There are currently 0 users and 1 guest online.

ನೀವೂ ಪ್ರಕಟಿಸಬಹುದು!

ಆರೋಗ್ಯ ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ಡೆಂಗೀ ಜ್ವರಕ್ಕೆ ಪ್ಲೇಟ್ಲೆಟ್ ಮರುಪೂರಣವು ಅಗತ್ಯವೇ?

ಡೆಂಗೀ ಜ್ವರಕ್ಕೆ ಪ್ಲೇಟ್ಲೆಟ್ ಮರುಪೂರಣವು ಅಗತ್ಯವೇ?

ಆರೋಗ್ಯ ಸಂಪದದಲ್ಲಿ

ರಾಜಧಾನಿ ಬೆಂಗಳೂರಿನಲ್ಲೀಗ ಡೆಂಗೀ ಹಾವಳಿಯು ವಿಪರೀತವಾಗಿದೆ. ಜ್ವರವಿರುವ ಎಲ್ಲರಲ್ಲೂ ಡೆಂಗೀ ಪ್ರತಿಕಾಯಗಳ ಪರೀಕ್ಷೆ ಹಾಗೂ ಪ್ಲೇಟ್ಲೆಟ್ ಸಂಖ್ಯೆಯ ಪರೀಕ್ಷೆಗಳನ್ನು ನಡೆಸುವುದು ಸಾಮಾನ್ಯವಾಗಿಬಿಟ್ಟಿದೆ. ಬಹಳಷ್ಟು ರೋಗಿಗಳಲ್ಲಿ ಪ್ಲೇಟ್ಲೆಟ್ ಪ್ರಮಾಣವನ್ನು ಪ್ರತಿನಿತ್ಯವೂ ಪರೀಕ್ಷಿಸಲಾಗುತ್ತಿದ್ದು, ಅದು ಒಂದಿಷ್ಟು ಇಳಿದಿದ್ದರೆ ತಕ್ಷಣವೇ ಅವರನ್ನು ಆಸ್ಪತ್ರೆಗಳಲ್ಲಿ ದಾಖಲಿಸಿ, ಪ್ಲೇಟ್ಲೆಟ್ ಮರುಪೂರಣವನ್ನೂ ನೀಡಲಾಗುತ್ತಿದೆ. ಇದರಿಂದಾಗಿ, ಡೆಂಗೀ ಜ್ವರವು ಜನರಲ್ಲಿ ಭೀತಿಯ ಅಲೆಯನ್ನೇ ಎಬ್ಬಿಸಿಬಿಟ್ಟಿದೆ. ಇನ್ನೊಂದೆಡೆ, ಬೆಂಗಳೂರಿನಲ್ಲಿ ಡೆಂಗೀ ರೋಗಿಗಳನ್ನು”ಉಳಿಸುವುದಕ್ಕೆ" ಸಾಕಷ್ಟು ಪ್ರಮಾಣದಲ್ಲಿ ಪ್ಲೇಟ್ಲೆಟ್ ದೊರೆಯುತ್ತಿಲ್ಲವೆಂದು ಈಗಾಗಲೇ ಪತ್ರಿಕೆಗಳಲ್ಲಿ ವರದಿಯಾಗಿದೆ.[1]

ಡೆಂಗೀ ಅಷ್ಟೊಂದು ಅಪಾಯಕಾರಿಯೇ? ಪ್ಲೇಟ್ಲೆಟ್ ಕಣಗಳ ಸಂಖ್ಯೆಯು ಒಂದಿಷ್ಟು ಇಳಿದಿದ್ದರೆ ಅಪಾಯವು ಕಟ್ಟಿಟ್ಟದ್ದೇ? ಪ್ಲೇಟ್ಲೆಟ್ ಕಣಗಳ ಸಂಖ್ಯೆಯು ಕಡಿಮೆಯಾಗಿರುವ ಎಲ್ಲರಿಗೂ ಪ್ಲೇಟ್ಲೆಟ್ ಮರುಪೂರಣದ ಅಗತ್ಯವಿದೆಯೇ?

ಇವೆಲ್ಲದಕ್ಕೂ ’ಇಲ್ಲ’ ಎಂಬುದೊಂದೇ ಉತ್ತರ!

ಡೆಂಗೀ ಜ್ವರದಿಂದಾಗಿ ಸಾವನ್ನಪ್ಪುವವರ ಸಂಖ್ಯೆಯು ಅತಿ ವಿರಳ. ಬಹುತೇಕ ಎಲ್ಲರಲ್ಲೂ ಡೆಂಗೀ ಜ್ವರವು ವಾರದೊಳಗೆ ಸಂಪೂರ್ಣವಾಗಿ ವಾಸಿಯಾಗುತ್ತದೆ. ಡೆಂಗೀ ಜ್ವರವು ವೈರಸ್ ಜನ್ಯ ಸೋಂಕಾಗಿರುವುದರಿಂದ ಅದಕ್ಕೆ ಯಾವ ಚಿಕಿತ್ಸೆಯ ಅಗತ್ಯವೂ ಇಲ್ಲ, (ಅಸಲಿ, ಬದಲಿ, ನಕಲಿ, ಯಾವುದೂ ಬೇಡ), ಒಂದು ವಾರದೊಳಗೆ ಅದು ತಾನೇ ವಾಸಿಯಾಗುತ್ತದೆ. ಹೆಚ್ಚಿನವರಲ್ಲಿ ಜ್ವರ ಹಾಗೂ ಮೈಕೈ ನೋವು, ತಲೆನೋವು, ಬೆನ್ನು ನೋವು ಇತ್ಯಾದಿಗಳು ಸಹಿಸಲಸಾಧ್ಯವಾಗಿಲ್ಲದಿರುವುದರಿಂದ, ಪಾರಸಿಟಮಾಲ್ ನಂತಹ ಜ್ವರ ನಿವಾರಕಗಳ ಅಗತ್ಯವೂ ಇರುವುದಿಲ್ಲ. ಡೆಂಗೀ ಜ್ವರವುಳ್ಳ ಹೆಚ್ಚಿನವವರು ಸಣ್ಣ ಮಟ್ಟಿನ ಜ್ವರ ಇತ್ಯಾದಿಗಳನ್ನು ಸಹಿಸಿಕೊಂಡು, ಯಾವುದೇ ಔಷಧವನ್ನೂ ಸೇವಿಸದೆ, ಸಾಕಷ್ಟು ವಿಶ್ರಾಂತಿಯನ್ನು ಪಡೆಯುವುದಷ್ಟೇ ಸಾಕಾಗುತ್ತದೆ. ಜ್ವರವು ವಿಪರೀತವಾಗಿದ್ದರೆ (39ಡಿಗ್ರಿ ಸೆಂಟಿಗ್ರೇಡ್ ಅಥವಾ 102ಡಿಗ್ರಿ ಫಾರನ್ ಹೀಟ್ ಗಿಂತಲೂ ಹೆಚ್ಚಿದ್ದರೆ) ದಿನಕ್ಕೆ ಒಂದೆರಡು ಸಲ ಪಾರಸಿಟಮಾಲ್ ಸೇವಿಸಬಹುದು. ಡೆಂಗೀ ಜ್ವರವಿದ್ದವರು ಯಾವುದೇ ನೋವು ನಿವಾರಕ ಔಷಧಗಳನ್ನು (ಆಸ್ಪಿರಿನ್, ಇಬು ಪ್ರಾಫೆನ್, ಡೈಕ್ಲೋಫೆನಾಕ್, ನಿಮೆಸುಲೈಡ್ ಇತ್ಯಾದಿ) ತೆಗೆದುಕೊಳ್ಳದಿರುವುದೇ ಒಳ್ಳೆಯದು. ನಮ್ಮ ದೇಹದ ರೋಗರಕ್ಷಣಾ ವ್ಯವಸ್ಥೆಯ ಸಾಮರ್ಥ್ಯದಿಂದಾಗಿ ಸಹಜವಾಗಿಯೇ ವಾಸಿಯಾಗುವ ಡೆಂಗೀಯಂತಹ ರೋಗಗಳನ್ನು ’ಗುಣಪಡಿಸುವುದರಲ್ಲಿ’ ನಿಸ್ಸೀಮರಾಗಿರುವ ಬದಲಿ ಹಾಗೂ ನಕಲಿ ವೈದ್ಯರ ನೆರವಾಗಲೀ, ಪಪ್ಪಾಯಿ, ಅಮೃತಬಳ್ಳಿ ಇತ್ಯಾದಿಗಳ ಸೇವನೆಯಾಗಲೀ ಡೆಂಗೀ ಚಿಕಿತ್ಸೆಗೆ ಅಗತ್ಯವಿಲ್ಲ.

ಡೆಂಗೀ ಜ್ವರದಲ್ಲಿ ಪ್ಲೇಟ್ಲೆಟ್ ಕಣಗಳ ಸಂಖ್ಯೆಯಲ್ಲಿ ಇಳಿಕೆಯಾಗುವುದು ತೀರಾ ಸಾಮಾನ್ಯವಾಗಿದ್ದು ಬಹಳಷ್ಟು ಸೋಂಕಿತರಲ್ಲಿ ಅದು 20000-80000 ದಷ್ಟಿರುತ್ತದೆ. (ರೋಗರಹಿತರಾದ ಸಾಮಾನ್ಯರಲ್ಲಿ ಪ್ಲೇಟ್ಲೆಟ್ ಕಣಗಳ ಸಂಖ್ಯೆಯು 1.5 ಲಕ್ಷಕ್ಕಿಂತ ಹೆಚ್ಚಿರುತ್ತದೆ) ಪ್ಲೇಟ್ಲೆಟ್ ಕಣಗಳ ಸಂಖ್ಯೆಯಲ್ಲಿ ಇಳಿಕೆಯಾದೊಡನೆ ಸೋಂಕಿತರಿಗೆ ಅಪಾಯವಿದೆಯೆನ್ನುವುದು ಸರಿಯಲ್ಲ. ನಾಲ್ಖೈದು ದಿನಗಳಲ್ಲಿ ಡೆಂಗೀ ಜ್ವರವು ವಾಸಿಯಾದಾಗ ಪ್ಲೇಟ್ಲೆಟ್ ಕಣಗಳ ಸಂಖ್ಯೆಯು ಮತ್ತೆ ತನ್ನಿಂದ ತಾನೇ ಸಾಮಾನ್ಯ ಮಟ್ಟಕ್ಕೇರುತ್ತದೆ. ಪ್ಲೇಟ್ಲೆಟ್ ಸಂಖ್ಯೆಯಲ್ಲಿ ಇಳಿಕೆಯಾದವರೆಲ್ಲರಿಗೂ ಪ್ಲೇಟ್ಲೆಟ್ ಮರುಪೂರಣವನ್ನು ಮಾಡಬೇಕಾದ ಅಗತ್ಯವಿಲ್ಲ, ಕೆಲವೊಮ್ಮೆ ಅನಗತ್ಯವಾಗಿ ಪ್ಲೇಟ್ಲೆಟ್ ಕಣಗಳನ್ನು ಅಥವಾ ರಕ್ತದ್ರವ ಯಾ ರಕ್ತವನ್ನು ಮರುಪೂರಣ ಮಾಡುವುದರಿಂದ ಪ್ರಯೋಜನಕ್ಕಿಂತ ಹೆಚ್ಚು ಹಾನಿಯೇ ಆಗಬಹುದು. ಮೇಲಾಗಿ, ರಕ್ತ ಮರುಪೂರಣದಿಂದ ಪ್ಲೇಟ್ಲೆಟ್ ಕಣಗಳ ಸಂಖ್ಯೆಯನ್ನು ಹೆಚ್ಚಿಸುವಲ್ಲಿ ಅಂತಹಾ ಪ್ರಯೋಜನವೂ ಏನಿಲ್ಲ.

ಡೆಂಗೀ ಜ್ವರದಲ್ಲಿ ಅಪರೂಪಕ್ಕೆ ರಕ್ತಸ್ರಾವ (Dengue Hemoorrhagic Fever) ಮತ್ತು ರಕ್ತದೊತ್ತಡದಲ್ಲಿ ತೀವ್ರವಾದ ಇಳಿಕೆಯುಂಟಾಗಬಹುದು(Dengue Shock Syndrome). ಪ್ಲೇಟ್ಲೆಟ್ ಕಣಗಳಲ್ಲಿ ಇಳಿಕೆಯಾಗುವುದಕ್ಕಿಂತಲೂ, ರಕ್ತನಾಳಗಳು ಊದಿಕೊಂಡು ಸೋರತೊಡಗುವುದೇ ಇವಕ್ಕೆ ಮುಖ್ಯ ಕಾರಣ. ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನಂತೆ ಪ್ರತೀ ವರ್ಷ ಸುಮಾರು ಐದು ಕೋಟಿ ಜನರಿಗೆ ಡೆಂಗೀ ಸೋಂಕು ತಗಲಿದರೆ, ಆ ಪೈಕಿ ಸುಮಾರು ಐದು ಲಕ್ಷದಷ್ಟು ರೋಗಿಗಳು ಡೆಂಗೀ ರಕ್ತಸ್ರಾವದಿಂದಾಗಿ ಆಸ್ಪತ್ರೆಗಳಲ್ಲಿ ದಾಖಲಾಗುತ್ತಾರೆ ಮತ್ತು ಅಂತಹವರಿಗೆ ಸೂಕ್ತ ಚಿಕಿತ್ಸೆಯು ದೊರೆತರೆ ಶೇ. 1 ಕ್ಕಿಂತಲೂ ಕಡಿಮೆ ರೋಗಿಗಳು ಸಾವನ್ನಪ್ಪುತ್ತಾರೆ.[2] ಡೆಂಗೀ ಜ್ವರದ ರೋಗಲಕ್ಷಣಗಳು, ಸಮಸ್ಯೆಗಳು ಹಾಗೂ ಚಿಕಿತ್ಸೆಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯು ಸವಿವರವಾದ ಪುಸ್ತಿಕೆಗಳನ್ನು ಪ್ರಕಟಿಸಿದ್ದು, ಅವುಗಳಲ್ಲಿ ಡೆಂಗೀ ರೋಗದ ಚಿಕಿತ್ಸೆಯ ಬಗ್ಗೆ ಸ್ಪಷ್ಟವಾಗಿ ಹೇಳಲಾಗಿದೆ, ಇವು ಅಂತರಜಾಲದಲ್ಲೂ ಲಭ್ಯವಿವೆ. [ಇಲ್ಲಿ ನೋಡಿ:3,4] ಅದರನುಸಾರ, ವಿಪರೀತವಾದ ರಕ್ತಸ್ರಾವವಿದ್ದ ಸಂದರ್ಭಗಳಲ್ಲಷ್ಟೆ ಪ್ಲೇಟ್ಲೆಟ್ ಯಾ ರಕ್ತದ ಮರುಪೂರಣ ಮಾಡಬೇಕಾಗಬಹುದು. ರಕ್ತದೊತ್ತಡದಲ್ಲಿ ಇಳಿಕೆಯಾದಾಗ ಅದಕ್ಕೆ ಅಗತ್ಯವಾದ ಚಿಕಿತ್ಸೆಯನ್ನೂ ನೀಡಬೇಕಾಗುತ್ತದೆ. ಹೀಗೆ ಸೂಕ್ತವಾದ, ಜಾಗರೂಕತೆಯ ಚಿಕಿತ್ಸೆಯಿಂದ ಹೆಚ್ಚಿನವರು ಗುಣಮುಖರಾಗುತ್ತಾರೆ.

ಹಾಗಾಗಿ, ಡೆಂಗೀ ಸೋಂಕು ತಗಲಿದರೆ ಭಯಪಡಬೇಡಿ, ಯಾವ ಔಷಧಗಳನ್ನೂ ಸೇವಿಸಬೇಡಿ. ಒಳ್ಳೆಯ ಆಹಾರ ಮತ್ತು ಸಾಕಷ್ಟು ವಿಶ್ರಾಂತಿ ಪಡೆಯಿರಿ, ವಾರದೊಳಗೆ ಅದು ವಾಸಿಯಾಗುತ್ತದೆ. ಪ್ಲೇಟ್ಲೆಟ್ ಕಣಗಳ ಸಂಖ್ಯೆಯನ್ನು ಪದೇ ಪದೇ ಪರೀಕ್ಷಿಸುವುದೂ ಅಗತ್ಯವಿಲ್ಲ; ಮುಂಗಾಲುಗಳ ಯಾ ಪಾದಗಳ ಚರ್ಮದಡಿಯಲ್ಲಿ ರಕ್ತಸ್ರಾವವಾಗಿ ಕೆಂಪಗಿನ ದಡಿಕೆಗಳು ಗೋಚರಿಸಿದರೆ ಅಥವಾ ತೀವ್ರವಾದ ನಿಶ್ಶಕ್ತಿ, ಬಳಲಿಕೆ, ತಲೆಸುತ್ತುವಿಕೆ ಇತ್ಯಾದಿಗಳಿದ್ದಲ್ಲಿ ಕೂಡಲೇ ತಜ್ಞ ವೈದ್ಯರನ್ನು ಸಂಪರ್ಕಿಸಿ ಸಲಹೆಯನ್ನು ಪಡೆಯಿರಿ, ಆಸ್ಪತ್ರೆಗೆ ದಾಖಲಾಗಿ ಸೂಕ್ತವಾದ ಚಿಕಿತ್ಸೆಯನ್ನು ಪಡೆಯಿರಿ.

ಹೆಣ್ಣು ಈಡಿಸ್ ಈಜಿಪ್ಟೈ ಸೊಳ್ಳೆಗಳು ಡೆಂಗೀ ಸೋಂಕನ್ನು ಮನುಷ್ಯನಿಂದ ಮನುಷ್ಯರಿಗೆ ಹರಡುತ್ತವೆ. ಈ ಸೊಳ್ಳೆಗಳು ಗಾತ್ರದಲ್ಲಿ ಸಾಕಷ್ಟು ದೊಡ್ಡದಿದ್ದು ಅವುಗಳ ಮೈಮೇಲೆ ಪಟ್ಟೆಗಳಿರುವುದರಿಂದ ಅವನ್ನು ಹುಲಿ ಸೊಳ್ಳೆಗಳೆಂದೂ ಕರೆಯಲಾಗುತ್ತದೆ. ಇವು ಹಗಲು ಹೊತ್ತಿನಲ್ಲಿ (ಸಾಮಾನ್ಯವಾಗಿ ಬೆಳಗ್ಗೆ ಹಾಗೂ ಸಂಜೆ), ಮನೆಯ ಹೊರಗೆ, ಮನುಷ್ಯರನ್ನು (ಹೆಚ್ಚಾಗಿ ಕಾಲುಗಳನ್ನು) ಚುಚ್ಚಿ ರಕ್ತವನ್ನು ಹೀರುವಾಗ ಸೋಂಕನ್ನು ಹರಡಲು ಕಾರಣವಾಗುತ್ತವೆ. ಮನೆಯಿಂದ ಹೊರಗಿರುವಾಗ ಮೈಯನ್ನಿಡೀ (ಮುಖ್ಯವಾಗಿ ಕಾಲುಗಳನ್ನು) ಮುಚ್ಚಿಕೊಳ್ಳುವ ಬಟ್ಟೆಗಳನ್ನು ಧರಿಸಿಕೊಳ್ಳುವುದರಿಂದ ಹಾಗೂ ಸೊಳ್ಳೆಗಳನ್ನು ಹಿಮ್ಮೆಟ್ಟಿಸುವ ಮುಲಾಮುಗಳನ್ನು ಹಚ್ಚಿಕೊಳ್ಳುವುದರಿಂದ ಡೆಂಗೀ ಸೋಂಕನ್ನು ಹರಡುವ ಸೊಳ್ಳೆಗಳ ಕಡಿತದಿಂದ ರಕ್ಷಿಸಿಕೊಳ್ಳಬಹುದು.

ಈ ಸೊಳ್ಳೆಗಳು ಅಲ್ಲಿಲ್ಲಿ ಎಸೆದಿರುವ ಡಬ್ಬಗಳು, ಬಾಟಲುಗಳು, ಬಾಲ್ದಿಗಳು, ತೆಂಗಿನ ಚಿಪ್ಪುಗಳು, ವಾಹನದ ಚಕ್ರಗಳು ಇತ್ಯಾದಿಗಳಲ್ಲಿ, ಹೂ ಕುಂಡಗಳು, ಹವಾನಿಯಂತ್ರಕಗಳು, ತಾರಸಿ ಮತ್ತಿತರೆಡೆಗಳಲ್ಲಿ ನಿಲ್ಲುವ ಶುದ್ಧ ನೀರಿನ ಸಂಗ್ರಹಗಳಲ್ಲಿ ಮೊಟ್ಟೆಗಳನ್ನಿಟ್ಟು ವೃದ್ಧಿಯಾಗುತ್ತವೆ.(ಕೆಳಗಿನ ಚಿತ್ರ ನೋಡಿ) ವಾರಕ್ಕೊಮ್ಮೆ ಈ ನೀರಿನ ಸಂಗ್ರಹಗಳನ್ನು ಖಾಲಿ ಮಾಡುವ ಮೂಲಕ ಈಡಿಸ್ ಸೊಳ್ಳೆಯ ಸಂತಾನಭಿವೃದ್ಧಿಯನ್ನು ತಡೆಯಬಹುದು; ಈ ಕಾರ್ಯವನ್ನು ಸರಕಾರೀ ಇಲಾಖೆಗಳು ಮಾಡುವುದು ಅಸಾಧ್ಯದ ಕೆಲಸವಾದುದರಿಂದ ಪ್ರತಿಯೋರ್ವರೂ ಈ ಕೆಲಸದಲ್ಲಿ ಕೈಜೋಡಿಸಬೇಕು, ನಮ್ಮ ವಠಾರವನ್ನು ಸೊಳ್ಳೆ-ಮುಕ್ತಗೊಳಿಸುವ ಜವಾಬ್ದಾರಿಯು ನಮ್ಮದೇ ಎನ್ನುವುದನ್ನು ಮನಗಾಣಬೇಕು. (ಈ ಮೂಲಕ ಈಡಿಸ್ ಸೊಳ್ಳೆಗಳಿಂದಲೇ ಹರಡುವ ಚಿಕುಂಗುನ್ಯಾ ಮತ್ತು ಇಂತಹಾ ನೀರಿನ ಸಂಗ್ರಹಗಳಲ್ಲೇ ವೃದ್ಧಿಯಾಗುವ ಅನಾಫಿಲಿಸ್ ಸೊಳ್ಳೆಗಳಿಂದ ಹರಡುವ ಮಲೇರಿಯಾವನ್ನು ಕೂಡಾ ನಿಯಂತ್ರಿಸಬಹುದು)

ಆಕರಗಳು:

  1. Platelet shortage hits dengue treatment. http://www.hindu.com/2010/07/07/stories/2010070758760100.htm
  2. Dengue and dengue haemorrhagic fever. http://www.who.int/mediacentre/factsheets/fs117/en/
  3. Guidelines for treatment of Dengue fever/Dengue Hemorrhagic fever in small hospitals. http://www.searo.who.int/LinkFiles/Dengue_Guideline-dengue.pdf
  4. Dengue haemorrhagic fever: diagnosis, treatment, prevention and control. 2nd edition. Geneva : World Health Organization. http://www.who.int/csr/resources/publications/dengue/Denguepublication/en/
  5. Symptoms and What To Do If You Think You Have Dengue. http://www.cdc.gov/dengue/symptoms/index.html
595 reads