ಚಾಲನೆಯನ್ನು ನೀಡಿದ್ದ ವಿಶ್ವ ಆರೋಗ್ಯ ಸಂಸ್ಥೆಯು ಆಗಸ್ಟ್ 10ರಂದು ಹೇಳಿಕೆಯೊಂದನ್ನು ಹೊರಡಿಸಿ, 2009ರ ಫ್ಲೂ ಸೋಂಕು ವಿಶ್ವವ್ಯಾಪಿಯಾಗಿ ಹರಡುತ್ತಿರುವುದು ಈಗ ನಿಂತಿದೆಯೆಂದೂ, ಇನ್ನೇನಿದ್ದರೂ ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿ ಅದು ಹರಡಬಹುದೆಂದೂ ಹೇಳಿದೆ.[10,11] ಹೊಸ ಸಾಂಕ್ರಾಮಿಕವು ಮೊದಲೆಣಿಸಿದಷ್ಟು (ಯಾವ ಆಧಾರದಲ್ಲಿ ಮೊದಲಿನ ಈ ಎಣಿಕೆ ನಡೆದಿತ್ತೋ ತಿಳಿಯದು!) ಭೀಕರವಾಗಿಲ್ಲದಿದ್ದುದಕ್ಕೆ ಅದೃಷ್ಟವನ್ನು ಹೊಣೆಯಾಗಿಸಿರುವ ಈ ಹೇಳಿಕೆಯಲ್ಲಿ ಭಾರತವನ್ನು ವಿಶೇಷವಾಗಿ ಪ್ರಶಂಸಿಸಲಾಗಿದ್ದು, ನಮ್ಮಲ್ಲಿ ಕೈಗೊಂಡ ಕ್ರಮಗಳು ಇತರರಿಗೆ ಮಾದರಿಯೆಂದು ಹೇಳಲಾಗಿದೆ![10] ಬಹುಷಃ ಈ ಸಾಂಕ್ರಾಮಿಕವು ತೊಡಗಿದಂದಿನಿಂದ ವಿಶ್ವ ಆರೋಗ್ಯ ಸಂಸ್ಥೆಯು ಹೇಳಿದ್ದನ್ನೆಲ್ಲಾ ತೆಪ್ಪಗೆ ಪಾಲಿಸಿಕೊಂಡು ಬಂದು ಮತ್ತೀಗ ಲಸಿಕೆಯನ್ನೂ ತಯಾರಿಸಿ ಮಾರಾಟ ಮಾಡುತ್ತಿರುವುದಕ್ಕಾಗಿಯೇ ಈ ಪ್ರಶಂಸೆಯು ದೊರೆತಿರಬಹುದೇನೋ! ಬಕರಾಗಳ ಬೆನ್ನನ್ನು ತೀಡದಿದ್ದರೆ ಹೇಗೆ?!
ಹೊಸ ಫ್ಲೂ ಸೋಂಕನ್ನು ಇಷ್ಟು ದೊಡ್ಡದಾಗಿ ಬಿಂಬಿಸಿ, ವಿಶ್ವದೆಲ್ಲೆಡೆ ಫ್ಲೂ ಲಸಿಕೆಯ ಬಗ್ಗೆ ಒತ್ತಾಯಿಸುತ್ತಿರುವ ವಿಶ್ವ ಆರೋಗ್ಯ ಸಂಸ್ಥೆಯ ನಡವಳಿಕೆಯನ್ನು ಈಗಾಗಲೇ ಪ್ರಶ್ನಿಸಲಾಗಿದೆ. ಯೂರೋಪಿನ ಪರಿಷತ್ತಿನ ಆರೋಗ್ಯ ವಿಭಾಗದಲ್ಲಿ ಪ್ರಮುಖರಾಗಿರುವ ವೊಡಾರ್ಗ್ ಅವರು 2009ರ ಫ್ಲೂ ಸೋಂಕನ್ನು ಈ ಶತಮಾನದ ಅತೀ ದೊಡ್ಡ ವೈದ್ಯಕೀಯ ಹಗರಣವೆಂದು ಹೇಳಿದ್ದು ವಿಶ್ವ ಆರೋಗ್ಯ ಸಂಸ್ಥೆಗೆ ಸಾಕಷ್ಟು ಮುಜುಗರವನ್ನುಂಟು ಮಾಡಿತ್ತು.[12-21] ಹೊಸ ಫ್ಲೂ ಲಸಿಕೆಯನ್ನು ಆದಷ್ಟು ಬೇಗನೇ ಅಭಿವೃದ್ಧಿ ಪಡಿಸಿ ಎಲ್ಲರೂ ಅದನ್ನು ಹಾಕಿಸಿಕೊಳ್ಳುವಂತೆ ಕ್ರಮ ಕೈಗೊಳ್ಳ ಬೇಕೆಂದು ಸೂಚಿಸಿದ ವಿಶ್ವ ಆರೋಗ್ಯ ಸಂಸ್ಥೆಯ 'ನೀತಿನಿರೂಪಿಸುವ ತಜ್ಞರ ಗುಂಪಿನ' ಸದಸ್ಯರ ಪೈಕಿ ಬಹುತೇಕರು ಲಸಿಕೆ ತಯಾರಿಕೆಗೆ ಸಂಬಂಧಿಸಿದ ಸಂಶೋಧನೆಗಳಿಗಾಗಿ ಹಣಕಾಸಿನ ನೆರವನ್ನು ಪಡೆದಿದ್ದವರೇ ಆಗಿದ್ದರೆನ್ನುವುದನ್ನೂ, 'ಹಿತಾಸಕ್ತಿಯ ತಾಕಲಾಟದ' ಈ ವಿಚಾರವನ್ನು ಘೋಷಿಸಬೇಕೆಂಬ ಷರತ್ತನ್ನು ಅವರು ಪಾಲಿಸಿದಂತಿಲ್ಲವೆನ್ನುವುದನ್ನೂ ವೊಡಾರ್ಗ್ ಮತ್ತಿತರರು ಬಯಲಿಗೆಳೆದರು.[19] ಯೂರೋಪಿನ ಪರಿಷತ್ತಿನಲ್ಲಿ ಈ ಬಗ್ಗೆ ರಚಿತವಾದ ಸಮಿತಿಯು ಈ ಅರೋಪಗಳಲ್ಲಿ ಸತ್ಯಾಂಶವಿದೆಯೆನ್ನುವುದನ್ನು ಖಚಿತ ಪಡಿಸಿದರೆ, ಭಾರತ ಸರಕಾರವೂ ಈ ವಿಚಾರದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯಿಂದ ಸ್ಪಷ್ಟೀಕರಣವನ್ನು ಕೇಳಿತು.[21] ಇಂತಹಾ ಗಂಭೀರವಾದ ಆರೋಪಗಳಿಗೆ ಮೊದಲಲ್ಲಿ ಕೇವಲ ಹಾರಿಕೆಯ ಉತ್ತರವನ್ನಷ್ಟೇ ನೀಡಿದ ವಿಶ್ವ ಆರೋಗ್ಯ ಸಂಸ್ಥೆಯು ಇದೀಗ ಫ್ಲೂ ಸಾಂಕ್ರಾಮಿಕವು ದೊಡ್ದ ಪ್ರಮಾಣದಲ್ಲಿ ಹರಡುವುದು ನಿಂತಿದೆಯೆನ್ನುವ ಮೂಲಕ ತನ್ನ ಜವಾಬ್ದಾರಿಯಿಂದ ನುಣುಚಿಕೊಂಡು ಇನ್ನಷ್ಟು ಬೆತ್ತಲಾದಂತಾಗಿದೆ.
ದೈತ್ಯ ಕಂಪೆನಿಗಳ ಪರವಾಗಿ ವಿಶ್ವ ಆರೋಗ್ಯ ಸಂಸ್ಥೆಯು ಎತ್ತಿ ನಿಲ್ಲಿಸಿರುವ ಫ್ಲೂ ಬೆದರು ಬೊಂಬೆಗೆ ನಾವೆಲ್ಲ ಹರಕೆಯ ಕುರಿಗಳಂತಾಗಿದ್ದೇವೆ, ವ್ಯಾಪಾರದ ಸರಕುಗಳಾಗಿದ್ದೇವೆ.[22] ಕವಿ ನಿಸಾರರಂದಂತೆ, ಹೊಳೆಯುವ ಮಚ್ಚಿಗೆ ಕತ್ತನ್ನು ತಿಕ್ಕುತ್ತ ಅದನ್ನು ನೆಕ್ಕುತ್ತಿರುವ ಕುರಿಗಳು, ನಾವು-ನೀವು-ಅವರು-ಇವರು.
ಆಕರಗಳು:
- http://pressroom.medimmune.com/press-releases/2009/10/22/interim-clinica...
- http://www.immunize.org/vis/h1n1_liveflu.pdf
- http://www.who.int/vaccine_research/diseases/influenza/19_feb_Rudenko.pdf
- http://www.who.int/vaccine_research/documents/SIIGautamMay2010.pdf
- http://www.cdc.gov/h1n1flu/vaccination/nasalspray_qa.htm
- http://www.medscape.com/viewarticle/709468_4
- http://www.ncbi.nlm.nih.gov/pubmedhealth/PMH0000509/
- http://www.who.int/csr/disease/swineflu/meetings/sage_oct_2009/en/index....
- http://www.nejm.org/doi/full/10.1056/NEJMoa0907413
- http://www.who.int/mediacentre/news/statements/2010/h1n1_vpc_20100810/en...
- http://www.hhs.gov/news/press/2010pres/08/20100810b.html
- http://www.isdbweb.org/documents/uploads/vecchi/press_release/press%2019...
- http://www.dailymail.co.uk/news/article-1242147/The-false-pandemic-Drug-...
- http://www.wodarg.de/english/3509880.html
- http://www.wodarg.de/english/3069477.html
- http://euro-med.dk/?p=13428
- http://www.apmhealtheurope.com/story.php?mots=VIGILANCE&searchScope=1&se...
- http://timesofindia.indiatimes.com/india/Did-WHO-experts-fuel-swine-flu-...
- http://timesofindia.indiatimes.com/india/Did-WHO-experts-fuel-swine-flu-...
- http://timesofindia.indiatimes.com/india/WHO-overplayed-swine-flu-threat...
- http://timesofindia.indiatimes.com/india/Booming-business-in-the-time-of...
- http://sify.com/news/india-demands-probe-into-who-s-swine-flu-alarm-news...
- Add new comment
- 587 reads
