ಶಾಲಾ ವಿದ್ಯಾರ್ಥಿಗಳಿಗೆ ಕಡ್ಡಾಯ ಯೋಗಶಿಕ್ಷಣದ ಅಗತ್ಯವಿಲ್ಲ
ಶಾಲಾ ವಿದ್ಯಾರ್ಥಿಗಳಿಗೆ ಕಡ್ಡಾಯ ಯೋಗಶಿಕ್ಷಣದ ಅಗತ್ಯವಿಲ್ಲ
ಆರೋಗ್ಯ ಸಂಪದದಲ್ಲಿ
ಕರ್ನಾಟಕ ಸರಕಾರವು ರಾಜ್ಯದ ಶಾಲೆಗಳಲ್ಲಿ ಯೋಗಶಿಕ್ಷಣವನ್ನು ಕಡ್ಡಾಯಗೊಳಿಸುವ ಯೋಜನೆಯನ್ನು ಹಾಕಿಕೊಂಡಿದ್ದು, ಈ ಬಗ್ಗೆ ಮಾಹಿತಿ ಕಾಯಿದೆಯಡಿಯಲ್ಲಿ ನಾವು ಪಡೆದಿರುವ ವಿವರಗಳನ್ನು ಗಮನಿಸಿದರೆ, ರಾಜ್ಯಾದ್ಯಂತ ಒಂದನೇ ತರಗತಿಯಿಂದಲೇ ಮಕ್ಕಳಿಗೆ ಯೋಗ ತರಬೇತಿಯನ್ನು ನೀಡುವ ಯೋಜನೆಯಿರುವುದು ಕಂಡುಬರುತ್ತಿದೆ.
ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ ಪ್ರಕಾರ, ಒಂದನೇ ತರಗತಿಯಿಂದ ಐದನೇ ತರಗತಿಯವರೆಗೆ ವಾರಕ್ಕೆ 5 ಅವಧಿಗಳು, 6-7 ತರಗತಿಗಳಿಗೆ ವಾರಕ್ಕೆ 3 ಅವಧಿಗಳು ಮತ್ತು 8-10 ತರಗತಿಯವರಿಗೆ ವಾರಕ್ಕೆ 4 ಅವಧಿಗಳ ದೈಹಿಕ ಶಿಕ್ಷಣದ ಭಾಗವಾಗಿ ಯೋಗ ಶಿಕ್ಷಣವಿದ್ದು, ಐದನೇ ತರಗತಿಯಿಂದ ತಾತ್ವಿಕ ಹಾಗೂ ಪ್ರಾಯೋಗಿಕ ಶಿಕ್ಷಣಗಳೆರಡೂ ಪಠ್ಯಕ್ರಮದಲ್ಲಿರುತ್ತವೆ ಮತ್ತು ಒಂದನೇ ತರಗತಿಯಿಂದಲೇ ಮಕ್ಕಳಿಗೆ ಯೋಗಾಭ್ಯಾಸದಲ್ಲಿ ನಿರಂತರ ಮೌಲ್ಯಮಾಪನ ಪರೀಕ್ಷೆಗಳಿರುತ್ತವೆ. ರಾಜ್ಯದ ಎಲ್ಲಾ ಪ್ರಾಥಮಿಕ ಹಾಗೂ ಫ್ರೌಢ ಶಾಲೆಗಳಲ್ಲಿ ಇದಕ್ಕಾಗಿ ರೂ.4.55 ಕೋಟಿ ವೆಚ್ಚದಲ್ಲಿ ಒಟ್ಟು 65000 ಶಿಕ್ಷಕರನ್ನು ನಿಯುಕ್ತಿಗೊಳಿಸಲಾಗುವುದೆಂದೂ ಇಲಾಖೆಯು ಹೇಳಿದೆ.
ರಾಜ್ಯ ಸರಕಾರದ ಈ ನಿರ್ಧಾರವು ಸಾಕಷ್ಟು ಸಾಕ್ಷ್ಯಾಧಾರಗಳನ್ನು ಆಧರಿಸಿಲ್ಲವೆನ್ನುವುದು ಸ್ಪಷ್ಟವಾಗಿದೆ. ಯೋಗಾಭ್ಯಾಸದ ಒಳಿತು-ಕೆಡುಕುಗಳ ಬಗ್ಗೆ ಹಲವಾರು ಸಣ್ಣದಾದ, ಅಲ್ಪಕಾಲೀನ ಅಧ್ಯಯನಗಳನ್ನು ನಡೆಸಲಾಗಿದ್ದು, ಎಲ್ಲರಿಗೂ ಒಂದೇ ರೀತಿಯ ಯೋಗಾಭ್ಯಾಸದಿಂದ ನಿಸ್ಸಂದೇಹವಾದ ಪ್ರಯೋಜನವಿದೆಯೆಂದಾಗಲೀ, ಅದು ಸಂಪೂರ್ಣವಾಗಿ ಸುರಕ್ಷಿತವೆಂದಾಗಲೀ ಶ್ರುತ ಪಡಿಸುವ ಯಾವುದೇ ದೊಡ್ದ, ದೀರ್ಘಕಾಲೀನ, ಇಕ್ಕಡೆಗೂ ಅರಿವಿಲ್ಲದ, ನಿಯಂತ್ರಿತವಾದ ಅಧ್ಯಯನಗಳ ವರದಿಗಳಿಲ್ಲ. ಅಷ್ಟೇ ಅಲ್ಲದೆ, ಯೋಗಾಭ್ಯಾಸದಿಂದ ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲಾಗಬಹುದಾದ ಒಳಿತು-ಕೆಡುಕುಗಳ ಬಗ್ಗೆ ಯಾವುದೇ ಅಧ್ಯಯನಗಳನ್ನು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ ವತಿಯಿಂದಲೂ ನಡೆಸಲಾಗಿಲ್ಲ. ಮಕ್ಕಳ ಬೆಳವಣಿಗೆ ಹಾಗೂ ಆರೋಗ್ಯಗಳ ದೃಷ್ಟಿಯಿಂದ ಯೋಗಾಭ್ಯಾಸವು ಇತರ ದೈಹಿಕ ವ್ಯಾಯಾಮ ಅಥವಾ ಆಟೋಟಗಳಷ್ಟೇ ಪ್ರಯೋಜನಕರವೆಂದು ಸಾಬೀತು ಪಡಿಸುವ ಯಾವುದೇ ವರದಿಗಳಾಗಲೀ, ಅದರಿಂದ ಮಕ್ಕಳ ಸ್ಮರಣ ಶಕ್ತಿ ಅಥವಾ ಇನ್ನಿತರ ಸಾಮರ್ಥ್ಯಗಳ ಮೇಲೆ ಯಾವುದೇ ಪರಿಣಾಮಗಳುಂಟಾಗುವ ಬಗೆಗಿನ ಅಧ್ಯಯನಗಳಾಗಲೀ, ಅಥವಾ ದೇಹದ ವಿವಿಧ ಅಂಗಗಳು ಹಾಗೂ ಎಲುಬುಗಳು ಇನ್ನೂ ಬೆಳೆಯುತ್ತಿರುವ ಮಕ್ಕಳಲ್ಲಿ ಯೋಗಾಭ್ಯಾಸವು ಸುರಕ್ಷಿತವೆಂದು ಶ್ರುತಪಡಿಸುವ ವರದಿಗಳಾಗಲೀ ಲಭ್ಯವಿಲ್ಲ. ಅಲ್ಲದೆ, ಮಕ್ಕಳ ಮೇಲೆ ಈಗಾಗಲೇ ವಿದ್ಯಾಭ್ಯಾಸದ ಹೊರೆಯು ಅತಿಯಾಗಿದ್ದು, ಯೋಗಾಭ್ಯಾಸವನ್ನು ಪೂರ್ಣ ಪ್ರಮಾಣದ ವಿಸ್ತೃತ ಪಠ್ಯವಾಗಿ ಸೇರಿಸುವುದರಿಂದ ಈ ಹೊರೆಯು ಇನ್ನಷ್ಟು ಹೆಚ್ಚುವ ಅಪಾಯವೂ ನಿಚ್ಚಳವಾಗಿದೆ. ವಿವಿಧ ಕ್ರೀಡಾ ಪ್ರಕಾರಗಳಲ್ಲಿ ನಮ್ಮ ಮಕ್ಕಳು ಹಾಗೂ ಯುವಕರನ್ನು ತರಬೇತುಗೊಳಿಸಿ ಒಲಿಂಪಿಕ್ ಇತ್ಯಾದಿಗಳ ಸ್ಪರ್ಧಾತ್ಮಕ ಕ್ರೀಡಾರಂಗದಲ್ಲಿ ನಮ್ಮ ದೇಶದ ಸ್ಥಾನಮಾನಗಳನ್ನು ಔನ್ನತ್ಯಕ್ಕೆ ಒಯ್ಯಬೇಕಾದ ತುರ್ತು ಅಗತ್ಯವಿರುವ ಇಂದಿನ ಕಾಲಘಟ್ಟದಲ್ಲಿ, ಕೇವಲ ಯೋಗಶಿಕ್ಷಣವೊಂದಕ್ಕೇ ಇತರೆಲ್ಲಾ ದೈಹಿಕ ಕಸರತ್ತುಗಳು ಹಾಗೂ ಕ್ರೀಡೆಗಳಿಗೆ ಯಾವತ್ತೂ ಮೀಸಲಿಟ್ಟದ್ದಕ್ಕಿಂತ ಎಷ್ಟೋ ಹೆಚ್ಕು ಪಟ್ಟು ಅವಧಿಯನ್ನು ಒದಗಿಸುವುದರಿಂದ ಈ ಎಲ್ಲಾ ಕ್ರೀಡೆಗಳಲ್ಲಿ ನಮ್ಮ ಮಕ್ಕಳು ಹಾಗೂ ಯುವಜನರ ಭಾಗವಹಿಸುವಿಕೆಯು ಇನ್ನಷ್ಟು ಅಧೋಗತಿಗಿಳಿಯುವುದಕ್ಕೆ ಕಾರಣವಾಗಬಹುದು. ಹಾಗಿರುತ್ತಾ, ಒಂದನೇ ತರಗತಿಯ ಮಕ್ಕಳಿಂದ ಹಿಡಿದು ಎಲ್ಲಾ ವಿದ್ಯಾರ್ಥಿಗಳಿಗೆ ವಿಸ್ತೃತವಾಗಿ ಏಕರೂಪದ ಯೋಗಾಭ್ಯಾಸವನ್ನು ಮಾಡಿಸುವುದರ ವಿವೇಚನೆಯ ಬಗ್ಗೆಯೂ, ಅಂತಹ ಯೋಗಾಭ್ಯಾಸದಿಂದ ಮಕ್ಕಳ ದೈಹಿಕ ಅಥವಾ ಮಾನಸಿಕ ಆರೋಗ್ಯದ ಮೇಲೆ ಉಂಟಾಗಬಹುದಾದ ದುಷ್ಪರಿಣಾಮಗಳನ್ನು ಗುರುತಿಸಿ, ನಿಭಾಯಿಸುವಲ್ಲಿ ಶಿಕ್ಷಕರಲ್ಲಿರಬೇಕಾದ ಸನ್ನದ್ಧತೆಯ ಬಗ್ಗೆಯೂ ಹಲವು ಪ್ರಶ್ನೆಗಳು ಸಹಜವಾಗಿಯೇ ಏಳುತ್ತವೆ.
ಆದ್ದರಿಂದ ಮಕ್ಕಳ ಆರೋಗ್ಯ ಹಾಗೂ ಭವಿಷ್ಯದ ಮೇಲೆ ದೂರಗಾಮಿ ಪರಿಣಾಮಗಳನ್ನು ಬೀರಬಲ್ಲ ಇಂತಹಾ ನಿರ್ಧಾರಗಳನ್ನು ತರಾತುರಿಯಲ್ಲಿ ಕೈಗೊಳ್ಳುವ ಮೊದಲು ಆ ಕುರಿತು ಸಾಕಷ್ಟು ವೈಜ್ಞಾನಿಕ ಅಧ್ಯಯನಗಳನ್ನು ನಡೆಸಬೇಕೆಂದೂ, ಮಕ್ಕಳು, ಹೆತ್ತವರು, ವೈದ್ಯಕೀಯ ತಜ್ಞರು, ಕ್ರೀಡಾಪಟುಗಳು ಹಾಗೂ ಶಿಕ್ಷಣ ತಜ್ಞರಿಂದ ವ್ಯಾಪಕ ಅಭಿಪ್ರಾಯಗಳನ್ನು ಪಡೆದುಕೊಂಡು ಆ ಕುರಿತಾದ ಸರ್ವ ಸಮ್ಮತ ನೀತಿಯೊಂದನ್ನು ರೂಪಿಸಬೇಕೆಂದೂ ನಾವು ಕರ್ನಾಟಕ ಸರಕಾರವನ್ನು ಆಗ್ರಹಿಸುತ್ತೇವೆ. ಯಾವುದೇ ಸಂದರ್ಭದಲ್ಲೂ ಬೆಳೆಯುವ ಮಕ್ಕಳಿಗೆ ಕಡ್ದಾಯವಾದ ಯೋಗಶಿಕ್ಷಣವು ಅಪೇಕ್ಷಣೀಯವಲ್ಲ.
ಡಾ| ಶ್ರೀನಿವಾಸ ಕಕ್ಕಿಲ್ಲಾಯ, ತಜ್ಞ ವೈದ್ಯರು, ಮಂಗಳೂರು
ಪ್ರೊ|ನರೇಂದ್ರ ನಾಯಕ್, ಜೀವರಸಾಯನಶಾಸ್ತ್ರಜ್ಞರು, ಅಧ್ಯಕ್ಷರು, ಅಖಿಲ ಭಾರತ ವಿಚಾರವಾದಿ ಸಂಘಗಳ ಒಕ್ಕೂಟ, ಮಂಗಳೂರು
ಡಾ| ಕೆ.ಎಸ್.ಮಾಧವ ರಾವ್, ಮನೋರೋಗ ತಜ್ಞರು, ಅಧ್ಯಕ್ಷರು, ದ.ಕ. ಜಿಲ್ಲಾ ವಿಚಾರವಾದಿಗಳ ಸಂಘ, ಮಂಗಳೂರು
- Add new comment
- 2201 reads
- reply
- reply
- reply
- reply
- reply
- reply
- reply
- reply
