There are currently 0 users and 1 guest online.

ನೀವೂ ಪ್ರಕಟಿಸಬಹುದು!

ಆರೋಗ್ಯ ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ಈ ಮಹಾ ಪರಾಕ್ರ (ಕ್ರಿ)ಮಿ ಯನ್ನು ಸೃಷ್ಟಿಸಿದವರಾರು?

ಈ ಮಹಾ ಪರಾಕ್ರ (ಕ್ರಿ)ಮಿ ಯನ್ನು ಸೃಷ್ಟಿಸಿದವರಾರು?

ಆರೋಗ್ಯ ಸಂಪದದಲ್ಲಿ

ತನ್ನ ತಾಂತ್ರಿಕ ಸಾಮರ್ಥ್ಯಗಳ ಅಹಂನಲ್ಲಿ ತೇಲುತ್ತಿರುವ ಮನುಷ್ಯನನ್ನು ಛೇಡಿಸಲು ಪಣ ತೊಟ್ಟಿರುವವೋ ಎಂಬಂತೆ ಕಣ್ಣಿಗೂ ಕಾಣದ ಸೂಕ್ಷ್ಮ ಜೀವಿಗಳು ಒಂದರ ಹಿಂದೆ ಒಂದಾಗಿ ಸರದಿಯಲ್ಲಿ ಹೊರಬರುತ್ತಿರುವಂತಿವೆ. ಕಾಡೊಳಗಿಂದಲೋ, ಇನ್ನೆಲ್ಲಿಂದಲೋ ಬಂದು ಕಾಡತೊಡಗಿರುವ ಹಲವು ಸೂಕ್ಷ್ಮ ಜೀವಿಗಳನ್ನು ಇನ್ನೇನು ತಿಳಿದುಬಿಟ್ಟೆವು ಎನ್ನುವಷ್ಟರಲ್ಲೇ ಫ್ಲೂ, ಚಿಕುಂಗುನ್ಯಾ, ಮಲೇರಿಯಾ, ಡೆಂಗೀ ಮುಂತಾದ ಹಳೆಯ ಸೂಕ್ಷ್ಮಜೀವಿಗಳು ತಮ್ಮ ರೂಪವನ್ನು ಬದಲಿಸಿಕೊಂಡು, ಹೊಸ ಶಕ್ತಿಯೊಂದಿಗೆ, ಮತ್ತೆ ಕಾಡತೊಡಗಿರುವುದನ್ನು ನಾವೆಲ್ಲರೂ ಅನುಭವಿಸುತ್ತಿದ್ದೇವೆ. ಫ್ಲೂ ಹರಡುವಿಕೆ ಇನ್ನೇನು ಕಡಿಮೆಯಾಯಿತೆಂದು ವಿಶ್ವ ಆರೋಗ್ಯ ಸಂಸ್ಥೆಯು ಹೇಳಿಕೆ ನೀಡಿದ ಬೆನ್ನಿಗೇ ಯಾವ ಪ್ರತಿಜೈವಿಕ ಔಷಧಗಳಿಗೂ ಬಗ್ಗದ ಕೆಲವು ಮಹಾ ಪರಾಕ್ರಮಿ ಕ್ರಿಮಿ (ಬ್ಯಾಕ್ಟೀರಿಯಾ) ಗಳನ್ನು ಗುರುತಿಸಲಾಗಿದೆಯೆಂಬ ವರದಿಯು ಪ್ರಕಟಗೊಂಡಿದ್ದು, ಬಲು ದೊಡ್ಡ ಸುದ್ದಿಯಾಗಿ, ತಲ್ಲಣವನ್ನುಂಟುಮಾಡಿದೆ. ಈ ಬ್ಯಾಕ್ಟೀರಿಯಾಗಳಿಗೆ ಭಾರತದ ಆಸ್ಪತ್ರೆಗಳೇ ಮೂಲವೆಂದು ಹೇಳಲಾಗಿದೆ, ಮಾತ್ರವಲ್ಲ, ಪ್ರತಿಜೈವಿಕಗಳ ವಿರುದ್ಧ ಈ ಬ್ಯಾಕ್ಟೀರಿಯಾಗಳಿಗೆ ರೋಧಶಕ್ತಿಯನ್ನು ನೀಡಿರುವ ಕಿಣ್ವಕ್ಕೆ ನ್ಯೂ ಡೆಲ್ಲಿ ಮೆಟಲೋ ಬೀಟಾ ಲಾಕ್ಟಮೇಸ್ 1 ಎಂದು ಹೆಸರಿಡಲಾಗಿದೆ.[1] ಆದರೆ, ನಮ್ಮ ಮಟ್ಟಿಗೆ ಇದು ಹುಣ್ಣಿನ ಮೇಲಿನ ಬರೆಯಂತಾಗಿದೆ. ಇದೊಂದು ಪಾಶ್ಚಿಮಾತ್ಯ ಷಡ್ಯಂತ್ರವೆಂದೂ, ಇತ್ತೀಚಿನ ದಿನಗಳಲ್ಲಿ ವಿದೇಶಗಳಿಂದ ಚಿಕಿತ್ಸೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತಕ್ಕೆ ಬರುತ್ತಿರುವವರನ್ನು ಹಿಮ್ಮೆಟ್ಟಿಸುವ ಹುನ್ನಾರವೆಂದೂ, ಬಹುರಾಷ್ಟ್ರೀಯ ಕಂಪೆನಿಗಳ ಕುತಂತ್ರವೆಂದೂ, ಕಿಣ್ವದ ಹೆಸರಿಗೆ ನ್ಯೂಡೆಲ್ಲಿಯನ್ನು ಸೇರಿಸಿರುವುದು ನಮ್ಮ ದೇಶಕ್ಕೆ ಮಾಡಿರುವ ಅಪಮಾನವೆಂದೂ ದೊಡ್ಡ ದೊಡ್ದ ಆಸ್ಪತ್ರೆಗಳ ದೊಡ್ಡ ದೊಡ್ಡ ವೈದ್ಯರುಗಳೂ, ತಜ್ಞರುಗಳೂ, ಕೇಂದ್ರ ಸರಕಾರದ ವಕ್ತಾರರುಗಳೂ, ಮಂತ್ರಿಗಳೂ ಈಗಾಗಲೇ ಪ್ರತಿಕ್ರಿಯಿಸಿದ್ದಾರೆ; ಕಿರುಚಾಟ, ತಳ್ಳಾಟ, ಕೆಸರೆರಚುವಿಕೆ, ಬೈಗುಳಗಳೆಲ್ಲವೂ ಆಗಿವೆ, ಆಗುತ್ತಿವೆ.[2-5]

ಏನಿವು ಮಹಾಕ್ರಿಮಿಗಳು? ಎಲ್ಲಿ, ಹೇಗೆ, ಯಾಕಾಗಿ ಹುಟ್ಟಿದವು?
ಬ್ಯಾಕ್ಟೀರಿಯಾಗಳನ್ನು ನಾಶಪಡಿಸಬಲ್ಲ ಪ್ರತಿಜೈವಿಕಗಳ ಸಂಶೋಧನೆಯು ಮನುಷ್ಯನ ಅತಿ ದೊಡ್ಡ ಸಾಧನೆಗಳಲ್ಲೊಂದೆಂದು ಹೇಳಲಾಗುತ್ತಿತ್ತು. ಆದರೆ ಬ್ಯಾಕ್ಟೀರಿಯಾಗಳು ಇಂತಹಾ ಔಷಧಗಳನ್ನು ನಾಶ ಪಡಿಸುವ ಯಾ ಅವುಗಳ ದಾಳಿಯಿಂದ ತಪ್ಪಿಸಿಕೊಂಡು ವೃದ್ಧಿಯಾಗುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬಲ್ಲವೆನ್ನುವುದು ನಮ್ಮ ಅರಿವಿಗೆ ಬರಲು ಹೆಚ್ಚು ಕಾಲ ಬೇಕಾಗಲಿಲ್ಲ. ಪೆನಿಸಿಲಿನ್ ಮಾರುಕಟ್ಟೆಗೆ ಬಂದ ನಾಲ್ಕೇ ವರ್ಷಗಳಲ್ಲಿ ಕೆಲವು ಬ್ಯಾಕ್ಟೀರಿಯಾಗಳು ಅದನ್ನು ಮೀರಿ ಬೆಳೆಯುವ ಶಕ್ತಿಯನ್ನು ಗಳಿಸಿಕೊಂಡವೆಂದರೆ, ಬ್ಯಾಕ್ಟೀರಿಯಾಗಳ ಸಾಮರ್ಥ್ಯವೆಷ್ಟೆನ್ನುವುದು ಮನದಟ್ಟಾಗುತ್ತದೆ. ಹೊಸ ಪ್ರತಿಜೈವಿಕಗಳನ್ನು ಬಳಸಲಾರಂಭಿಸಿದ ಕೆಲವೇ ತಿಂಗಳು/ವರ್ಷಗಳಲ್ಲೇ ಬ್ಯಾಕ್ಟೀರಿಯಾಗಳು ಅವಕ್ಕೆ ಸಡ್ದು ಹೊಡೆಯುವುದು ಈಗ ಸಾಮಾನ್ಯವಾಗಿಬಿಟ್ಟಿದೆ. ನಾವು ಹೊಸ ಔಷಧಗಳನ್ನು ಹುಡುಕಿ, ಮಾರುಕಟ್ಟೆಗೆ ತರಲು ತಗಲುವ ಸಮಯಕ್ಕಿಂತ ಎಷ್ಟೋ ಕಡಿಮೆ ಅವಧಿಯಲ್ಲಿ ಬ್ಯಾಕ್ಟೀರಿಯಾಗಳು ಈ ಪ್ರತಿರೋಧವನ್ನು ಬೆಳೆಸಿಕೊಳ್ಳುವುದರಿಂದಾಗಿ ಈ ಸೂಕ್ಷ್ಮಜೀವಿಗಳ ’ಕೈಯೇ’ ನಮ್ಮಿಂದ ಮೇಲಾಗಿರುತ್ತದೆ. ಕಳೆದ ಎಂಭತ್ತಕ್ಕೂ ಹೆಚ್ಚು ವರ್ಷಗಳಲ್ಲಿ ಅಭಿವೃದ್ಧಿ ಪಡಿಸಲಾಗಿರುವ ಹೆಚ್ಚಿನೆಲ್ಲಾ ಪ್ರತಿಜೈವಿಕಗಳ ವಿರುದ್ಧವೂ ಬಹುತೇಕ ಬ್ಯಾಕ್ಟೀರಿಯಾಗಳು ಇಂತಹಾ ರೋಧಶಕ್ತಿಯನ್ನು ಬೆಳೆಸಿಕೊಂಡಿವೆ. ಹೀಗೆ ಮನುಷ್ಯ ಹಾಗೂ ಬ್ಯಾಕ್ಟೀರಿಯಾಗಳ ನಡುವಿನ ಸ್ಪರ್ಧೆಯಲ್ಲಿ ಇದುವರೆಗೆ ಬ್ಯಾಕ್ಟೀರಿಯಾಗಳೇ ಮೇಲುಗೈ ಸಾಧಿಸಿರುವುದು ಸ್ಪಷ್ಟವಾಗಿದೆ.

ಹೊಸ ಪ್ರತಿಜೈವಿಕಗಳನ್ನು ಹುಡುಕುವಲ್ಲಿ ನಮ್ಮ ಸಾಮರ್ಥ್ಯವು ಅಷ್ಟಕ್ಕಷ್ಟೇ. ಪೆನಿಸಿಲಿನ್ ರಚನೆಯನ್ನೇ ಅನ್ನು ಹೋಲುವ ಹಲವಾರು ಔಷಧಗಳನ್ನು ನಾವು ತಯಾರಿಸಿದ್ದೇವಾದರೂ, ತೀರಾ ಹೊಸದಾದ ರಚನೆಯುಳ್ಳ, ಹೊಸ ರೀತಿಯಲ್ಲಿ ಸೂಕ್ಷ್ಮಜೀವಿಗಳ ಮೇಲೆ ದಾಳಿಯಿಡಬಲ್ಲ ಔಷಧಗಳನ್ನು ಅಭಿವೃದ್ಧಿಪಡಿಸುವಲ್ಲಿ ನಾವು ಅಷ್ಟೊಂದು ಯಶಸ್ವಿಯಾಗಿಲ್ಲವೆಂದೇ ಹೇಳಬೇಕು. ಹೀಗಾಗಿ, ನಮ್ಮ ಬತ್ತಳಿಕೆಯಲ್ಲಿರುವ ಬಾಣಗಳೆಲ್ಲವೂ ಸುಮಾರಾಗಿ ಒಂದೇ ರೂಪದ್ದಾಗಿರುವಾಗ, ಈ ಬಾಣಗಳೆಲ್ಲವನ್ನೂ ಒಂದೇ ಏಟಿಗೆ ಛೇದಿಸುವುದು ಬ್ಯಾಕ್ಟೀರಿಯಾಗಳಿಗೆ ಸುಲಭವಾಗುತ್ತದೆ. ಈಗ ಆಗಿರುವುದು ಅದೇ. ಪೆನಿಸಿಲಿನ್ ನ ಮೂಲ ರಚನೆಯಲ್ಲಿ ಬೀಟಾ ಲಾಕ್ಟಾಮ್ ಎಂಬ ವರ್ತುಲ ರಚನೆಯಿದೆ. ಸಿಫಲೋಸ್ಪೋರಿನ್ ಜಾತಿಯ ಪ್ರತಿಜೈವಿಕಗಳೂ ಇದೇ ಬೀಟ ಲಾಕ್ಟಾಮ್ ಉಳ್ಳದ್ದಾಗಿವೆ. ಈ ರಚನೆಯನ್ನೇ ಅಲ್ಪಸ್ವಲ್ಪ ಬದಲಿಸಿ ಇನ್ನೊಂದಷ್ಟು ಪೆನಿಸಿಲಿನ್ ಯಾ ಸಿಫಲೋಸ್ಪೋರಿನ್ ಜಾತಿಯ ಹಲವಾರು ಪ್ರತಿಜೈವಿಕಗಳನ್ನು ತಯಾರಿಸಿ ವಿವಿಧ ಸೋಂಕುಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತಿದೆ. ಹಲವು ಬ್ಯಾಕ್ಟೀರಿಯಾಗಳು ಇವುಗಳೆಲ್ಲದರ ವಿರುದ್ಧ ರೋಧಶಕ್ತಿಯನ್ನು ಅದಾಗಲೇ ಬೆಳೆಸಿಕೊಂಡುಬಿಟ್ಟಿವೆ. ಇದೇ ರಚನೆಯುಳ್ಳ ಕಾರ್ಬಾಪೆನೆಮ್ ಜಾತಿಯ ಪ್ರತಿಜೈವಿಕಗಳನ್ನು ಕಳೆದೆರಡು ದಶಕಗಳಿಂದ ಬಳಸಲಾಗುತ್ತಿದ್ದು, ಬ್ಯಾಕ್ಟೀರಿಯಾಗಳ ವಿರುದ್ಧ ಇವನ್ನು ಕೊನೆಯ ಅಸ್ತ್ರಗಳೆಂದೇ ಬಿಂಬಿಸಲಾಗುತ್ತಿತ್ತು. ಇದೀಗ ಕೆಲವು ಬ್ಯಾಕ್ಟೀರಿಯಾಗಳು ಇವುಗಳ ವಿರುದ್ಧವೂ ರೋಧಶಕ್ತಿಯನ್ನು ಬೆಳೆಸಿಕೊಂಡಿರುವುದು ವರದಿಯಾಗಿರುವುದರಿಂದ, ಯಾವ ಪ್ರತಿಜೈವಿಕಗಳಿಗೂ ಬಗ್ಗದ ಮಹಾಕ್ರಿಮಿಗಳು ಹುಟ್ಟಿಕೊಂಡಂತಾಗಿದೆ.

ಬೀಟಾ ಲಾಕ್ಟಾಮ್ ಗುಂಪಿನ ಪ್ರತಿಜೈವಿಕ ಅಸ್ತ್ರಗಳ ವಿರುದ್ಧ ಬ್ಯಾಕ್ಟೀರಿಯಾಗಳ ಪ್ರತ್ಯಸ್ತ್ರವೆಂದರೆ, ಈ ಔಷಧಗಳ ಮೂಲ ರಚನೆಯಲ್ಲಿರುವ ಬೀಟಾ ಲಾಕ್ಟಾಮ್ ವರ್ತುಲವನ್ನೇ ಒಡೆಯಬಲ್ಲ ಬೀಟಾ ಲಾಕ್ಟಮೇಸ್ ಎಂಬ ಕಿಣ್ವಗಳನ್ನು ತಯಾರಿಸುವುದು!ವಿವಿಧ ಬ್ಯಾಕ್ಟೀರಿಯಾಗಳು ವಿಭಿನ್ನ ತರಹದ ಬೀಟಾ ಲಾಕ್ಟಮೇಸ್ ಗಳನ್ನು ಸ್ರವಿಸಿ ತಮ್ಮನ್ನು ರಕ್ಷಿಸಿಕೊಳ್ಳುತ್ತವೆ, ಮನುಷ್ಯನ ದಾಳಿಗೆ ಬಗ್ಗದೆ ತಮ್ಮ ದಾಳಿಯನ್ನು ಮುಂದುವರಿಸಿ ಸೋಂಕನ್ನು ವೃದ್ಧಿಸುತ್ತವೆ. ಈಗ ಸುದ್ದಿಯಲ್ಲಿರುವ ನ್ಯೂಡೆಲ್ಲಿ ಮೆಟಲೋ ಬೀಟಾ ಲಾಕ್ಟಮೇಸ್ 1 (NDM-1) ಎಂಬುದು ಕಾರ್ಬಾಪೆನೆಮ್ ಔಷಧಗಳನ್ನು ಕೂಡ ನಾಶ ಮಾಡಬಲ್ಲ ಸಾಮರ್ಥ್ಯವನ್ನು ಹೊಂದಿದೆ.

ಎನ್ ಡಿ ಎಂ - 1 ಗುರುತಿಸಿ ಎರಡು ವರ್ಷಗಳೇ ಆದವು!
ಈ ಹೊಸ ಸಾಮರ್ಥ್ಯವುಳ್ಳ ಬ್ಯಾಕ್ಟೀರಿಯಾಗಳನ್ನು 2008ರ ಮಾರ್ಚ್-ಎಪ್ರಿಲ್ ನಲ್ಲೇ ಗುರುತಿಸಲಾಗಿತ್ತು.[6-9] ನವೆಂಬರ್ 2007ರಲ್ಲಿ ಸ್ವೀಡನ್ ನಿಂದ ಪಂಜಾಬಿಗೆ ಬಂದಿದ್ದ ಭಾರತೀಯರೊಬ್ಬರ ನಿತಂಬದಲ್ಲಿ ಕೀವುಂಟಾಗಿ ಒಂದು ತಿಂಗಳ ಕಾಲ ನವದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಅದು ಗುಣ ಹೊಂದದೆ 2008ರ ಜನವರಿಯಲ್ಲಿ ಅವರು ಸ್ವೀಡನಿಗೆ ಮರಳಿ ಚಿಕಿತ್ಸೆಗಾಗಿ ದಾಖಲಾಗಿದ್ದಾಗ, ಮಾರ್ಚ್-ಎಪ್ರಿಲ್ ನಲ್ಲಿ, ಈ ಹೊಸ ಕಿಣ್ವವನ್ನು ತಯಾರಿಸಬಲ್ಲ ಕ್ಲೆಬ್ಸಿಯೆಲಾ ಮತ್ತು ಎಶಿರಿಷಿಯಾ ಬ್ಯಾಕ್ಟೀರಿಯಾಗಳನ್ನು ಅವರ ದೇಹದಲ್ಲಿ ಗುರುತಿಸಲಾಯಿತು. ನವದೆಹಲಿಯ ಮೂಲದಿಂದ ಬಂದದ್ದರಿಂದ ಅದೇ ಹೆಸರನ್ನೂ ನೀಡಲಾಯಿತು. ತದನಂತರದಲ್ಲಿ ನಡೆಸಲಾದ ಅಧ್ಯಯನಗಳಲ್ಲಿ ನಮ್ಮ ದೇಶದ ಹಲವೆಡೆಗಳಲ್ಲಿ ಹಾಗೂ ಪಾಕಿಸ್ತಾನ, ಇಂಗ್ಲೆಂಡ್ ಹಾಗೂ ಅಮೆರಿಕಾದ ಕೆಲವೆಡೆಗಳಲ್ಲೂ ಇದೇ ಕಿಣ್ವವನ್ನುಳ್ಳ ಬ್ಯಾಕ್ಟೀರಿಯಾಗಳನ್ನು ಗುರುತಿಸಲಾಗಿದ್ದು, 2010 ರ ಮಾರ್ಚ್ ತಿಂಗಳ ಜರ್ನಲ್ ಆಫ್ ಅಸೋಸಿಯೇಶನ್ ಆಫ್ ಫಿಸಿಷಿಯನ್ಸ್ ಆಫ್ ಇಂಡಿಯಾ (JAPI) ಪತ್ರಿಕೆಯಲ್ಲೂ,[10,11] 2010 ಆಗಸ್ಟ್ 11 ರ ಲಾನ್ಸೆಟ್ ಇನ್ಫೆಕ್ಷಿಯಸ್ ಡಿಸೀಸಸ್ ಪತ್ರಿಕೆಯಲ್ಲೂ [1,12,13] ಈ ಬಗ್ಗೆ ಸವಿವರವಾದ ಲೇಖನಗಳನ್ನು ಪ್ರಕಟಿಸಲಾಗಿದೆ. ಲಾನ್ಸೆಟ್ ಇನ್ಫೆಕ್ಷಿಯಸ್ ಡಿಸೀಸಸ್ ನಲ್ಲಿ ಪ್ರಕಟಗೊಂಡಿರುವ ಪ್ರಬಂಧದ ಅಗ್ರ ಲೇಖಕರಾದ ಕುಮಾರಸ್ವಾಮಿಯವರು ಚೆನ್ನೈ ವಿಶ್ವವಿದ್ಯಾಲಯದ ಸಂಶೋಧಕರು. ಇವರಲ್ಲದೆ, ಹರ್ಯಾನಾದ ಬಿ.ಡಿ. ಶರ್ಮಾ ಸ್ನಾತಕೋತ್ತರ ವೈದ್ಯಕೀಯ ವಿದ್ಯಾಲಯದ ಇಬ್ಬರು, ಕೊಚ್ಚಿಯ ಅಮೃತಾ ವೈದ್ಯಕೀಯ ವಿದ್ಯಾಲಯದ ಒಬ್ಬರು, ಕೊಲ್ಕತ್ತಾದ ಅಪೊಲೋ ಗ್ಲೆನ್ ಈಗಲ್ಸ್ ಆಸ್ಪತ್ರೆಯ ಒಬ್ಬರು, ಚೆನ್ನೈಯ ಅಪೊಲೋ ಆಸ್ಪತ್ರೆಯ ಒಬ್ಬರು ಹಾಗೂ ವಾರಣಾಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಒಬ್ಬರು ಸಂಶೋಧಕರೂ ಲೇಖಕರಲ್ಲಿ ಸೇರಿದ್ದಾರೆ; ಪಾಕಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್ ಹಾಗೂ ಸ್ವೀಡನ್ನಿನ ಸಂಶೋಧಕರೂ ಅದರಲ್ಲಿ ಭಾಗಿಯಾಗಿದ್ದಾರೆ. ಹಾಗಿದ್ದರೂ, ಪ್ರತಿಷ್ಠಿತ ಲಾನ್ಸೆಟ್ ನಲ್ಲಿ ಪ್ರಕಟಗೊಂಡ ಈ ಲೇಖನದಿಂದಾಗಿ ನಮ್ಮ ಸರಕಾರವೂ ಸೇರಿದಂತೆ ಹಲವರು ಉರಿದು ಬಿದ್ದಿದ್ದಾರೆ. ಆದರೆ ಮುಂಬಯಿಯ ಅಸ್ಪತ್ರೆಗಳಲ್ಲಿ ಇದೇ ಎನ್ ಡಿ ಎಂ -1 ಬ್ಯಾಕ್ಟೀರಿಯಾಗಳನ್ನು ಗುರುತಿಸಿರುವ ಬಗ್ಗೆ ಲೇಖನವನ್ನೂ, ಖಾರವಾದ ಸಂಪಾದಕೀಯವನ್ನೂ ನಮ್ಮ ದೇಶದ್ದೇ ಆದ JAPIಯಲ್ಲಿ ಮಾರ್ಚ್ ತಿಂಗಳಲ್ಲೇ ಬರೆಯಲಾಗಿತ್ತಾದರೂ [10,11,14], ಯಾರೂ ಆ ಬಗ್ಗೆ ತಲೆಕೆಡಿಸಿಕೊಂಡಿದ್ದಿಲ್ಲ!

ಹೊಣೆಗಾರರು ಯಾರು?
JAPI ಯಲ್ಲಿ ಬರೆಯಲಾಗಿರುವ ಸಂಪಾದಕೀಯವೂ ಸೇರಿದಂತೆ ಈ ಬಗ್ಗೆ ಬರೆದಿರುವವರು ಮತ್ತು ಹೇಳಿರುವವರೆಲ್ಲರೂ ಇನ್ನೊಬ್ಬರನ್ನೇ ಹಳಿದಿದ್ದಾರೆಯೇ ಹೊರತು ತಮ್ಮ ಜವಾಬ್ದಾರಿಯೇನೆನ್ನುವ ಬಗ್ಗೆ ಜಾಣ ಮೌನವನ್ನೇ ವಹಿಸಿಬಿಟ್ಟಿದ್ದಾರೆ! ದೊಡ್ಡ ಆಸ್ಪತ್ರೆಗಳವರು ಸಣ್ಣ ಆಸ್ಪತ್ರೆಗಳವರನ್ನು, ’ದೊಡ್ಡ’ ವೈದ್ಯರು ’ಸಣ್ಣ’ ವೈದ್ಯರನ್ನು, ಮಹಾನಗರಗಳ ವೈದ್ಯರು ಹೊರವಲಯದ ವೈದ್ಯರನ್ನು ಇದಕ್ಕೆ ಹೊಣೆಯಾಗಿಸಿದ್ದಾರೆ! ಪ್ರತಿಜೈವಿಕಗಳಿಗೆ ಬ್ಯಾಕ್ಟೀರಿಯಾಗಳು ರೋಧಶಕ್ತಿಯನ್ನು ಬೆಳೆಸಿಕೊಳ್ಳುವುದಕ್ಕೆ ಈ ಔಷಧಗಳ ಅತಿಬಳಕೆ ಯಾ ದುರ್ಬಳಕೆಗಳೇ ಕಾರಣವಾಗಿದ್ದು, ಅವುಗಳ ಬಳಕೆಯ ಎಲ್ಲ ಸ್ತರಗಳಲ್ಲೂ ತಾಂಡವವಾಡುತ್ತಿರುವ ಬೇಜವಾಬ್ದಾರಿತನವನ್ನು ಪಟ್ಟಿ ಮಾಡುವುದು ಕಷ್ಟವೇನಿಲ್ಲ.. ರೋಗಿಗಳು, ವೈದ್ಯರು, ಆಸ್ಪತ್ರೆಗಳ ಅಧಿಕಾರ ವರ್ಗ, ಔಷಧಗಳನ್ನು ತಯಾರಿಸಿ ಮಾರುವ ಕಂಪೆನಿಗಳು, ಈ ಕಂಪೆನಿಗಳನ್ನು ನಿಯಂತ್ರಿಸುವ ಔಷಧ ನಿಯಂತ್ರಣಾ ಇಲಾಖೆಯ ಅಧಿಕಾರಿಗಳು, ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಆಡಳಿತ ನಡೆಸುವವರು ಎಲ್ಲರೂ ಇದಕ್ಕೆ ಸಮಾನರೂಪದಲ್ಲಿ ಹೊಣೆಯಾಗಿದ್ದಾರೆನ್ನುವುದರಲ್ಲಿ ಎರಡು ಮಾತಿಲ್ಲ.

  • ಪ್ರತಿಜೈವಿಕಗಳ ಅಗತ್ಯವೇ ಇಲ್ಲದಲ್ಲಿ ಅವುಗಳನ್ನು ಬಳಸುವುದು: ಅತ್ಯಂತ ಸಾಮಾನ್ಯವಾಗಿರುವ ವೈರಸ್ ಜನ್ಯ ಸೋಂಕುಗಳಲ್ಲಿ ಬ್ಯಾಕ್ಟೀರಿಯಾ ನಿರೋಧಕ ಪ್ರತಿಜೈವಿಕಗಳನ್ನು ಬಳಸುವುದು ತೀರಾ ಸಾಮಾನ್ಯ. ವೈರಸ್ ಜನ್ಯ ಸೋಂಕುಗಳಿಗೆ ಯಾವ ಚಿಕಿತ್ಸೆಯ ಅಗತ್ಯವೂ ಇಲ್ಲ, ಅವು ತಮ್ಮಷ್ಟಕ್ಕೇ ಗುಣ ಹೊಂದುತ್ತವೆಯೆನ್ನುವುದನ್ನು ಒಪ್ಪಲು ಸಿದ್ಧರಿಲ್ಲದೆ ಔಷಧಗಳ ಪಟ್ಟಿಯನ್ನೇ ಒತ್ತಾಯಿಸಿ ಪಡೆಯುವ ರೋಗಿಗಳು, ಆ ಒತ್ತಾಯಕ್ಕೆ ಮಣಿಯುವ ವೈದ್ಯರು, ವೈರಸ್ ಜನ್ಯ ಕಾಹಿಲೆಯನ್ನು ಸರಿಯಾಗಿ ಗುರುತಿಸಲಾಗದಿರುವುದು, ಸರಿಯಾದ ತರಬೇತಿಯ ಕೊರತೆ ಯಾ ಆಧುನಿಕ ವೈದ್ಯ ವಿಜ್ಞಾನದ ತರಬೇತಿಯೇ ಇಲ್ಲದೆಯೇ ಪ್ರತಿಜೈವಿಕಗಳನ್ನು ಯದ್ವಾ ತದ್ವಾ ಬಳಸುವುದು, ಪ್ರತಿಜೈವಿಕಗಳನ್ನು ಹೆಚ್ಚು ಬಳಸುವಂತೆ ಒತ್ತಡವನ್ನು ಹೇರುವ ಔಷಧ ಕಂಪೆನಿಗಳು ಇವೆಲ್ಲವೂ ಇದಕ್ಕೆ ಕಾರಣಗಳು
  • ಸೂಕ್ತವಾದ ಪ್ರತಿಜೈವಿಕಗಳನ್ನು ಬಳಸದಿರುವುದು: ಬ್ಯಾಕ್ಟೀರಿಯಾಗಳ ಸೋಂಕನ್ನು ನಿಖರವಾಗಿ ಗುರುತಿಸಿ, ಸೋಂಕಿಗೆ ಯಾವ ಬ್ಯಾಕ್ಟೀರಿಯಾಗಳು ಕಾರಣವಾಗಿರಬಹುದೆನ್ನುವುದನ್ನು ಸರಿಯಾಗಿ ಅಂದಾಜಿಸಿ ಯಾ ಪ್ರಯೋಗಾಲಯಗಳಲ್ಲಿ ಗುರುತಿಸಿ, ಅದಕ್ಕೆ ಅತ್ಯಂತ ಸೂಕ್ತವಾದ ಕಿರು ವ್ಯಾಪ್ತಿಯ (narrow spectrum) ಪ್ರತಿಜೈವಿಕಗಳನ್ನೇ ಬಳಸುವುದರಿಂದ ಸೋಂಕು ಬೇಗನೇ ನಿಯಂತ್ರಣಕ್ಕೆ ಬರುತ್ತದೆ, ಬ್ಯಾಕ್ಟೀರಿಯಾಗಳಲ್ಲಿ ಪ್ರತಿರೋಧ ಶಕ್ತಿಯು ಬೆಳೆಯುವ ಸಾಧ್ಯತೆಗಳೂ ಕಡಿಮೆಯಾಗುತ್ತವೆ. ಆದರೆ ಇಂದು ಬಹುತೇಕ ಸಂದರ್ಭಗಳಲ್ಲಿ ವಿಸ್ತೃತ ವ್ಯಾಪ್ತಿಯ (broad spectrum) ಪ್ರತಿಜೈವಿಕಗಳನ್ನು, ಅಥವಾ ಎರಡು ಯಾ ಮೂರು ಪ್ರತಿಜೈವಿಕಗಳನ್ನು ಜೊತೆಯಾಗಿ ಬಳಸುವ ಪರಿಪಾಠವು ಹೆಚ್ಚುತ್ತಿದೆ. ಅರೆಬರೆ ಜ್ಞಾನವಿರುವ ವೈದ್ಯರು, ಪ್ರತಿಜೈವಿಕಗಳ ಬಗ್ಗೆ ಏನೂ ಅರಿಯದ ಬದಲಿ ಚಿಕಿತ್ಸಕರು ಯಾ ಢೋಂಗಿ ಚಿಕಿತ್ಸಕರು, ಔಷಧದಂಗಡಿಗಳ ನೌಕರರು ಮತ್ತು ಕೆಲವೊಮ್ಮೆ ಸ್ವತಃ ರೋಗಿಗಳೂ ಕೂಡ ಯಾವುದೋ ಸೋಂಕಿಗೆ ಇನ್ಯಾವುದೋ ಪ್ರತಿಜೈವಿಕವನ್ನು ಬಳಸುವುದು ಸಾಮಾನ್ಯವಾಗುತ್ತಲಿದೆ. ವಿವಿಧ ಪ್ರತಿಜೈವಿಕಗಳ ವಿಚಾರಹೀನ ಬೆರಕೆಗಳು ಹಲವು ರೂಪಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಇಂತಹವುಗಳನ್ನು ಮಾರಗೊಡುವ ಔಷಧ ನಿಯಂತ್ರಣಾ ಇಲಾಖೆಯ ಅಧಿಕಾರಿಗಳು ಮತ್ತವರ ಸಲಹೆಗಾರರು ಕೂಡಾ ಇಂದಿನ ದುಸ್ಥಿತೆಗೆ ಕಾರಣರಾಗಿರುತ್ತಾರೆ.
  • ಪ್ರತಿಜೈವಿಕಗಳನ್ನು ಸಾಕಷ್ಟು ಪ್ರಮಾಣದಲ್ಲಿ, ಸಾಕಷ್ಟು ದಿನಗಳ ವರೆಗೆ ಬಳಸದಿರುವುದು: ಯಾವುದೇ ಸೋಕು ಗುಣ ಹೊಂದಬೇಕಾದರೆ ಅದಕ್ಕೆ ಸೂಕ್ತವಾಗಿರುವ ಔಷಧಗಳನ್ನು ಅಗತ್ಯವಿರುವಷ್ಟು ದಿನಗಳ ವರೆಗೆ ನೀಡಬೇಕಾಗುತ್ತದೆ ಮತ್ತು ರೋಗಲಕ್ಷಣಗಳು ಕಡಿಮೆಯಾಗುವವರೆಗೆ ತಾಳ್ಮೆಯಿಂದ ಕಾಯಬೇಕಾಗುತ್ತದೆ. ಉದಾಹರಣೆಗೆ, ಗಂಟಲು ನೋವು, ಮೂತ್ರದ ಸೋಂಕು ಇತ್ಯಾದಿಗಳಲ್ಲಿ 24-48 ಗಂಟೆಗಳಲ್ಲಿ, ಮಲೇರಿಯಾದಲ್ಲಿ (ಪರೋಪಜೀವಿಜನ್ಯ) 48-60ಗಂಟೆಗಳಲ್ಲಿ, ಟೈಫಾಯ್ಡ್ ನಲ್ಲಿ 4 ದಿನಗಳಲ್ಲಿ, ಕ್ಷಯ ರೋಗದಲ್ಲಿ 15-30 ದಿನಗಳಲ್ಲಿ ಜ್ವರವು ಇಳಿಯುತ್ತದೆ, ಅದುವರೆಗೆ ಕಾಯಬೇಕಾಗುತ್ತದೆ. ಅದಕ್ಕೂ ಮೊದಲೇ ಪ್ರತಿಜೈವಿಕಗಳನ್ನು ಬದಲಿಸುವುದಾಗಲೀ, ಹೊಸದೊಂದನ್ನು ಸೇರಿಸುವುದಾಗಲೀ ಅಪೇಕ್ಷಣೀಯವೆನಿಸದು. ಈ ಎಲ್ಲಾ ಸೋಂಕುಗಳಲ್ಲಿಯೂ ಸಂಬಂಧಿತ ಔಷಧಗಳನ್ನು ನಿರ್ದಿಷ್ಟ ಅವಧಿಯ ವರೆಗೆ ಮುಂದುವರಿಸಬೇಕಾಗುತ್ತದೆ, ಅರ್ಧದಲ್ಲಿಯೇ ನಿಲ್ಲಿಸುವುದಾಗಲೀ, ವಿನಾಕಾರಣ ಬದಲಿಸುವುದಾಗಲೀ ಸಲ್ಲದು.
  • ದೊಡ್ಡ ಆಸ್ಪತ್ರೆಗಳ ’ದೊಡ್ಡ’ ವೈದ್ಯರುಗಳು ’ಸಣ್ಣ’ ವೈದ್ಯರನ್ನು ದೂಷಿಸುವುದು ಸರಿಯೆನಿಸದು. ನಮ್ಮಲ್ಲಿ ಹೆಚ್ಚಿನ ಆಸ್ಪತ್ರೆಗಳಲ್ಲಿ ಪ್ರತಿಜೈವಿಕಗಳ ಸರಿಯಾದ ಬಳಕೆಯ ಬಗ್ಗೆ ನಿರ್ದಿಷ್ಟವಾದ ಧೋರಣೆಗಳು ಇದ್ದಂತಿಲ್ಲ. ಈಗ ಗುರುತಿಸಲಾಗಿರುವ ಎನ್ ಡಿ ಎಂ -1 ಕಿಣ್ವಗಳ ಗುರಿಯಾಗಿರುವ ಕಾರ್ಬಾಪೆನೆಮ್ ಔಷಧಗಳು ವಿಪರೀತ ದುಬಾರಿಯಾಗಿದ್ದು, ಇವನ್ನು ದೊಡ್ಡ ಆಸ್ಪತ್ರೆಗಳ ದೊಡ್ಡ ವೈದ್ಯರುಗಳೇ ಹೆಚ್ಚಾಗಿ ಬಳಸುತ್ತಾರೆ. ಹಾಗಿರುವಾಗ ಬ್ಯಾಕ್ಟೀರಿಯಾಗಳು ಈ ಔಷಧಗಳ ವಿರುದ್ಧ ರೋಧಶಕ್ತಿಯನ್ನು ಬೆಳೆಸಿಕೊಳ್ಳುವುದಕ್ಕೆ ಈ ದೊಡ್ಡ ಆಸ್ಪತ್ರೆಗಳಲ್ಲೇ ಅವಕಾಶವಾಗಿರಬೇಕೆನ್ನುವುದರಲ್ಲಿ ಸಂದೇಹವಿಲ್ಲ.

ಇಷ್ಟೆಲ್ಲ ಇದ್ದರೂ, ಈ ಹೊಸ ಮಹಾಕ್ರಿಮಿಯ ಹುಟ್ಟಿಗೆ ನವದೆಹಲಿಯ (ಹಾಗೂ ಇತರ ದೊಡ್ಡ) ಆಸ್ಪತ್ರೆಗಳೇ ಕಾರಣವೆನ್ನುವುದಕ್ಕೆ ಸಾಕಷ್ಟು ಪುರಾವೆಗಳಿದ್ದರೂ, ಅವನ್ನು ಒಪ್ಪದೆ ಬೇರೊಬ್ಬರ ಮೇಲೆ ಗೂಬೆ ಕೂರಿಸುವುದರಿಂದ ಯಾವ ಲಾಭವೂ ಆಗದು. ಇನ್ನಾದರೂ ಸಂಬಂಧಪಟ್ತ ಎಲ್ಲರೂ ಕಣ್ತೆರೆಯದಿದ್ದರೆ ಬ್ಯಾಕ್ಟೀರಿಯಾಗಳಿಂದುಂಟಾಗುವ ಸಾಮಾನ್ಯ ಸೋಕುಗಳಷ್ಟೇ ಅಲ್ಲ, ಮಲೇರಿಯ, ಟೈಫಾಯ್ಡ್, ಕ್ಷಯ ಇವೇ ಮುಂತಾದ ಸೋಂಕುಗಳೆಲ್ಲವೂ ಚಿಕಿತ್ಸೆಗೆ ಹೊರತಾಗುವ ಭೀಕರ ಸ್ಥಿತಿಯು ಎದುರಾಗಬಹುದು. ನಮ್ಮಲ್ಲಿ ವೈದ್ಯಕೀಯ ಶಿಕ್ಷಣ, ವೈದ್ಯಕೀಯ ವೃತ್ತಿ ಹಾಗೂ ಔಷಧಗಳ ವ್ಯವಹಾರವು ಸಾಗುತ್ತಿರುವ ದಿಕ್ಕನ್ನು ಗಮನಿಸಿದರೆ, ಇಂತಹಾ ಅಪಾಯವು ಅತಿ ಸನಿಹದಲ್ಲೇ ಇದೆ ಎಂದರೆ ತಪ್ಪಾಗದು.

ಆಕರಗಳು:

  1. Kumarasamy KK et al. Emergence of a new antibiotic resistance mechanism in India, Pakistan, and the UK: a molecular, biological, and epidemiological study. The Lancet Infectious Diseases, Early Online Publication, 11 August 2010. http://www.thelancet.com/journals/laninf/article/PIIS1473-3099(10)70143-2/fulltext
  2. Ulterior motive behind tracing superbug to India? http://www.thehindu.com/news/national/article568811.ece
  3. Delhi doctors rubbish ‘superbug' theory. http://www.thehindu.com/news/cities/Delhi/article568528.ece
  4. India rejects superbug linkage. http://www.thehindu.com/health/medicine-and-research/article566384.ece
  5. Drug-resistant 'superbug' found in hospitals in London and Nottingham.
    http://www.dailymail.co.uk/health/article-1302432/Drug-resistant-NDM-1-s...
  6. Yong D, Toleman MA, Giske CG, et al. Characterization of a new metallo-ß-lactamase gene, blaNDM-1, and a novel erythromycin esterase gene carried on a unique genetic structure in Klebsiella pneumoniae sequence type 14 from India. Antimicrob Agents Chemother 2009; 53: 5046–54. http://aac.asm.org/cgi/reprint/53/12/5046
  7. National Resistance Alert: carbapenemases in Enterobacteriaceae. http://www.hpa.org.uk/hpr/archives/2009/news0409.htm#enterora
  8. Multi-resistant hospital bacteria linked to India and Pakistan. http://www.hpa.org.uk/hpr/archives/2009/news2609.htm#ndm1
  9. Krishna B. New Delhi metallo-beta-lactamases: A wake-up call for microbiologists. Indian J Med Microbiol [serial online] 2010 [cited 2010 Aug 15];28:265-6. Available from: http://www.ijmm.org/text.asp?2010/28/3/265/66477
  10. Payal Deshpande et al. New Delhi Metallo-b lactamase (NDM-1) in Enterobacteriaceae: Treatment options with Carbapenems Compromised. JAPI. March 2010;58:147-149. http://www.japi.org/march_2010/Article_02.pdf
  11. Abdul Ghafur K. An obituary- On the Death of antibiotics! JAPI. March 2010;58:143-144. http://www.japi.org/march_2010/Article_01.pdf
  12. Kudos for researcher, yet a bit of worry. http://www.thehindu.com/health/medicine-and-research/article567001.ece
  13. Life without antibiotics. http://www.thehindu.com/opinion/op-ed/article566886.ece
  14. Indian medical journal first documented ‘superbug’. http://www.thehindu.com/news/national/article568818.ece
549 reads